ದೃಷ್ಟಿಕೋನ: ತೆರಿಗೆ ವಿನಾಯ್ತಿ ಮೂಲಕ ಮಧ್ಯಮ ವರ್ಗಕ್ಕೆ ಖುಷಿಕೊಟ್ಟ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ವಾವಲಂಬನೆಯ ಮಾತನ್ನೂ ಆಡಬೇಕಿತ್ತು
ಮಹಾತ್ಮರ ಮಾತುಗಳನ್ನು ಓದುವುದು, ಹೇಳುವುದು ಸುಲಭ. ಅನುಸರಿಸುವುದು ಕಷ್ಟ. ಈ ಮಾತು ಸದನದಲ್ಲಿದ್ದು ಬಜೆಟ್ ಭಾಷಣ ಮಾಡಿದವರು ಮತ್ತು ಕೇಳಿಸಿಕೊಂಡವರಿಬ್ಬರಿಗೂ ಅನ್ವಯವಾಗುತ್ತದೆ.

ಬಹುನಿರೀಕ್ಷಿತ ಕೇಂದ್ರ ಬಜೆಟ್ ಲೋಕಸಭೆಯಲ್ಲಿ ಶನಿವಾರ (ಫೆ 1) ಮಂಡನೆಯಾಗಿದೆ. ಹಲವು ಕಾರಣಗಳಿಂದ ಸಮಾಜದಲ್ಲಿ ಹೊಸ ಆಶಯ ಹುಟ್ಟಿಸಿದ ಹಾಗೂ ಭ್ರಮನಿರಸನಕ್ಕೂ ಕಾರಣವಾದ ಬಜೆಟ್ ಇದು. ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಿಸುವ ಮೂಲಕ ವೇತನದಾರ ಮಧ್ಯಮ ವರ್ಗದಿಂದ ಭಾರೀ ಮೆಚ್ಚುಗೆ ಪಡೆದುಕೊಂಡರು. ಆದರೆ ದೇಶದ ಸ್ವಾವಲಂಬನೆ, ಆರ್ಥಿಕವಾಗಿ ಹಳ್ಳಿಗಳಿಗೆ ಶಕ್ತಿ ತುಂಬುವ ಕುರಿತು ಮಹತ್ವದ ಯಾವ ಯೋಜನೆ ಮತ್ತು ಯೋಚನೆಯೂ ಅವರ 74 ನಿಮಿಷಗಳ ಭಾಷಣದಲ್ಲಿ ಇರಲಿಲ್ಲ. ಬಜೆಟ್ ವಿವರಗಳ ಕಡತಗಳಲ್ಲಿ ಈ ಅಂಶ ಇರಬಹುದೇನೋ? ಕಾದುನೋಡಬೇಕಷ್ಟೇ.
ಬಜೆಟ್ ಭಾಷಣದ ಆರಂಭದಲ್ಲಿಯೇ ಆಂಧ್ರದ ಮಹಾಕವಿ ಗುರಜಾಡ ಅಪ್ಪಾರಾವ್ ಅವರ "ದೇಶಮಂಟೆ ಮಟ್ಟಿ ಕಾದೋಯ್, ದೇಶ ಮಂಟೆ ಮನುಷುಲೋಯ್" (ದೇಶವೆಂದರೆ ಮಣ್ಣಲ್ಲ, ದೇಶವೆಂದರೆ ಮನುಷ್ಯರು) ಎನ್ನುವ ಮಾತು ನೆನಪಿಸಿಕೊಂಡರು. ಇದೇ ಬಜೆಟ್ ಭಾಷಣದ ಕೊನೆಯಲ್ಲಿ ತಮಿಳಿನ ಮಹಾಕವಿ ತಿರುವಳ್ಳುವರ್ ಅವರ ತಿರುಕ್ಕುರಳ್ ಪ್ರಸ್ತಾಪಿಸಿ, 'ಎಲ್ಲ ಜೀವಿಗಳೂ ಮಳೆಗಾಗಿ ಹೇಗೆ ಹಾತೊರೆಯುತ್ತವೆಯೋ ಹಾಗೆ ಮನುಷ್ಯರು ಉತ್ತಮ ಆಡಳಿತ ಅಪೇಕ್ಷಿಸುತ್ತಾರೆ' ಎಂದರು. ಈ ಎರಡೂ ಹೇಳಿಕೆಗಳನ್ನು ಬೆಸೆದು ನೋಡಿದರೆ ಬಜೆಟ್ ಭಾಷಣಕ್ಕೆ ಮತ್ತೊಂದು ಅರ್ಥವಷ್ಟೇ ಅಲ್ಲ, ಇನ್ನೊಂದು ಮುಖವೂ ಕಾಣಿಸಬಹುದು.
ದೇಶಪ್ರೇಮವನ್ನೇ ಅಸ್ತ್ರವನ್ನಾಗಿಸಿಕೊಂಡಂತೆ ವರ್ತಿಸುತ್ತಿರುವವರು ಕೇಂದ್ರ ಸರ್ಕಾರ ಮತ್ತು ಅದರ ಮುಂಚೂಣಿ ನಾಯಕರ ಯಾವುದೇ ನೀತಿ ಅಥವಾ ಹೇಳಿಕೆಯ ಬಗ್ಗೆ ತುಸು ಟೀಕೆ ಮಾಡಿದರೂ, ಅಂಥವರಿಗೆ ಸಾರಾಸಗಟಾಗಿ 'ದೇಶದ್ರೋಹಿ'ಗಳ ಪಟ್ಟಕಟ್ಟುವುದು ಹೊಸತೇನಲ್ಲ. ಬಜೆಟ್ ಭಾಷಣದಂಥ ಮಹತ್ವದ ಸಂದರ್ಭದಲ್ಲಿ ಗುರಜಾಡ ಅಪ್ಪಾರಾವ್ ಅವರಂಥ ಮನುಷ್ಯಪ್ರೇಮಿ ಕವಿಯನ್ನು ಉಲ್ಲೇಖಿಸುವ ಮೂಲಕ 'ಇಂಥ ಅತಿರೇಕಗಳ ನಡೆ ಇನ್ನು ಸಾಕು' ಎನ್ನುವ ಸಂದೇಶ ರವಾನೆ ಮಾಡುವ ಪ್ರಯತ್ನವೂ ನಡೆದಂತೆ ಇದೆ. ಕೇಳಿದಾಕ್ಷಣ ರೋಮಾಂಚನ ಉಂಟು ಮಾಡುವ ಸಾಲುಗಳನ್ನು ನೆನಪಿಸಿಕೊಳ್ಳುವ ಆಯ್ಕೆಯ ಹಿಂದೆ ಒಂದಿಷ್ಟು ಆಲೋಚನೆ ಖಂಡಿತ ಇರುತ್ತದೆ. ದೆಹಲಿ ವಿಧಾನಸಭಾ ಚುನಾವಣೆಯ ರಾಜಕೀಯ ಕೆಸರೆರೆಚಾಟದ ಸಂದರ್ಭದಲ್ಲಿ 'ದೇಶವೆಂದರೆ ಮನುಷ್ಯರು' ಎಂದು ಆಡಳಿತ ಪಕ್ಷ ನೆನಪಿಸಿಕೊಂಡಿರುವುದು ಶ್ಲಾಘನೀಯ ಸಂಗತಿ. ಆದರೆ ಅಪ್ಪಾರಾವ್ ಅವರ ಕವಿತೆಯ ಮುಂದಿನ ಸಾಲುಗಳನ್ನೂ ಇವರು ನೋಡಬೇಕು, ಇವರ ಮನಸ್ಸಿಗೆ ಆ ಸಾಲುಗಳ ಭಾವ ಇಳಿಯಬೇಕಷ್ಟೇ.
'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' (minimum governance maximum government) ಎನ್ನುವುದು ಬಿಜೆಪಿ ನಾಯಕರು ಜನರ ಮನಸ್ಸಿನಲ್ಲಿ ಬಿತ್ತಿದ್ದ ಮತ್ತೊಂದು ಮಹತ್ತರ ಆಶಯ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿಯು ಈಗ 'ವಿಭಿನ್ನ ಪಕ್ಷ' (Party with a difference) ಆಗಿ ಉಳಿದಿಲ್ಲ. ಹಗರಣ, ಭ್ರಷ್ಟಾಚಾರ, ದೌರ್ಜನ್ಯ, ಸ್ವಜನ ಪಕ್ಷಪಾತ ಹೀಗೆ ಯಾವೆಲ್ಲ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಿತ್ತೋ ಆ ಎಲ್ಲ ದುರ್ಗುಣಗಳನ್ನೂ ಇಲ್ಲಿನ ಬಿಜೆಪಿ ನಾಯಕರು ಮೈಗೂಡಿಸಿಕೊಂಡು ಕೊಬ್ಬಿದರು. ತಿರುವಳ್ಳುವರ್ ಹೇಳಿರುವಂತೆ ಮನುಷ್ಯರು ಉತ್ತಮ ಆಡಳಿತ ಅಪೇಕ್ಷಿಸುವುದು ನಿಜ. ಆದರೆ ನಾಯಕರಲ್ಲಿ 'ಉತ್ತಮ' ಎನ್ನಿಸಿಕೊಳ್ಳುವ ಗುಣವೇ ಕಣ್ಮರೆಯಾದರೆ ಜನರಾದರೂ ಏನು ಮಾಡಬೇಕು? ಅವರ ಅಪೇಕ್ಷೆ ಸಾವಿರಾರು ವರ್ಷಗಳಿಂದ ಇರುವಂತೆ ಇನ್ನು ಮುಂದೆಯೂ ಇದ್ದೇ ಇರುತ್ತದೆ. ಮಹಾತ್ಮರ ಮಾತುಗಳನ್ನು ಓದುವುದು, ಹೇಳುವುದು ಸುಲಭ. ಅನುಸರಿಸುವುದು ಕಷ್ಟ. ಈ ಮಾತು ಸದನದಲ್ಲಿದ್ದು ಬಜೆಟ್ ಭಾಷಣ ಮಾಡಿದವರು ಮತ್ತು ಕೇಳಿಸಿಕೊಂಡವರಿಬ್ಬರಿಗೂ ಅನ್ವಯವಾಗುತ್ತದೆ.
ಬಜೆಟ್‌ನಲ್ಲಿ ಕೇಂದ್ರ ಸಚಿವರು ಆದಾಯ ತೆರಿಗೆ ಪಾವತಿದಾರರಿಗೆ ಬಂಪರ್ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದು ಶ್ಲಾಘನೀಯ ಸಂಗತಿಯೇನೋ ಸರಿ. ಆದರೆ ವೇತನ ಪಡೆಯದ ಮಧ್ಯಮ ವರ್ಗವೂ ದೇಶದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದೆ. ಸಣ್ಣಪುಟ್ಟ ವ್ಯಾಪಾರಿಗಳು, ಚಿಕ್ಕ ಹಿಡುವಳಿದಾರರು, ಖಾಸಗಿ ಉದ್ಯೋಗಸ್ಥರು, ಸ್ವ-ಉದ್ಯೋಗಿಗಳು... ಹೀಗೆ ಹಲವು ಕ್ಷೇತ್ರಗಳಲ್ಲಿ ಇಂಥವರು ಕಂಡು ಬರುತ್ತಾರೆ. ಇಂಥವರ ಆದಾಯ, ಲೆಕ್ಕ ಯಾವುದಕ್ಕೂ ಸರಿಯಾದ ಲೆಕ್ಕವೇ ಇರುವುದಿಲ್ಲ. ಉದ್ಯೋಗ ಭದ್ರತೆಯೂ ಮರೀಚಿಕೆ, ಸಾಲವೂ ಇವರಿಗೆ ಸುಲಭಕ್ಕೆ ಹುಟ್ಟುವುದಿಲ್ಲ. ಹಣದುಬ್ಬರಕ್ಕೆ ಕಡಿವಾಣ ಬಿದ್ದರೆ ಮಾತ್ರ ಈ ವರ್ಗ ನೆಮ್ಮದಿಯಾಗಿರಲು ಸಾಧ್ಯ. ಈ ವರ್ಗಕ್ಕೆ ನೆಮ್ಮದಿ ತರುವ ಯಾವುದೇ ಮಾತು ಬಜೆಟ್ ಭಾಷಣದಲ್ಲಿ ಕಾಣಿಸಲಿಲ್ಲ.
ಸರ್ಕಾರದ ಘೋಷಣೆಗಳು ಹಲವು ಬಾರಿ ಮೇಲ್ನೋಟಕ್ಕೆ ಸುಂದರವಾಗಿರುತ್ತವೆ. ಆದರೆ ಆಂತರ್ಯ ಅರ್ಥವಾಗುವುದು ಬಲುನಿಧಾನ. ಆದಾಯ ತೆರಿಗೆ ವಿನಾಯ್ತಿ ಘೋಷಿಸುವ ಜೊತೆಗೆ ಉಳಿತಾಯ ಯೋಜನೆಗಳಿಗೂ ಬಲ ತುಂಬಿದ್ದರೆ ಇದು ನಿಜವಾದ ಅರ್ಥದಲ್ಲಿ ಮಧ್ಯಮ ವರ್ಗ ಸ್ನೇಹಿ ಬಜೆಟ್ ಆಗಿರುತ್ತಿತ್ತು. ಉಪಭೋಗಿ ಪ್ರವೃತ್ತಿಗೆ ಒತ್ತುಕೊಡುವ ಮಾತುಗಳೇ ಎದ್ದು ಕಾಣುತ್ತಿದ್ದ ಬಜೆಟ್‌ನಲ್ಲಿ ಉಳಿತಾಯಕ್ಕೆ, ಉದ್ಯಮಶೀಲತೆಗೆ ಒತ್ತು ನೀಡುವ ಅಂಶಗಳು ಕನಿಷ್ಠ ಮಟ್ಟದಲ್ಲಿವೆ. ಉಳಿತಾಯ ಮತ್ತು ಉದ್ಯಮಶೀಲತೆಯ ಮನಃಸ್ಥಿತಿ ಬೆಳೆಯದೆ ಸ್ವಾವಲಂಬಿ ಸಮಾಜ ನಿರ್ಮಾಣ ಅಸಾಧ್ಯ.
ಯಾವುದೇ ಸರ್ಕಾರದ 2 ನೇ ಬಜೆಟ್ ಹಲವು ಕಾರಣಕ್ಕೆ ಮಹತ್ವ ಪಡೆದಿರುತ್ತದೆ. ಏಕೆಂದರೆ ಅಂಥ ಸರ್ಕಾರಕ್ಕೆ ಸದ್ಯದಲ್ಲಿ ಚುನಾವಣೆಯ ಭೀತಿ ಇರುವುದಿಲ್ಲ, ಮತದಾರರ ಓಲೈಕೆಯ ಸರ್ಕಸ್ ಮಾಡಬೇಕಿರುವುದಿಲ್ಲ. ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕಲು ಅವಕಾಶವಿರುವ ಸಂದರ್ಭಗಳಿವು. ಈ ಅಂಶದ ಬಗ್ಗೆಯೂ ಹಣಕಾಸು ಇಲಾಖೆ ಹೆಚ್ಚಿನ ಗಮನ ಕೊಡಬಹುದಾಗಿತ್ತು. ಸಚಿವರು ಮುಂದಿನ ವಾರದಲ್ಲಿ ಮಂಡಿಸಲಿರುವ ಆದಾಯ ತೆರಿಗೆ ವಿಧೇಯಕದ ಬಗ್ಗೆ ಈಗ ಇಡೀ ದೇಶದ ಗಮನ ಇದೆ. ಅಲ್ಲಿಯವರೆಗೆ ಇವತ್ತಿನ ಘೋಷಣೆಗಳನ್ನು ಮೆಲುಕು ಹಾಕುತ್ತಾ ಮಧ್ಯಮ ವರ್ಗ ಸವಿಗನಸು ಕಾಣುತ್ತಾ ಇರಬಹುದು.
(ಗಮನಿಸಿ: ಇದು ಲೇಖಕರ ವೈಯಕ್ತಿಕ ಅಭಿಪ್ರಾಯ)
