ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ಭಾರತೀಯ ಸೇನೆಯ ಡಿಜಿಎಂಒ ಸುದ್ದಿಗೋಷ್ಠಿಯ 10 ಮುಖ್ಯ ಅಂಶಗಳಿವು
ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಡಿಜಿಎಂಒಗಳ ಸುದ್ದಿಗೋಷ್ಠಿಯಲ್ಲಿ ಆಪರೇಷನ್ ಸಿಂದೂರ ಕಾರ್ಯಾಚರಣೆಯ ವಿವರ ನೀಡಲಾಗಿದೆ. ಇದರಲ್ಲಿ, ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ನಡೆಸಿದ್ದು, ಅದಕ್ಕೆ ಪ್ರತಿದಾಳಿ ಮುಂತಾದ ವಿವರ ನೀಡಿದರು. 10 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಸೇನೆಯ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್‌ನ ಅಧಿಕಾರಿಗಳು ಭಾನುವಾರ (ಮೇ 11) ಸಂಜೆ ಸುದೀರ್ಘ ಸುದ್ದಿಗೋಷ್ಠಿಯಲ್ಲಿ ಇದುವರೆಗಿನ ವಿದ್ಯಮಾನಗಳ ವಿವರ ನೀಡಿದರು. ಪಾಕಿಸ್ತಾನದ ಮನವಿ ಮೇರೆಗೆ ಕದನ ವಿರಾಮ ಘೋಷಣೆ ಬಳಿಕ ಪಾಕಿಸ್ತಾನ ನಡೆಸಿದ ಕದನ ವಿರಾಮ ಉಲ್ಲಂಘನೆ ಮತ್ತು ಭಾರತೀಯ ಸೇನೆ ಅದನ್ನು ತಡೆದು ಪ್ರತಿದಾಳಿ ನಡೆಸಿದ್ದರ ವಿವರವನ್ನು ಅದಿಕಾರಿಗಳು ನೀಡಿದರು. ಪಾಕಿಸ್ತಾನದ ಅತಿರೇಕದ ನಡೆಯ ಕಾರಣ, ಆ ದೇಶಕ್ಕೆ ಹೆಚ್ಚಿನ ಹಾನಿಯಾಗಿದೆ ಎಂಬುದನ್ನು ಅವರು ವಿವರಿಸಿದರು.
ಹೆಚ್ಚು ದಾಳಿ ನಡೆಸುತ್ತಿದ್ದ ಪ್ರದೇಶವನ್ನು ಗುರುತಿಸಿ ಭಾರತೀಯ ಸೇನೆ, ದಾಳಿ ತಡೆಯುವ ಪ್ರತಿದಾಳಿ ನಡೆಸಿದೆ. ಇದರಿಂದಾಗಿ ಪಾಕಿಸ್ತಾನದ ಪಶ್ಚಿಮ ಭಾಗದ ವಾಯ ನೆಲೆಗಳನ್ನು ನಾಶಪಡಿಸಲಾಗಿದೆ ಎಂದು ಏರ್ ಮಾರ್ಷಲ್ ಎಕೆ ಭಾರತಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್‌ನ ಅಧಿಕಾರಿಗಳು ಜಂಟಿಯಾಗಿ ಆಪರೇಷನ್ ಸಿಂದೂರದ ಅಪ್ಡೇಟ್ ನೀಡುವ ಸುದ್ದಿಗೋಷ್ಠಿ ನಡೆಸಿದರು. 25 ಭಾರತೀಯರು, ಒಬ್ಬ ನೇಪಾಳಿ ಸೇರಿ 26 ಜನರ ಹತ್ಯೆಗೆ ಕಾರಣವಾದ ಪಹಲ್ಗಾಮ್ ಉಗ್ರದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದೆ. ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿ ನಡೆಯಿತು.
35 ರಿಂದ 40 ಪಾಕ್ ಯೋಧರು, 100ಕ್ಕೂ ಅಧಿಕ ಉಗ್ರರ ಹತ್ಯೆ; ಡಿಜಿಎಂಒ ಸುದ್ದಿಗೋಷ್ಠಿಯ 10 ಮುಖ್ಯ ಅಂಶಗಳಿವು
1) 35 ರಿಂದ 40 ಪಾಕ್ ಯೋಧರು, 100ಕ್ಕೂ ಅಧಿಕ ಉಗ್ರರ ಹತ್ಯೆ: ಮೇ 7 ರಂದು ನಡೆದ ಆಪರೇಷನ್ ಸಿಂದೂರ್‌ನ ಆರಂಭಿಕ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. 9ಕ್ಕೂ ಹೆಚ್ಚು ಉಗ್ರ ನೆಲೆಗಳು ನಾಶವಾಗಿವೆ. ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್, ಮುದಾಸಿರ್ ಅಹ್ಮದ್ ಸೇರಿ ಹಲವು ಉಗ್ರರು ಪ್ರಾಣ ಕಳೆದುಕೊಂಡಿದ್ದಾರೆ. ಈ ಉಗ್ರರು ಕಂದಹಾರ್ ವಿಮಾನ ಅಪಹರಣ, 2019ರ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದವರು ಎಂದು ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ತಿಳಿಸಿದರು. ಸಶಸ್ತ್ರ ಪಡೆಗಳು ನಡೆಸಿದ ಪ್ರತಿದಾಳಿಗೆ 35-40 ಪಾಕ್ ಯೋಧರು ಮೃತಪಟ್ಟಿದ್ದಾರೆ ಎಂದೂ ಹೇಳಿದರು.
2) ಡ್ರೋಣ್ ಅಲೆಗಳ ದಾಳಿ: ಪಾಕಿಸ್ತಾನದ ಕದನ ವಿರಾಮ ಮನವಿಗೆ ಭಾರತ ಸ್ಪಂದಿಸಿ ಒಪ್ಪಿಕೊಂಡ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಸೇನೆ ಡ್ರೋಣ್ ಅಲೆಗಳ ದಾಳಿ ನಡೆಸಿತು. ಈ ದಾಳಿಯನ್ನು ತಡೆದ ಭಾರತೀಯ ಸೇನೆ ಪ್ರತಿದಾಳಿ ನಡೆಸಿತು. ಇದರಿಂದಾಗಿ ಪಾಕಿಸ್ತಾನಕ್ಕೆ ಭಾರಿ ಹಾನಿಯಾಗಿದೆ. ರಾವಲ್ಪಿಂಡಿಯ ಚಕ್ಲಾಲ, ಚಾಕ್ವಾಲ್‌ನ ಮುರಿದ್, ಶೋರ್‌ಕೋಟ್‌ನ ರಫೀಕಿ, ರಹೀಮ್ ಯಾಕ್ ಖಾನ್, ಸುಕ್ಕೂರ್, ಚುನಿಯಾನ್ ವಾಯುನೆಲೆಗಳ ಮೇಲೆ ನಿಶ್ಚಿತ ದಾಳಿ ನಡೆಸಲಾಯಿತು ಎಂದು ಏರ್ ಮಾರ್ಷಲ್ ಎಕೆ ಭಾರ್ತಿ ತಿಳಿಸಿದರು.
3) ನಾಗರಿಕ ವಿಮಾನ ಹಾರಾಟಕ್ಕೆ ಒಪ್ಪಿಗೆ: ಪಾಕಿಸ್ತಾನ ಸೇನೆ ಭಾರತದ ಮೇಲೆ ದಾಳಿ ನಡೆಸುತ್ತಿದ್ದ ವೇಳೆ ಲಾಹೋರ್ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ನಡೆದಿತ್ತು. ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೂ ಒಪ್ಪಿಗೆ ನೀಡಲಾಗಿತ್ತು. ಇದು ಸಂವೇದನೆ ಇಲ್ಲದ, ವಿವೇಚನಾರಹಿತ ನಡವಳಿಕೆ ಎಂದು ಭಾರತೀಯ ಸೇನೆ ಖಂಡಿಸಿತು. ಭಾರತ ಈ ವಿಚಾರವಾಗಿ ಬಹಳ ಎಚ್ಚರಿಕೆಯಿಂದ ನಡೆದುಕೊಂಡಿದೆ ಎಂದು ಸ್ಪಷ್ಟಪಡಿಸಿತು.
4) ಕದನ ವಿರಾಮ ಎಂದರೆ ಕೂಡಲೇ ನಿಲ್ಲಿಸಬೇಕು: ಕದನ ವಿರಾಮ ಮನವಿಯು ತತ್‌ಕ್ಷಣದ 36 ಗಂಟೆ ಅವಧಿಯ ಯುದ್ಧ ನಿಲುಗಡೆ. ಇದು ಮೂರು ದಿನಗಳ ಕದನ ವಿರಾಮ ಅಲ್ಲ ಎಂಬುದನ್ನು ಡಿಜಿಎಂಒಗಳು ಸ್ಪಷ್ಟಪಡಿಸಿದರು.
5) ಭಾರತದ 5 ಯೋಧರು ಹುತಾತ್ಮ: ಪಾಕಿಸ್ತಾನ ಗಡಿಭಾಗದಲ್ಲಿ ನಡೆಸುತ್ತಿರುವ ಗುಂಡಿನ ದಾಳಿಗೆ ಸಿಲುಕಿ ಭಾರತದ 5 ಯೋಧರು ಹುತಾತ್ಮರಾದರು. ಅವರಿಗೆ ಭಾರತೀಯ ಸೇನೆ ಗೌರವ ಸಲ್ಲಿಸಿದೆ ಎಂದು ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ತಿಳಿಸಿದರು.
6) ಪಾಕಿಸ್ತಾನ ಅತಿರೇಕ ತೋರಿದರೆ: ಯಾವುದೇ ನಿಶ್ಚಿತ ವಿವರಗಳನ್ನು ನೀಡದೇ ಡಿಜಿಎಂಒ ಏರ್ ಮಾರ್ಷಲ್ ಪ್ರಮೋದ್ ಅವರು, “ಒಂದೊಮ್ಮೆ ಪಾಕಿಸ್ತಾನ ಯಾವುದೇ ಅತಿರೇಕದ ನಡೆ ಪ್ರದರ್ಶಿಸುವ ಸಾಹಸಕ್ಕೆ ಕೈ ಹಾಕಿದರೆ ನಾವೇನು ಮಾಡುತ್ತೇವೆ ಎಂಬ ಸ್ಪಷ್ಟ ತಿಳಿವಳಿಕೆ ಪಾಕಿಸ್ತಾನಕ್ಕೆ ಇದೆ” ಎಂದು ಹೇಳಿದರು.
7) ಕದನ ವಿರಾಮ ಮನವಿ ಪಾಕ್‌ನದ್ದು: ಪಾಕಿಸ್ತಾನದ ಹಾಟ್‌ಲೈನ್ ಮೂಲಕ ಬಂದ ಸಂದೇಶವು ಕದನ ವಿರಾಮದ ತುರ್ತು ಮನವಿಯನ್ನು ಹೊಂದಿತ್ತು. ಕದನ ವಿರಾಮ ಮನವಿ ಎಂಬುದು ತತ್‌ಕ್ಷಣಕ್ಕೆ 36 ಗಂಟೆ ಕಾಲ ದಾಳಿ ನಿಲ್ಲಿಸುವ ಸಂದೇಶ ಎಂಬುದನ್ನು ಸೇನಾಧಿಕಾರಿಗಳು ಸ್ಪಷ್ಟಪಡಿಸಿದರು.
8) ಎಲ್‌ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನವು ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ) ಭಾಗದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದೆ. "ನಮ್ಮ ಶತ್ರುಗಳ ಅನಿಯಮಿತ ಮತ್ತು ಹಿಂಸಾತ್ಮಕ ದಾಳಿಗೆ ನಾಗರಿಕರ ಸಂಖ್ಯೆ, ಜನವಸತಿ ಹಳ್ಳಿಗಳು ಮತ್ತು ಗುರುದ್ವಾರ ಮುಂತಾದ ಪ್ರದೇಶಗಳಿ ದುರದೃಷ್ಟವಶಾತ್ ಹಾನಿಗೊಳಗಾಗಿವೆ. ನಾಗರಿಕರೂ ಪ್ರಾಣ ಕಳೆದುಕೊಂಡರು" ಎಂದು ಘಾಯ್ ಮಾಧ್ಯಮಗಳಿಗೆ ತಿಳಿಸಿದರು.
9) ನಾವು ಉಗ್ರರ ಹತ್ಯೆ ಮಾಡಿದರೆ ಅವರಿಂದ ನಾಗರಿಕರ ಹತ್ಯೆ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಾವು ಉಗ್ರರನ್ನು ಹತ್ಯೆ ಮಾಡಿದರೆ, ಪಾಕಿಸ್ತಾನ ನಮ್ಮ ನಾಗರಿಕರನ್ನು ಹತ್ಯೆ ಮಾಡುತ್ತಿದೆ. ಹೀಗಾಗಿ ಭಾರತ ಗತ್ಯಂತರವಿಲ್ಲದೆ ಪ್ರತಿದಾಳಿ ನಡೆಸಬೇಕಾಗಿದೆ. ಆದಾಗ್ಯೂ, ಈ ಪ್ರತಿದಾಳಿಯು ನಿಶ್ಚಿತ ಹಾಗೂ ಸ್ಪಷ್ಟ ಗುರಿಯನ್ನು ಟಾರ್ಗೆಟ್ ಮಾಡಿಯೇ ನಡೆದಿದೆ ಎಂದು ಸೇನಾಧಿಕಾರಿಗಳು ಸ್ಪಷ್ಪಪಡಿಸಿದ್ದಾರೆ.
10) ದಾಳಿಯ ನಿಶ್ಚಿತ ಅಂಕಿ ನೋಟ ಇಲ್ಲ: ಭಾರತದ ಸೇನೆ ಎಷ್ಟು ವಿಮಾನ, ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂಬಿತ್ಯಾದಿ ದತ್ತಾಂಶ ವಿವರ ಸದ್ಯಕ್ಕೆ ನೀಡಲಾಗುತ್ತಿಲ್ಲ. ನಾವು ಪಾಕಿಸ್ತಾನದ ಕೆಲವು ಹೈಟೆಕ್ ವಿಮಾನಗಳನ್ನು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದಷ್ಟೇ ಹೇಳುತ್ತೇವೆ ಎಂದು ಭಾರತ ಸೇನೆ ಏರ್ ಮಾರ್ಷಲ್ ಎಕೆ ಭಾರ್ತಿ ಹೇಳಿದರು.