One Man Office: ಎಲ್‌ಐಸಿ ಸಂಸ್ಥೆಗೆ ಡಿಜಿಟಲ್ ಸ್ಪರ್ಷ; ಈಗ ಮೊಬೈಲ್‌ನಲ್ಲೇ ಪಡೆಯಬಹುದು ವಿಮೆ ಸೇವೆ
ಒಎಮ್‌ಒ (One Man Office) ಸೇವೆಯನ್ನು ಎಲ್‌ಐಸಿ ಮೊಬೈಲ್ ಡಿಜಿಟಲ್ ಆಫೀಸ್ ಎಂದು ವಿಶ್ಲೇಷಿಸಿದ್ದು, ಮೊಬೈಲ್ ಫೋನ್ ಮೂಲಕ ಎಲ್‌ಐಸಿಯ ಎಲ್ಲಾ ಸೇವೆಯನ್ನು ಪಡೆಯಲು ಒಂದೇ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಂಸ್ಥೆ ತನ್ನ ಸೇವೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಹಾಗೂ ಡಿಜಿಟಲೀಕರಣಗೊಳಿಸುವ ಸಲುವಾಗಿ ಹೊಸ ಸೇವೆಯನ್ನು ಆರಂಭಿಸಿದೆ. ಅದುವೇ 'ಒನ್ ಮ್ಯಾನ್ ಆಫೀಸ್ (OMO)' ಎನ್ನುವ ಮೊಬೈಲ್ ಅಪ್ಲಿಕೇಶನ್ ಸೇವೆ. ಈ ಸೇವೆ ಫೆ.17ರಂದು ಆರಂಭವಾಗಿದ್ದು, ಎಲ್‌ಐಸಿ ಏಜೆಂಟ್, ಡೆವಲಪ್‌ಮೆಂಟ್ ಆಫೀಸರ್, ಹಿರಿಯ ಬ್ಯುಸಿನೆಸ್ ಅಸೋಸಿಯೇಟ್ ಸೇರಿ ಹಲವು ವಿಭಾಗದ ಸೇವಾದಾರರ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ನೆರವಾಗಲಿದೆ ಎಂದು ಎಲ್‌ಐಸಿ ತಿಳಿಸಿದೆ.
2047ರ ಒಳಗೆ ಎಲ್ಲರಗೂ ವಿಮೆ (ಇನ್ಶುರೆನ್ಸ್ ಫಾರ್ ಆಲ್) ಎಂಬ ಎಲ್‌ಐಸಿಯ ದೀರ್ಘಕಾಲದ ಗುರಿಯನ್ನು ಸಾಕಾರಗೊಳಿಸುವಲ್ಲಿ ಈ ಸೇವೆ ಮಹತ್ವದ ಹೆಜ್ಜೆಯಾಗಿದೆ. ಒಎಮ್‌ಒ ಸೇವೆ (ಒನ್ ಮ್ಯಾನ್ ಆಫೀಸ್) ಡಿಜಿಟಲ್ ಪಾಲಿಸಿ ಮಾರಾಟ, ವಹಿವಾಟುಗಳ ಬೆಳವಣಿಗೆಯನ್ನು ಅರಿಯಲು, ಗ್ರಾಹಕ ಸೇವೆ ಮತ್ತು ಎಲ್‌ಐಸಿ ಏಜೆಂಟ್‌ಗಳಿಗೆ ತರಬೇತಿಯನ್ನು ನೀಡಲು ಬಹಳ ಸಹಕಾರಿಯಾಗಲಿದೆ ಎಂದು ಎಲ್‌ಐಸಿ ಸಿಇಒ ಮತ್ತು ಮ್ಯಾನೆಜಿಂಗ್ ಡೈರೆಕ್ಟರ್ ಸಿದ್ಧಾರ್ಥ ಮೊಹಾಂಟಿ ಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಒಎಮ್‌ಒ (One Man Office) ಸೇವೆಯನ್ನು ಎಲ್‌ಐಸಿ ಮೊಬೈಲ್ ಡಿಜಿಟಲ್ ಆಫೀಸ್ ಎಂದು ವಿಶ್ಲೇಷಿಸಿದ್ದು, ಮೊಬೈಲ್ ಫೋನ್ ಮೂಲಕ ಎಲ್‌ಐಸಿಯ ಎಲ್ಲಾ ಸೇವೆಯನ್ನು ಪಡೆಯಲು ಒಂದೇ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಈ ಸೇವೆ ಎಲ್‌ಐಸಿಯ 'ಆನಂದ' (ಆತ್ಮ ನಿರ್ಭರ ಏಜೆಂಟ್ಸ್ ನ್ಯೂ ಬುಸಿನೆಸ್ ಡಿಜಿಟಲ್ ಆಪ್ಲಿಕೇಶನ್) ಆಧರಿಸಿ ರಚಿಸಲಾಗಿದ್ದು, ಇದು ಏಜೆಂಟ್‌ಗಳಿಗೆ ಹೊಸ ಗ್ರಾಹಕರನ್ನು ಪಡೆಯಲು ನೆರವಾಗಲಿದೆ.
ಇಷ್ಟೆಲ್ಲಾ ಅನುಕೂಲ
ಯೋಜನೆಗಳ ಪ್ರೀಮಿಯಂ ಲೆಕ್ಕಚಾರ, ಸೇವೆಯ ಲಾಭಗಳ ಮಾಹಿತಿ, ಇ-ಎನ್‌ಎಸಿಹೆಚ್ ನೋಂದಣಿ, ವಿಳಾಸ ಬದಲಾಯಿಸುವ ಸೌಲಭ್ಯ, ಆನ್‌ಲೈನ್ ಸಾಲ ಅರ್ಜಿ, ಪ್ರೀಮಿಯಂ ಪಾವತಿ ರಿನಿವಲ್, ಹಾಗೂ ಕಾಗದಪತ್ರಗಳನ್ನು ಸಲ್ಲಿಸುವ ಅವಕಾಶ ಸೇರಿ ಹಲವು ಸೌಲಭ್ಯವನ್ನು ಇಲ್ಲಿ ಪಡೆಯಬಹುದಾಗಿದೆ. ಜತೆಗೆ ಈ ಅಪ್ಲಿಕೇಶನ್‌ನಲ್ಲಿ ಮತ್ತಷ್ಟು ಹೊಸ ಸೌಲಭ್ಯಗಳನ್ನು ಪರಿಚಯಿಸುವ ಯೋಜನೆಯನ್ನು ಹೊಂದಿದೆ.
