12-14 ವರ್ಷದ 3 ಕೋಟಿ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್..
ಮಾರ್ಚ್ 16 ರಿಂದ ಇಲ್ಲಿಯವರೆಗೆ 12-14 ವರ್ಷ ವಯಸ್ಸಿನ ಮೂರು ಕೋಟಿಗೂ ಹೆಚ್ಚು ಮಕ್ಕಳಿಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ನೀಡಲಾಗಿದೆ.
ನವದೆಹಲಿ: 12-14 ವರ್ಷ ವಯಸ್ಸಿನ ಮೂರು ಕೋಟಿಗೂ ಹೆಚ್ಚು ಮಕ್ಕಳಿಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ಹೇಳಿದ್ದಾರೆ.
ಹೈದರಾಬಾದ್ ಮೂಲದ ಬಯೋಲಾಜಿಕಲ್ -ಇ ಲಿಮಿಟೆಡ್ ಕಂಪನಿ ತಯಾರಿಸಿರುವ ಸ್ವದೇಶಿ ಕೋವಿಡ್ ಲಸಿಕೆಯಾದ ‘ಕಾರ್ಬೆವಾಕ್ಸ್’ ಅನ್ನು ಮಾರ್ಚ್ 16 ರಂದು 12-14 ವಯಸ್ಸಿನ ಮಕ್ಕಳಿಗೆ ನೀಡಲು ಆರಂಭಿಸಲಾಯಿತು. ಈ ಲಸಿಕೆಯ ಎರಡನೇ ಡೋಸ್ ಅನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತದೆ.
"ಲಸಿಕಾ ಅಭಿಯಾನಕ್ಕೆ ಮಕ್ಕಳು ಮಹತ್ವದ ಕೊಡುಗೆ ನೀಡುತ್ತಿದ್ದಾರೆ. 12-14 ವಯೋಮಾನದ 3 ಕೋಟಿ ಮಕ್ಕಳು 1 ನೇ ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. ಲಸಿಕೆ ಹಾಕಿಸಿಕೊಂಡ ನನ್ನ ಎಲ್ಲಾ ಯುವ ಸ್ನೇಹಿತರಿಗೆ ಅಭಿನಂದನೆಗಳು" ಎಂದು ಮಾಂಡವಿಯಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಸೋಮವಾರದ ವರೆಗೆ 3,06,69,820 ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆಯ ಮೊದಲ ಡೋಸ್ ಹಾಗೂ 1,02,00,272 ಮಕ್ಕಳಿಗೂ ಎರಡೂ ಡೋಸ್ ನೀಡಲಾಗಿದೆ.
2021ರ ಜನವರಿಯಲ್ಲಿ ಭಾರತದಲ್ಲಿ ಕೊರೊನಾ ಲಸಿಕಾಭಿಯಾನ ಪ್ರಾರಂಭಿಸಲಾಗಿದ್ದು, ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 190.48 ಕೋಟಿ (1,90,48,54,263) ಡೋಸ್ ವ್ಯಾಕ್ಸಿನ್ ಹಾಕಲಾಗಿದೆ. ಮೊದಲು ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೊರೊನಾ ಹೋರಾಟದಲ್ಲಿದ್ದ ಮುಂಚೂಣಿ ಕಾರ್ಯಕರ್ತರಿಗೆ ವ್ಯಾಕ್ಸಿನ್ ಹಾಕಲಾಯಿತು. ನಂತರ 2021ರ ಮಾರ್ಚ್ನಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಯಿತು.
2021ರ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ಅವಕಾಶ ನೀಡುವ ಮೂಲಕ ಸರ್ಕಾರವು ತನ್ನ ವ್ಯಾಕ್ಸಿನೇಷನ್ ಡ್ರೈವ್ ಅನ್ನು ವಿಸ್ತರಿಸಿತು. 2022ರ ಜನವರಿ 3 ರಿಂದ ಭಾರತದಲ್ಲಿ ಅಪ್ರಾಪ್ತ ವಯಸ್ಕರಿಗೆ (15-18 ವಯಸ್ಸಿನವರಿಗೆ) ವ್ಯಾಕ್ಸಿನೇಷನ್ ಅನ್ನು ಆರಂಭ ಮಾಡಲಾಯಿತು. ಈ ವರ್ಷ ಮಾರ್ಚ್ 16 ರಿಂದ 12-14 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.
ಇದಲ್ಲದೇ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಈ ವರ್ಷ ಮಾರ್ಚ್ 1 ರಿಂದ ಹಾಗೂ 18-59 ವರ್ಷ ವಯಸ್ಸಿನವರಿಗೆ ಏಪ್ರಿಲ್ 10 ರಿಂದ ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್) ಹಾಕಲಾಗುತ್ತಿದೆ.