ಕಾಲ್ಕೆರೆದುಕೊಂಡು ಬಂದ್ರೆ ಮಣ್ಣು ಮುಕ್ಕಿಸದೇ ಬಿಡಲ್ಲ ಎಂದ ಪ್ರಧಾನಿ ಮೋದಿ, ಆಪರೇಷನ್ ಸಿಂದೂರ ಮೂಲಕ ಈವರೆಗೆ ಈಡೇರಿದೆ 3 ಉದ್ದೇಶ
ಪಹಲ್ಗಾಮ್ ದಾಳಿ ಬಳಿಕ ಭಯೋತ್ಪಾದನೆ ವಿರುದ್ಧ ಆಲ್‌ಔಟ್ ಕಾರ್ಯಾಚರಣೆ ಶುರುಮಾಡಿದ ಭಾರತ ಸರ್ಕಾರ, ಆಪರೇಷನ್ ಸಿಂದೂರದ ಮೂಲಕ ಇದುವರೆಗೆ 3 ಉದ್ದೇಶಗಳನ್ನು ಈಡೇರಿಸಿದೆ. ಕಾಲ್ಕೆರೆದುಕೊಂಡು ಬಂದ್ರೆ ಮಣ್ಣು ಮುಕ್ಕಿಸದೇ ಬಿಡಲ್ಲ ಎಂದು ಪ್ರಧಾನಿ ಮೋದಿ ಪಾಕಿಸ್ತಾನವನ್ನು ಎಚ್ಚರಿಸಿದ್ದಾಗಿ ವರದಿ ಹೇಳಿದೆ.

ಆಪರೇಷನ್ ಸಿಂದೂರ್ ಮೂಲಕ ಭಾರತವು ಪಾಕಿಸ್ತಾನಕ್ಕೆ ಸರಿಯಾದ ಹೊಡೆತ ನೀಡಿದೆ. ಪಾಕಿಸ್ತಾನದ ಆಶ್ರಯದಲ್ಲಿದ್ದ ಹತ್ತಾರು ಭಯೋತ್ಪಾದಕ ನೆಲೆಗಳನ್ನು ನಾಶ ಮಾಡಿದ ಭಾರತೀಯ ಸೇನೆಯ ದಾಳಿಯಿಂದಾಗಿ ಅಲ್ಲಿದ್ದ 100ಕ್ಕೂ ಹೆಚ್ಚು ಉಗ್ರರು ಮೃತಪಟ್ಟರು. ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಭಾರತವು ಮೂರು ರಣತಂತ್ರಗಳನ್ನು ಒಳಗೊಂಡಿರುವಂತೆ ನೋಡಿಕೊಂಡಿದೆ. ವಿಶೇಷವಾಗಿ ರಾಜತಾಂತ್ರಿಕ, ಸೇನಾ ಕಾರ್ಯಾಚರಣೆ ಮತ್ತು ಮನೋವೈಜ್ಞಾನಿಕ ತಂತ್ರಗಳು ಈ ಕಾರ್ಯಾಚರಣೆಯಲ್ಲಿ ಮಿಳಿತವಾಗಿರುವುದು ವಿಶೇಷ. ಪಹಲ್ಗಾಮ್ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧ ಆಲ್ ಔಟ್ ಸಮರ ಸಾರುವುದಾಗಿ ಎಚ್ಚರಿಸಿದ್ದರು.
ಕಾಲ್ಕೆರೆದುಕೊಂಡು ಬಂದ್ರೆ ಮಣ್ಣು ಮುಕ್ಕಿಸದೇ ಬಿಡಲ್ಲ ಎಂದ ಪ್ರಧಾನಿ ಮೋದಿ
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಟ ಬಲಗೊಳಿಸಿರುವ ಭಾರತ, ಗಡಿಯಾಚೆಗಿನ ಭಯೋತ್ಪಾದನೆ ತಡೆಯಲು ಮುಂದಾಗಿದೆ. ಭಯೋತ್ಪಾದಕರಿಗೆ ಪಾಕಿಸ್ತಾನ ನೀಡುತ್ತಿದ್ದ ಬೆಂಬಲ ತಡೆಯುವುದಕ್ಕೆ ಅಗತ್ಯ ಕ್ರಮಗಳನ್ನು ಭಾರತ ತೆಗೆದುಕೊಂಡಿತು. ಆಪರೇಷನ್ ಸಿಂದೂರ ಕಾರ್ಯಾಚರಣೆ ಶುರುಮಾಡಿದ ಪ್ರಧಾನಿ ಮೋದಿ, ಕಾಲ್ಕೆರೆದುಕೊಂಡು ಬಂದ್ರೆ ಮಣ್ಣು ಮುಕ್ಕಿಸದೇ ಬಿಡಲ್ಲ ಎಂದು ಎಚ್ಚರಿಸಿದ್ದರು. ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಮೂರು ತಂತ್ರಗಳನ್ನು ವಿಶೇಷವಾಗಿ ರಾಜತಾಂತ್ರಿಕ, ಸೇನಾ ಕಾರ್ಯಾಚರಣೆ ಮತ್ತು ಮನೋವೈಜ್ಞಾನಿಕ ತಂತ್ರಗಳನ್ನು ಸೇರಿಸಿಕೊಳ್ಳಲಾಗಿದೆ. ಇದರ ಮೂಲಕ ಇದುವರೆಗೆ 3 ಉದ್ದೇಶ ಈಡೇರಿದೆ ಎಂದು ಮೂಲಗಳು ತಿಳಿಸಿದ್ದಾಗಿ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.
ಆಪರೇಷನ್ ಸಿಂದೂರ ಮೂಲಕ ಈಡೇರಿತು 3 ಉದ್ದೇಶ
1) ಸೇನಾ ಕಾರ್ಯಾಚರಣೆ: ಭಯೋತ್ಪಾದನೆಯಲ್ಲಿ ತೊಡಗಿದವರಷ್ಟೇ ಅಲ್ಲ, ಉಗ್ರರಿಗೆ ನೆರವಾಗುವ ಎಲ್ಲರಿಗೂ ಶಿಕ್ಷೆ ಸಿಗಲಿದೆ ಎಂದು ಸಾರಾಸಗಟಾಗಿ ಎಚ್ಚರ ನೀಡಿದ್ದರು. ಅದಾದ ಬಳಿಕ, ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು- ಕಾಶ್ಮೀರದಲ್ಲಿದ್ದ 9 ಉಗ್ರ ನೆಲೆಗಳನ್ನು ನಾಶಮಾಡಿತ್ತು. ಇದರಲ್ಲಿ ಬಹವಾಲ್‌ಪುರ, ಮುರಿಡ್ಕೆ, ಮುಜಾಫರಾಬಾದ್‌ನ ಎಲ್‌ಇಟಿ, ಜೆಇಎಂ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಶಿಬಿರಗಳು ನಾಶವಾಗಿವೆ. ನಂತರ ಪಾಕಿಸ್ತಾನ ಡ್ರೋನ್ ದಾಳಿ ಆರಂಭಿಸಿದಾಗ, ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ. ಈ ದಾಳಿಯಲ್ಲಿ ಡ್ರೋನ್ ದಾಳಿ ಎಲ್ಲಿಂದ ನಡೆಸಲಾಗುತ್ತಿತ್ತೋ ಆ ಪ್ರದೇಶವನ್ನು ಭಾರತೀಯ ಸೇನೆ ನಾಶ ಮಾಡಿದೆ.
2) ರಾಜತಾಂತ್ರಿಕ ಸಮರ: ಭಾರತ ಯುದ್ಧ ಬಯಸುವುದಿಲ್ಲ. ಭಯೋತ್ಪಾದನೆ ವಿರುದ್ಧದ ಹೋರಾಟ ಕೈಬಿಡುವುದಿಲ್ಲ. ಕಾಲ್ಕೆರೆದುಕೊಂಡು ಬಂದರೆ ಮಣ್ಣು ಮುಕ್ಕಿಸದೇ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದರು. ಸಿಂಧೂ ಜಲ ಒಪ್ಪಂದ ಅಮಾನತುಗೊಳಿಸಿದ ಭಾರತ, ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವ ತನಕ ರಾಜತಾಂತ್ರಿಕವಾಗಿಯೂ ಬೇರೆ ಬೇರೆ ಕ್ರಮಗಳನ್ನು, ನಿರ್ಬಂದಗಳನ್ನು ಪಾಕಿಸ್ತಾನದ ಮೇಲೆ ಹೇರಿದೆ. ಇದು ಪಾಕಿಸ್ತಾನವನ್ನು ಆಂತರಿಕವಾಗಿ ಕುಗ್ಗುವಂತೆ ಮಾಡಿದೆ.
3) ಮನೋವೈಜ್ಞಾನಿಕ ತಂತ್ರ: ಪಾಕಿಸ್ತಾನದ ಗಮನವನ್ನು ಬೇರೆಡೆ ಸೆಳೆದು ಭಯೋತ್ಪಾದನಾ ಶಿಬಿರಗಳ ಮೇಲೆ ದಾಳಿ ನಡೆಸಿದ ಭಾರತ, ಪಾಕಿಸ್ತಾನಕ್ಕೆ ಮಾನಸಿಕವಾಗಿ ಆಘಾತ ನೀಡಿದೆ. ಇಲ್ಲಿ ಮನೋವೈಜ್ಞಾನಿಕ ತಂತ್ರ ಬಳಕೆಯಾಗಿದೆ. ಪಾಕಿಸ್ತಾನ ಸೇನೆ, ಐಎಸ್‌ಐ ಜತೆಗೆ ನಿಕಟ ಸಂಪರ್ಕ ಹೊಂದಿದ್ದ ಮುರಿಡ್ಕೆಯ ಭಯೋತ್ಪಾದಕ ಶಿಬಿರದ ಮೇಲೆ ನೇರ ದಾಳಿ ನಡೆಸುವ ಮೂಲಕ ಮರ್ಮಾಘಾತ ನೀಡಿದೆ. ಸಣ್ಣ ಪುಟ್ಟ ಉಗ್ರಶಿಬಿರಗಳಲ್ಲ, ಕೇಂದ್ರ ಕಚೇರಿಯನ್ನೇ ಉಡಾಯಿಸಬಲ್ಲೆವು. ಸಂತ್ರಸ್ತರು ಹಾಗೂ ಅಪರಾಧಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಲಾರೆವು ಎಂಬ ಸ್ಪಷ್ಟ ಸಂದೇಶ ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ರವಾನೆಯಾಗಿದೆ.
ಭಾರತದ ಯುದ್ಧತಂತ್ರವು ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಿಸಿದೆ. ಇದರ ನಡುವೆ, ಪಾಕಿಸ್ತಾನದ ಸೇನಾ ಶಕ್ತಿ ಮತ್ತು ಭಾರತದ ಸೇನಾ ಶಕ್ತಿಯ ಪ್ರದರ್ಶನವೂ ಆಗಿದೆ. ಪಾಕಿಸ್ತಾನ ಬಳಸುತ್ತಿರುವ ಚೀನಾ ಯುದ್ಧೋಪಕರಣಗಳ ತಾಕತ್ತು, ಭಾರತದ ಸ್ವದೇಶಿ ಯುದ್ಧೋಪಕರಣ, ವಿದೇಶಗಳಿಂದ ತರಿಸಿಕೊಂಡ ಶಸ್ತ್ರಾಸ್ತ್ರಗಳ ಪ್ರಯೋಗವೂ ನಡೆದಿದೆ.
ಭಾರತ- ಪಾಕ್ ಬಿಕ್ಕಟ್ಟು; ತೃತೀಯ ರಾಷ್ಟ್ರದ ಮಧ್ಯಸ್ಥಿಕೆ ಬೇಡ
ಕಾಶ್ಮೀರಕ್ಕೆ ಯಾವುದೇ ಮೂರನೇ ರಾಷ್ಟ್ರದ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಭಾರತ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಕಾಶ್ಮೀರದ ಬಗ್ಗೆ ಭಾರತದ ನಿಲುವು ಬಹಳ ಸ್ಪಷ್ಟವಾಗಿದೆ. ಒಂದೇ ಒಂದು ಸಮಸ್ಯೆ ಉಳಿದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದ ಭಾರತ ಸೇರ್ಪಡೆ. ಇದು ಬಿಟ್ಟರೆ ಬೇರೆ ಏನೂ ಇಲ್ಲ. ಅವರು ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡಿದರೆ, ನಾವು ಮಾತನಾಡಬಹುದು. ನಮಗೆ ಬೇರೆ ಯಾವ ಉದ್ದೇಶವೂ ಇಲ್ಲ. ಯಾರೂ ಮಧ್ಯಸ್ಥಿಕೆ ವಹಿಸುವುದನ್ನು ನಾವು ಬಯಸುವುದಿಲ್ಲ. ನಮಗೆ ಯಾರ ಮಧ್ಯಸ್ಥಿಕೆಯೂ ಬೇಕಿಲ್ಲ ಎಂದು ಭಾರತ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಪಾಕಿಸ್ತಾನ ಕದನ ವಿರಾಮ ಘೋಷಣೆಗೆ ಅಂಗಾಲಾಚಿದ ವೇಳೆ, ಅದನ್ನು ಅಂಗೀಕರಿಸಿದ ಭಾರತದ ನಿಲುವು ಸ್ಪಷ್ಟವಾಗಿದೆ. ಆದರೆ, ಅದರ ಬೆನ್ನಿಗೆ ಪಾಕಿಸ್ತಾನ ಗಡಿಯಾಚೆಗಿನ ದಾಳಿ ಮುಂದುವರಿಸಿದ ಕಾರಣ, ಅದಕ್ಕೆ ತಕ್ಕ ಉತ್ತರವನ್ನು ಭಾರತೀಯ ಸೇನೆ ನೀಡಿದೆ. ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಾಯಕತ್ವಗಳನ್ನು ಕದನ ವಿರಾಮ ತೀರ್ಮಾನಕ್ಕಾಗಿ ಶ್ಲಾಘಿಸಿದರು. ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಉಭಯ ದೇಶಗಳ ನಾಯಕರೊಂದಿಗೆ ಕೆಲಸ ಮಾಡಲು ಸಿದ್ಧವಿರುವುದಾಗಿ ಘೋಷಿಸಿರುವುದು ಗಮನ ಸೆಳೆದಿದೆ.