ಕನ್ನಡ ಸುದ್ದಿ  /  Nation And-world  /  Pakistan Crisis Imran Khan Arrested Army Dont Want Direct Power Pak Is Very Near To Failed State Impact On India Dmg

Pakistan Crisis: ಪಾಕಿಸ್ತಾನದ ಪರಿಸ್ಥಿತಿ ಈಗ ಬ್ರೇಕ್ ಇಲ್ಲದ ಟ್ರಕ್‌ನಂತೆ; ದೇಶವಾಗಿ ಉಳಿಯೋದೇ ಬಲುಕಷ್ಟ- ಭಾಗ 2

Imran Khan: ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ, ಬಿಡುಗಡೆ ಪ್ರಹಸನದ ನಂತರ ಅಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಪ್ರತಿಭಟನೆಗಳು ತೀವ್ರಗೊಂಡಿವೆ. ಪಾಕಿಸ್ತಾನದ ಭವಿಷ್ಯ ಏನಾಗಬಹುದು ಎನ್ನುವುದನ್ನು ಅಂತರರಾಷ್ಟ್ರೀಯ ಸಂಬಂಧಗಳನ್ನು ಹಲವು ಆಯಾಮಗಳಿಂದ ಅಧ್ಯಯನ ಮಾಡಿರುವ ಕಿಶೋರ್ ನಾರಾಯಣ್ ಈ ಲೇಖನದಲ್ಲಿ ವಿವರಿಸಿದ್ದಾರೆ.

ಪಾಕಿಸ್ತಾನದ ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ (ಪ್ರಾತಿನಿಧಿಕ ಚಿತ್ರ)
ಪಾಕಿಸ್ತಾನದ ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ (ಪ್ರಾತಿನಿಧಿಕ ಚಿತ್ರ)

ಸೇನೆಯ ಜೊತೆಗೆ ಸಂಬಂಧ ಹಳಸಿದ ನಂತರ ಇಮ್ರಾನ್ ಖಾನ್ ಮಾತಿನ ವರಸೆಯೂ ಬದಲಾಯಿತು. 'ಅಧಿಕಾರಕ್ಕಾಗಿ ಆ ಎರಡೂ ಪಕ್ಷಗಳ ರಾಜಕಾರಿಣಿಗಳು ಸೇನೆಯ ದಾಸರಾಗಿದ್ದಾರೆ. ವಿದೇಶಾಂಗ ವ್ಯವಹಾರದಲ್ಲಿ ಸೇನೆಯ ಹಸ್ತಕ್ಷೇಪ ಬೇಡ ಎಂದು ಹೇಳಿದ್ದಕ್ಕೆ ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಸಿದರು. ನನಗೆ ಪಾಕಿಸ್ತಾನವೇ ಮುಖ್ಯ. ಆದರೆ ಸೇನೆ ಮತ್ತು ಇಲ್ಲಿನ ರಾಜಕಾರಿಣಿಗಳಿಗೆ ನಾನು ಬದುಕಿರುವುದೇ ಬೇಕಿಲ್ಲ. ಇವತ್ತಲ್ಲ ನಾಳೆ ನನ್ನನ್ನು ಸಾಯಿಸುತ್ತಾರೆ' ಎಂದು ಮತ್ತೊಂದು ಕಥೆ ಹೇಳಲು ಶುರು ಮಾಡಿದರು.

ನಂತರದ ದಿನಗಳಲ್ಲಿ ಇಮ್ರಾನ್ ಖಾನ್‌ಗೆ ಬೆಂಬಲ ಘೋಷಿಸಿದ್ದ ಮಿತ್ರ ಪಕ್ಷವು ಬೆಂಬಲ ಹಿಂಪಡೆಯಿತು. ಇಮ್ರಾನ್‌ ಖಾನ್‌ ಸರ್ಕಾರವು ಪತನವಾಯಿತು. ಅಧಿಕಾರ ಕಳೆದುಕೊಂಡ ನಂತರ ಇಮ್ರಾನ್ ಖಾನ್ ಸುಮ್ಮನಿರಲಿಲ್ಲ. ಸಾಕಷ್ಟು ರಾಜಕೀಯ ನಾಟಕಗಳು ನಡೆದವು. ಹೊಸದಾಗಿ ಅಧಿಕಾರಕ್ಕೆ ಬಂದ ಶಹಬಾಜ್ ಷರೀಫ್‌ಗೆ ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡಲೇ ಇಲ್ಲ. ಚುನಾವಣೆಯ ಹೊಸಿಲಲ್ಲಿ ಸಂಕಷ್ಟದಲ್ಲಿದ್ದ ದೇಶದ ಚುಕ್ಕಾಣಿ ಹಿಡಿದಿದ್ದರು ಷರೀಫ್. 2023ರ ಆಗಸ್ಟ್ ತಿಂಗಳಲ್ಲಿ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ನಡೆಯಬೇಕಿತ್ತು. ಆದರೆ ಅಷ್ಟರೊಳಗೆ ಇಮ್ರಾನ್ ಖಾನ್ ಬಂಧನದಂಥ ಮಹತ್ವದ ಬೆಳವಣಿಗೆ ನಡೆದಿದೆ.

ಅಧಿಕಾರದಲ್ಲಿದ್ದಾಗ ಇಮ್ರಾನ್ ಖಾನ್‌ರ ಜನಪ್ರಿಯತೆ ಉತ್ತುಂಗದಲ್ಲಿತ್ತು. ಪದಚ್ಯುತಿಯ ನಂತರ ಜನಪ್ರಿಯರ ಕಾವು ಆರಬಾರದೆಂದು ಇಮ್ರಾನ್ ಖಾನ್ ದೇಶವ್ಯಾಪಿ ಜಾಥಾಗಳನ್ನು ನಡೆಸುತ್ತಲೇ ಇದ್ದರು. ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ನಡಿಗೆ ಜಾಥಾಗಳು ನಡೆದವು. ಅಫ್ಘಾನಿಸ್ತಾನದ ಗಡಿಯಿಂದ ಇಸ್ಲಾಮಾಬಾದ್‌ಗೆ, ಕೆಲವೊಮ್ಮೆ ಕರಾಚಿಯಿಂದ ಇಸ್ಲಾಮಾಬಾದ್‌ಗೆ, ಹಲವು ಬಾರಿ ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಜಾಥಾಗಳು ನಡೆದವು. ನಂತರದ ದಿನಗಳಲ್ಲಿ ಇಮ್ರಾನ್ ಖಾನ್ ಜೈಲ್‌ ಭರೋ ಆಂದೋಲನವನ್ನು ಹೋಲುವ ಚಳವಳಿ ಆರಂಭಿಸಿದ.

ಈ ಚಳವಳಿಗಳ ನೆಪದಲ್ಲಿ ದೊಡ್ಡಮಟ್ಟದಲ್ಲಿ ಸಂಘಟನೆ ಆರಂಭವಾಯಿತು. ಪ್ರತಿಬಾರಿಯೂ ಇಸ್ಲಾಮಾಬಾದ್‌ಗೆ ಜನಜಾಥಾ ತೆಗೆದುಕೊಂಡು ಹೋಗುತ್ತಿದ್ದರು. ಇಂಥ ಜಾಥಾಗಳಲ್ಲಿ ಕೆಲವೊಮ್ಮೆ 20 ಲಕ್ಷದಷ್ಟು ಜನರು ಇಂಥ ಜಾಥಾಗಳಲ್ಲಿ ಪಾಲ್ಗೊಳ್ಳುತ್ತಿದ್ದರು. 'ಇನ್ನೊಂದು ತಿಂಗಳಲ್ಲಿ ಚುನಾವಣೆ ನಡೆಸದಿದ್ದರೆ ಅಸಹಕಾರ ಚಳವಳಿ ಆರಂಭಿಸಲಾಗುವುದು' ಎಂದು ಸರ್ಕಾರವನ್ನು ಪ್ರತಿ ಸಲವೂ ಜಾಥಾಗಳ ನಂತರ ಬೆದರಿಸಲಾಗುತ್ತಿತ್ತು.

ಇಮ್ರಾನ್ ಬೆನ್ನಿಗೆ ನಿಲ್ಲಲಿಲ್ಲ ಸೇನೆ

ಇಮ್ರಾನ್ ವರಸೆಯಿಂದ ಪ್ರಧಾನಿ ಶಹಬಾಜ್ ಷರೀಫ್‌ಗೆ ಆತಂಕವಾಗಿತ್ತು. ಆದರೆ ಸೇನೆ ಇಮ್ರಾನ್ ಬೆಂಬಲಕ್ಕೆ ನಿಲ್ಲಲಿಲ್ಲ. ಹೀಗಾಗಿ ಆಡಳಿತ ನಡೆಸುವವರು ನಿರಾಳರಾದರು. ಈ ನಡುವೆ ಗಮನಿಸಬೇಕಾದ ಮತ್ತೊಂದು ಮುಖ್ಯ ಸಂಗತಿ ಎಂದರೆ ಮಾಜಿ ಪ್ರಧಾನಿ ನವಾಜ್ ಷರೀಫ್ ಮೇಲಿರುವ ಪ್ರಕರಣಗಳು. ಈ ಪ್ರಕರಣಗಳ ವಿಚಾರಣೆ ಪಾಕಿಸ್ತಾನದಲ್ಲಿ ನಡೆಯುತ್ತಿದೆಯಾದರೂ, ಷರೀಫ್ ಈಗ ನೆಲೆಸಿರುವುದು ಲಂಡನ್‌ನಲ್ಲಿ. ಇತ್ತೀಚಿನ ದಿನಗಳಲ್ಲಿ ಈ ಪ್ರಕರಣಗಳ ವಿಚಾರಣೆ ತೀವ್ರತೆ ಕಳೆದುಕೊಂಡಿದೆ. ಇನ್ನು ಕೆಲವು ದಿನಗಳಲ್ಲಿ, ಅಂದರೆ ನಡೆಯುವ ಹೊತ್ತಿಗೆ ಅವು ಬಿದ್ದು ಹೋದರೂ ಆಶ್ಚರ್ಯವಿಲ್ಲ.

ಪಾಕಿಸ್ತಾನದ ವಿದ್ಯಮಾನದ ಬಗ್ಗೆ ಮಾತನಾಡುವಾಗ ಮತ್ತೊಂದು ಪ್ರಮುಖ ಅಂಶವನ್ನು ಗಮನಿಸಬೇಕು. ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ಪಿಪಿಪಿ ಮತ್ತು ಪಿಎಂಎನ್‌ಎಲ್‌ ಪಾರ್ಟಿಗಳು ಪ್ರತ್ಯೇಕವಾಗಿ ಎರಡು ಸಂದರ್ಭದಲ್ಲಿ ಸೇನೆಯ ಬೆಂಬಲ ಪಡೆದುಕೊಂಡು ಸರ್ಕಾರ ನಡೆಸಿದ್ದ ಪಕ್ಷಗಳು. ಕಳೆದ 40 ವರ್ಷಗಳಿಂದ ಪರಸ್ಪರ ಸೆಣೆಸಾಡುತ್ತಿದ್ದ ಎದುರಾಳಿಗಳಂತಿದ್ದ ಪಕ್ಷಗಳು ಇಮ್ರಾನ್ ಎದುರು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದು ವಿಶೇಷ. ಚುನಾವಣೆಗೆ ನಾಲ್ಕೈದು ತಿಂಗಳು ಇದೆ ಎನ್ನುವಾಗ ಮಾಡಿಕೊಂಡ ಮೈತ್ರಿ, ರಚನೆಯಾದ ಸರ್ಕಾರವಿದು. ಈಗ ಚುನಾವಣೆ ಎದುರಿಸುವುದು ಹೇಗೆ ಎಂಬ ಪ್ರಶ್ನೆ ಎರಡೂ ಪಕ್ಷಗಳ ನಾಯಕರಿಗೆ ಇದೆ.

ಈ ವಿಚಾರ ಇಮ್ರಾನ್‌ಖಾನ್‌ಗೂ ಗೊತ್ತಿಲ್ಲ ಎಂದಲ್ಲ. 'ನನ್ನನ್ನು ಬಂಧಿಸುತ್ತಾರೆ, ಕೊಲ್ಲುತ್ತಾರೆ. ಇವರಿಗೆ ಪ್ರಾಮಾಣಿಕರು ಬೇಡ. ಭ್ರಷ್ಟರು ಬೇಕು' ಎಂದೇ ಹೇಳಿಕೊಂಡು ಇಮ್ರಾನ್ ಖಾನ್ ತಿರುಗುತ್ತಿದ್ದಾರೆ. ತನ್ನ ಪಕ್ಷ ಪಿಟಿಐ ಅಧಿಕಾರದಲ್ಲಿರುವ ನಾಲ್ಕೂ ಪ್ರಾಂತ್ಯಗಳಲ್ಲಿ ತನ್ನ ಪಕ್ಷದ ಜನಪ್ರತಿನಿಧಿಗಳಿಗೆ ರಾಜೀನಾಮೆ ಕೊಡಲು ಸೂಚಿಸಿದ. ಪ್ರಾಂತ್ಯಗಳಲ್ಲಿ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರೂ ಚುನಾವಣಾ ಆಯೋಗ ಇಮ್ರಾನ್ ಮಾತು ಕೇಳಲಿಲ್ಲ. 'ಸದ್ಯಕ್ಕೆ ಚುನಾವಣೆ ನಡೆಸಲು ಸಾಧ್ಯವಿಲ್ಲ' ಎಂದು ಆಯೋಗವು ತನ್ನ ನಿಲುವು ಸ್ಪಷ್ಟಪಡಿಸಿತು.

ಚುನಾವಣಾ ಆಯೋಗವು ತನ್ನ ಮಾತು ಕೇಳದಿರುವುದನ್ನೂ ಇಮ್ರಾನ್ ಖಾನ್ ತನ್ನ ಪರವಾಗಿ ತಿರುಗಿಸಿಕೊಂಡ. ತನ್ನ ಮಾತು ಕೇಳದಿರುವುದನ್ನೇ ಪ್ರಚಾರದ ವಿಷಯವಾಗಿಸಿಕೊಂಡ. ಲಾಹೋರ್ ಹೈಕೋರ್ಟ್ ಸಹ ಇಮ್ರಾನ್‌ನ ಮನವಿಯನ್ನು ಪುರಸ್ಕರಿಸಿ ಚುನಾವಣೆ ನಡೆಸುವಂತೆ ಸೂಚಿಸಿತು. ಕೇಂದ್ರ ಸರ್ಕಾರವು ಸುಪ್ರಿಂಕೋರ್ಟ್‌ಗೆ ಹೋಗಿ ಅವಧಿ ವಿಸ್ತರಣೆಗೆ ಅವಕಾಶ ಕೋರಿತು. ನ್ಯಾಯಾಲಯಗಳಲ್ಲಿ ಈ ಹೋರಾಟ ನಡೆಯುತ್ತಿದ್ದರೆ ಪಂಜಾಬ್ ಪ್ರಾಂತ್ಯದಲ್ಲಿ ಚಳವಳಿ ನಿರಂತರವಾಗಿ ನಡೆಯುತ್ತಿತ್ತು. ಉರ್ದುವಿನಲ್ಲಿ 'ಜಲ್ಸಾ' ಎನ್ನುವ ಪರಿಕಲ್ಪನೆ ಇದೆ. ಇದನ್ನೇ ಇಮ್ರಾನ್ ರಾಜಕೀಯ ತಂತ್ರವಾಗಿಸಿಕೊಂಡರು.

ಇಮ್ರಾನ್‌ಗೆ ಗುಂಡೇಟು, ಹಲವು ಅನುಮಾನ

ಪ್ರತಿದಿನ 10 ರಿಂದ 20 ಕಿಲೋಮೀಟರ್‌ ಜಾಥಾ ನಡೆಸುವುದು. ಅಲಲ್ಲಿ ನಿಂತು ಜನಗಳ ಜೊತೆ ಮಾತನಾಡಿ, ಸಣ್ಣ ಸಭೆಗಳನ್ನು ನಡೆಸಿ ಮುಂದಕ್ಕೆ ಹೋಗುವುದು. ಜಲ್ಸಾಗಳನ್ನು ಮಾಡುತ್ತಲೇ ಇಸ್ಲಾಮಾಬಾದ್‌ ತಲುಪುವುದು ಇಮ್ರಾನ್ ಖಾನ್ ಉದ್ದೇಶವಾಗಿತ್ತು. ಆದರೆ ಮಾರ್ಗ ಮಧ್ಯೆ ಯಾರೋ ಅವರನ್ನು ಶೂಟ್ ಮಾಡಿದರು. ಶೂಟ್‌ ಮಾಡಿದವರು ಯಾರು ಎನ್ನುವ ಬಗ್ಗೆಯೂ ಗೊಂದಲಗಳಿದ್ದವು. ಅವನಿಗೆ ಯಾರಾದರೂ ನಿಜವಾಗಿಯೂ ಶೂಟ್ ಮಾಡಿದರಾ? ಗಾಯವಾಗಿದ್ದು ನಿಜವೇ ಅದು ಎಂಥ ಗಾಯ ಎಂಬ ಬಗ್ಗೆ ಯಾವುದೇ ಸಮರ್ಪಕ ಮಾಹಿತಿ ಲಭ್ಯವಿಲ್ಲ. ಈ ಪ್ರಕರಣದಲ್ಲಿ ಇಷ್ಟು ಅನುಮಾನಗಳಿರಲು ಕಾರಣವಿದೆ.

ಇಮ್ರಾನ್‌ಖಾನ್‌ಗೆ ಗುಂಡೇಟು ಬಿದ್ದಾಗ ಅವರು ಅಲ್ಲೇ ಹತ್ತಿರದಲ್ಲಿದ್ದ ಆಸ್ಪತ್ರೆಗೆ ಹೋಗಲಿಲ್ಲ. ಅಲ್ಲಿಂದ 200 ಕಿಲೋಮೀಟರ್‌ ದೂರದಲ್ಲಿರುವ ತನ್ನದೇ ಕ್ಯಾನ್ಸರ್‌ ಆಸ್ಪತ್ರೆಗೆ ಹೋದ. ಗಾಯಗಳಿಗೆ ಸಂಬಂಧಿಸಿದಂತೆ ಯಾವುದೇ ಅಟಾಪ್ಸಿ ರಿಪೋರ್ಟ್‌ ಬಹಿರಂಗಪಡಿಸಲಿಲ್ಲ. ಈ ಪ್ರಕರಣವನ್ನು ಕೆಲವರು ಅನುಮಾನಿಸಿದರು. ಆದರೆ ಇಮ್ರಾನ್ ಬೆಂಬಲಿಗರು ನಂಬಿದರು. ಪಾಕಿಸ್ತಾನ ಈಗ ರಾಜಕೀಯವಾಗಿ ಒಡೆದಿದೆ. ಅಲ್ಲೀಗ ಇಮ್ರಾನ್ ಖಾನ್ ಹೇಳಿದ್ದನ್ನೆಲ್ಲಾ ನಂಬುವ ಒಂದು ಗುಂಪು ಇದ್ದರೆ, ಇಮ್ರಾನ್ ಹೇಳಿದ್ದನ್ನೆಲ್ಲಾ ಇರೋಧಿಸುವ ಮತ್ತೊಂದು ಗುಂಪು ಇದೆ. ಇಡೀ ಪಾಕಿಸ್ತಾನ ಎರಡು ಗುಂಪುಗಳಾಗಿ ಒಡೆದಿದೆ.

'ಸ್ವತಃ ದೇವರೇ ಪಾಕಿಸ್ತಾನವನ್ನು ಉದ್ಧಾರ ಮಾಡಲು ಇಮ್ರಾನ್‌ ಖಾನ್‌ನನ್ನು ಕಳಿಸಿದ್ದಾನೆ' ಎಂದು ನಂಬುವವರದು ಒಂದು ಗುಂಪು. 'ಅವನೊಬ್ಬ ಗುಗ್ಗು, ರೌಡಿ, ಅವನಿಗೆ ಏನೂ ಗೊತ್ತಿಲ್ಲ' ಎಂದು ಹೇಳುವ ಮನೋಭಾವದ ಮತ್ತೊಂದು ವರ್ಗ ಪಾಕಿಸ್ತಾನದಲ್ಲಿದೆ. 'ಚುನಾವಣೆ ಹತ್ತಿರ ಇರುವಾಗ ಸಹಾನುಭೂತಿ (ಸಿಂಪತಿ) ಕಡಿಮೆಯಾಗಬಾರದು. ತನ್ನ ಬಂಧನವಾದರೆ ಒಳ್ಳೆಯದು' ಎಂಬ ಅಭಿಪ್ರಾಯ ಇಮ್ರಾನ್‌ ಖಾನ್‌ಗೂ ಇತ್ತು. ಈಗ ಆಗಿರುವ ಬಂಧನವು ರಾಜಕೀಯವಾಗಿ ಇಮ್ರಾನ್‌ಗೆ ಪೂರಕ. ಈಗ ಪಾಕಿಸ್ತಾನದ ಸೇನೆಯನ್ನು ಎಲ್ಲರೂ ಕೀಳಾಗಿ ಕಾಣುತ್ತಿದ್ದಾರೆ. ಆದರೆ ಇದು ಅಲ್ಲಿನ ಸೇನೆಗೆ ಹೊಸದೇನೂ ಅಲ್ಲ. ಇಮ್ರಾನ್‌ಖಾನ್‌ಗಿಂತಲೂ ಜನಪ್ರಿಯವಾಗಿದ್ದ ಎಷ್ಟೋ ಜನರನ್ನು ಪಾಕ್ ಸೇನೆ ನಿರ್ವಹಿಸಿದೆ. ಅಧಿಕಾರದಿಂದ ದೂರ ತಳ್ಳಿದೆ.

ಪಾಕ್ ಸೇನಗೆ ಇಮ್ರಾನ್ ಒಂದು ಲೆಕ್ಕವೇ

ಪಾಕಿಸ್ತಾನದ ದಿವಂಗತ ಪ್ರಧಾನಿ ಬೆನಜೀರ್‌ ಭುಟ್ಟೋ ಅವರ ತಂದೆ ಜುಲ್ಫಿಕರ್ ಅಲಿ ಭುಟ್ಟೋ ಅವರ ಜನಪ್ರಿಯತೆ ಉತ್ತುಂಗದಲ್ಲಿತ್ತು. ಅಂಥವರನ್ನೇ ಅಲ್ಲಿನ ಸೇನೆ ಗಲ್ಲಿಗೇರಿಸಿ ದಕ್ಕಿಸಿಕೊಂಡಿತು. ಅದರ ಮುಂದೆ ಇಮ್ರಾನ್ ಖಾನ್ ಇಮ್ರಾನ್‌ ಖಾನ್‌ರ ಇಂದಿನ ಜನಪ್ರಿಯತೆ ಏನೇನೂ ಅಲ್ಲ. ಇಮ್ರಾನ್‌ರಂಥ ನಾಯಕರನ್ನು ನಿರ್ವಹಿಸುವ ಸಾಮರ್ಥ್ಯ ಪಾಕಿಸ್ತಾನದ ಸೇನೆಗೆ ಇದೆ. ಚುನಾವಣೆ ನಡೆದರೆ ಇಮ್ರಾನ್‌ ಖಾನ್‌ರ ಪಿಟಿಐ ಬಹುಮತ ಪಡೆದು ಸ್ವತಂತ್ರವಾಗಿ ಸರ್ಕಾರ ನಡೆಸಬಹುದು. ಆದರೆ ಚುನಾವಣೆಯನ್ನೇ ನಡೆಸದಿದ್ದರೆ, ಚುನಾವಣೆ ನಡೆದರೂ ಇಮ್ರಾನ್ ಖಾನ್‌ಗೆ ಸ್ಪರ್ಧಿಸಲು ಅವಕಾಶ ಕೊಡದಿದ್ದರೆ, ಯಾವುದಾದರೂ ನ್ಯಾಯಾಲಯ ಇಮ್ರಾನ್‌ಗೆ ಜೀವಾವಾಧಿ ಅಥವಾ ಗಲ್ಲು ಶಿಕ್ಷೆ ಕೊಟ್ಟರೆ... ಅಲ್ಲಿಗೆ ಎಲ್ಲವೂ ಮುಗಿದಂತೆ ಆಗುತ್ತದೆ.

ಪಾಕಿಸ್ತಾನದಲ್ಲಿ ಪಕ್ಷ ರಾಜಕಾರಣ ಎನ್ನುವುದು ಪರೋಕ್ಷವಾಗಿ ವ್ಯಕ್ತಿ ಕೇಂದ್ರಿತ ರಾಜಕಾರಣವೂ ಹೌದು. ಒಂದು ಪಕ್ಷದ ಮುಖ್ಯಸ್ಥನನ್ನು ಮುಗಿಸಿದರೆ ಆ ಪಕ್ಷವೇ ತಲೆಯಿಲ್ಲದ ಹಾವಿನಂತೆ ಆಗುತ್ತದೆ. ಅಂಥ ಪಕ್ಷ ಮತ್ತೊಮ್ಮೆ ತಲೆಎತ್ತುವುದೂ ಕಷ್ಟ. ಇಮ್ರಾನ್‌ ಖಾನ್‌ರನ್ನು ಸಕ್ರಿಯ ರಾಜಕಾರಣದಿಂದ ದೂರ ಮಾಡಿದ ನಂತರದ ಸುಮಾರು ಒಂದು ತಿಂಗಳು ಪಾಕಿಸ್ತಾನದಲ್ಲಿ ಅಂತರ್ಯುದ್ಧದಂಥ ವಾತಾವರಣ ನಿರ್ಮಾಣವಾಗಬಹುದು. ಆಮೇಲೆ ಎಲ್ಲವೂ ತಣಿಯುತ್ತದೆ ಎನ್ನುವುದು ಅಲ್ಲಿನ ಸೇನಾಧಿಕಾರಿಗಳ ಆಲೋಚನೆ.

ಸದ್ಯದ ಮಟ್ಟಿಗೆ ಪಾಕಿಸ್ತಾನದಲ್ಲಿ ಸೇನೆಯ ಬಗ್ಗೆ ಸದಭಿಪ್ರಾಯ ಇಲ್ಲ. ಲಾಹೋರ್‌ನಲ್ಲಿ ಕೋರ್‌ ಕಮಾಂಡರ್‌ ಆಫೀಸ್ ಆವರಣದಲ್ಲಿರುವ ಅಧಿಕಾರಿಗಳ ಬಂಗಲೆಗೆ ಬೆಂಕಿ ಹಚ್ಚಿದ್ದಾರೆ. ಅಫ್ಘಾನಿಸ್ತಾನ ಗಡಿ, ದೇಶದ ವಿವಿಧೆಡೆ ಇರುವ ದಂಡು ಪ್ರದೇಶಗಳ (ಕಂಟೋನ್‌ಮೆಂಟ್) ಮೇಲೆ ಜನರು ದಾಂದಲೆ ಮಾಡುತ್ತಿದ್ದಾರೆ. ಪಂಜಾಬ್‌ ಸೇರಿದಂತೆ ಇತರೆಡೆಯೂ ಇಂಥದ್ದೇ ಬೆಳವಣಿಗೆಗಳು ನಡೆದಿವೆ.

ಎಲ್ಲರಿಗೂ ಅಧಿಕಾರದ ಆಸೆ

ಪಾಕಿಸ್ತಾನದ ಆಡಳಿತಕ್ಕೆ ಟಿಟಿಪಿ ಒಂದೇ ತಲೆನೋವಲ್ಲ. ಇನ್ನೂ ಹಲವು ಸಂಘಟನೆಗಳು, ಶಕ್ತಿಗಳು ಅಲ್ಲಿನ ಅಧಿಕಾರ ಸ್ಥಾನವನ್ನು ನಿಯಂತ್ರಿಸುತ್ತಿವೆ. ಎಲ್ಲವನ್ನೂ ನಿರ್ವಹಿಸಬೇಕಿರುವ ಪ್ರಧಾನಿ ಶಹಬಾಜ್ ಷರೀಫ್ ತುರ್ತಾಗಿ ಏನು ಮಾಡಬೇಕೋ ಅದನ್ನು ಮಾಡುತ್ತಿಲ್ಲ. ಅಂದಹಾಗೆ ಇವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ತಮ್ಮ. ಆಗ ಅಣ್ಣನಂತೂ ಅಧಿಕಾರ ಪೂರ್ತಿಯಾಗಿ ಅನುಭವಿಸಲಿಲ್ಲ. ಈಗ ನಾನಾದರೂ ಸಾಧ್ಯವಾದಷ್ಟು ದಿನ ಅಧಿಕಾರ ಅನುಭವಿಸುತ್ತೇನೆ ಎಂಬ ಧೋರಣೆಗೆ ಇವರು ಬಂದಂತೆ ಇದೆ.

ಸೇನೆಯಿಂದ ಒಳ್ಳೆಯವರು ಎನ್ನಿಸಿಕೊಂಡಿರುವ ಶಹಬಾಜ್ ಷರೀಫ್ ಅವರನ್ನು ಜನರು ಇಷ್ಟಪಡುತ್ತಿಲ್ಲ. ಪಾಕಿಸ್ತಾನದಲ್ಲಿ ಮತ್ತೊಮ್ಮೆ ಚುನಾವಣೆ ನಡೆದರೆ ಅವರು ಅಧಿಕಾರಕ್ಕೆ ಬರುವುದೂ ಕಷ್ಟ. ಇದು ಶಹಬಾಜ್ ಷರೀಫ್‌ಗೂ ಗೊತ್ತು. ಹೀಗಾಗಿ ಅವರಿಗೆ ಇದ್ದಷ್ಟು ಅಧಿಕಾರದಲ್ಲಿ ಇರುವುದು ಮುಖ್ಯ ಎನಿಸುತ್ತಿದೆಯೇ ವಿನಃ, ಪಾಕಿಸ್ತಾನವನ್ನು ಉಳಿಸಬೇಕು ಎನ್ನುವುದಲ್ಲ. "ದೇಶವಂತೂ ಮುಳುಗುತ್ತಿದೆ. ನನ್ನೊಬ್ಬನಿಂದ ಉಳಿಸಲು ಸಾಧ್ಯವೇ" ಎನ್ನುವ ಧೋರಣೆಗೆ ಅವರು ಬಂದಂತೆ ಇದೆ.

(ಮುಂದಿನ ಭಾಗದಲ್ಲಿ: ಹೊಡೆತದ ಮೇಲೆ ಹೊಡೆತಕ್ಕೆ ದೇಶವೇ ಕಂಗಾಲು)

ಮಾಹಿತಿ: ಕಿಶೋರ್ ನಾರಾಯಣ್, ನಿರೂಪಣೆ: ರೇಷ್ಮಾ ಶೆಟ್ಟಿ

(ಕಿಶೋರ್ ನಾರಾಯಣ್ ಬೆಂಗಳೂರು ನಿವಾಸಿ. ಅಂತರರಾಷ್ಟ್ರೀಯ ವಿದ್ಯಮಾನಗಳಲ್ಲಿ ಆಸಕ್ತರು. ಇಂಟರ್‌ನ್ಯಾಷನಲ್ ರಿಲೇಶನ್ಸ್ ವಿಷಯವಾಗಿ ಅಮೆರಿಕದ ವಾಷಿಂಗ್‌ಟನ್ ಡಿಸಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ)

IPL_Entry_Point