Odisha Train Tragedy: 270ಕ್ಕೂ ಹೆಚ್ಚು ಜನರ ಬಲಿ ಪಡೆದ ಒಡಿಶಾ ರೈಲು ಅಪಘಾತ; ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ
CBI probe in Odisha Train Tragedy: ಒಡಿಶಾ ರೈಲು ದುರಂತ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಬಾಲಸೋರ್ (ಒಡಿಶಾ): ಶುಕ್ರವಾರ ( ಜೂನ್ 2) ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ 270ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದುರಂತದ ಗಂಭೀರತೆಯನ್ನು ಅರಿತು ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಘಟನೆಯ ಬಗ್ಗೆ ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಟ್ರ್ಯಾಕ್‌ಗೆ ಸಂಬಂಧಿಸಿದ ಕೆಲಸ ಮುಗಿದಿದೆ ಮತ್ತು ಓವರ್‌ಹೆಡ್ ವೈರಿಂಗ್ ಕೆಲಸ ನಡೆಯುತ್ತಿದೆ, ಗಾಯಾಳುಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಅಪಘಾತಕ್ಕೆ ಚಾಲಕನ ದೋಷ ಕಾರಣವೆಂಬುದನ್ನು ರೈಲ್ವೆ ಇಲಾಖೆ ತಳ್ಳಿ ಹಾಕಿದೆ. ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಮತ್ತು ಪಾಯಿಂಟ್ ಮೆಷಿನ್‌ನಲ್ಲಿ ಮಾಡಿದ ಬದಲಾವಣೆಯಿಂದ ದುರಂತ ಸಂಭವಿಸಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಸಿಗ್ನಲ್ ಸಮಸ್ಯೆಯಿಂದ ಒಂದು ನಿಮಿಷ ಅಂತರದಲ್ಲಿ ತ್ರಿವಳಿ ರೈಲು ದುರಂತವಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಏನಿದು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್?
ಸಿಗ್ನಲ್ಗಳು ಮತ್ತು ಟ್ರ್ಯಾಕ್ಗಳನ್ನು ನಿಯಂತ್ರಿಸುವ ಮೂಲಕ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆಯನ್ನು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಎಂದು ಕರೆಯಲಾಗುತ್ತದೆ. ಇದು ಎಲೆಕ್ಟ್ರಾನಿಕ್ ಕಂಟ್ರೋಲ್ ಸಿಸ್ಟಂ ಮತ್ತು ಕಂಪ್ಯೂಟತರ್ ಸಹಾಯದಿಂದ ರೈಲುಗಳ ಚಲನೆಯ ಮೇಲೆ ನಿಗಾ ವಹಿಸುತ್ತದೆ. ಮಾರ್ಗವು ಸುರಕ್ಷಿತವೆಂದು ಸಾಬೀತುಪಡಿಸದ ಹೊರತು ಯಾವುದೇ ರೈಲು ಮುಂದುವರಿಯಲು ಇದು ಬಿಡುವುದಿಲ್ಲ. ಆದರೆ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ದೋಷದಿಂದಾಗಿ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಮೂರು ರೈಲುಗಳ ನಡುವೆ ಅಪಘಾತ
ಒಡಿಶಾದ ಬಾಲಾಸೋರ್ನಲ್ಲಿ ಕೇವಲ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ಮಾತ್ರ ಅಪಘಾತ ಸಂಭವಿಸಿದ್ದಲ್ಲ. ಬೆಂಗಳೂರಿನಿಂದ ಹೊರಟ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲೂ ಅಪಘಾತಕ್ಕೀಡಾಗಿತ್ತು.
ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿತ್ತು.