ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ, ಗರ್ಭ ಧರಿಸದಿದ್ರೆ 5 ಲಕ್ಷ- ಏನಿದು ಆಫರ್‌?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ, ಗರ್ಭ ಧರಿಸದಿದ್ರೆ 5 ಲಕ್ಷ- ಏನಿದು ಆಫರ್‌?

ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ, ಗರ್ಭ ಧರಿಸದಿದ್ರೆ 5 ಲಕ್ಷ- ಏನಿದು ಆಫರ್‌?

"ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ, ನನ್ನ ಜತೆ ಬಾಳ್ವೆ ಮಾಡುವ ಅವಕಾಶ" ಎಂಬ ಫೇಸ್‌ಬುಕ್‌ ಜಾಹೀರಾತು ನಂಬಿ ಸಾಕಷ್ಟು ಜನರು ಮೋಸ ಹೋಗುತ್ತಿದ್ದಾರೆ. ಇಂತಹ ಆನ್‌ಲೈನ್‌ ವಂಚನೆ ಕುರಿತು ಇಲ್ಲಿದೆ ವಿವರ.

ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ- ಆನ್‌ಲೈನ್‌ ವಂಚನೆ
ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ- ಆನ್‌ಲೈನ್‌ ವಂಚನೆ

ಆನ್‌ಲೈನ್‌ನಲ್ಲಿ ವಿವಿಧ ಬಗೆಯ ವಂಚನೆಗಳು ನಡೆಯುತ್ತವೆ. ಅಮಾಯಕರನ್ನು ಮೋಸ ಮಾಡಲು ವಂಚಕರು ನಾನಾ ವೇಷ ಹಾಕಿಕೊಂಡು ಕಾಯುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ಕೆಲವೊಮ್ಮೆ ವಂಚಕರು ಅಮಾಯಕರಿಗೆ ಆಸ್ತಿ, ಹಣ ಮಾತ್ರವಲ್ಲದೆ ಲೈಂಗಿಕ ಸುಖದ ಆಸೆಯನ್ನೂ ಹುಟ್ಟಿಸಿ ವಂಚಿಸುತ್ತಾರೆ.

3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ …

"ನನ್ನನ್ನು ಯಾರಾದರೂ ಮೂರು ತಿಂಗಳೊಳಗೆ ಗರ್ಭ ಧರಿಸುವಂತೆ ಮಾಡಿದ್ರೆ ಅಂತಹ ವ್ಯಕ್ತಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ಆ ವ್ಯಕ್ತಿಗೆ ನನ್ನ ಜತೆ ಬಾಳ್ವೆ ಮಾಡುವ ಅವಕಾಶವನ್ನೂ ನೀಡಲಾಗುವುದು" ಫೇಸ್‌ಬುಕ್‌ ಗ್ರೂಪ್‌ನಲ್ಲಿ ಇಂತಹ ಜಾಹೀರಾತುಗಳು ಈಗ ಹೆಚ್ಚಾಗಿವೆ. ಈ ಪೋಸ್ಟ್‌ನಲ್ಲಿ ಸಂಪರ್ಕಿಸಲು ಫೋನ್‌ ನಂಬರ್‌ ಕೂಡ ನೀಡಲಾಗುತ್ತದೆ. ಇಂತಹ ಪೋಸ್ಟ್‌ ನಂಬಿ ಸಾಕಷ್ಟು ಜನರು ಮೋಸ ಹೋಗಿದ್ದಾರೆ.  ಕಳೆದ ವರ್ಷವೂ ಇಂತಹ ಘಟನೆಗಳು ವರದಿಯಾಗಿತ್ತು. ಈಗ ಮತ್ತೆ ಇಂತಹ ಘಟನೆಗಳು ವರದಿಯಾಗುತ್ತಿವೆ. 

ಇಂತಹ ವಂಚನೆಯೊಂದರ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ. ವಂಚಕರು ನೀಡಿರುವ ಫೋನ್‌ ಸಂಖ್ಯೆಗೆ ಕರೆ ಮಾಡಿದಾಗ ಫೋನ್‌ ಸ್ವೀಕರಿಸಿದವರು ಈ ಮುಂದಿನಂತೆ ತಿಳಿಸಿದ್ದಾರೆ. "ನಾವು ನಿಮಗೆ ಎಲ್ಲಾ ವ್ಯವಸ್ಥೆಯನ್ನೂ ಮಾಡುತ್ತೇವೆ. ನಿಮ್ಮನ್ನು ನಮ್ಮ ಚಾಲಕ ಮೇಡಂ ಬಳಿಗೆ ಕರೆದುಕೊಂಡು ಹೋಗುತ್ತಾನೆ. ಎಲ್ಲಾದರೂ ನಿಮ್ಮಿಂದ ಆಕೆ ಗರ್ಭ ಧರಿಸದೆ ಇದ್ದರೂ 5 ಲಕ್ಷ ರೂಪಾಯಿ ನೀಡಲಾಗುತ್ತದೆ" ಎಂದು ವಂಚಕ ತಿಳಿಸಿದ್ದಾನೆ.

"ಈ ಆಫರ್‌ನಲ್ಲಿ ಭಾಗವಹಿಸಲು ನೀವು 999 ರೂಪಾಯಿ ನೋಂದಣಿ ಶುಲ್ಕ ನೀಡಬೇಕು" ಎಂದು ವಂಚಕರು ತಿಳಿಸಿದ್ದಾರೆ. ಯುಪಿಐ ಅಥವಾ ಕ್ಯೂಆರ್‌ ಕೋಡ್‌ ಮೂಲಕ ಹಣ ಪಾವತಿಸಲು ತಿಳಿಸುತ್ತಾರೆ.

"ಇಷ್ಟು ಮಾತ್ರವಲ್ಲ, ಅವರು ವಿವಿಧ ರೀತಿಯಲ್ಲಿ ಶುಲ್ಕಗಳನ್ನು ಕೇಳುತ್ತಾರೆ. ಹಲವು ಸುಳ್ಳುಗಳನ್ನು ಹೇಳುತ್ತಾರೆ" ಎಂದು ಈ ರೀತಿ ವಂಚಕರಿಂದ ಮೋಸಕ್ಕೊಳಗಾದ ಹರಿಯಾಣ ಮೂಲದ ವ್ಯಕ್ತಿಯೊಬ್ಬರು ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ವ್ಯಕ್ತಿಯು ತನ್ನ ಇಬ್ಬರು ಸ್ನೇಹಿತರ ಜತೆ ಒಟ್ಟು 1 ಲಕ್ಷ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾನೆ. ಎರಡು ತಿಂಗಳಲ್ಲಿ ವಂಚಕರು ಕೇಳಿದಾಗ ಹಣ ನೀಡುತ್ತ ಹೋಗಿದ್ದಾರೆ.

"ನನಗೆ 24 ವರ್ಷದ ಯುವತಿಯ ಫೋಟೊ, ಆಕೆಯ ಆಧಾರ್‌ ಮತ್ತು ಪಾನ್‌ ಕಾರ್ಡ್‌ ಅನ್ನೂ ವಂಚಕರು ಕಳುಹಿಸಿದ್ದರು. ಈ ಮೂಲಕ ನನಗೆ ಭರವಸೆ ಹುಟ್ಟಿಸಿದ್ದರು" ಎಂದು ವಂಚನೆಗೆ ಒಳಗಾದ 51 ವರ್ಷದ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಈ ರೀತಿಯ ವಂಚನೆಗೆ ಹೆಚ್ಚಾಗಿ ನಿರುದ್ಯೋಗಿಗಳು, ಕಡಿಮೆ ವೇತನ ಪಡೆಯುವವರು, ಬಡವರು ಒಳಗಾಗುತ್ತಿದ್ದಾರೆ. ಸುಲಭದಾರಿಯಲ್ಲಿ ಹಣ ಮಾಡಲು ಆನ್‌ಲೈನ್‌ನಲ್ಲಿ ಅವಕಾಶವಿದೆಯೇ ಎಂದು ಹುಡುಕಾಟ ನಡೆಸುವವರನ್ನು ವಂಚಕರು ಗುರಿಯಾಗಿಸುತ್ತಿದ್ದಾರೆ.

ಇದರೊಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ಲೈಂಗಿಕ ಉದ್ದೇಶದಿಂದ ವಿವಿಧ ಗ್ರೂಪ್‌ಗಳನ್ನು ತಡಕಾಡುತ್ತ ಇರುತ್ತಾರೆ. ಇಂತಹ ಮಿಕಗಳಿಗೆ "ಮೂರು ತಿಂಗಳೊಳಗೆ ಗರ್ಭಿಣಿ ಮಾಡಿದ್ರೆ" ಮುಂತಾದ ಜಾಹೀರಾತುಗಳ ಮೋಸ ತಿಳಿದಿರುವುದಿಲ್ಲ. ವಂಚಕರು ತಮ್ಮ ನಯವಾದ ಮಾತುಗಳಿಂದ ಅಮಾಯಕರಿಂದ ಹಣ ಕಸಿಯುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಬ್ಲ್ಯಾಕ್‌ಮೇಲ್‌ ಮೂಲಕವೂ ಹಣ ಪಡೆಯಬಹುದು. ಹೀಗಾಗಿ, ಇಂತಹ ಆನ್‌ಲೈನ್‌ ವಂಚನೆಗಳ ಕುರಿತು ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಆನ್‌ಲೈನ್‌ನಲ್ಲಿ ಕಾಣುವ ಆಫರ್‌ಗಳು, ಆಮಿಷಗಳಿಗೆ ಬಲಿಯಾಗಬಾರದು ಎಂದು ಸೈಬರ್‌ ತಜ್ಞರು ಎಚ್ಚರಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.