Odisha Train Accident: ಒಡಿಶಾ ರೈಲು ದುರಂತದಲ್ಲಿ ಹಲವರ ಮೇಲೆ ಸಿಬಿಐಗೆ ಅನುಮಾನ; ಯಾರು ಈ ಶಂಕಿತ ಜೆಇ ಆಮೀರ್ ಖಾನ್
ಒಡಿಶಾ ರೈಲು ದುರಂತದಲ್ಲಿ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಜೆಇ ಆಮೀರ್ ಖಾನ್ ಮನೆಯನ್ನು ಸೀಲ್ ಮಾಡಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಬಾಲಸೋರ್ (ಒಡಿಶಾ): ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ಮೂರು ರೈಲುಗಳ ಭೀಕರ ಅಪಘಾತದಲ್ಲಿ (Odisha Train Accident) ಒಟ್ಟು 292 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು.
ಪ್ರಕರಣದ ತನಿಖೆ ಆರಂಭಿಸಿರುವ ಕೇಂದ್ರೀಯ ತನಿಖಾ ದಳ - ಸಿಬಿಐ (CBI) ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ನಿನ್ನೆ (ಜೂನ್ 19, ಸೋಮವಾರ) ರೈಲು ದುರಂತಕ್ಕೆ ಸಂಬಂಧಿಸಿದಂತೆ ಶಂಕಿತ ಜೂನಿಯರ್ ಇಂಜಿನಿಯರ್ ಆಮೀರ್ ಖಾನ್ ಅವರ ಬಾಡಿಗೆ ಮನೆಯನ್ನು ಸೀಲ್ ಮಾಡಿದ್ದಾರೆ.
ಸೋರೋದ ಅನ್ನಪೂರ್ಣ ರೈಸ್ ಮಿಲ್ ಬಳಿ ಇರುವ ಆಮೀರ್ ಖಾನ್ ಅವರ ಮನೆ ಬಳಿಗೆ ನಿನ್ನೆ ಸಿಬಿಐ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಆದರೆ ಮನೆ ಬೀಗ ಹಾಕಲಾಗಿತ್ತು. ಸದ್ಯ ಅಧಿಕಾರಿಗಳು ಆ ಮನೆಯನ್ನು ಸೀಲ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಸಿಬಿಐ ಅಧಿಕಾರಿಗಳು ಆಮೀರ್ ಖಾನ್‌ನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದರು. ಆ ಬಳಿಕ ಖಾನ್ ಮತ್ತವರ ಕುಟುಂಬದವರು ಬಾಡಿಗೆ ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಜೂನ್ 16 ರಂದು ಸಿಬಿಐ ಸ್ಥಳದ ತನಿಖೆ ನಡೆಸಿದ ನಂತರ ಬಾಲಸೋರ್‌ನಿಂದ ವಾಪಸ್ ಹೋಗಿ ಮತ್ತೆ ಸೋಮವಾರ ವಿಚಾರಣೆಗಾಗಿ ಮುಂದಾದಾಗ ಖಾನ್ ಮನೆಯಲ್ಲಿ ಯಾರೂ ಇಲ್ಲದಿರುವುದು ಗೊತ್ತಾಗಿದೆ. ಬಹನಾಗಾ ಸ್ಟೇಷನ್ ಮಾಸ್ಟರ್ ಮನೆಗೂ ಭೇಟಿ ನೀಡಿರುವ ಇಬ್ಬರು ಸಿಬಿಐ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಭಾರತೀಯ ರೈಲ್ವೆಯಲ್ಲಿ ಜೂನಿಯರ್ ಸಿಗ್ನಲ್ ಇಂಜಿನಿಯರ್ (ಜೆಇ) ಪಾತ್ರ ಪ್ರಮುಖವಾಗಿರುತ್ತದೆ. ಪಾಯಿಂಟ್ ಯಂತ್ರಗಳು, ಇಂಟರ್ ಲಾಕಿಂಗ್ ಸಿಸ್ಟಮ್‌ಗಳು ಹಾಗೂ ಸಿಗ್ನಲ್‌ಗಳು, ಸಿಗ್ನಲಿಂಗ್ ಉಪಕರಣ ಸ್ಥಾಪನೆ, ನಿರ್ವಹಣೆ ಹಾಗೂ ದುರಸ್ಥಿಯನ್ನು ಒಳಗೊಂಡಿರುತ್ತದೆ. ರೈಲು ಸೇವೆಗಳ ಸುಗಮ ಮತ್ತು ಸುರಕ್ಷಿತ ಕಾರ್ಯಾಚರಣೆಯನ್ನು ಖಾತ್ರಿಪಡಿಸುವಲ್ಲಿ ಜೆಇಗಳು ನಿರ್ಣಾಯಕ ಪಾತ್ರ ವಹಿಸುತ್ತಾರೆ.
ಒಡಿಶಾ ರೈಲು ದುರಂತ ಉದ್ದೇಶಪೂರ್ವಕ ಕೃತ್ಯವೆಂದು ಶಂಕೆ ವ್ಯಕ್ತಪಡಿಸಿದ್ದು, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಗೆ ಅಡ್ಡಿಪಡಿಸಿದ್ದರಿಂದ ರೈಲು ಅಪಘಾತ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ದುರಂತದ ಬಗ್ಗೆ ಪ್ರತಿಕ್ರಿಯಿಸಿದ್ದ ಖುರ್ದಾ ಡಿವಿಜನಲ್ ರೈಲ್ವೆ ಮ್ಯಾನೇಜರ್ ರಿಂಕೇಶ್ ರಾಯ್, ಸರಿಯಾದ ಮಾರ್ಗವನ್ನು ಹೊಂದಿಸುವಂತಹ ಎಲ್ಲಾ ಪೂರ್ವಾಪೇಕ್ಷಿತ ಪೂರೈಸಿದಾಗ ಮಾತ್ರ ಗ್ರೀನ್ ಸಿಗ್ನಲ್ ತೋರಿಸಲಾಗುತ್ತದೆ. ಯಾವುದೇ ಸಣ್ಣ ಸಮಸ್ಯೆ ಇದ್ದರೂ ರೆಡ್ ಸಿಗ್ನಲ್‌ಗೆ ತಿರುಗುತ್ತದೆ ಎಂದು ಹೇಳಿದ್ದಾರೆ.
ಯಾರು ಜೆಇ ಆಮೀರ್ ಖಾನ್?
ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವ ಆಮೀರ್ ಖಾನ್ ಜೂನಿಯರ್ ಇಂಜಿನಿಯರ್ ಆಗಿದ್ದು, ಸೊರೊದಲ್ಲಿರುವ ಅನ್ನಪೂರ್ಣ ರೈಸ್ ಮಿಲ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಒಡಿಶಾ ರೈಲು ದುರಂತದಲ್ಲಿ ಇವರು ಶಂಕಿತರಾಗಿದ್ದು, ಸಿಬಿಐ ಅಧಿಕಾರಿಗಳು ಈಗಾಗಲೇ ಇವರನ್ನು ತನಿಖೆಗೊಳಪಡಿಸಿದ್ದಾರೆ.
ಬಹನಾಗಾ ರೈಲು ನಿಲ್ದಾಣ ಬಳಿ ಜೂನ್ 2 ರಂದು ಮೂರು ರೈಲುಗಳ ಅಪಘಾತದ ಬಳಿಕ ಆಮೀರ್ ಖಾನ್ ಮತ್ತವರ ಕುಟುಂಬ ಸದಸಸ್ಯರರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಅನ್ನಪೂರ್ಣ ರೈಸ್ ಮಿಲ್‌ಗೆ ಸಮೀಪದಲ್ಲಿರುವ ಖಾನ್ ಅವರ ಬಾಡಿಗೆ ಮನೆಗೆ ಸೀಲ್ ಮಾಡುವ ಸಿಬಿಐ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಜೂನ್ 6 ರಂದು ರೈಲು ದುರಂತವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲಾಗಿದ್ದು, ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ. ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯು ರೈಲುಗಳ ಸ್ಥಿತಿಯ ಬಗ್ಗೆ ನಿರ್ಣಾಯಕ ಮಾಹಿತಿ ಒದಗಿಸಲಿದೆ.
ರೈಲ್ವೆ ಅಧಿಕಾರಿಗಳು ಆರಂಭದಲ್ಲೇ ಇದೊಂದು ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯ ಎಂದು ಶಂಕಿಸಿದ್ದರು. ಇದು ಸಿಬಿಐ ಇದೇ ಆಯಾಮದಲ್ಲಿ ತನಿಖೆ ಕೈಗೆತ್ತಿಕೊಂಡಿದ್ದು, ಇದುವರೆಗೆ ರೈಲ್ವೆ ಇಲಾಖೆ ಐವರು ಉದ್ಯೋಗಿಗಳನ್ನು ವಿಚಾರಣೆ ಮಾಡಿದೆ.
ವಿಭಾಗ