Disunity in Opposition: ಕಾಂಗ್ರೆಸ್‌ 'ಏಕಾಂಗಿ ನಡೆ'ಗೆ ಟಿಎಂಸಿ ಅಸಮಾಧಾನ: ಕನಸಾಗಿಯೇ ಉಳಿಯವುದೇ ಮೋದಿ ವಿರೋಧಿ ಕೂಟ ರಚನೆ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Disunity In Opposition: ಕಾಂಗ್ರೆಸ್‌ 'ಏಕಾಂಗಿ ನಡೆ'ಗೆ ಟಿಎಂಸಿ ಅಸಮಾಧಾನ: ಕನಸಾಗಿಯೇ ಉಳಿಯವುದೇ ಮೋದಿ ವಿರೋಧಿ ಕೂಟ ರಚನೆ?

Disunity in Opposition: ಕಾಂಗ್ರೆಸ್‌ 'ಏಕಾಂಗಿ ನಡೆ'ಗೆ ಟಿಎಂಸಿ ಅಸಮಾಧಾನ: ಕನಸಾಗಿಯೇ ಉಳಿಯವುದೇ ಮೋದಿ ವಿರೋಧಿ ಕೂಟ ರಚನೆ?

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮಹಾಮೈತ್ರಿಕೂಟ ರಚನೆ ಮಾಡುವ ವಿಪಕ್ಷಗಳ ಕನಸು, ಕನಸಾಗಿಯೇ ಉಳಿಯುವ ಸಾಧ್ಯತೆಗಳು ಕಂಡುಬರುತ್ತಿವೆ. ಬಿಜೆಪಿಯನ್ನು ಮಣಿಸಲು ಒಂದಾಗುವ ಪ್ರಯತ್ನ ನಡೆಸುತ್ತಿರುವ ವಿಪಕ್ಷಗಳು ಅದರಲ್ಲೂ ಪ್ರಮುಖವಾಗಿ ವಿವಿಧ ರಾಜ್ಯಗಳಲ್ಲಿ ಪ್ರಬಲರಾಗಿರುವ ಪ್ರಾದೇಶಿಕ ಪಕ್ಷಗಳು, ಕಾಂಗ್ರೆಸ್‌ ವಿಚಾರವಾಗಿ ಭಿನ್ನ ಅಭಿಪ್ರಾಯಗಳನ್ನು ಹೊಂದಿರುವುದು ಸಮಸ್ಯೆಯಾಗಿ ಕಾಡುತ್ತಿದೆ.

ಖಮ್ಮಂ ಮಹಾಸಭೆಯಲ್ಲಿ ಭಾಗವಹಿಸಿದ್ದ ನಾಯಕರು (ಸಂಗ್ರಹ ಚಿತ್ರ)
ಖಮ್ಮಂ ಮಹಾಸಭೆಯಲ್ಲಿ ಭಾಗವಹಿಸಿದ್ದ ನಾಯಕರು (ಸಂಗ್ರಹ ಚಿತ್ರ) (ANI)

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮಹಾಮೈತ್ರಿಕೂಟ ರಚನೆ ಮಾಡುವ ವಿಪಕ್ಷಗಳ ಕನಸು, ಕನಸಾಗಿಯೇ ಉಳಿಯುವ ಸಾಧ್ಯತೆಗಳು ಕಂಡುಬರುತ್ತಿವೆ. ಬಿಜೆಪಿಯನ್ನು ಮಣಿಸಲು ಒಂದಾಗುವ ಪ್ರಯತ್ನ ನಡೆಸುತ್ತಿರುವ ವಿಪಕ್ಷಗಳು ಅದರಲ್ಲೂ ಪ್ರಮುಖವಾಗಿ ವಿವಿಧ ರಾಜ್ಯಗಳಲ್ಲಿ ಪ್ರಬಲರಾಗಿರುವ ಪ್ರಾದೇಶಿಕ ಪಕ್ಷಗಳು, ಕಾಂಗ್ರೆಸ್‌ ವಿಚಾರವಾಗಿ ಭಿನ್ನ ಅಭಿಪ್ರಾಯಗಳನ್ನು ಹೊಂದಿರುವುದು ಸಮಸ್ಯೆಯಾಗಿ ಕಾಡುತ್ತಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಸೋಲಿಸಲು, ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಲು ವಿಪಕ್ಷಗಳು ಮುಂದಾಗಿವೆ. ಆದರೆ ಕಾಂಗ್ರೆಸ್‌ ವಿಚಾರವಾಗಿ ಈ ಪಕ್ಷಗಳು ಹೊಂದಿರುವ ಭಿನ್ನ ಅಭಿಪ್ರಾಯಗಳು, ಈ ಒಗ್ಗಟ್ಟಿಗೆ ತೊಡಕಾಗಿ ಕಂಡುಬರುತ್ತಿದೆ.

ಕಾಂಗ್ರೆಸ್‌ ಈ ವಿಪಕ್ಷಗಳ ಮಹಾಮೈತ್ರಿಕೂಟದ ಭಾಗವಾಗಲು ಸಿದ್ಧವಿಲ್ಲ ಎಂಬುದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌(ಟಿಎಂಸಿ)ನ ಪ್ರಮುಖ ಆರೋಪವಾಗಿದೆ. ಈ ಕುರಿತು ಮಾತನಾಡಿರುವ ಟಿಎಂಸಿ ನಾಯಕ ಕುನಾಲ್‌ ಘೋಷ್‌, ಕಾಂಗ್ರೆಸ್‌ ಪ್ರತ್ಯೇಕವಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ನೋಡಿದರೆ ಅದು ಈ ಸಂಭಾವ್ಯ ಮಹಾಮೈತ್ರಿಕೂಟದ ಭಾಗವಾಗುವುದು ಅನುಮಾನ ಎಂದು ಹೇಳಿದ್ದಾರೆ.

ಕಳೆದ ವಾರ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಭಾರತ್‌ ರಾಷ್ಟ್ರ ಸಮಿತಿ(ಬಿಆರ್‌ಎಸ್)‌, ಖಮ್ಮಂನಲ್ಲಿ ವಿಪಕ್ಷಗಳ ಮಹಾಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಕೇರಳ ಮುಖ್ಯಮಂತ್ರಿ ಹಅಗೂ ಸಿಪಿಎಂ ನಾಯಕ ಪಿಣರಾಯಿ ವಿಜಯನ್‌, ಸಿಪಿಐ ನಾಯಕ ಡಿ. ರಾಜಾ, ದೆಹಲಿ ಮುಖ್ಯಮಂತ್ರಿ ಹಾಗೂ ಆಪ್‌ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ಆದರೆ ಕಾಂಗ್ರೆಸ್‌ ಈ ಸಭೆಯ ಹತ್ತಿರವೂ ಸುಳಿದಿರಲಿಲ್ಲ.

ಭಾರತ್‌ ಜೋಡೋ ಯಾತ್ರೆಯಲ್ಲಿ ತಲ್ಲೀನವಾಗಿರುವ ಕಾಂಗ್ರೆಸ್‌ ಪಕ್ಷ, ಈ ಯಾತ್ರೆ ಮುಕ್ತಾಯಗೊಳ್ಳುತ್ತಿದ್ದಂತೇ 'ಹಾಥ್‌ ಸೇ ಹಾಥ್‌ ಜೋಡೋ' ಅಭಿಯಾನವನ್ನು ಹಮ್ಮಿಕೊಳ್ಳುತ್ತಿದೆ. ಇದು ಕಾಂಗ್ರೆಸ್‌ ಪ್ರತ್ಯೇಕ ಮತ್ತು ಏಕಾಂಗಿ ಮಾರ್ಗದಲ್ಲಿ ಚಲಿಸಲಿದೆ ಎಂಬ ಸಂದೇಶವನ್ನು ಸಾರುತ್ತದೆ. ಅದರೆ ಮಮತಾ ಬ್ಯಾನರ್ಜಿ ಅವರು ವಿಪಕ್ಷಗಳ ಮೈತ್ರಿಕೂಟ ರಚಿಸುವುದೇ ಆದರೆ, ಸಮನ್ವಯ ತಂಡ ಮತ್ತು ದೇಶಾದ್ಯಂತ ಜಂಟಿ ಕಾರ್ಯಕ್ರಮಗಳನ್ನು ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ ಎನ್ನಲಾಗಿದೆ.

“ಕಾಂಗ್ರೆಸ್ ಅನೇಕ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಮತ್ತು 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. ಆದರೂ ಅದು ವಿಪಕ್ಷಗಳ ಸಂಭಾವ್ಯ ಮಹಾಮೈತ್ರಿಕೂಟದ ಭಾಗವಾಗಲು ಸಿದ್ಧವಿಲ್ಲ. ಅಲ್ಲದೇ ಒಂದು ವೇಳೆ ಈ ಮೈತ್ರಿಕೂಟದ ಭಾಗವಾದರೂ, ಅದರ ನಾಯಕತ್ವ ತನಗೆ ದೊರೆಯಬೇಕು ಎಂದು ಬಯಸುತ್ತದೆ. ಈ ಶ್ರೇಷ್ಠತೆಯ ಭಾವನೆಯನ್ನು ಕಾಂಗ್ರೆಸ್‌ ಬಿಡದಿದ್ದರೆ, ಮೈತ್ರಿಕೂಟ ರಚನೆ ಕಷ್ಟವಾಗಲಿದೆ ಎಂದು ಟಿಎಂಸಿ ಹೇಳುತ್ತಿದೆ.

ಕಾಂಗ್ರೆಸ್‌ ಸದ್ಯ ರಾಹುಲ್‌ ಗಾಂಧಿ ಅವರನ್ನು ತನ್ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವಲ್ಲಿ ನಿರತವಾಗಿದೆ. ಇದಕ್ಕಾಗಿ ಅದು ಪ್ರತ್ಯೇಕ ಮತ್ತು ಏಕಾಂಗಿ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದೆಯಾದರೂ, ಅದು ವಿಪಕ್ಷಗಳ ನಾಯಕತ್ವವಹಿಸಿಕೊಳ್ಳುವ ಬಯಕೆಯನ್ನು ಹೊಂದಿದೆ. ಇದು ಸ್ವೀಕಾರ್ಹವಲ್ಲ ಎಂಬುದು ಟಿಎಂಸಿ ವಾದವಾಗಿದೆ.

ಕೆಸಿಆರ್‌ ಆಯೋಜಿಸಿದ್ದ ಮಹಾಸಭೆಗೆ ಮಮತಾ ಬ್ಯಾನರ್ಜಿ ಗೈರುಹಾಜರಾಗಿದ್ದರು. ಅಲ್ಲದೇ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಅನುಪಸ್ಥಿತಿ ಎದ್ದು ಕಂಡಿತು. ಹಾಗೆಯೇ ಜೆಡಿಎಸ್‌ನ ಹೆಚ್‌ಡಿ ಕುಮಾರಸ್ವಾಮಿ ಕೂಡ ಈ ಸಭೆಯಲ್ಲಿ ಭಾಗವಹಿಸಲಿರಲಿಲ್ಲ. ಇದು ವಿಪಕ್ಷಗಳಲ್ಲಿ ಒಗ್ಗಟ್ಟಿನ ಕೊರೆತ ಇದೆ ಎಂಬುದನ್ನು ಎತ್ತಿ ತೋರಿಸಿದೆ ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆಯಾಗಿದೆ.

ಆದರೆ ಕೆಸಿಆರ್‌ ಆಯೋಜಿಸಿದ್ದ ಈ ಮಹಾಸಭೆ, ಬಿಜೆಪಿ ಮತ್ತು ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳ ಮೈತ್ರಿಕೂಟ ರಚನೆಯ ಪ್ರಯತ್ನ ಎಂದೂ ಹೇಳಲಾಗಿದೆ. ಕೆಸಿಆರ್‌ ಮೂರನೇ ರಂಗದ ರಚನೆ ಮತ್ತು ಅದರಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರದ ಕುರಿತು ಉತ್ಸುಕರಾಗಿದ್ದಾರೆಯೇ ಹೊರತು, ಕಾಂಗ್ರೆಸ್‌ ಈ ಮೈತ್ರಿಕೂಟದ ಭಾಗವಾಗಬೇಕು ಎಂಬ ಬಯಕೆ ಹೊಂದಿಲ್ಲ ಎಂದು ಕೆಲವು ರಾಜಕೀಯ ತಜ್ಞರು ಅಂದಾಜಿಸಿದ್ದಾರೆ.

ಒಟ್ಟಿನಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಒಂದಾಗಲು ಬಯಸಿರುವ ವಿಪಕ್ಷಗಳು, ವಿವಿಧ ವಿಚಾರವಾಗಿ ಇನ್ನೂ ಪರಸ್ಪರ ಭಿನ್ನಾಭಿಪ್ರಾಯವನ್ನು ಹೊಂದಿವೆ ಎಂಬುದು ಸ್ಪಷ್ಟವಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.