ಪಹಲ್ಗಾಮ್ ಉಗ್ರದಾಳಿ: ಕಾಶ್ಮೀರೇತರರ ಮೇಲೆ ಉಗ್ರದಾಳಿ ಸಾಧ್ಯತೆ ಎಂದು ಭದ್ರತಾ ಪಡೆಗಳನ್ನು ಎಚ್ಚರಿಸಿದ್ದ ಗುಪ್ತಚರ ಸಂಸ್ಥೆ
ಪಹಲ್ಗಾಮ್ ಉಗ್ರದಾಳಿ: ಜಮ್ಮು - ಕಾಶ್ಮೀರದ ಪಹಲ್‌ಗಾಮ್‌ನಲ್ಲಿ ಉಗ್ರದಾಳಿ ನಡೆಯುವುದಕ್ಕೂ ಮೊದಲು, ಈ ರೀತಿ ಕಾಶ್ಮೀರೇತರರ ಮೇಲೆ ದಾಳಿಯಾಗುವ ಸಾಧ್ಯತೆಯನ್ನು ಗುಪ್ತಚರ ಸಂಸ್ಥೆ ಎಚ್ಚರಿಸಿತ್ತು ಎಂಬ ಅಂಶ ಈಗ ಗಮನಸೆಳೆದಿರುವುದಾಗಿ ವರದಿ ಹೇಳಿದೆ.
ಪಹಲ್ಗಾಮ್ ಉಗ್ರದಾಳಿ: ದಕ್ಷಿಣ ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭದ್ರತಾ ಪಡೆಗಳನ್ನು ಗುಪ್ತಚರ ಸಂಸ್ಥೆಗಳು ಎಚ್ಚರಿಸಿದ್ದವು ಎಂಬ ಅಂಶ ಪಹಲ್‌ಗಾಮ್ ದಾಳಿಯ ಬಳಿಕ ಬಹಿರಂಗವಾಗಿದೆ. ಅನಂತ್‌ನಾಗ್ ಜಿಲ್ಲೆಯ ಪಹಲ್‌ಗಾಮ್ ಸಮೀಪದ ಸುಂದರವಾದ ಹುಲ್ಲುಗಾವಲಾಗಿರುವ ಬೈಸಾರನ್‌ನಲ್ಲಿ ಉಗ್ರರು ದಾಳಿ ನಡೆಸಿದ್ದು ಅದರಲ್ಲಿ ಕನಿಷ್ಠ 28 ಜನ ಬಲಿಯಾದರು. ಹಲವರು ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯ ನಿವಾಸಿಗಳೂ ಸೇರಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದರು ಎಂದು ಮಾತೃಭೂಮಿ ವರದಿ ಮಾಡಿದೆ.
ಕಾಶ್ಮೀರೇತರರ ಮೇಲೆ ಉಗ್ರದಾಳಿ ಸಾಧ್ಯತೆ; ಎಚ್ಚರಿಸಿದ್ದ ಗುಪ್ತಚರ ಸಂಸ್ಥೆ
ಜಮ್ಮು-ಕಾಶ್ಮೀರದ ಪ್ರವಾಸಿ ಹಾಟ್‌ಸ್ಪಾಟ್‌ಗಳ ಮೇಲೆ ಸಂಭಾವ್ಯ ಉಗ್ರ ದಾಳಿಯ ಸುಳಿವನ್ನು ಗುಪ್ತಚರ ಸಂಸ್ಥೆಗಳು ನೀಡಿದ್ದವು. ದಾಳಿಕೋರರು ತಮ್ಮ ಧಾರ್ಮಿಕ ಗುರುತಿನ ಆಧಾರದ ಮೇಲೆ ಕಾಶ್ಮೀರಿಗಳಲ್ಲದವರನ್ನು ಗುರಿಯಾಗಿಸಲು ಉದ್ದೇಶಿಸಿದ್ದಾರೆ ಎಂಬ ಅಂಶದ ಕಡೆಗೂ ಭದ್ರತಾ ಪಡೆಗಳ ಗಮನವನ್ನು ಗುಪ್ತಚರ ಸಂಸ್ಥೆ ನೀಡಿತ್ತು. ಪಹಲ್‌ಗಾಮ್ ದಾಳಿಯ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆಯು ಈ ಘಟನೆಗೆ ಮುಂಚಿತವಾಗಿ ಈ ಪ್ರದೇಶದಲ್ಲಿ ವಿಚಕ್ಷಣ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಗುಪ್ತಚರ ಸಂಸ್ಥೆ ಎಚ್ಚರಿಸಿದ್ದಾಗಿ ಮಾತೃಭೂಮಿ ವರದಿ ಮಾಡಿದೆ..
ಉಗ್ರರು ದಾಳಿ ನಡೆಸಿದ ಪ್ರದೇಶ ಪಹಲ್‌ಗಾಮ್‌ನ ಹುಲ್ಲುಗಾವಲು ಪ್ರದೇಶವಾಗಿದ್ದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಈ ಪ್ರದೇಶವನ್ನು ಮಿನಿ ಸ್ವಿಜರ್‌ಲೆಂಡ್ ಎಂದು ಕರೆಯಲಾಗುತ್ತದೆ.
ಉಗ್ರದಾಳಿಯ ಬಳಿಕ ಜಮ್ಮು- ಕಾಶ್ಮೀರದ ಉದ್ದಗಲಕ್ಕೂ ಪಹರೆ ಬಿಗಿಗೊಳಿಸಲಾಗಿದೆ. ಉಗ್ರದಾಳಿಯ ಮೂಲಕ ನಾಗರಿಕರ ಹತ್ಯೆ ಖಂಡಿಸಿ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಇಂದು ಪ್ರತಿಭಟನೆ ಘೋಷಿಸಿವೆ. ಇದೇ ವೇಳೆ, ದೆಹಲಿಯಲ್ಲೂ ಅಲರ್ಟ್ ಘೋಷಿಸಲಾಗಿದ್ದು, ದೆಹಲಿ ಪೊಲೀಸರು ಬಂದೋಬಸ್ತ್ ಬಿಗಿಗೊಳಿಸಿದ್ದಾರೆ. ಪ್ರವಾಸಿ ತಾಣಗಳಲ್ಲೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ತನಿಖೆಯ ಹೊಣೆ ಎನ್‌ಐಎ ಹೆಗಲೇರುವ ಸಾಧ್ಯತೆ
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆಯನ್ನು ವಹಿಸಿಕೊಳ್ಳಲು ಸಜ್ಜಾಗಿದೆ. ಸದ್ಯ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಕಾಶ್ಮೀರಕ್ಕೆ ಆಗಮಿಸಿದ್ದು, ಸರಣಿ ಸಭೆಗಳನ್ನು ನಡೆಸಿದ್ದಾರೆ.
ದಾಳಿ ನಡೆಸಿದ ಉಗ್ರರು ಸೇನಾ ಸಮವಸ್ತ್ರದಲ್ಲಿ ಇರಲಿಲ್ಲ. ಅವರು ಸಾಮಾನ್ಯರಂತೆ ಉಡುಪು ಧರಿಸಿಕೊಂಡಿದ್ದರು ಎಂದು ಶಿವಮೊಗ್ಗದ ಪಲ್ಲವಿ (ಮೃತ ಮಂಜುನಾಥ್ ರಾವ್ ಅವರ ಪತ್ನಿ) ಟಿವಿ9 ಕನ್ನಡದ ಜತೆಗೆ ಮಾತನಾಡುತ್ತ ತಿಳಿಸಿದ್ದಾರೆ.
ಪಹಲ್‌ಗಾಮ್‌ನ ಹುಲ್ಲುಗಾವಲು ಪ್ರದೇಶದಲ್ಲಿ ಪ್ರವಾಸಿಗರು ಇಲ್ಲಿ ತಿನಿಸು ಸೇವಿಸುತ್ತ, ಹುಲ್ಲುಗಾವಲಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಕೆಲವರು ಕುದುರೆ ಸವಾರಿಯೂ ಮಾಡುತ್ತಿರುತ್ತಾರೆ. ಆಗ ಭಯೋತ್ಪಾದಕರು ಅಲ್ಲಿಗೆ ಆಗಮಿಸಿದ್ದು, ಎಲ್ಲರ ಐಡಿ ಕಾರ್ಡ್ ಪರಿಶೀಲಿಸಿ ಹಿಂದು ಅಥವಾ ಮುಸಲ್ಮಾನ ಎಂಬುದನ್ನು ಕೇಳಿ ಪರಿಶೀಲಿಸಿ ಬಳಿಕ ಗುಂಡು ಹಾರಿಸಿ ಹತ್ಯೆ ಮಾಡಿದರು. ಬಹುತೇಕ ಪುರುಷರನ್ನೇ ಟಾರ್ಗೆಟ್ ಮಾಡಿದ ಉಗ್ರರು, ಮಹಿಳೆಯರು ಮತ್ತು ಮಕ್ಕಳನ್ನು ಬಿಟ್ಟರು ಎಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದಾಳಿ ನಡೆಸಿದ ಉಗ್ರರ ಸಂಖ್ಯೆ ಎಷ್ಟು ಎಂಬುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿ ತಂದು ಬಳಸುತ್ತಿರುವ ಉಗ್ರರು ಈ ದಾಳಿಯಲ್ಲಿ ಸಣ್ಣ ಸಣ್ಣ ತಂಡಗಳಾಗಿ ಅಂದರೆ ಇಬ್ಬಿಬ್ಬರು ಜತೆಯಾಗಿ ಭಾಗವಹಿಸಿದ್ದರು ಎಂದು ಜಮ್ಮು ಕಾಶ್ಮೀರದ ಅಧಿಕಾರಿಗಳು ಹೇಳಿದ್ದಾರೆ. ಪಹಲ್‌ಗಾಮ್‌ನ ಈ ಉಗ್ರದಾಳಿಯ ಹೊಣೆಯನ್ನು ಟಿಆರ್‌ಎಫ್ ಎಂಬ ಉಗ್ರ ಸಂಘಟನೆ ಹೊತ್ತುಕೊಂಡಿದೆ.