ಸದ್ಯ ಈ ದೇಶದಲ್ಲಿ ಸೆಮಿಕಂಡಕ್ಟರಿಗಿಂತ ಸಗಣಿ ಮಾರೋದು ಸುಲಭ, ಉತ್ತಮ ಮತ್ತು ಲಾಭದಾಯಕ; ಲೇಖಕ ಮಧು ವೈಎನ್ ಅಭಿಮತ
ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು ಇತ್ತೀಚೆಗೆ ಸ್ಟಾರ್ಟಪ್ ಶೃಂಗದಲ್ಲಿ ಭಾರತ ಮತ್ತು ಚೀನಾದ ನವೋದ್ಯಮಗಳ ಪಟ್ಟಿ ಮುಂದಿಟ್ಟು ಹೋಲಿಕೆ ಮಾಡಿದ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿದೆ. ಈ ಸಂಬಂಧ ಲೇಖಕ ಮಧು ವೈಎನ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಅದು ಇಲ್ಲಿದೆ.

ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು ಇತ್ತೀಚೆಗೆ ಸ್ಟಾರ್ಟಪ್ ಶೃಂಗದಲ್ಲಿ ಭಾರತ ಮತ್ತು ಚೀನಾದ ನವೋದ್ಯಮಗಳ ಪಟ್ಟಿ ಮುಂದಿಟ್ಟು ಹೋಲಿಕೆ ಮಾಡಿದ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿದೆ. ಭಾರತದ ನವೋದ್ಯಮಗಳು, ಆಹಾರ ಮತ್ತು ಗ್ರಾಹಕ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವುದಕ್ಕೆ ಸೀಮಿತವಾಗಿದೆ ಎಂಬ ಅಂಶವನ್ನು ಹೈಲೈಟ್ ಮಾಡಿ ಮಾತನಾಡಿದ್ದರು. ಚೀನಾ ಹಾಗಲ್ಲ, ಅಲ್ಲಿನ ನವೋದ್ಯಮಗಳು ಎಐ, ಇವಿಗೆ ಬೇಕಾದ ಬಿಡಿ ಭಾಗಗಳು ಹೀಗೆ ತಂತ್ರಜ್ಞಾನ ಸುಧಾರಣೆಗೆ ಕೆಲಸ ಮಾಡುತ್ತಿವೆ ಎಂದು ಹೇಳಿದ್ದರು. ಸಚಿವರ ಹೇಳಿಕೆ ವ್ಯಾಪಕವಾಗಿ ಟೀಕೆಗೆ ಒಳಗಾಗಿದೆ. ಈ ಪೈಕಿ ಲೇಖಕ ಮಧು ವೈಎನ್ ಅವರು ಕೂಡ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅದಕ್ಕೂ ಮೊದಲು ಪಿಯೂಷ್ ಗೋಯೆಲ್ ಹೇಳಿದ್ದೇನು ಎಂಬ ವಿಡಿಯೋ ಗಮನಿಸೋಣ.
ಸದ್ಯ ಈ ದೇಶದಲ್ಲಿ ಸೆಮಿಕಂಡಕ್ಟರಿಗಿಂತ ಸಗಣಿ ಮಾರೋದು ಸುಲಭ, ಉತ್ತಮ ಮತ್ತು ಲಾಭದಾಯಕ
ಕಳೆದ ವಾರ ಪಿಯೂಷ್ ಗೋಯೆಲ್ ಒಂದು ಕಾಂಟ್ರೋವರ್ಸಿಯಾದ ಆದರೆ ಸತ್ಯವಾದ ಮಾತು ಹೇಳಿದ್ದರು. ನಮ್ಮ ದೇಶದಲ್ಲಿ ಸ್ಟಾರ್ಟಪ್ಪುಗಳೆಂದರೆ ಗ್ಲೂಟೆನ್ ಫ್ರೀ ಐಸ್ಕ್ರೀಮು, ಉದ್ಯೋಗ ಸೃಷ್ಟಿಯೆಂದರೆ ಡೆಲಿವರಿ ಬಾಯ್ಸು ಇಷ್ಟೇ ಆಗಿದೆ; ಪಕ್ಕದ ಚೈನಾದಲ್ಲಿ ಇವಿ ಬ್ಯಾಟರಿ, ಸೆಮಿಕಂಡಕ್ಟರ್ ಮುಂತಾಗಿ ನಿಜವಾದ ಕೆಲಸ ಆಗ್ತಾ ಇದೆ ಅಂತ.
ಆಶ್ಚರ್ಯಕರ ರೀತಿಯಲ್ಲಿ ಕನ್ನಡದ ಯಾವ ಪತ್ರಿಕೆಯೂ ಆ ಸುದ್ದಿಯನ್ನು ವರದಿ ಮಾಡಿದ್ದು ಕಾಣೆ(ಮುರ್ನಾಲ್ಕು ಪತ್ರಿಕೆ ಓದ್ತೇನೆ..). ಅಥವಾ ನನ್ನ ಕಣ್ತಪ್ಪಿರಬಹುದು. ವರದಿ ಆಗಬೇಕಿತ್ತು ಅದು ಈಗಿನ ಯುವಕರಿಗೆ ಸ್ವಲ್ಪನಾದರೂ ಕಿಚ್ಚು ಹತ್ತಿಸುತ್ತಿತ್ತು ಅಂತ ನನ್ನ ಅನಿಸಿಕೆ.
ಭಾರತದಲ್ಲಿ ನಿಜವಾದ ಪ್ರತಿಭೆ ಜಾತಿ ಧರ್ಮ ಮೀರಿ ಮಧ್ಯಮ ಮತ್ತು ಬಡವರ್ಗದಲ್ಲಿದೆ ಅಂತ ಯಾವಾಗಲೂ ಅನಿಸುತ್ತದೆ. ಯಾಕಂದರೆ ಇವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ಅನಿವಾರ್ಯ ಕಾರಣಗಳಿಂದ ಏನಾದರೂ ಸಾಧಿಸುವ ಮಾರ್ಗದಲ್ಲಿರುತ್ತಾರೆ. ಅದು ನೀವು ಇವತ್ತಿನ ಪಿಯುಸಿ ಫಲಿತಾಂಶ ನೋಡಿದರೂ ಗೊತ್ತಾಗುತ್ತದೆ.
ಇವತ್ತಿನ ಇಷ್ಟೂ ಮಕ್ಕಳು ಇನ್ನು ಕೆಲವೇ ವರ್ಷಗಳಲ್ಲಿ ತಮ್ಮದೇ ಅನ್ನ ಹುಟ್ಟಿಸಿಕೊಳ್ಳುವುದಕ್ಕೆ, ತಂದೆ ತಾಯಿಯರ ಕನಸು ಸಾಕಾರ ಮಾಡುವುದಕ್ಕೆ ಒಟ್ಟಾರೆ ಈಗಿನ ಸ್ಥಿತಿಗಿಂತ ಉತ್ತಮಗೊಳ್ಳುವುದಕ್ಕೆ ಯಾವುದೋ ಡಿಗ್ರಿ ಪಡೆದು ಎಲ್ಲೋ ಒಂದು ಕಡೆ ಕೆಲಸಕ್ಕೆ ಸೇರಿಕೊಂಡು ಆಯಾ ಸಂಸ್ಥೆಗಳಲ್ಲಿ ದುಡಿಯುವ ವರ್ಗವಾಗಿ ಬದಲಾಗುತ್ತಾರೆ.
ಸ್ಟಾರ್ಟಪ್ಪುಗಳಿಗೆ ಬೇಕಿರುವ ವಾತಾವರಣ ಇಲ್ಲಿಲ್ಲ
ಸ್ಟಾರ್ಟಪ್ಪುಗಳಿಗೆ ಬೇಕಿರುವ ಮನೋಭಾವ, ಶಿಕ್ಷಣ, ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿ ಯಾವುದೂ ನಮ್ಮ ದೇಶದಲ್ಲಿ ಇಲ್ಲ. ಪಕ್ಕದ ಚೈನಾ ನಮ್ಮಂತೆ ನೂರು ಕೋಟಿ ಮೀರಿದ ಅರೆ-ಬಡತನದ ದೇಶವೇ. ಹಾಗಾಗಿ ಪ್ರತಿ ಸಲ ಯುರೋಪು ಅಮೆರಿಕಾದತ್ತ ಬೊಟ್ಟು ಮಾಡಿ ನಮ್ಮನ್ನು ನಾವು ಕ್ಷಮಿಸಿಕೊಳ್ಳಬೇಕಿಲ್ಲ. ಈ ಎಲ್ಲ ಅಗತ್ಯಗಳು ಇರುವ ಜನ ನಮ್ಮಲ್ಲಿಯೂ ಬೆರಣಿಕೆಯ ಮಂದಿ ಇದಾರೆ. ಆದರೆ ಅವರಲ್ಲಿ ಪ್ರತಿಭೆ ಇರಲ್ಲ. ಏನಾದರೂ ಸಾಧಿಸೊ ಅಗತ್ಯವಿರಲ್ಲ. ಆದ್ದರಿಂದ ಅಂಥೋರೆಲ್ಲ ಸೇರಿಕೊಂಡು ಅಪ್ಪನ ಹಣ ಕರಗಿಸಿ ಜುಗಾಡ್ ಆಂತ್ರೊಪ್ರೊನ್ಯೂರ್ಶಿಪ್ ಮಾಡ್ತಾರೆ. ಅಂದ್ರೇ ಯಾವುದೋ ಒಂದು ಆಪ್, ಯಾವುದೋ ಒಂದು ಶಾಪ್, ಆನ್ಲೈನ್ ಕ್ಲಿಕ್ ಪರ್ಚೇಸಿಂಗ್ ಟೈಪು. ದೇಶಾದ್ಯಂತ ಒಂದೆರಡು ವರ್ಷಗಳ ಕಾಲ ಬಿಜಿನೆಸ್ ನಡೆದರೆ ಸಾಕು. ಲಕ್ಷಾಂತರ ನಿರುದ್ಯೋಗಿ ಯುವಕರನ್ನು ಒಟ್ಟುಗೂಡಿಸಿ ಚೀಪ್ ಲೇಬರ್ ಅನುಕೂಲ ಪಡೆದು ರುಪಾಯಿ ರುಪಾಯಿ ಕಲೆಹಾಕಿ ಕೋಟ್ಯಾಂತರ ರುಪಾಯಿ ಲಾಭ ಹೆಕ್ಕುವುದು; ಒಂದು ಮುಚ್ಚಿ ಇನ್ನೊಂದಕ್ಕೆ ಹಾರುವುದು.. ಇಷ್ಟೇ.
ಈಗ ನಿಮ್ಮತ್ರ ಒಂದು ಹತ್ತು ಕೋಟಿ ಇದೆ ಅಂದ್ಕೊಳ್ಳೋಣ. ಮಕ್ಕಳು ಮಣ್ಣಲ್ಲಿ ಆಡುವುದು ಒಳ್ಳೇದು ಅನ್ನುವುದು ಭಾರತದ ಲೆಗಸಿ ನಾಲೆಡ್ಜು. ನಾಳೆಯಿಂದ ಹೆಲ್ತಿ ಅಪ್ಪಟ ಶುದ್ಧ, ಇಂಟೀರಿಯರ್ ಇಂಡಿಯಾದಿಂದ ಹೆಕ್ಕಿದ ನೈಸರ್ಗಿಕ ಮಣ್ಣು ಅಂತೇಳಿ ಒಂದು ಪ್ರಾಡಕ್ಟ್ ಶುರು ಮಾಡ್ತೀರ. ಪತ್ರಿಕೆ, ಟಿವಿ, ಯುಟೂಬು, ಸೋಶಿಯಲ್ ಮಿಡಿಯಾಗಳಲ್ಲೆಲ್ಲಾ ಜಾಹೀರಾತು ಕೊಡ್ತೀರಾ. ತಕ್ಕನಾಗಿ 'ವೈದ್ಯರು', ಎಕ್ಸಪರ್ಟು, ಸ್ಪೆಷಲಿಸ್ಟುಗಳಿಂದ ಪಾಡ್ ಕಾಸ್ಟ್ ಮಾಡಿಸ್ತೀರ. ಸಮಾಜದಿಂದ ಅರರೆ ಎಂಥಾ ಒಳ್ಳೆ ಕೆಲಸ ಎಂದು ಗುಡ್ ವಿಲ್ ಕೂಡ ಸಿಗುತ್ತೆ.
ನೈಸರ್ಗಿಕ ಮಣ್ಣನ್ನು ಹೋಂ ಡೆಲಿವರಿ ಮಾಡಕ್ಕೆ ಶುರುಮಾಡ್ತೀರ. ಟಕ್ಕಂತ ಅಮೆಜಾನು ಫ್ಲಿಪ್ ಕಾರ್ಟುಗಳಲ್ಲಿ ಆರ್ಡರ್ ಬರಕ್ಕೆ ಶುರುವಾಗುತ್ತೆ. ಯಾವುದಾದರೂ ಸುಪರ್ ಮಾರ್ಕೆಟ್ ಜೊತೆ ಒಪ್ಪಂದ ಮಾಡ್ಕೊಂಡ್ರೆ ಅಲ್ಲೂ ಒಳ್ಳೆ ಸೇಲಾಗುತ್ತೆ. ಅಂದ್ರೆ ಅದನ್ನು ಕಂಡ ತಕ್ಷಣ ಜನ ಇದೇನಿದು...? ಇರಲಿ ಮನೆಗೆ ತಗೊಂಡೋಗಿ ನೋಡೋಣ ಅಂತ ಎತ್ಗೊಂಡು ಟ್ರಾಲಿಯಲ್ಲಿ ಹಾಕ್ಕೊಳ್ತಾರೆ. ಒಂದು ಆರು ತಿಂಗಳು ವರ್ಷದೊಳಗೆ ಮೂಲೆ ಮೂಲೆಗಳಿಂದ ಅಲ್ಲೊಂದು ಇಲ್ಲೊಂದು ಆರ್ಡರ್ ಬಂದರೂ ಒಂದೊರ್ಷದಲ್ಲಿ ಇಪ್ಪತ್ತು ಮೂವತ್ತು ಕೋಟಿ ಬಂದ್ಬಿಡುತ್ತೆ. ಜನ ಎರಡು ಪ್ಯಾಕೆಟ್ ಖರೀದಿಸುವಷ್ಟರಲ್ಲಿ ನಿಜ ಗೊತ್ತಾಗಿ ಸುಮ್ನಾಗಿರ್ತಾರೆ.. ಕೆಲವರು ಬೈಕೊಂಡು ರಿವ್ಯೂ ಕೂಡ ಬರ್ದಿರ್ತಾರೆ. ಹಾಳೂರಲ್ಲಿ ಈ ಗೋಳು ಕೇಳೋರು ಯಾರು.. ಇದಕ್ಕೆಲ್ಲಾ ಅಕೌಂಟೆಬಿಲಿಟಿ ಎಲ್ಲಿರುತ್ತೆ?
ಅಷ್ಟರಲ್ಲಿ ಅವನಾಗಲೇ ಮಣ್ಣಿನ ಅಂಗಡಿ ಮುಚ್ಚಿ ಸಗಣಿ ಅಂಗಡಿ ತೆರ್ಕೊಂಡಿರ್ತಾನೆ. ಹೊಸ ಬ್ರಾಂಡಿನಲ್ಲಿ. ಮಣ್ಣು ತಗೊಂಡು ಬೈಕೊಂಡೋರೇ ಸಗಣಿ ತಗೊಳೋಕೆ ಮುಗಿಬಿದ್ದಿರ್ತಾರೆ ಅನ್ನೋದು ಬೇರೆ ಮಾತು.
ನಮ್ಮ ದೇಶದ ಸ್ಟಾರ್ಟಪ್ ಸಂಸ್ಕೃತಿ ಹೀಗಿದೆ
ಇರಬಹುದು; ಅಲ್ಲೊಬ್ಬರು ಇಲ್ಲೊಬ್ಬರು ಸೆಮಿಕಂಡಕ್ಟರು ಇವಿ ಬ್ಯಾಟರಿ ತಯಾರಿಸ್ತಿರಬಹುದು; ಪಾಪ ತಳ್ಳಕಾಗದೇ ಮೇಲ್ಬರಕ್ಕಾಗದೇ ಒದ್ದಾಡ್ತಿರಬಹುದು; ಯಾಕಂದ್ರೆ ಅಂಥೋರ ಮೇಲೆ ಸರಕಾರ ಮುಗಿಬಿದ್ದಿರುತ್ತೆ- ಅದ್ ಕೊಡು, ಇದ್ ಕೊಡು ಡಾಕ್ಯುಮೆಂಟ್ ತೋರಿಸು, ಟ್ಯಾಕ್ಸ್ ತೋರಿಸು ಅಂತೆಲ್ಲಾ. ಅಂಥೋರು ಪ್ರಾಡಕ್ಟೂ ಮಾಡಿಕೊಂಡು ಇವರಿಗೆ ಲಂಚನೂ ಕೊಟ್ಟುಕೊಂಡು ಲಾಭನೂ ಮಾಡ್ಬೇಕಂದ್ರೆ ಆಗಲ್ಲ. ಯಾಕಂದ್ರೆ ಅವರ ಕಸ್ಟಮರ್ಸು ಜೆನ್ಯೂನ್ ಇರ್ತಾರೆ, ಜಗತ್ತಿನಾದ್ಯಂತ ಹಬ್ಬಿರ್ತಾರೆ. ಅಲ್ಲಿ ಬಹಳ ಕಾಂಪಿಟೇಶನ್ ಇರುತ್ತೆ. ಲಂಚದ ಮೊತ್ತ ಸೇರಿಸಿ ಪ್ರಾಡಕ್ಟ್ ಮಾರಕ್ಕಾಗಲ್ಲ. ಹಾಗೆ ಮಾಡಿದರೆ ಯಾರೂ ಕೊಂಡುಕೊಳ್ಳಲ್ಲಾ..
ಆದ್ದರಿಂದ ಈ ದೇಶದಲ್ಲಿ ಸೆಮಿಕಂಡಕ್ಟರಿಗಿಂತ ಸಗಣಿ ಮಾರೋದು ಸುಲಭ, ಉತ್ತಮ ಮತ್ತು ಲಾಭದಾಯಕ ಅಂತ ಹೇಳಲಿಕ್ಕೆ ಇಷ್ಟ ಪಡ್ತೀನಿ ಫ್ರೆಂಡ್ಸ್. ಇದು ಯಾರದೋ ಒಬ್ಬರ ತಪ್ಪಲ್ಲ. ಸಾವಿರಾರು ವರ್ಷಗಳಿಂದ ಬೆಳೆಸ್ಕೊಂಡು ಬಂದಿರೋ ಜಡತ್ವ. ನೋಡಿ ಸ್ವಾಮಿ ನಾವಿರೋದೆ ಹೀಗೇ.. ಅನ್ನುವ ಹಾಗೆ.
(ನಿಮ್ಮಲ್ಲಿ ಯಾರಾದರೂ ಜೆನ್ಯೂನಾಗಿ ಆರೋಗ್ಯ, ಆಹಾರ ಇಂಥಾ ಬಿಜೆನೆಸ್‌ನಲ್ಲಿ ತೊಡಗಿಸಿಕೊಂಡಿದ್ದರೆ ದಯಮಾಡಿ ಮನಸಿಗೆ ಹಚ್ಚಿಕೊಳ್ಳಬೇಡಿ. ಇದನ್ನು ಹೇಳಿದ್ದು ಗೋಯೆಲ್ ಉದಾಹರಿಸಿದ ಗ್ಲುಟೆನ್ ಫ್ರೀ ಐಸ್ಕ್ರೀಂ ಮಾಡುವವರಂತವರಿಗೆ)
- ಮಧು ವೈಎನ್, ಲೇಖಕ
(ಗಮನಿಸಿ: ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು, ಅನಿಸಿಕೆಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳಷ್ಟೆ. ಇದು ಹಿಂದೂಸ್ತಾನ್ ಟೈಮ್ಸ್ ಕನ್ನಡ ತಾಣದ ಅಭಿಪ್ರಾಯವಲ್ಲ. )
