Nitish Kumar On Opposition Unity: ಇದು ನಿತೀಶ್ ಕುಮಾರ್ ಭವಿಷ್ಯ: 2024ರಲ್ಲಿ ವಿಪಕ್ಷಗಳ ದೋಸ್ತಿ ಅವಶ್ಯ!
ಮಣಿಪುರದ ಐವರು ಜೆಡಿಯು ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಕೆಂಡಾಮಂಡಲರಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಪಕ್ಷ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ ಎಂದು ಕಿಡಿಕಾರಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು ಒಂದಾಗಿ ಬಿಜೆಪಿಯನ್ನು ಎದುರಿಸಲಿವೆ ಎಂದು ನಿತೀಶ್ ಕುಮಾರ್ ಇದೇ ವೇಳೆ ಘೋಷಿಸಿದರು.
ಪಾಟ್ನಾ: ಮಣಿಪುರದ ಐವರು ಜೆಡಿಯು ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಕೆಂಡಾಮಂಡಲರಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಪಕ್ಷ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ ಎಂದು ಕಿಡಿಕಾರಿದ್ದಾರೆ. ಮಣಿಪುರದ ಜೆಡಿಯು ಶಾಸಕರನ್ನು ಹಣದ ಆಮೀಷವೊಡ್ಡಿ ಪಕ್ಷಾಂತರ ಮಾಡಿಸಲಾಗಿದೆ ಎಂದೂ ನಿತೀಶ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಪಾಟ್ನಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ಬಿಜೆಪಿ ಒಂದು ಪ್ರಜಾಪೃಭುತ್ವ ವಿರೋಧಿ ಪಕ್ಷವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಬಿಹಾರದಲ್ಲಿ ಆದ ಮುಖಭಂಗಕ್ಕೆ ಬಿಜೆಪಿ ಮಣಿಪುರದಲ್ಲಿ ಸೇಡು ತೀರಿಸಿಕೊಂಡಿದೆ. ಹಣದ ಆಮೀಷವೊಡ್ಡಿ ಮಣಿಪುರದ ಜೆಡಿಯು ಶಾಸಕರನ್ನು ಸೆಳೆಯಲಾಗಿದೆ ಎಂದು ನಿತೀಶ್ ಕುಮಾರ್ ಗಂಭೀರ ಆರೋಪ ಮಾಡಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿ ಅಧಿಕಾರದಿಂದ ತೊಲಗಬೇಕು. ಇದಕ್ಕಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು ಒಂದಾಗಿ ಬಿಜೆಪಿಯನ್ನು ಎದುರಿಸಲಿವೆ ಎಂದು ನಿತೀಶ್ ಕುಮಾರ್ ಇದೇ ವೇಳೆ ಘೋಷಿಸಿದರು. 2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಒಗ್ಗೂಡುವಿಕೆ ಖಚಿತ ಎಂದ ನಿತೀಶ್ ಕುಮಾರ್, ಅಂತಹ ಸನ್ನಿವೇಶವನ್ನು ಖುದ್ದು ಬಿಜೆಪಿಯೇ ನಿರ್ಮಾಣ ಮಾಡಿದೆ. ಅಧಿಕಾರದ ಅಹಂಕಾರದಿಂದ ಮೆರೆಯುತ್ತಿರುವ ಬಿಜೆಪಿಗೆ, 2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು ತಕ್ಕ ಉತ್ತರ ನೀಡಲಿವೆ ಎಂದು ನಿತೀಶ್ ಕುಮಾರ್ ಹರಿಹಾಯ್ದಿದ್ದಾರೆ.
ಬಿಹಾರದಲ್ಲಿ ನಾವು ಎನ್‌ಡಿಎ ಜೊತೆ ಮೈತ್ರಿ ಕಡಿದುಕೊಂಡ ಬಳಿಕ, ಮಣಿಪುರದ ಎಲ್ಲಾ ಆರು ಜೆಡಿಯು ಶಾಸಕರು ನಮ್ಮನ್ನು ಭೇಟಿ ಮಾಡಿ ಒಗ್ಗಟ್ಟಿನ ಭರವಸೆ ನೀಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಆರು ಶಾಸಕರ ಪೈಕಿ ಐವರು ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿದ್ದಾರೆ. ಈ ಮೂಲಕ ಅವರು ತಮ್ಮನ್ನು ಆರಿಸಿ ಕಳುಹಿಸಿದ ಜನತೆಗೆ ಮೋಸ ಮಾಡಿದ್ದಾರೆ ಎಂದು ನಿತೀಶ್ ಕುಮಾರ್ ಕಿಡಿಕಾರಿದರು.
ಶಾಸಕರನ್ನು ಸೆಳೆಯುವ ಮೂಲಕ ಬಿಜೆಪಿ ತನ್ನ ವಿರೋಧಿ ರಾಜಕೀಯ ಪಕ್ಷಗಳ ಅಸ್ತಿತ್ವವನ್ನ ಕೊನೆಗಾಣಿಸುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಮುರಿದ ಬಿಜೆಪಿ, ಈಗ ಮಣಿಪುರದಲ್ಲಿ ಜೆಡಿಯು ಪಕ್ಷವನ್ನು ಮುರಿದಿದೆ. ಇದು ಅಸಂವಿಧಾನಿಕ ನಡೆ ಎಂದು ನಿತೀಶ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯ ಈ ದುರಂಹಕಾರ ಖಂಡಿತವಾಗಿಯೂ ಅಂತ್ಯವಾಗಲಿದೆ. 2024ರ ಸಾರ್ವತ್ರಿಕ ಚುನಾವಣೆ ಬಿಜೆಪಿಯ ಅಹಂಕಾರಕ್ಕೆ ಪೆಟ್ಟು ನೀಡಲಿದೆ. ಬಿಜೆಪಿಯ ದುರಾಡಳಿತ ಕೊನೆಯಾಗಲಿದೆ ಎಂದು ಇದೇ ವೇಳೆ ನಿತೀಶ್ ಕುಮಾರ್ ಭವಿಷ್ಯ ನುಡಿದರು. ವಿಪಕ್ಷಗಳು ಒಗ್ಗಟ್ಟಾಗಿ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿಯನ್ನು ಎದುರಿಸಲಿವೆ ಎಂದು ನಿತೀಶ್ ಇದೇ ವೇಳೆ ನುಡಿದರು.
ಕೇವಲ ಒಬ್ಬ ವ್ಯಕ್ತಿಯ ಅಧಿಕಾರ ದಾಹವನ್ನು ತೀರಿಸಲು ಬಿಜೆಪಿ ದೇಶಾದ್ಯಂತ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳ ನ್ನು ಉರುಳಿಸುತ್ತಿದೆ. ಬಿಜೆಪಿ ಇದೀಗ ಒಂದು ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಅಟಲ್ ಬಿಹಾರಿ ವಾಜಪೇಯಿ ಕಾಲದ ಬಿಜೆಪಿ ಇದಲ್ಲ ಎಂದು ನಿತೀಶ್ ಕುಮಾರ್ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಣಿಪುರದ ಆರು ಜೆಡಿಯು ಶಾಸಕರ ಪೈಕಿ ಐವರು ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಮಣಿಪುರ ವಿಧಾನಸಭೆ ಸ್ಪೀಕರ್ ಐವರೂ ಶಾಸಕರ ಬಿಜೆಪಿ ಸೇರ್ಪಡೆಯನ್ನು ಅನುಮೋದಿಸಿದ್ದಾರೆ. ಈ ಮೂಲಕ 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ 32 ಶಾಸಕರನ್ನು ಹೊಂದಿರುವ ಬಿಜೆಪಿ, ಸ್ಪಷ್ಟ ಬಹುಮತ ಪಡೆದುಕೊಂಡಿದೆ.
ಇನ್ನು ಮಣಿಪುರದ ರಾಜಕೀಯ ಬೆಳವಣಿಗೆಯನ್ನು ಸ್ವಾಗತಿಸಿರುವ ಬಿಜೆಪಿ, ನಿತೀಶ್ ಕುಮಾರ್ ದುರಾಡಳಿತದಿಂದ ಬೇಸತ್ತಿರುವ ಬಿಹಾರದ ಜೆಡಿಯು ಶಾಸಕರೂ ಕೂಡ ಶೀಘ್ರದಲ್ಲೇ ಪಕ್ಷ ತ್ಯಜಿಸಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
ವಿಭಾಗ