ಕನ್ನಡ ಸುದ್ದಿ  /  Nation And-world  /  Odisha Train Accident Technical Glitch Or Human Error For Balasore Train Tragedy Coromandel Yashwantnagar Express Mgb

Odisha train accident: 261 ಜನರ ಬಲಿ ಪಡೆದ ಒಡಿಶಾ ರೈಲು ಅಪಘಾತಕ್ಕೆ ತಾಂತ್ರಿಕ ದೋಷ ಕಾರಣನಾ? ಅಥವಾ ಸಿಬ್ಬಂದಿ ಮಾಡಿದ ಎಡವಟ್ಟಾ?

Odisha Train Tragedy: ಒಡಿಶಾದಲ್ಲಿ ನಿನ್ನೆ (ಜೂನ್​ 2, ಶುಕ್ರವಾರ) ಮೂರು ರೈಲುಗಳು ಡಿಕ್ಕಿಯಾಗಿ 261 ಮಂದಿ ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ತಾಂತ್ರಿಕ ದೋಷ ಕಾರಣನಾ? ಮಾನವ ದೋಷ ಕಾರಣನಾ? ಪ್ರಾಥಮಿಕ ವರದಿ ಏನು ಹೇಳುತ್ತದೆ ನೋಡೋಣ ಬನ್ನಿ..

ಒಡಿಶಾ ರೈಲು ಅಪಘಾತ
ಒಡಿಶಾ ರೈಲು ಅಪಘಾತ

ಒಡಿಶಾ: ಒಡಿಶಾ ಇತಿಹಾಸದಲ್ಲಿಯೇ ಜೂನ್​ 2 ಕರಾಳ ದಿನ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳು ಡಿಕ್ಕಿಯಾಗಿ 261 ಮಂದಿ ಅಸುನೀಗಿದ್ದಾರೆ. ಘಟನೆಯಲ್ಲಿ 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅನೇಕರ ಸ್ಥಿತಿ ಗಂಭೀರವಾಗಿರುವುದರಿಂದ ಮೃತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ತಾಂತ್ರಿಕ ದೋಷ? ಅಥವಾ ಮಾನವ ದೋಷ?

ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಸಂಭವಿಸಿದ ಈ ಭೀಕರ ರೈಲು ದುರಂತಕ್ಕೆ ಮಾನವ ದೋಷ ಅಂದರೆ ಅರಿಯದೇ ಸಿಬ್ಬಂದಿಯಿಂದಾದ ಎಡವಟ್ಟು ಕಾರಣ ಎಂದು ಕೆಲವು ಪ್ರಾಥಮಿಕ ವರದಿಗಳು ಹೇಳಿದ್ದರೆ, ತಾಂತ್ರಿಕ ದೋಷ ಕಾರಣ ಎಂದು ಕೆಲವು ವರದಿಗಳು ತಿಳಿಸಿವೆ.

ರೈಲ್ವೆ ಸಿಗ್ನಲಿಂಗ್ ಕಂಟ್ರೋಲ್ ರೂಮ್‌ನ ಪ್ರಾಥಮಿಕ ವರದಿಗಳ ಪ್ರಕಾರ, ದುರಂತ ಸಂಭವಿಸುವ ನಿಮಿಷಗಳ ಮೊದಲು ಒಂದು ರೈಲು ತಪ್ಪಾದ ಟ್ರ್ಯಾಕ್ ಅನ್ನು ತೆಗೆದುಕೊಂಡ ಕಾರಣ, ಅಂದರೆ ಮಾನವ ದೋಷದ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ಸೂಚಿಸುತ್ತದೆ.

ಕೋರಮಂಡಲ್ ಎಕ್ಸ್‌ಪ್ರೆಸ್​ ರೈಲು ಮುಖ್ಯ ಮಾರ್ಗದ ಬದಲಿಗೆ ಬಹಾನಗರ್ ಬಜಾರ್ ನಿಲ್ದಾಣದ ಬಳಿ ಸರಕು ರೈಲು ನಿಂತಿದ್ದ ಲೂಪ್​ ಲೈನ್​ ಅನ್ನು ತೆಗೆದುಕೊಂಡಿದೆ ಎಂದು ರೈಲ್ವೇಯ ಖರಗ್‌ಪುರ ವಿಭಾಗದ ಸಿಗ್ನಲಿಂಗ್ ಕಂಟ್ರೋಲ್ ರೂಮ್‌ ಅಧಿಕಾರಿಗಳು ತಿಳಿಸಿದ್ದಾರೆ. ಗಂಟೆಗೆ ಸುಮಾರು 127 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು, ಹಳಿ ತಪ್ಪಿ, ಮುಖ್ಯ ಮಾರ್ಗದಲ್ಲಿ ಅದರ ಬೋಗಿಗಳು ಬಿದ್ದಿವೆ. ಕೆಲವೇ ನಿಮಿಷಗಳಲ್ಲಿ, ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ.

“ಇದು ಹೇಗೆ ಸಂಭವಿಸಿತು ಮತ್ತು ಏಕೆ ಸಂಭವಿಸಿತು ಎಂಬುದು ರೈಲ್ವೆ ಮಂಡಳಿಯು ಆದೇಶಿಸಿದ ವಿವರವಾದ ತನಿಖೆಯಲ್ಲಿ ಕಂಡುಬರುತ್ತದೆ. ಆದರೆ, ಮೇಲ್ನೋಟಕ್ಕೆ ಇದು ಮಾನವ ದೋಷ ಎಂದು ತೋರುತ್ತದೆ”ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈಸ್ಟ್ ಕೋಸ್ಟ್ ರೈಲ್ವೇ ವಲಯದ ನಿವೃತ್ತ ರೈಲ್ವೆ ಅಧಿಕಾರಿಯೊಬ್ಬರು, ತಾಂತ್ರಿಕ ದೋಷಗಳು ಮತ್ತು ಸಿಗ್ನಲ್ ಸಮಸ್ಯೆಗಳಿಂದ ಅಪಘಾತ ಸಂಭವಿಸಿರಬಹುದು ಎಂದು ಹೇಳಿದ್ದಾರೆ. ಅವಘಡಕ್ಕೆ ಕಾರಣ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಅಪಘಾತದ ಬಗ್ಗೆ ವಿವರವಾದ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದು, ತನಿಖೆ ಬಳಿಕ ಸತ್ಯಾಂಶ ತಿಳಿದು ಬರಲಿದೆ.