ಮಧೂರು ಬ್ರಹ್ಮಕಲಶೋತ್ಸವ: ಜೀರ್ಣೋದ್ದಾರಕ್ಕೆ 14 ವರ್ಷ ವಿಳಂಬ ಯಾಕಾಯ್ತು? ಮಹಾಬಲೇಶ್ವರ ಭಟ್ ಭಾಷಣ ಸಾರಾಂಶ -ಕೃಷ್ಣ ಭಟ್ ಬರಹ
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ತಡವಾಗಿದ್ದರ ಬಗ್ಗೆ, ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಹಾಬಲೇಶ್ವರ ಭಟ್ ಎಡಕ್ಕಾನ ಮಾತನಾಡಿರುವ ವಿಡಿಯೋ ತುಣುಕುಗಳು ವೈರಲ್ ಆಗಿವೆ. ಅವರ ಮಾತುಗಳನ್ನು ಕೃಷ್ಣ ಭಟ್ ಅವರು ಫೇಸ್‌ಬುಕ್ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ. (ಬರಹ: ಕೃಷ್ಣ ಭಟ್)

ನೆರೆಯ ಕೇರಳದ ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಸಂಭ್ರಮ ಜೋರಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭವಾಗಿ ಹಲವು ವರ್ಷಗಳ ನಂತರ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಇತ್ತೀಚೆಗೆ ಇಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಹಾಬಲೇಶ್ವರ ಭಟ್ ಎಡಕ್ಕಾನ ಅವರು, ವೇದಿಕೆಯಲ್ಲೇ ಹಲವು ವಿಷಯಗಳ ಕುರಿತು ಅಸಮಾಧಾನ ಹೊರಹಾಕಿದ್ದರು. ಜಿಲ್ಲೆಯ ಪ್ರಮುಖ ದೇವಸ್ಥಾನವೊಂದರ ಬ್ರಹ್ಮಕಲಶ ಕಾರ್ಯಕ್ರಮ ತಡವಾಗಿದ್ದರ ಬಗ್ಗೆ ಅವರು ಮಾತನಾಡಿರುವ ವಿಡಿಯೋ ತುಣುಕುಗಳು ವೈರಲ್ ಆಗಿವೆ. ಅವರ ಮಾತುಗಳನ್ನು ಕೃಷ್ಣ ಭಟ್ ಅವರು ಫೇಸ್‌ಬುಕ್ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ. ಇಲ್ಲಿರುವುರು ಕೃಷ್ಣ ಭಟ್ ಅವರ ಬರಹ.
ಕಾಸರಗೋಡು ಜಿಲ್ಲೆಯಲ್ಲೇ ಅತಿ ಹೆಚ್ಚು ಆದಾಯವಿರುವ, ಎ ಗ್ರೇಡ್ ದೇವಾಲಯ ಎಂದರೆ ಎಂದರೆ ಮಧೂರು ದೇವಸ್ಥಾನ. ಇಂಥಾ ದೇವಸ್ಥಾನದ ದೇವರನ್ನು 14 ವರ್ಷ ಬಾಲಾಲಯದಲ್ಲಿ ಕುಳ್ಳಿರಿಸಬೇಕಾದ ದುರ್ಗತಿ ಯಾಕೆ ಬಂತು? ಈ ಬಗ್ಗೆ ಆತ್ಮಾವಲೋಕನ ಮಾಡಬೇಕು. 2-3 ವರ್ಷದಲ್ಲಿ ಮುಕ್ತಾಯವಾಗಿ ಬ್ರಹ್ಮಕಲಶ ಆಗಬೇಕಾಗಿದ್ದ ಶ್ರೀಮಂತ ದೇವಸ್ಥಾನದಲ್ಲಿ ಇಷ್ಟೊಂದು ನಿಧಾನ ಆದದ್ದು ಯಾಕೆ, ಎಲ್ಲಿ ತಪ್ಪಿದ್ದೇವೆ ಎಂಬ ಬಗ್ಗೆ ಆಲೋಚಿಸೋಣ. ನಾನು ಸಿಎ ಕಲಿತವನಾದ್ದರಿಂದ ಖರ್ಚು ವೆಚ್ಚ, ಲೆಕ್ಕ ಪರಿಶೋಧನೆ ಬಗ್ಗೆ ಆಗ್ರಹ ಇಟ್ಟುಕೊಳ್ಳುತ್ತೇನೆ. ಕೇಂದ್ರದಿಂದ ಒಂದು ಕೋಟಿ ರೂ. ಅನುದಾನ ಬಂದಿದೆ ಎಂದು ಬಿಜೆಪಿ ನಾಯಕರೆಲ್ಲಾ ಭಾರಿ ಫ್ಲೆಕ್ಸ್ ಹಾಕಿದ್ದರು. ಇಲ್ಲಿಯವರೆಗೆ 1 ರೂ ಕೂಡಾ ಬಂದಿಲ್ಲ ಎಂದು ಮಧೂರು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಹಾಬಲೇಶ್ವರ ಭಟ್ ಎಡಕ್ಕಾನ, ಅವರು ದೇವಸ್ಥಾನದ ಬ್ರಹ್ಮಕಲಶ ಸಮಾರಂಭದ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.
ದಾನಿಗಳಿಂದ 8 ಕೋ.ರೂ. ಸಂಗ್ರಹ ಆಗಿದ್ದ ಸಂದರ್ಭ, ದೇವಸ್ವಂ ಬೋರ್ಡ್ ನಿಂದ 2.5 ಕೋ.ರೂ. ಅನುದಾನ ಜಮೆ ಆಗಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಕಾಣಿಕೆ 70 ಶೇ. ಆದಾಗ ಪ್ರಮಾಣಾನುಗುಣವಾಗಿ 30 ಶೇ. ಬಿಡುಗಡೆ ಮಾಡುತ್ತಾರೆ. ದೇವಸ್ವಂ ಬೋರ್ಡ್ ನ ನಿಯಮಾವಳಿ ಪ್ರಕಾರ ಇದು ಎಷ್ಟು ಸರಿ? ದೇವಸ್ವಂ ಬೋರ್ಡ್ ನಿಂದ ಮತ್ತೆ 5 ಕೋ.ರೂ. ಬಂದದ್ದು ಈ ದೇವಸ್ಥಾನದಿಂದ ಪ್ರತಿವರ್ಷ ಬೋರ್ಡ್‌ಗೆ ಸಂದಾಯವಾದ ಮೊತ್ತವೇ (ಹಿಂದಿನ ವರ್ಷಗಳ ಮೊತ್ತ).
"ನಮಗೆ ಆಡಂಬರ ಬೇಡ; ಅತಿ ಶೀಘ್ರದಲ್ಲಿ ಜೀರ್ಣೋದ್ದಾರ ಮುಗಿಸಲು ಎಷ್ಟು ಬೇಕು?" ಎಂದು B S Rao ಅವರಲ್ಲಿ ನಾನು ಹೇಳಿದ್ದೆ. ದಾನಿಗಳಿಂದ ದೇವಸ್ಥಾನಕ್ಕೆ 30 ಕೋ.ರೂ.ಸಂಗ್ರಹ ಆಗಿದೆ. ಅವರೆಲ್ಲರಿಗೂ ಧನ್ಯವಾದಗಳು. 2021ರಲ್ಲಿ ಕೇಂದ್ರ ಸರ್ಕಾರದಿಂದ 1,05,94,046 ರೂ. ಈ ಕ್ಷೇತ್ರಕ್ಕೆ ಹಂಚಿಕೆ ಆಗಿದೆ. ಸುರೇಶ್ ಗೋಪಿ ಬರಲಿಲ್ಲ, ಇಲ್ಲದಿದ್ದರೆ ಅವರಲ್ಲಿ ವಿಚಾರಿಸುತ್ತಿದ್ದೆ ಎಂದು ಎಡಕ್ಕಾನ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.
ಜೀರ್ಣೋದ್ದಾರ ಸಮಿತಿಯಲ್ಲಿ ಒಟ್ಟು 25 ಮಂದಿ ಸದಸ್ಯರಿದ್ದಾರೆ. ಅದರಲ್ಲಿ ಹೆಚ್ಚಿನವರು 5 ಸಾವಿರ ರೂ. ಗಿಂತ ಕಡಿಮೆ ಮೊತ್ತ ಕ್ಷೇತ್ರಕ್ಕೆ ಡೊನೇಟ್ ಮಾಡಿದ್ದಾರೆ. ಎಲ್ಲ ರಾಜಕೀಯ ಪಕ್ಷದವರಿಗೂ ಪ್ರಾತಿನಿಧ್ಯ ಕೊಡಬೇಕಾದ ಅನಿವಾರ್ಯತೆ ಇದ್ದುದರಿಂದ ಹಾಗೆ ಮಾಡಿದ್ದು ಎಂದಾದರೆ, ಅವರೆಲ್ಲರ ಕೈಗೆ 1000 ರೂ.ಕೂಪನ್ ಮುದ್ರಿಸಿ ಕೊಡಿ, ಸಾರ್ವಜನಿಕರೊಂದಿಗೆ ಭಾರಿ ಒಡನಾಟ -ಸಂಪರ್ಕ ಇಟ್ಟುಕೊಂಡವರಲ್ಲವೇ. ತನ್ಮೂಲಕ ಆದರೂ ಸಂಗ್ರಹ ದೊಡ್ಡ ಮೊತ್ತದ್ದಾಗಲಿ. ಹಣವೂ ಕೊಡದವರು, ಸಮಯವೂ ಕೊಡದವರನ್ನು ಸಮಿತಿಯ ಇಷ್ಟುದ್ದ ಲಿಸ್ಟ್ ಅಲ್ಲಿ ನಾಮಕಾವಸ್ಥೆಗೆ ಸೇರ್ಪಡೆಗೊಳಿಸುವುದು ಈಗ ಎಲ್ಲ ಸಂಘಟನೆಗಳಲ್ಲಿ, ಕ್ಷೇತ್ರಗಳಲ್ಲಿ ಫ್ಯಾಷನ್ ಆಗಿದೆ, ಇದು ಯಾವ ಪುರುಷಾರ್ಥಕ್ಕೆ?
ತಾನು ಬೇರೆ ಬೇರೆ ಕ್ಷೇತ್ರಗಳಿಗೂ ದೊಡ್ಡ ಮೊತ್ತ ದಾನ ನೀಡಿದ್ದೇನೆ; ಅಲ್ಲೆಲ್ಲಾ 2-3 ವರ್ಷಗಳಲ್ಲಿ ಜೀರ್ಣೋದ್ದಾರ ಪೂರ್ತಿಯಾಗಿದೆ; ಇಲ್ಲಿ ಮಾತ್ರ ಯಾಕೆ ಇಷ್ಟೊಂದು ಉದಾಸೀನ? ದಶಕಗಳೇ ಉರುಳಿದ್ದರಿಂದ ಆದ ನಷ್ಟ ಎಷ್ಟು? ಎಂದು ವಿಶ್ಲೇಷಿಸಿದ್ದಾರೆ.
ಕೃಷ್ಣ ಭಟ್ ಫೇಸ್‌ಬುಕ್ ಪೋಸ್ಟ್
ಎಡಕ್ಕಾನ ಮಹಾಬಲೇಶ್ವರ ಭಟ್ಟರು ಹೇಳಿದ ಒಂದೆರಡು ವಾಕ್ಯವನ್ನು ಮಾತ್ರ clip ಮಾಡಿ ವಿಡಿಯೋ ಹರಿಯಬಿಡುವುದು ಅಂದರೆ quoting him out of context. ಅವರು ಅದರ ಹಿಂದೆ ಮುಂದೆ ಏನು ಹೇಳಿದ್ದಾರೆ ಎಂಬುದನ್ನು ಪೂರ್ತಿ ಕೇಳಿಸಿಕೊಳ್ಳಬೇಕು. ನಾನು ಪೂರ್ತಿ ಪಾವನ್ನು ಕೇಳಿಸಿಕೊಂಡಿದ್ದೇನೆ. ಅವರ ವಿಶ್ಲೇಷಣೆ ಇದ್ದದ್ದು ಜೀರ್ಣೋದ್ದಾರ ಪೂರ್ತಿ ಆಗಲು 14 ವರ್ಷಗಳ ಕಾಲ ಸುದೀರ್ಘ ವಿಳಂಬ ಆದ ಬಗ್ಗೆ.
ಅವರು ಎತ್ತಿರುವ ಅಂಶಗಳಿಗೆ ಉತ್ತರಿಸುವ ಬದಲು ಬೇರೆ ಬೇರೆಯವರು ಕ್ಷೇತ್ರದಲ್ಲಿ ರಾಜಕೀಯ ಭಾಷಣ ಮಾಡಿದ್ದನ್ನು ಇವರ ಭಾಷಣಕ್ಕೆ ಉತ್ತರ ಎಂಬ ರೀತಿಯಲ್ಲಿ ಪ್ರಚಾರ ಮಾಡುವುದು ಮೂಢತನ. ಧಾರ್ಮಿಕ ಕ್ಷೇತ್ರದಲ್ಲಿ ರಾಜಕೀಯ ಬೇಡ. ಆದರೆ ಸುಳ್ಳು ಭರವಸೆ, ಪ್ರಚಾರ ಮಾಡಿದ್ದನ್ನು ಬಹಿರಂಗ ಪಡಿಸಲೇಬೇಕಲ್ಲ. ಕೇಂದ್ರದಿಂದ ಅನುದಾನ ಬಂದದ್ದು 'ತಾಂತ್ರಿಕ ಕಾರಣ'ಗಳಿಗಾಗಿ ತಡವಾಗಿದೆ ಅಷ್ಟೆ ಎಂಬ ಸಬೂಬು ಸಕಾರಣವಲ್ಲ. ಏನು ಆ 'ತಾಂತ್ರಿಕ ಕಾರಣ'? ಅದನ್ನು ಹೇಳಲು ಈಗ ಏನು ಅಡ್ಡಿ? ವಿಷಯವೇ ಗೊತ್ತಿಲ್ಲದವರು ಬಿಡುವ ಬೂಸಿಯೇ ಅಥವಾ ಅದರಲ್ಲಿ ದೇಶದ ಭಾರಿ ರಕ್ಷಣಾ ರಹಸ್ಯ ಅಡಗಿದೆಯೇ?
ಕ್ಷೇತ್ರದಲ್ಲಿ ಲೆಕ್ಕಾಚಾರ ಇಡಲು ಪ್ರತ್ಯೇಕ ಸ್ಟಾಫ್ ಇದೆ ಹಾಗೂ ಎಲ್ಲವೂ ಕಂಪ್ಯೂಟರೀಕೃತ. ಅದಾಗ್ಯೂ ಸಕಾಲದಲ್ಲಿ ದಾಖಲೆ ಒದಗಿಸಲು ಏನು ಅಡ್ಡಿ ಇತ್ತು, ಇಷ್ಟು ದೀರ್ಘ ಕಾಲ ಅನ್ನುವುದು ವೈಎಂ ಭಟ್ ಅವರ ಪ್ರಶ್ನೆ. ಅದಕ್ಕೆ ಉತ್ತರಿಸಲಿ.
ಭಟ್ ಅವರು ರಾಜ್ಯ ಸರ್ಕಾರದ ಪರ ವಹಿಸಿ ಮಾತಾಡಿಲ್ಲ; ದೇವಸ್ವಂ ಬೋರ್ಡ್ ನಿರ್ಣಯವೂ ಎಷ್ಟು ನ್ಯಾಯಯುತ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಅವರನ್ನು 'ಎಡ' ಅನ್ನುವ ಆರೋಪ ಮಾಡುವವರಿಗೆ ತಲೆ ಸರಿ ಇದೆಯಾ? ತಪ್ಪಿತಸ್ಥರನ್ನೆಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ. ವಿವೇಚನೆ ಇರುವವರು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ.
ಇಷ್ಟು ವರ್ಷಗಳ ದೀರ್ಘ ವಿಳಂಬಕ್ಕೆ ತನ್ನ ಗೌರವಾಧ್ಯಕ್ಷತೆಯಲ್ಲಿರುವ ಸಮಿತಿಯ ಸದಸ್ಯರ 'ಉದಾಸೀನ ನಡವಳಿಕೆ'ಯೂ ಕಾರಣ ಎಂದು ಹೇಳಿದ್ದಾರೆ. ತಾನಾಡಿದ್ದರಲ್ಲಿ ತಪ್ಪಿದ್ದರೆ ಕ್ಷಮಿಸಿ ಎಂದೂ ಹೇಳಿದ್ದಾರೆ. ಸತ್ಯವನ್ನು ಒಪ್ಪಿಕೊಳ್ಳಲಾಗದವರು ಈಗ ಅವರ ತಲೆಯೇ ತೆಗೆಯಬೇಕು ಅನ್ನುವಷ್ಟು ಅಸಹನೆಯಲ್ಲಿ ಹಾರಾಡಿದರೆ, ಭಟ್ಟರಿಗೆ freedom of expression ಇಲ್ಲವೇ ? ನಾವು ಅಷ್ಟೊಂದು ಮತಾಂಧತೆಯಲ್ಲಿ ತೇಲಾಡಬೇಕಾ? ಇನ್ನು ಯಾರಾದರೂ ದಾನಿಗಳು ದೊಡ್ಡ ಮೊತ್ತ ನೀಡಲು ಮುಂದೆ ಬರುತ್ತಾರೆಯೇ, ಕೊನೆಯಲ್ಲಿ 'ಕೊಟ್ಟು ಕೆಟ್ಟೆ' ಎಂಬ ಭಾವದಲ್ಲಿ ಪಶ್ಚಾತ್ತಾಪ ಪಡುವಂತಾ ವಾತಾವರಣ ನಿರ್ಮಿಸಿದರೆ? ಈಗ ಅನಂತೇಶ್ವರ ಹಾಗೂ ಸಿದ್ಧಿವಿನಾಯಕನ ಕ್ಷಮೆ ಕೇಳಬೇಕಾದ್ದು ತಮ್ಮ ಕರ್ತವ್ಯ ನಿರ್ವಹಿಸದವರೇ ಹೊರತು ಮಹಾಬಲೇಶ್ವರ ಭಟ್ಟರಲ್ಲ.
ಒಂದು ಶಬ್ದವನ್ನು, ಒಂದು ವಾಕ್ಯವನ್ನು ಹಿಡಿದುಕೊಂಡು ನೇತಾಡುವುದು ಸರಿ ಅಲ್ಲ. Don't take him by words; take him by spirit. ಅವರು ಸಮಿತಿಯ ಪದಾಧಿಕಾರಿಯಾಗಿ ಸುದೀರ್ಘ ದುಡಿದವರು, ವಿಷಯಗಳ ಆಳ ನೈಜ ಬಲ್ಲವರು, ದಾನಿ ಕೂಡಾ. ಹಾಗಾಗಿ ವೇದಿಕೆಯಿಂದ ಪ್ರಶ್ನಿಸಲು ಅವರು ಸರಿಯಾದ ವ್ಯಕ್ತಿ. ಧೈರ್ಯ ಇಲ್ಲದವರು 'ಜೀ ಹುಜೂರ್, ಬಹು ಪರಾಕ್' ಹೇಳಲಷ್ಟೇ ಫಿಟ್. ವಿದೇಶದಲ್ಲಿರುವವರಿಗೆ, ಅನಿವಾಸಿ ಭಾರತೀಯರಿಗೆ ಇಲ್ಲಿನ red tapism ಅನುಭವಿಸಿಯೇ ರೋಸಿ ಹೋಗಿರುತ್ತದೆ. ಭಾರತದಲ್ಲಿ Ease of doing business ಭಾರಿ ಬದಲಾವಣೆ ಆಗಿದೆ. ಚೇತೋಹಾರಿ ಪರಿವರ್ತನೆ ಕಾಣುತ್ತಿದ್ದೇವೆ ಎಂಬುದು ಬರೀ ಘೋಷಣೆಯಷ್ಟೆ ಎಂಬುದು ಎಲ್ಲಾ ಕ್ಷೇತ್ರದಲ್ಲೂ ಬಹಿರಂಗವಾಗಿದೆ.
ಇನ್ನೂ ಚಾಲೆಂಜ್ ಮಾಡುವ ಮೇಧಾವಿಗಳು ಇದ್ದರೆ ಒಂದು ಕೋಟಿ, 5 ಲಕ್ಷ, 94 ಸಾವಿರ ರೂ ಅನುದಾನದಲ್ಲಿ ಎಷ್ಟೆಷ್ಟು ಲಕ್ಷ ಈಗಾಗಲೇ ಕೈ ಸೇರಿ, ಎಷ್ಟೆಷ್ಟು ಖರ್ಚು ಆಗಿದೆ ಎಂದು ಲೆಕ್ಕ ಮಂಡಿಸುತ್ತಿದ್ದರೆ, ಭಟ್ಟರನ್ನು ಅಲ್ಲಗಳೆಯಬಹುದಿತ್ತು.
ವಾಸ್ತವ ಏನೆಂದರೆ ಆ ಒಂದು ಕೋಟಿ 5 ಲಕ್ಷ ಇನ್ನು ಬರುತ್ತದೆ ಎಂದು ಯಾರೂ ಕಾದುಕುಳಿತಿಲ್ಲ. ಲ್ಯಾಪ್ಸ್ ಆಗಿ ಹೋದ ಯೋಜನೆ ಅದು. ಕೋಟಿ ಕೊಟ್ಟವರನ್ನು ಮಾತ್ರ ಜೀರ್ಣೋದ್ದಾರ ಸಮಿತಿ ಸದಸ್ಯರನ್ನಾಗಿ ತೆಗೆದುಕೊಳ್ಳಬೇಕಿತ್ತು ಎಂದು ಅವರೆಲ್ಲೂ ಹೇಳಿಲ್ಲ. ಸದಸ್ಯರಾದವರೂ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಳ್ಳಲಿಲ್ಲ. ತಂಡದಲ್ಲಿ ಹೋಗಿ ಸಾಧಿಸಬೇಕಾದ ಕೆಲಸ ಸರ್ಕಾರಿ ಇಲಾಖಾ ಮಟ್ಟದಲ್ಲಿ, ದಾನಿಗಳ ಭೇಟಿ ಕಾರ್ಯದಲ್ಲಿ, ವಿವಿಧ ಉಪಸಮಿತಿಗಳ ಜವಾಬ್ದಾರಿ ನಿಭಾವಣೆಯಲ್ಲಿ ಬೇಕಾಗುತ್ತದೆ, ಸಮಯ ಕೊಡುವಲ್ಲೂ ವಿಫಲರಾದವರನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಇರಿಸಿಕೊಳ್ಳುವುದು ಎಷ್ಟು ಸಮರ್ಥನೀಯ ಎಂದು ಪ್ರಶ್ನಿಸಿದ್ದಾರೆ.
ಅದನ್ನೂ ತಪ್ಪು ಅನ್ನುವವರಿಗೆ ಈ ಕ್ಷೇತ್ರದಲ್ಲಿ ದುಡಿದು ಅನುಭವವಿಲ್ಲ ಅನ್ನಬೇಕಷ್ಟೆ. ಇಷ್ಟೆಲ್ಲಾ ಭ್ರಷ್ಟ ವ್ಯವಸ್ಥೆಯಲ್ಲಿ ಇರುವಾಗಲೂ ಹೊಗಳಬೇಕು, ಆ ವ್ಯಕ್ತಿ ಟೀಕೆಗೆ ಅತೀತ, ವ್ಯಕ್ತಿ ಪೂಜೆ ಮಾಡಬೇಕು, ಆ ಹೆಸರೆತ್ತಿ ಟೀಕಿಸಬಾರದಿತ್ತು ಎನ್ನುವ ನಿರೀಕ್ಷೆ ಅತಿಯಾಗಲಿಲ್ಲವೇ?
ರಾಜಕೀಯ ನಿಷ್ಠೆಯಲ್ಲಿ, ವ್ಯಕ್ತಿ ಪೂಜೆಯಲ್ಲಿ ಕೊಚ್ಚಿ ಹೋಗುವುದು ಬೇಡ
ಜಡಗಟ್ಟಿದ ಅಧಿಕಾರಿಗಳನ್ನು, ಕ್ರೆಡಿಟ್ ಪಡೆಯಲು ಸದಾ ಹಾತೊರೆಯುತ್ತಿರುವ ರಾಜಕೀಯ ಪುಢಾರಿಗಳನ್ನು ಇನ್ನಾದರೂ ಅನುದಾನ ಉಪಯೋಗಕ್ಕೆ ಸಿಗುವಂತೆ ಮಾಡಲು ಕಾರ್ಯತತ್ಪರವಾಗಿಸಲು ಭಟ್ಟರ ಈ ಹೇಳಿಕೆ ಬಡಿದೆಬ್ಬಿಸಿದರೆ ಅವರು ಮಾತಾಡಿದ್ದು ಸಾರ್ಥಕ. ಅದು ಬಿಟ್ಟು ರಾಜಕೀಯ ರಾಡಿ ಎರಚಿಕೊಳ್ಳಲು ಒಂದು ವೇದಿಕೆ ನಿರ್ಮಿಸಿದರೆ ಅದು ನಮ್ಮ ದುರಂತ.
ಯಾರು ನಾಲಿಗೆ ಹರಿಬಿಟ್ಟಿದ್ದಾರೆ, ಯಾರು ನ್ಯಾಯದಲ್ಲಿ ನಡೆದುಕೊಂಡಿದ್ದಾರೆ, ಯಾರು ಅಧರ್ಮಿಗಳು ಎಂಬ ತೀರ್ಮಾನ ಕೈಗೊಳ್ಳುವವರು ಮದನಂತೇಶ್ವರ, ಸಿದ್ಧಿ ವಿನಾಯಕ. ಅತಿಯಾದ ರಾಜಕೀಯ ನಿಷ್ಠೆಯಲ್ಲಿ, ವ್ಯಕ್ತಿ ಪೂಜೆಯಲ್ಲಿ ಕೊಚ್ಚಿ ಹೋಗುವುದು ಬೇಡ.
- ಬರಹ: ಕೃಷ್ಣ ಭಟ್ (ಮೂಲ -ಫೇಸ್‌ಬುಕ್)


