ರಾತ್ರೋ ರಾತ್ರಿ ಶುರುವಾಯಿತು ಆಪರೇಷನ್ ಸಿಂದೂರ: ಪಾಕಿಸ್ತಾನ, ಪಿಒಕೆಯಲ್ಲಿದ್ದ 9 ಉಗ್ರ ತಾಣಗಳ ಮೇಲೆ ಭಾರತದ ದಾಳಿ, ಇದುವರೆಗೆ ಏನೇನಾಯಿತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಾತ್ರೋ ರಾತ್ರಿ ಶುರುವಾಯಿತು ಆಪರೇಷನ್ ಸಿಂದೂರ: ಪಾಕಿಸ್ತಾನ, ಪಿಒಕೆಯಲ್ಲಿದ್ದ 9 ಉಗ್ರ ತಾಣಗಳ ಮೇಲೆ ಭಾರತದ ದಾಳಿ, ಇದುವರೆಗೆ ಏನೇನಾಯಿತು

ರಾತ್ರೋ ರಾತ್ರಿ ಶುರುವಾಯಿತು ಆಪರೇಷನ್ ಸಿಂದೂರ: ಪಾಕಿಸ್ತಾನ, ಪಿಒಕೆಯಲ್ಲಿದ್ದ 9 ಉಗ್ರ ತಾಣಗಳ ಮೇಲೆ ಭಾರತದ ದಾಳಿ, ಇದುವರೆಗೆ ಏನೇನಾಯಿತು

ಆಪರೇಷನ್ ಸಿಂದೂರ್: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಅದರಲ್ಲಿ ಭಾಗಿಯಾಗಿದ್ದ ಉಗ್ರ ಸಂಘಟನೆಗಳ ಮೇಲೆ ಭಾರತೀಯ ಸೇನೆ ರಾತ್ರೋ ರಾತ್ರಿ ಆಪರೇಷನ್ ಸಿಂದೂರ ಕಾರ್ಯಾಚರಣೆ ಶುರುಮಾಡಿದೆ. ಪಾಕಿಸ್ತಾನ, ಪಿಒಕೆಯಲ್ಲಿದ್ದ 9 ಉಗ್ರ ತಾಣಗಳ ಮೇಲೆ ಭಾರತದ ದಾಳಿ ನಡೆಸಿದ್ದು ಇದುವರೆಗೆ ಏನೇನಾಯಿತು? 11 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಆಪರೇಷನ್ ಸಿಂದೂರ ಶುರುವಾದ ಬಳಿಕ ಮೇ 7 ರಂದು ನಸುಕಿನ ವೇಳೆ ಕಂಡ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದ ಮುಜಾಫರಾಬಾದ್‌ ಪಟ್ಟಣದ ಒಂದು ನೋಟ.
ಆಪರೇಷನ್ ಸಿಂದೂರ ಶುರುವಾದ ಬಳಿಕ ಮೇ 7 ರಂದು ನಸುಕಿನ ವೇಳೆ ಕಂಡ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದ ಮುಜಾಫರಾಬಾದ್‌ ಪಟ್ಟಣದ ಒಂದು ನೋಟ. (REUTERS)

ಆಪರೇಷನ್ ಸಿಂದೂರ: ಜಮ್ಮು - ಕಾಶ್ಮೀರದ ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ರಾತ್ರೋ ರಾತ್ರಿ ಆಪರೇಷನ್ ಸಿಂದೂರ್ ಕಾರ್‍ಯಾಚರಣೆಯನ್ನು ಶುರುಮಾಡಿದೆ. ಪಾಕಿಸ್ತಾನ ಹಾಗೂ ಪಿಒಕೆ (ಪಾಕ್‌ ಆಕ್ರಮಿತ ಕಾಶ್ಮೀರ)ದಲ್ಲಿರುವ 9 ಉಗ್ರ ತಾಣಗಳ ಮೇಲೆ ದಾಳಿ ನಡೆಸಿದೆ. ಇದುವರೆಗಿನ ಲಭ್ಯ ಮಾಹಿತಿ ಪ್ರಕಾರ, ಭಾರತೀಯ ಸೇನೆ ಬುಧವಾರ (ಮೇ 7) ನಸುಕಿನ ವೇಳೆ ಪಾಕಿಸ್ತಾನ ಹಾಗೂ ಪಿಒಕೆ (ಪಾಕ್‌ ಆಕ್ರಮಿತ ಕಾಶ್ಮೀರ)ದಲ್ಲಿರುವ 9 ಉಗ್ರ ತಾಣಗಳ ಮೇಲೆ ದಾಳಿ ಶುರುಮಾಡಿರುವುದಾಗಿ ರಕ್ಷಣಾ ಸಚಿವಾಲಯ ಘೋಷಿಸಿದೆ.

ಭಾರತದ ಹೇಳಿಕೆ ಮತ್ತು ಇತರೆ 6 ಮುಖ್ಯ ಅಂಶಗಳಿವು

ಭಾರತದ ರಕ್ಷಣಾ ಸಚಿವಾಲಯವು ಆಪರೇಷನ್ ಸಿಂದೂರಕ್ಕೆ ಸಂಬಂಧಿಸಿ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಆರು ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿದೆ. ವಿವರ ಹೀಗಿದೆ

1) ಬುಧವಾರ ನಸುಕಿನ ವೇಳೆ ದಾಳಿ ಶುರು: ಭಾರತದ ಸಶಸ್ತ್ರ ಪಡೆಗಳು ಬುಧವಾರ ನಸುಕಿನ 1.44ರ ವೇಳೆಗೆ ಪಾಕಿಸ್ತಾನ ಹಾಗೂ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ)ದಲ್ಲಿರುವ ಉಗ್ರ ನೆಲೆ, ಉಗ್ರ ತಾಣಗಳನ್ನು ಗುರಿಯಾಗಿಟ್ಟುಕೊಂಡು ನಿಶ್ಚಿತ ದಾಳಿ ಶುರುಮಾಡಿವೆ. ಭಾರತದ ವಿರುದ್ಧ ಉಗ್ರ ದಾಳಿ ಸಂಚು ರೂಪಿಸಲ್ಪಡುವ ಹಾಗೂ ನಿರ್ದೇಶನ ನೀಡಲ್ಪಡುವ ತಾಣಗಳನ್ನು ಭಾರತ ಸರ್ಕಾರ ಗುರುತಿಸಿದ್ದು, ಉಗ್ರರ ಮೂಲಸೌಕರ್ಯ ನಾಶ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ.

2) ಆಪರೇಷನ್ ಸಿಂದೂರ: ಭಾರತದ ಸಶಸ್ತ್ರ ಪಡೆಗಳು ಶುರುಮಾಡಿರುವ ಈ ಕಾರ್ಯಾಚರಣೆಗೆ “ಆಪರೇಷನ್ ಸಿಂದೂರ್” ಎಂದು ಹೆಸರಿಡಲಾಗಿದೆ. ಭಾರತದ ಕಾರ್ಯಾಚರಣೆಯು “ನಿಶ್ಚಿತ, ಅಳೆದು ತೂಗಿದ ಹಾಗೂ ಪ್ರಚೋದನಕಾರಿ” ಅಲ್ಲದ ರೀತಿಯದ್ದಾಗಿದೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ, ದಾಳಿ ಗುರಿಗಳ ವಿವರವನ್ನು ಬಹಿರಂಗಪಡಿಸಿಲ್ಲ.

3) ಪಾಕ್‌ ಸೇನಾ ನೆಲೆ ಟಾರ್ಗೆಟ್ ಅಲ್ಲ: ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಭಾರತ ಟಾರ್ಗೆಟ್ ಮಾಡಿಲ್ಲ. "ಗುರಿಗಳ ಆಯ್ಕೆ ಮತ್ತು ದಾಳಿ ಅನುಷ್ಠಾನ ವಿಧಾನದಲ್ಲಿ ಸಾಕಷ್ಟು ಸಂಯಮವನ್ನು ಪ್ರದರ್ಶಿಸಲಾಗಿದೆ" ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.

4) ದಾಳಿಕೋರರಿಗೆ ಶಿಕ್ಷೆ: ಏಪ್ರಿಲ್‌ 22 ರಂದು ನಡೆದ ಪಹಲ್ಗಾಮ್ ದಾಳಿಯ ಪೈಶಾಚಿಕ ಕೃತ್ಯದಲ್ಲಿ 25 ಭಾರತೀಯರು ಹಾಗೂ ಒಬ್ಬ ನೇಪಾಳಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿಕೋರರಿಗೆ, ಅವರ ಮೂಲಕ್ಕೆ ಹೊಡೆತ ನೀಡುವ ಬದ್ಧತೆ ಭಾರತ ಸರ್ಕಾರಕ್ಕೆ ಇದೆ. ದಾಳಿಕೋರರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡುವ ಬದ್ಧತೆಯನ್ನು ಭಾರತ ಪ್ರದರ್ಶಿಸುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

5) ಭಾರತ್ ಮಾತಾ ಕೀ ಜೈ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ನಸುಕಿನ 2.46ಕ್ಕೆ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

6) ಕದನ ವಿರಾಮ ಉಲ್ಲಂಘನೆ: ಪೊಂಚ್-ರಾಜೌರಿ ಪ್ರದೇಶದ ಭುಂಬರ್ ಗಲಿಯಲ್ಲಿ ಫಿರಂಗಿಗಳನ್ನು ಹಾರಿಸುವ ಮೂಲಕ ಪಾಕಿಸ್ತಾನ ಮತ್ತೆ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದೆ. ಇದರ ಜತೆಗೆ ಭಾರತೀಯ ಸೇನೆಯು ಲೆಕ್ಕಾಚಾರದ ನಡೆಯೊಂದಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದೆ ಎಂದೂ ಅದು ಹೇಳಿದೆ.

ಪಾಕಿಸ್ತಾನದ ವರದಿಗಳು ಹೇಳುತ್ತಿರುವುದೇನು; 5 ಮುಖ್ಯ ಅಂಶಗಳು

1) ಪಾಕಿಸ್ತಾನ ಸೇನೆ ಹೇಳಿಕೆ: ಪಾಕಿಸ್ತಾನದ ಸೇನೆಯ ಮಾಧ್ಯಮ ಘಟಕ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‌ಪಿಆರ್‌) ಹೇಳಿಕೆಯನ್ನು ಉಲ್ಲೇಖಿಸಿದ ಪಿಟಿವಿ ವರದಿ ಪ್ರಕಾರ, ಪಂಜಾಬ್‌ನ ಬಹವಾಲ್ಪುರ, ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ)ಯ ಕೋಟ್ಲಿ ಮತ್ತು ಮುಜಾಫರಾಬಾದ್‌ ಮೇಲೆ ಭಾರತೀಯ ಸೇನೆ ವೈಮಾನಿಕ ದಾಳಿ ನಡೆಸಿದೆ.

2) ಭಾರತದ ನೆಲದಿಂದಲೇ ದಾಳಿ: ಪಾಕಿಸ್ತಾನದ ವಾಯುಪಡೆಯ ಎಲ್ಲ ಯುದ್ಧ ವಿಮಾನಗಳೂ ಜಾಗೃತವಾಗಿದ್ದು ಗಸ್ತು ಹಾರಾಟ ನಡೆಸಿವೆ. ಭಾರತೀಯ ಸೇನೆಯು ತನ್ನ ನೆಲದಿಂದಲೇ ನಿಶ್ಚಿತ ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿಲ್ಲ ಎಂದು ಪಿಟಿವಿ ವರದಿ ಮಾಡಿದೆ.

3) ಪ್ರತೀಕಾರದ ಎಚ್ಚರಿಕೆ ನೀಡಿದ ಪಾಕ್‌: ಈ ವೈಮಾನಿಕ ದಾಳಿಗೆ ತಕ್ಕ ಪ್ರತ್ಯುತ್ತರವನ್ನು ಪಾಕಿಸ್ತಾನ ಸೂಕ್ತ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಸರಿಯಾದ ಪ್ರದೇಶವನ್ನು ಟಾರ್ಗೆಟ್ ಮಾಡಿ ನೀಡಲಿದೆ. ಹಾಗೆಯೇ ಬಿಡುವುದಿಲ್ಲ ಎಂದು ಪಾಕಿಸ್ತಾನ ಸೇನೆ ಹೇಳಿದ್ದಾಗಿ ಪಿಟಿವಿ ವರದಿ ಮಾಡಿದೆ.

4) ಭಾರತದಿಂದ ಕ್ಷಿಪಣಿ ದಾಳಿ: ಭಾರತವು ಭವಾಲ್ಪುರ, ಕೋಟ್ಲಿ ಹಾಗೂ ಮುಜಾಫರಬಾದ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಸೇನೆಯ ಮುಖ್ಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಹೇಳಿದ್ದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.

5) ಭಾರತ ಅತಿಕ್ರಮಿಸಿಲ್ಲ: ಭಾರತೀಯ ಸೇನೆ ಪಾಕಿಸ್ತಾನದ ವಾಯು ಪ್ರದೇಶದೊಳಕ್ಕೆ ಬಂದೇ ಇಲ್ಲ. ಅಂತಹ ಪ್ರಯತ್ನಗಳಿಗೆ ಪಾಕಿಸ್ತಾನ ವಾಯುಪಡೆ ಅವಕಾಶವನ್ನೇ ನೀಡಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಹೇಳಿದ್ದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.