ಮುಂದುವರಿದ ಆಪರೇಷನ್ ಸಿಂದೂರ: ಪಾಕಿಸ್ತಾನದ ಮೂರು ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಭಾರತೀಯ ಸೇನೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮುಂದುವರಿದ ಆಪರೇಷನ್ ಸಿಂದೂರ: ಪಾಕಿಸ್ತಾನದ ಮೂರು ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಭಾರತೀಯ ಸೇನೆ

ಮುಂದುವರಿದ ಆಪರೇಷನ್ ಸಿಂದೂರ: ಪಾಕಿಸ್ತಾನದ ಮೂರು ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಭಾರತೀಯ ಸೇನೆ

ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ ಇಸ್ಲಾಮಾಬಾದ್‌ನಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಅದರ ಮೇಲೂ ಭಾರತ ಕ್ಷಿಪಣಿ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಕರಾಚಿ ಬಂದರಿನಲ್ಲಿ ಪಾಕ್ ಸೇನೆಯ ಗಸ್ತು
ಕರಾಚಿ ಬಂದರಿನಲ್ಲಿ ಪಾಕ್ ಸೇನೆಯ ಗಸ್ತು (AFP)

ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ಮುಂದುವರಿದಿದ್ದು, ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮುಂದುವರಿಸಿದೆ. ತನ್ನ ಮೂರು ವಾಯುನೆಲೆಗಳನ್ನು ಭಾರತೀಯ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಪಾಕಿಸ್ತಾನ ಶನಿವಾರ ಮುಂಜಾನೆ ಹೇಳಿಕೊಂಡಿದೆ. ಪಾಕಿಸ್ತಾನ ವಾಯುಪಡೆಯ ನೂರ್ ಖಾನ್ (ಚಕ್ಲಾಲಾ, ರಾವಲ್ಪಿಂಡಿ), ಮುರಿದ್ (ಚಕ್ವಾಲ್) ಮತ್ತು ರಫೀಕಿ (ಜಾಂಗ್ ಜಿಲ್ಲೆಯ ಶೋರ್ಕೋಟ್) ವಾಯುನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಇಸ್ಲಾಮಾಬಾದ್‌ನಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ದಾಳಿ ಕುರಿತಂತೆ ಹೆಚ್ಚಿನ ವಿವರಗಳನ್ನು ಪಾಕ್ ಸೇನೆ ಬಿಡುಗಡೆ ಮಾಡಿಲ್ಲ. ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ ರಾಜಧಾನಿ ಇಸ್ಲಾಮಾಬಾದ್‌ನಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಭಾರತದ ಕೆಲವು ಕ್ಷಿಪಣಿಗಳು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಮೇಲೂ ದಾಳಿ ನಡೆಸಿವೆ ಮತ್ತು ಕೆಲವು ಅಫ್ಘಾನಿಸ್ತಾನಕ್ಕೂ ಹೋಗಿವೆ ಎಂದು ಶರೀಫ್ ಹೇಳಿದ್ದಾರೆ. ಆದರೆ ಪಾಕ್ ವಾಯುಪಡೆಯ ಎಲ್ಲಾ ಸ್ವತ್ತುಗಳು ಸುರಕ್ಷಿತವಾಗಿವೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಸೇನೆ ತನ್ನ ಜೆಟ್ ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು ಕ್ಷಿಪಣಿಗಳನ್ನು ಹಾರಿಸಿದೆ ಎಂದು ಅವರು ಹೇಳಿದ್ದು, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯು ಹಲವಾರು ಕ್ಷಿಪಣಿಗಳನ್ನು ತಡೆದಿದೆ ಎಂದು ತಿಳಿಸಿದ್ದಾರೆ. ಭಾರತದ ಈ ದಾಳಿಯನ್ನು ಖಂಡಿಸಿರುವ ಪಾಕ್, ಈ ಆಕ್ರಮಣಕ್ಕೆ ಪ್ರತಿಕ್ರಿಯಿಸುತ್ತೇವೆ ಎಂದು ಹೇಳಿದೆ. ಈ ಮಧ್ಯೆ ಪಾಕಿಸ್ತಾನದ ವಾಯುಪ್ರದೇಶವನ್ನು ಮುಂಜಾನೆ 3.15 ರಿಂದ ಮಧ್ಯಾಹ್ನ 12 ರವರೆಗೆ ಎಲ್ಲಾ ರೀತಿಯ ವಿಮಾನ ಸಂಚಾರಕ್ಕೆ ಮುಚ್ಚಲಾಗಿದೆ ಎಂದು ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.