ಆಪರೇಷನ್‌ ಸಿಂದೂರ್‌ ನಿಂತಿಲ್ಲ, ಅಣ್ವಸ್ತ್ರ ದಾಳಿ ಬ್ಲಾಕ್‌ಮೇಲ್‌ಗೆ ಬೆದರೋಲ್ಲ ; ಪ್ರಧಾನಿ ನರೇಂದ್ರ ಮೋದಿ ದೇಶ ಉದ್ದೇಶಿಸಿ ಭಾಷಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಪರೇಷನ್‌ ಸಿಂದೂರ್‌ ನಿಂತಿಲ್ಲ, ಅಣ್ವಸ್ತ್ರ ದಾಳಿ ಬ್ಲಾಕ್‌ಮೇಲ್‌ಗೆ ಬೆದರೋಲ್ಲ ; ಪ್ರಧಾನಿ ನರೇಂದ್ರ ಮೋದಿ ದೇಶ ಉದ್ದೇಶಿಸಿ ಭಾಷಣ

ಆಪರೇಷನ್‌ ಸಿಂದೂರ್‌ ನಿಂತಿಲ್ಲ, ಅಣ್ವಸ್ತ್ರ ದಾಳಿ ಬ್ಲಾಕ್‌ಮೇಲ್‌ಗೆ ಬೆದರೋಲ್ಲ ; ಪ್ರಧಾನಿ ನರೇಂದ್ರ ಮೋದಿ ದೇಶ ಉದ್ದೇಶಿಸಿ ಭಾಷಣ

ಪಾಕಿಸ್ತಾನದ ಉಗ್ರಗಾಮಿಗಳು ಮೂರು ವಾರದ ಹಿಂದೆ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆಸಿದ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ಬಿರುಸುಗೊಂಡಿದ್ದು. ಇದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಉದ್ದೇಶಿಸಿ ಮಾತನಾಡಿದರು.

ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.

ದೆಹಲಿ: ಪಾಕಿಸ್ತಾನದ ನಡೆಸಿದ ದಾಳಿ, ಭಯೋತ್ಪಾದನೆ ಚಟುವಟಿಕೆ ವಿರುದ್ದ ನಮ್ಮ ದಾಳಿ ನಿಂತಿಲ್ಲ. ಈಗಾಗಲೇ ಆಪರೇಷನ್‌ ಸಿಂದೂರ್‌ ಹೆಸರಲ್ಲಿ ತಕ್ಕ ಉತ್ತರ ಕೊಟ್ಟಿದ್ದೇವೆ. ಯಾವುದೇ ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಎಲ್ಲದಕ್ಕೂ ಉತ್ತರ ನೀಡುವ ಶಕ್ತಿ ನಮ್ಮಲ್ಲಿದೆ. ಮೇಕ್‌ ಇನ್‌ ಇಂಡಿಯಾ ಅಡಿ ನಾವೇ ರಕ್ಷಣೆ ವಿಚಾರದಲ್ಲಿ ಸಶಕ್ತರಾಗಿದ್ದೇವೆ. ಪಾಕಿಸ್ತಾನಕ್ಕೆ ಬೆಂಬಲಿಸಿದರೆ ಭಯೋತ್ಪಾದನೆ ಬೆಂಬಲಿಸದ ಹಾಗೆ ಎಂದು ವಿಶ್ವದ ಇತರೆ ದೇಶಗಳೂ ಅರಿತುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಉದ್ದೇಶಿಸಿ ನೀಡಿದ ನಿಖರ ಸಂದೇಶವಿದು.

ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆಸಿದ ದಾಳಿಯ ಘಟನೆ ನಂತರ ಪಾಕಿಸ್ತಾನ ಹಾಗೂ ಭಾರತದ ನಡುವೆ ದಾಳಿ ಪ್ರತಿದಾಳಿಗಳು ನಡೆದಿವೆ. ಪಾಕಿಸ್ತಾನದ ಉಗ್ರರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿರುವ ಭಾರತ ಸೂಕ್ತ ಉತ್ತರ ನೀಡಿದೆ. ಇದರೊಟ್ಟಿಗೆ ಕದನ ವಿರಾಮದಂತಹ ಚಟುವಟಿಕೆಗಳು ನಡೆದರೂ ಯಾವುದೂ ಪರಿಣಾಮ ಬೀರಿಲ್ಲ. ಉಗ್ರರ ದಾಳಿ, ಆನಂತರ ಪಾಕಿಸ್ತಾನದ ಉಗ್ರರ ಮೇಲೆ ಭಾರತದ ಪ್ರತ್ಯುತ್ತರ ಬೆಳವಣಿಗೆ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿ ಭಾರತದ ನಿಲುವುಗಳನ್ನು ವಿಶ್ವದ ಮುಂದೆ ಇಟ್ಟರು. ಹನ್ನೊಂದು ವರ್ಷದ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಹಲವು ಬಾರಿ ಈ ರೀತಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

ಭಾರತದ ಮೇಲೆ ಭಯೋತ್ಪಾದಕರ ದಾಳಿ ಮೂರು ವಾರದ ಹಿಂದೆ ಭೀಕರವಾಗಿತ್ತು. ಅದೂ ಮಕ್ಕಳ ಎದುರೇ ತಂದೆಯನ್ನು ಕೊಲ್ಲಲಾಯಿತು. ಪತ್ನಿಯರ ಎದುರೇ ಭಾರತದ ಹೆಣ್ಣು ಮಕ್ಕಳ ಸಿಂದೂರ ಅಳಿಸುವ ಪ್ರಯತ್ನವಾಯಿತು. ಇದನ್ನು ಯಾರೂ ಕೂಡ ಸಹಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೇ ನಾವು ಆಪರೇಷನ್‌ ಸಿಂದೂರ್‌ ಎನ್ನುವ ಉತ್ತರ ನೀಡಬೇಕು ಎಂದರು ಮೋದಿ.

ನಾವು ಭಯೋತ್ಪಾದಕರನ್ನು ಗುರಿಯಾಗಿಟ್ಟುಕೊಂಡು ಆಪರೇಷನ್‌ ಸಿಂದೂರ್‌ ಆರಂಭಿಸಿದೆವು. ನಮ್ಮ ದಾಳಿಯ ಮುಖ್ಯ ಗುರಿಯಾಗಿದ್ದೇ ಭಯೋತ್ಪಾದಕರು. ಆದರೆ ಭಾರತಕ್ಕೆ ಈ ವಿಚಾರದಲ್ಲಿ ಬೆಂಬಲ ನೀಡುವ ಬದಲು ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡತೊಡಗಿತು. ಶಾಲೆಗಳು, ಗುರುದ್ವಾರ, ಸಾಮಾನ್ಯ ಜನರ ಮನೆಗಳನ್ನು ಗುರಿಯಾಗಿಸಿಟ್ಟುಕೊಂಡು ಪಾಕಿಸ್ತಾನ ದಾಳಿ ನಡೆಸತೊಡಗಿದೆ ಎಂದು ಮೋದಿ ಟೀಕಾ ಪ್ರಹಾರ ನಡೆಸಿದರು.

ಪಾಕಿಸ್ತಾನದ ಡ್ರೋಣ್‌ಗಳು, ಕ್ಷಿಪಣಿಗಳನ್ನು ಭಾರತ ಹೇಗೆ ಹೊಡದು ಹಾಕಿದೆ ಎನ್ನುವುದು ಜಗತ್ತಿಗೆ ಗೊತ್ತಾಗಿದೆ. ನಮ್ಮ ಸೇನೆಯು ಎಲ್ಲ ರೀತಿಯ ದಾಳಿಗಳನ್ನು ಎದುರಿಸಲು ಸಶಕ್ತವಾಗಿವೆ. ನಮ್ಮ ಡ್ರೋಣ್‌ಗಳು, ಕ್ಷಿಪಣಿಗಳು ಹೇಗಿವೆ ಎನ್ನುವುದು ಈಗ ಜಗತ್ತಿನ ಮುಂದೆ ಬಯಲಾಗಿದೆ. ಪಾಕಿಸ್ತಾನದ ಈ ನಡೆಯನ್ನು ನಾವು ಸಹಿಸಿಕೊಳ್ಳಲು ಆಗದು. ಈ ಕಾರಣದಿಂದಲೇ ನಾವು ಪಾಕಿಸ್ತಾನದ ವಾಯು ನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದರು ಮೋದಿ.

ನಮ್ಮ ಸೇನಾ ಶಕ್ತಿ, ವ್ಯವಸ್ಥಿತ ದಾಳಿ, ಡ್ರೋಣ್‌- ಕ್ಷಿಪಣಿಗಳ ಪ್ರಯೋಗದಿಂದ ಪಾಕಿಸ್ತಾನದ ಶಕ್ತಿಯೇ ಅಡಗಿದೆ. ವಿಶ್ವದ ದೇಶಗಳು ಸೂಚಿಸಿದರೂ ಪಾಕಿಸ್ತಾನದ ದಾಳಿ ನಿಂತಿಲ್ಲ. ಈಗ ಪಾಕಿಸ್ತಾನದ ವಿರುದ್ದದ ದಾಳಿ ನಿಲ್ಲಿಸಿದ್ದೇವೆ. ನಾವು ಸೂಕ್ತ ಉತ್ತರ ಕೊಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು ಮೋದಿ.

ಸರ್ಜಿಕಲ್‌ ಸ್ಟ್ರೈಕ್‌ ಹಾಗೂ ಏರ್‌ ಸ್ಟೈಕ್‌ ನಂತರ ಭಾರತ ಈಗ ಆಪರೇಷನ್‌ ಸಿಂದೂರ್‌ ಆರಂಭಿಸಿದೆ. ಇದು ಭಯೋತ್ಪಾದಕರು ಹಾಗೂ ಭಯೋತ್ಪಾದನೆ ವಿರುದ್ದ ದಾಳಿ ಎನ್ನುವುದು ಹೇಳುತ್ತಿದ್ದೇವೆ. ಇದಕ್ಕೆ ಸಂಪರ್ಕ ಕಲ್ಪಿಸಿ ಅಣ್ವಸ್ತ್ರ ದಾಳಿಯ ಬೆದರಿಕೆಗೆ ಭಾರತ ಜಗ್ಗುವುದಿಲ್ಲ. ಎಂದರು ಮೋದಿ.

ಪಾಕಿಸ್ತಾನದ ಹಿರಿಯ ಅಧಿಕಾರಿಗಳು ಹತರಾದ ಉಗ್ರರ ಅಂತ್ಯಕ್ರಿಯೆ ವೇಳೆ ಭಾಗಿಯಾಗಿ ಅವರು ಭಯೋತ್ಪಾದಕರ ಬೆಂಬಲವಾಗಿ ನಿಂತಿದ್ದಾರೆ ಎನ್ನುವ ಸಾಕ್ಷಿಯನ್ನು ನೀಡಿದ್ದಾರೆ. ವಿಶ್ವದ ಹಲವು ದೇಶಗಳು ಹೇಳಿದ ನಂತರವೂ ಪಾಕಿಸ್ತಾನ ತನ್ನ ಬುದ್ದಿ ಬದಲಿಸಿಲ್ಲ ಎಂದು ಟೀಕಿಸಿದರು.

ಈ ಬಾರಿ ನಾವು ಪಾಕಿಸ್ತಾನದ ಭಯೋತ್ಪಾದನೆ ವಿರುದ್ದ ಸಾರಿರುವ ಹೋರಾಟಕ್ಕೆ ಬಳಕೆಯಾಗುತ್ತಿರುವ ಮೇಡ್‌ ಇಂಡಿಯಾ ಉತ್ಪನ್ನಗಳು. ಈ ಶತಮಾನದ ಯುದ್ದದ ಮೂಲಕ ಇದು ಪ್ರದರ್ಶಿತವೂ ಆಗಲಿದೆ. ರಕ್ಷಣಾ ವಲಯದಲ್ಲಿ ಭಾರತದ ಸ್ವಂತ ಶಕ್ತಿಯನ್ನು ತೋರಿಸುತ್ತಿದೆ. ವಿಶ್ವದ ಇತರೆ ದೇಶಗಳು ಭಯೋತ್ಪಾದನೆ ವಿರುದ್ದ ಶೂನ್ಯ ಸಹಿಷ್ಣುತೆಯನ್ನು ಹೊಂದುವ ಅಗತ್ಯವಿದೆ ಎಂದರು ಮೋದಿ.

ಭಯೋತ್ಪಾದನೆ ಹಾಗೂ ಮಾತುಕತೆ, ಭಯೋತ್ಪಾದನೆ ಹಾಗೂ ವ್ಯಾಪಾರ ಏಕಕಾಲಕ್ಕೆ ಆಗುವುದಿಲ್ಲ ಎನ್ನುವುದನ್ನು ಅರಿಯಬೇಕು. ಪಾಕಿಸ್ತಾನದೊಂದಿಗೆ ನಮ್ಮ ಮಾತುಕತೆ ಎಂದರೆ ಅದು ಭಯೋತ್ಪಾದನೆ ನಿಗ್ರಹ, ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರ( ಪಿಒಕೆ) ಮೇಲೆಯೇ ಇರಲಿದೆ ಎನ್ನುವುದು ಸುಸ್ಪಷ್ಟ. ವಿಶ್ವ ಸಮುದಾಯಕ್ಕೂ ನನ್ನ ಸೂಚನೆ ಇದೆ. ಯಾವುದೇ ದೇಶವು ಪಾಕಿಸ್ತಾನದೊಂದಿಗೆ ಮಾತುಕತೆ ಆದರೆ ಅದು ಭಯೋತ್ಪಾದನೆ ಬೆಂಬಲಿಸಿದ ಹಾಗೆಯೇ ಎಂದು ಹೇಳಿದರು.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.