ಕನ್ನಡ ಸುದ್ದಿ  /  Nation And-world  /  Pakistan Crisis Not Only Politicians Military Also Didnt Like Peace Impact Of Pakistan Politics Pak Economic Crisis Dmg

Pakistan Crisis: ಸೇನೆಯ ರಾಜಕಾರಣ; ಪಾಕಿಸ್ತಾನದಲ್ಲಿ ಬಿಕ್ಕಟ್ಟು ಹೆಚ್ಚಾದ ನಂತರ ಭಾರತದ ಗಡಿ ಶಾಂತ, ಅಫ್ಘಾನಿಸ್ತಾನದಿಂದ ಗುಂಡು ಹಾರಾಟ

Pakistan Army: ಭಾರತ ಮತ್ತು ಪಾಕಿಸ್ತಾನಗಳನ್ನು ಹೋಲಿಸುವಾಗ ಸೇನೆಯ ಬಗ್ಗೆ ಪ್ರಸ್ತಾಪವಾಗುತ್ತೆ. ಪಾಕಿಸ್ತಾನದಲ್ಲಿ ಸರ್ವಶಕ್ತವಾಗಿರುವ ಸೇನೆಗೆ ಈಗ ಅಲ್ಲಿ ಶಾಂತಿ ನೆಲೆಸುವುದು ಬೇಕಿಲ್ಲ. ಏಕೆ ಹೀಗೆ? ಈ ಬರಹದಲ್ಲಿ ಉತ್ತರಿಸಿದ್ದಾರೆ ಕಿಶೋರ್ ನಾರಾಯಣ್. ಇದು ಪಾಕಿಸ್ತಾನ ಕುರಿತ ವಿಶೇಷ ಬರಹದ 3ನೇ ಕಂತು.

ಪಾಕಿಸ್ತಾನದಲ್ಲಿ ಅಸ್ಥಿರತೆ ದೊಡ್ಡ ಸಮಸ್ಯೆಯಾಗಿದೆ (ಸಂಗ್ರಹ ಚಿತ್ರ)
ಪಾಕಿಸ್ತಾನದಲ್ಲಿ ಅಸ್ಥಿರತೆ ದೊಡ್ಡ ಸಮಸ್ಯೆಯಾಗಿದೆ (ಸಂಗ್ರಹ ಚಿತ್ರ)

Pakistan Politics: ಇಮ್ರಾನ್ ಖಾನ್ ಬಂಧನ (Imran Khan Arrest) ಹಾಗೂ ಬಿಡುಗಡೆ ಪ್ರಹಸನದ ನಂತರ ಪಾಕಿಸ್ತಾನದ (Pakistan) ಸೇನೆಗೂ ಇಂಥದ್ದೊಂದು ಗಲಾಟೆ ಆಗುವುದು ಬೇಕಿತ್ತು. ರಾಜಕಾರಿಣಿಗಳು ದೇಶವನ್ನು ಹಾಳು ಮಾಡುತ್ತಾರೆ. ದೇಶವನ್ನು ರಕ್ಷಿಸುವುದೇ ನಾವು. ಹಾಗಾಗಿ ಅಧಿಕಾರ ನಮ್ಮ ಕೈಲೇ ಇರಬೇಕು. ರಾಜಕೀಯ ಪಕ್ಷವನ್ನು ಅಧಿಕಾರಕ್ಕೆ ತರುವ, ಅಧಿಕಾರದಿಂದ ಇಳಿಸುವ ಸಾಮರ್ಥ್ಯ ನಮಗಿದೆ. ಪಾಕಿಸ್ತಾನವನ್ನು ಕಾಪಾಡಲೆಂದು ಸೇನೆಯು ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ದೇಶಭಕ್ತ ಜನರು ಅದನ್ನು ಮರುಮಾತಿಲ್ಲದೆ ಪಾಲಿಸಬೇಕು ಎಂದು ಸೇನಾಧಿಕಾರಿಗಳು ಸಾರಿ ಹೇಳುತ್ತಾರೆ. ಸೇನೆಯನ್ನು ಬೆಂಬಲಿಸುವುದು ದೇಶಭಕ್ತಿ ಎಂದು ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತದೆ. 'ನಾಯಕತ್ವದ ಕೊರತೆಯಿಂದ ದೇಶ ಅತಂತ್ರ ಸ್ಥಿತಿ ಬೀಳಬಾರದು ಎನ್ನುವ ಕಾರಣಕ್ಕೆ ನಾವು ಆಡಳಿತ ಚುಕ್ಕಾಣಿ ಹಿಡಿದೆವು. ನಮಗೇನೂ ಇದು ಇಷ್ಟ ಇರಲಿಲ್ಲ. ಆದರೆ ಪಾಕಿಸ್ತಾನದ ಒಳಿತಿಗಾಗಿ, ಭವಿಷ್ಯಕ್ಕಾಗಿ ದಾಂದಲೆ ಮನೋಭಾವದವರನ್ನು ಮಟ್ಟಹಾಕಬೇಕಿದೆ' ಎಂದು ಜನರನ್ನು ನಂಬಿಸಲು ಸೇನೆ ಪ್ರಯತ್ನಿಸುತ್ತದೆ. ಈ ಹಿಂದೆ ನಂಬಿದಂತೆ ಈ ಬಾರಿಯೂ ಜನರು ನಂಬುತ್ತಾರೆ.

ಈ ಪ್ರಚಾರಗಳು ಒಂದು ಸ್ವರೂಪಕ್ಕೆ ಬಂದ ನಂತರ ಇಮ್ರಾನ್ ಖಾನ್ ಬೆಂಬಲಿಗರನ್ನು (ಪಿಟಿಐ ಕಾರ್ಯಕರ್ತರು) ದೇಶದ್ರೋಹಿಗಳು ಎಂದು ಬಿಂಬಿಸುತ್ತಾರೆ. ಅಂಥವರಿಗೆ ಗಲಭೆಕೋರರು ಎಂಬ ಹಣೆಪಟ್ಟಿ ಕಟ್ಟಿ ಜೈಲಿಗೆ ಅಟ್ಟುತ್ತಾರೆ. ಇವರನ್ನು ಹೀಗೆಯೇ ಬಿಟ್ಟರೆ ದೇಶವನ್ನೇ ಸುಡುತ್ತಾರೆ. ದೇಶವನ್ನು ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಕರ್ಫ್ಯೂ, ಲಾಠಿಚಾರ್ಜ್, ಗೋಲೀಬಾರ್ ಸಾಮಾನ್ಯವಾಗುತ್ತವೆ.

ಈ ನಡುವೆ ಪಾಕಿಸ್ತಾನದಲ್ಲಿ ಸೇನೆಗೂ ಜನಪ್ರಿಯತೆ ತುಸು ಹೆಚ್ಚಾಗಿದೆ. ಕಳೆದ ಮೂರ್ನಾಲ್ಕು ವರ್ಷದಲ್ಲಿ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯಲ್ಲಿ ಕಳೆದ ಎರಡು ವರ್ಷಗಳಿಂದ ಗುಂಡಿನ ದಾಳಿ ನಡೆಯುತ್ತಿಲ್ಲ. ಈ ಸಂಬಂಧ ಭಾರತ ಮತ್ತು ಪಾಕ್ ಭದ್ರತಾ ಸಲಹೆಗಾರರ ನಡುವೆ ದುಬೈನಲ್ಲಿ ಮಾತುಕತೆ ನಡೆದು ಅನೌಪಚಾರಿಕೆ ಒಪ್ಪಂದಕ್ಕೆ ಬರಲಾಗಿದೆ. ಆದರೆ ಈ ಕುರಿತು ಅಧಿಕೃತವಾಗಿ ಎರಡೂ ಸರ್ಕಾರಗಳು ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಭಾರತಕ್ಕಂತೂ ಈ ಬೆಳವಣಿಗೆಯಿಂದ ಅನುಕೂಲವೇ ಆಯಿತು.

ಗಡಿಯಲ್ಲಿ ಸೇನಾ ನಿಯೋಜನೆ ತಗ್ಗಿಸಿದ ಭಾರತ ಸರ್ಕಾರ ಸೈನಿಕರನ್ನು ಒಳಪ್ರದೇಶಗಳಲ್ಲಿ ಭಯೋತ್ಪಾದಕರನ್ನು ಮಟ್ಟಹಾಕುವ ಕಾರ್ಯಾಚರಣೆಗೆ ಬಳಸಿಕೊಂಡಿತು. ಈಗ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವೂ ಆಗಿರುವುದರಿಂದ ಅಭಿವೃದ್ಧಿ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನಕ್ಕೆ ತರಲು ಈ ಕ್ರಮ ಸಹಕಾರಿಯಾಯಿತು.

ಆದರೆ ಶಾಂತಿಯ ಪ್ರಯೋಜನೆ ಪಾಕಿಸ್ತಾನಕ್ಕೆ ಸಿಕ್ಕಿಲ್ಲ. ಪಾಕಿಸ್ತಾನಕ್ಕೆ ಪೂರ್ವದಲ್ಲಿರುವ ಭಾರತದ ಗಡಿ ಸದಾ ಉದ್ವಿಗ್ನ ಸ್ಥಿತಿಯಲ್ಲಿ ಇರುತ್ತಿತ್ತು. ವಾಯವ್ಯ ಗಡಿಯಾದ ಅಫ್ಘಾನಿಸ್ತಾನದಲ್ಲಿ ಶಾಂತಿ ಇರುತ್ತಿತ್ತು. ಆದರೆ ಈಗ ಅಲ್ಲಿನ ಪರಿಸ್ಥಿತಿ ತದ್ವಿರುದ್ಧವಾಗಿದೆ. ಪಾಕಿಸ್ತಾನದ ಸೈನಿಕರು ಈ ಭಾರತದ ಗಡಿಗೆ ಬರಲು ಹಾತೊರೆಯುತ್ತಾರೆ. ಏಕೆಂದರೆ ಅನೌಪಚಾರಿಕೆ ಒಪ್ಪಂದ ಇರುವುದರಿಂದ ಗುಂಡು ಹಾರಿಸುವಂತಿಲ್ಲ, ಜೀವಭಯವೂ ಇಲ್ಲ. ಆದರೆ ಅಫ್ಘಾನಿಸ್ತಾನ ಗಡಿಯಲ್ಲಿ ಪರಿಸ್ಥಿತಿ ಬದಲಾವಣೆಯಾಗಿದೆ.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು ಇಸ್ಲಾಮಿಕ್ ದೇಶಗಳೇ ಆದರೂ ಎರಡೂ ದೇಶಗಳ ಆಚರಣೆ ವಿಧಾನ ಬೇರೆಬೇರೆ. ತಾಲಿಬಾನಿಗಳು ಕಟ್ಟರ್ ಇಸ್ಮಾಮ್ ಪಂಥ ಅನುಸರಿಸುತ್ತಾರೆ. ಅವರ ಲೆಕ್ಕದಲ್ಲಿ ಪಾಕಿಸ್ತಾನದ ಜನರು ಅನುಸರಿಸುತ್ತಿರುವ ಇಸ್ಲಾಂ ಸರಿಯಾದುದಲ್ಲ. ಅಪಘಾನಿಸ್ತಾನದಲ್ಲಿ ನಮಗೆ ಹೇಗೆ ಬೇಕೋ ಹಾಗೆ ಸರ್ಕಾರ ಮಾಡಿ ಆಗಿದೆ, ಇಪ್ಪತ್ತು ವರ್ಷಗಳ ಹಿಂದೆಯೇ ಈ ರೀತಿ ಸರ್ಕಾರ ಮಾಡಿದ್ದೆವು, ಆದರೆ ಅಮೆರಿಕಾದವರು ಬಂದು ಎಲ್ಲವನ್ನೂ ಹಾಳು ಮಾಡಿದ್ರು, ಕೊನೆಗೆ ಇಪ್ಪತ್ತು ವರ್ಷ ಆದ ಮೇಲೆ ಅವರು ಹೋದರು. ಈಗ ಈ ದೇಶ ನಮ್ಮದು, ನಾವು ಸುಮ್ಮನೆ ಇರುವುದಿಲ್ಲ ನಾವು ಪಕ್ಕದ ದೇಶಕ್ಕೂ ಹೋಗುತ್ತೇವೆ, ಪಕ್ಕದ ದೇಶ ಅಂದರೆ ಪಾಕಿಸ್ತಾನ, ಹೇಗೆ ಹೋಗ್ತೀವಿ ಎಂದು ಸವಾಲು ಹಾಕುತ್ತಿದ್ದಾರೆ. ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ತೆಹ್ರೀಕ್ ಎ ತಾಲೀಬಾನ್ (ಟಿಟಿಪಿ) ಹೆಸರಿನ ಧಾರ್ಮಿಕ ತೀವ್ರವಾದಿ ಸಂಘಟನೆ ಇದೀಗ ಶಕ್ತಿ ಪಡೆದುಕೊಳ್ಳುತ್ತಿದೆ.

ಪಾಕಿಸ್ತಾನದ ಖೈಬರ್ ಪಕ್ತುಂಖ್ವಾ ಪ್ರಾಂತ್ಯದಲ್ಲಿ ಅಫ್ಘಾನಿಸ್ತಾನದಲ್ಲಿರುವ ಸಮುದಾಯಗಳೇ ಹೆಚ್ಚಿನ ಹೆಚ್ಚಾಗಿವೆ. ಈ ಸಮುದಾಯಗಳಿಗೆ ಅಫ್ಘಾನಿಸ್ತಾದ ಕಡೆಗೆ ಒಲವು ಹೆಚ್ಚು. ಇಲ್ಲಿ ಮತ್ತೊಂದು ಅಂಶವನ್ನು ಪ್ರಸ್ತಾಪಿಸಬೇಕು. ಅಫ್ಘಾನಿಸ್ತಾನದವರು ಇಂದಿಗೂ ಬ್ರಿಟಿಷರು ರೂಪಿಸಿರುವ ಗಡಿಯನ್ನು ಒಪ್ಪಿಕೊಂಡಿಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿಯನ್ನು ಅಪಘಾನಿಸ್ತಾದವರು ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ನೂರಾರು ವರ್ಷಗಳ ಇತಿಹಾಸದ ಕಾರಣವಿದೆ. ಪಠಾಣ ಸಮುದಾಯದವರನ್ನು ಯುದ್ಧದಲ್ಲಿ ಸೋಲಿಸಿದ ಬ್ರಿಟಿಷರು ಈ ಗಡಿಯನ್ನು ನಿರ್ಧರಿಸಿದರು. ಹೀಗಾಗಿ ಬಿಟ್ರಿಷರು ಅವಿಭಾಜಿತ ಭಾರತದಿಂದ ದೂರ ಸರಿದು 75 ವರ್ಷಗಳೇ ಆದರೂ ಈ ಗಡಿಯನ್ನು ಅಫ್ಘನ್ನರು ಒಪ್ಪಲಿಲ್ಲ.

ದೇಶ ವಿಭಜನೆಯಾದ ಆರಂಭದಲ್ಲಿ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದಿಂದ ಯಾವುದೇ ತೊಂದರೆ ಇರಲಿಲ್ಲ. ಹೀಗಾಗಿ ಗಡಿಯನ್ನು ಮುಕ್ತವಾಗಿ ಇರಿಸಿಕೊಂಡರು. ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸಲು ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದ್ದ ಟಿಟಿಪಿ ಇಷ್ಟಕ್ಕೇ ಸುಮ್ಮನಾಗಲಿಲ್ಲ. ಅಫ್ಘಾನಿಸ್ತಾನದ ಹಿತಾಸಕ್ತಿಗಳು ಮತ್ತು ಕಟ್ಟರ್ ಇಸ್ಲಾಂ ನೀತಿಗಳನ್ನು ಹೇರಬೇಕು ಎಂದು ಆಗ್ರಹಿಸಿ ಪಾಕಿಸ್ತಾನದ ಸೇನೆಯ ಮೇಲೆ ಸಂಘರ್ಷಕ್ಕೆ ಇಳಿಯುತ್ತಿದೆ. ಪಾಕಿಸ್ತಾನದಲ್ಲಿ ಸರ್ಕಾರದ, ಸಾರ್ವಭೌಮ ಅಧಿಕಾರದ ಸಂಕೇತಗಳನ್ನು ಗುರಿಯಾಗಿಸಿ ಬಾಂಬುಗಳನ್ನು ಎಸೆಯುತ್ತಿದ್ದಾರೆ.

ಪಾಕಿಸ್ತಾನಕ್ಕೀಗ ಅಫ್ಘಾನಿಸ್ತಾನವೇ ತಲೆನೋವು

ಸದ್ಯದ ಮಟ್ಟಿಗೆ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನವೇ ದೊಡ್ಡ ತಲೆನೋವು. ತಾಲಿಬಾನ್‌ ಆಡಳಿತ ಬರಲು ನೆರವಾದ ತಪ್ಪಿನ ಪ್ರತಿಫಲವನ್ನು ಪಾಕ್ ಆಡಳಿತ ಈಗ ಅನುಭವಿಸುತ್ತಿದೆ. ಅಫ್ಘಾನಿಸ್ತಾನದ ಸಂಪೂರ್ಣ ಗಡಿಯನ್ನು ಮುಚ್ಚಲು ಮುಂದಾಗಿದ್ದಾರೆ, ತಂತಿಬೇಲಿ ಹಾಕುತ್ತಿದ್ದಾರೆ. ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಉಗ್ರ ಸಂಘನನೆ 'ಟಿಟಿಪಿ'ಗೆ ಇದು ಇಷ್ಟವಾಗುತ್ತಿಲ್ಲ. ಹಾಗೆಂದು ಪಾಕಿಸ್ತಾನದ ಸರ್ಕಾರ ಮತ್ತು ಸೇನೆ ಅವರ ಅಭಿಪ್ರಾಯವನ್ನು ಕೇಳುತ್ತಲೂ ಇಲ್ಲ. ಅಫ್ಘಾನಿಸ್ತಾನದ ಗಡಿ ಸಂಪೂರ್ಣ ಬಂದ್ ಆದರೆ ಕಾಬೂಲ್‌ನಿಂದ ಬರುವ ಸಹಾಯ ನಿಂತು ಹೋಗುತ್ತದೆ ಎನ್ನುವುದು ಟಿಟಿಪಿಯ ಆತಂಕ. ಗಡಿ ಸಂಪೂರ್ಣ ಬಂದ್ ಆಗುವ ಮೊದಲು ಅಲ್ಲಿಂದ ಸಾಧ್ಯವಾದಷ್ಟೂ ಅಫೀಮು, ಬಂದೂಕು ಮತ್ತು ಸ್ಫೋಟಕಗಳನ್ನು ತರಿಸಿಕೊಳ್ಳಬೇಕು ಎಂದು ಟಿಟಿಪಿ ಹವಣಿಸುತ್ತಿದೆ. ಈ ಸರಬರಾಜನ್ನು ನಿರಂತರವಾಗಿ ಉಳಿಸಿಕೊಳ್ಳಬೇಕೆಂದರೆ ರಾಜಕೀಯ ಅಧಿಕಾರ ಬೇಕು. ಅದಕ್ಕಾಗಿ ಸರ್ಕಾರದ ಮೇಲೆ ಪ್ರಭಾವ ಇರುವಂತೆ, ಸಾಧ್ಯವಾದರೆ ತಾನೇ ಸರ್ಕಾರ ರಚಿಸುವಂತೆ ಆಗಲು ಬೇಕಾದ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದೆ.

ಪಾಕ್ ಸ್ಥಿತಿ ವಿಷಮಿಸಿದಷ್ಟೂ ಇಮ್ರಾನ್‌ಗೆ ಅನುಕೂಲ

ಪಾಕಿಸ್ತಾನದ ಹಾಲಿ ಪ್ರಧಾನಿ ಇಮ್ರಾನ್ ಖಾನ್ ಧೋರಣೆಯೂ ಇದಕ್ಕಿಂತಲೂ ಭಿನ್ನವಾಗಿಲ್ಲ. ದೇಶ ಉಳಿಸಬೇಕು ಎನ್ನುವುದು ಅವರ ಇಚ್ಛೆಯಾಗಿದ್ದರೆ ಹೀಗೆ ಆಡಳಿತ ಕುಸಿದು ಬೀಳುವಷ್ಟು ಪ್ರತಿಭಟನೆಗಳನ್ನು ಸಂಘಟಿಸುತ್ತಿರಲಿಲ್ಲ. ಸದ್ಯದಮಟ್ಟಿಗೆ ಪಾಕಿಸ್ತಾನದಲ್ಲಿ ಸರ್ಕಾರದ ವೈಫಲ್ಯದಿಂದ ಜನರು ಸಂಕಷ್ಟ ಅನುಭವಿಸಿದಷ್ಟೂ ಇಮ್ರಾನ್‌ಗೆ ಅನುಕೂಲ. ಹೀಗಾಗಿ ಅವರೂ ದೇಶದಲ್ಲಿ ಸ್ಥಿರತೆ ಮೂಡಲು ಬೇಕಿದ್ದ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲ.

ಅವಕಾಶ ಸಿಕ್ಕಾಗಲೆಲ್ಲಾ ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಹವಣಿಸುವ ಸೇನೆ ಈ ಬಾರಿಯೂ ಹಾಗೆಯೇ ವರ್ತಿಸುತ್ತಿದೆ. 'ಎಲ್ಲ ರಾಜಕೀಯ ಪಕ್ಷಗಳೂ ಭ್ರಷ್ಟರಿಂದ ತುಂಬಿವೆ. ರಾಜಕೀಯ ನಾಯಕರು ಅಸಮರ್ಥರು. ಅವರಿಂದ ಆಡಳಿತ ನಡೆಸಲು ಸಾಧ್ಯವಿಲ್ಲ. ಹೀಗಾಗಿ ನಮಗೆ ಅಧಿಕಾರ ಸಿಗಬೇಕು' ಎಂಬ ಸಂದೇಶವನ್ನು ಸೇನೆ ಒಂದಲ್ಲ ಒಂದು ರೀತಿ ರವಾನಿಸುತ್ತಲೇ ಇದೆ. 'ಆಡಳಿತದಲ್ಲಿ ಹಸ್ತಕ್ಷೇಪ ಅನಿವಾರ್ಯ' ಎಂದು ಸೇನೆ ಒತ್ತಿ ಹೇಳುತ್ತಿದೆ.

ಹೊಡೆತದ ಮೇಲೆ ಹೊಡೆತಕ್ಕೆ ದೇಶವೇ ಕಂಗಾಲು

ಪಾಕಿಸ್ತಾನವನ್ನು ತಮ್ಮ ಸ್ವಾರ್ಥಕ್ಕಾಗಿ ಎಲ್ಲರೂ ಒಂದೊಂದು ಕಡೆಗೆ ಎಳೆಯುತ್ತಿದ್ದಾರೆ. ಪ್ರವಾಹದಿಂದ ಕಂಗಾಲಾಗಿದ್ದ ದೇಶಕ್ಕೆ ಕೊರೊನಾ ಪಿಡುಗು ಮತ್ತು ಉಕ್ರೇನ್ ಬಿಕ್ಕಟ್ಟು ಮತ್ತೆರೆಡು ಪೆಟ್ಟುಕೊಟ್ಟವು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ಬದಲು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯೇ ಹೆಚ್ಚು. ಕಳೆದ ಬಾರಿಯ ಮಳೆಗಾಲದಲ್ಲಿ ಸಿಂಧು ನದಿ ಉಕ್ಕಿ ಹರಿದ ಕಾರಣ ದೇಶದ ಶೇ 40ರಷ್ಟು ಭಾಗ ಮುಳುಗಿತ್ತು. ಮೂಲ ಸೌಕರ್ಯಗಳು ಹಾಳಾದವು. ಇದನ್ನೇ ದೊಡ್ಡದಾಗಿ ಬಿಂಬಿಸಿಕೊಳ್ಳುತ್ತಿರುವ ಪಾಕಿಸ್ತಾನ ಈಗ ಹವಾಮಾನ ಬದಲಾವಣೆಯಿಂದ ಆಗಿರುವ ಅನಾಹುತದ ಪರಿಹಾರಕ್ಕಾದರೂ ದೊಡ್ಡ ದೇಶಗಳು ನೆರವು ಒದಗಿಸಬೇಕು ಎಂದು ಭಿಕ್ಷಾಪಾತ್ರೆಯನ್ನು ಹಿಡಿದು ಎಡತಾಕುತ್ತಿದೆ.

ಯಾರೂ ನಂಬುತ್ತಿಲ್ಲ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನೆಲೆಗೊಂಡ ನಂತರ ಪಾಕಿಸ್ತಾನವನ್ನು ಯಾರೂ ನಂಬುತ್ತಿಲ್ಲ. ಯಾವುದೇ ದೇಶಗಳು ಅವರಿಗೆ ನೆರವಾಗುತ್ತಿಲ್ಲ. ಅಮೆರಿಕವಂತೂ ಪಾಕಿಸ್ತಾನವನ್ನು ಮರೆತಂತೇ ವರ್ತಿಸುತ್ತಿದೆ. ಅಕ್ಕಪಕ್ಕದ ದೇಶಗಳು ಕಷ್ಟದಲ್ಲಿದ್ದಾಗ ನೆರವಾಗುವ ನೆರೆಯ ದೊಡ್ಡ ದೇಶ ಭಾರತ ಪಾಕಿಸ್ತಾನದ ವಿಚಾರದಲ್ಲಿ ಕಠಿಣ ಧೋರಣೆಯನ್ನು ಸಡಿಲಿಸುತ್ತಿಲ್ಲ. ಈ ಹಿಂದೆ ಪಾಕಿಸ್ತಾನದಲ್ಲಿ ಬಿಕ್ಕಟ್ಟು ಉದ್ಭವಿಸಿದಾಗ ನೆರವಿಗೆ ಬರುತ್ತಿದ್ದ ಮಧ್ಯಪ್ರಾಚ್ಯ (ಮಿಡ್ಲ್ ಈಸ್ಟ್) ದೇಶಗಳು ಈ ಬಾರಿ ಸುಮ್ಮನಾಗಿವೆ. ಈ ದೇಶಗಳ ಒತ್ತಾಸೆಯಿಲ್ಲದೆ ಅಮೆರಿಕದ ಪಾಕಿಸ್ತಾನಕ್ಕೆ ಸಹಾಯ ಮಾಡುವುದಿಲ್ಲ.

ಉಕ್ರೇನ್ ಬಿಕ್ಕಟ್ಟಿನ ನಂತರ ಭಾರತಕ್ಕೆ ಹೆಚ್ಚು ಹತ್ತಿರವಾಗಿರುವ ರಷ್ಯಾ ಸಹ ಪಾಕಿಸ್ತಾನದ ಯಾವುದೇ ಮನವಿಗಳನ್ನು ಪುರಸ್ಕರಿಸುತ್ತಿಲ್ಲ. 'ಭಾರತದೊಂದಿಗೆ ಸಂಬಂಧ ಕಾಪಾಡಿಕೊಳ್ಳುವುದು ಮುಖ್ಯ. ಭಾರತದ ವಿರುದ್ಧ ಏನೂ ಮಾಡುವುದಿಲ್ಲ' ಎನ್ನುವ ಧೋರಣೆಯನ್ನು ಬಹಿರಂಗವಾಗಿಯೇ ಜಾರಿಗೆ ತಂದಿದೆ. 'ಕನಿಷ್ಠ ಪಕ್ಷ ಕಡಿಮೆ ದರಕ್ಕೆ ಇಂಧನವನ್ನಾದರೂ ಕೊಡಿ' ಎನ್ನುವ ಪಾಕಿಸ್ತಾನದ ಬೇಡಿಕೆಯನ್ನೂ ಅವರು ಪುರಸ್ಕರಿಸಿಲ್ಲ. ಇಸ್ಲಾಮಿಕ್ ದೇಶ ಎನ್ನುವ ಕಾರಣಕ್ಕೆ ಪಾಕಿಸ್ತಾನಕ್ಕೆ ನೆರವಾಗುತ್ತಿದ್ದ ಸೌದಿ ಅರೇಬಿಯಾ ಈ ಬಾರಿ ಅಂತರ ಕಾಪಾಡಿಕೊಂಡಿದೆ. 'ಹಳೇ ಸಾಲ ಚುಕ್ತವಾಗದೆ ಹೊಸ ಸಾಲ ಹುಟ್ಟುವುದಿಲ್ಲ' ಎನ್ನುವ ಕಠಿಣ ನಿಲುವು ತಳೆದಿದೆ. ಚೀನಾದವರಿಂದಲೂ ಸಹಾಯ ಸಿಗುತ್ತಿಲ್ಲ. ಹೀಗಾಗಿ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ.

ಐಎಂಎಫ್ ಆಸರೆ, ಷರತ್ತು ಪೂರೈಸುವುದೇ ಕಷ್ಟ

ಪಾಕಿಸ್ತಾನದಲ್ಲಿ ಸದ್ಯಕ್ಕೆ ಎದುರಾಗಿರುವ ರಾಜಕೀಯ ಬಿಕ್ಕಟ್ಟಿಗೆ ಆರ್ಥಿಕ ಬಿಕ್ಕಟ್ಟು ಮುಖ್ಯ ಕಾರಣ. ಇದರಿಂದ ಹೊರಬರಲು ಅವರಿಗೆ ವಿಶ್ವ ಹಣಕಾಸು ನಿಧಿಯ (ಐಎಂಎಫ್‌) ಆಸರೆ ಬೇಕೇಬೇಕು. ನೆರವು ಒದಗಿದಲು ಐಎಂಎಫ್ ಹಲವು ರೀತಿಯ ಷರತ್ತುಗಳನ್ನು ಮುಂದಿಡುತ್ತಿದೆ. ಅದರಲ್ಲಿ ವಿದ್ಯುತ್ ಕ್ಷೇತ್ರದ ಸುಧಾರಣೆ ಮುಖ್ಯವಾದುದು. ಪಾಕಿಸ್ತಾನದಲ್ಲಿ ವಿದ್ಯುತ್ ವಿತರಣಾ ಸೋರಿಕೆ ಶೇ 80ರಷ್ಟು ಇದೆ. ಎಲ್ಲ ವಿದ್ಯುತ್ ವಿತರಣಾ ಕಂಪನಿಗಳೂ (ಡಿಸ್ಕಾಂ) ನಷ್ಟದಲ್ಲಿಯೇ ಇವೆ.

ನೀವು ಸುಧಾರಣೆ ತರಲೇಬೇಕು. ಜನರಿಗೆ ಕಷ್ಟವಾಗಬಹುದು ಎಂದು ಸುಮ್ಮನಿರಬಾರದು. ಡಿಸ್ಕಾಂಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಅವರೇ ದರ ನಿಗದಿ ಮಾಡಲಿ ಎಂದು ಐಎಂಎಫ್ ಹೇಳಿದೆ. ಈಗ ಇದ್ದಕ್ಕಿದ್ದಂತೆ ದರ ಹೆಚ್ಚಾದರೆ ಕಷ್ಟ. ಪಾಕಿಸ್ತಾನದ ಕರೆನ್ಸಿ ಮತ್ತಷ್ಟು ಅಪಮೌಲ್ಯ ಆಗಬೇಕು. ಅದು ಹೊಸದೇನಲ್ಲ. ಅದು ಪೊಲಿಟಿಕಲಿ ದಕ್ಕಿಸಿಕೊಳ್ಳಬಹುದು. ಆದರೆ ಉಳಿದ ಎರಡು ಕಷ್ಟ. ಸಾಮಾನ್ಯ ನಾಗರಿಕರು ಡಿಸ್ಕಾಂ ತಡೆಯುವುದು ಕಷ್ಟ. ಅವರು ಐಎಂಎಫ್ ಒತ್ತಡ ನಿಭಾಯಿಸಲು ಯತ್ನಿಸಿದರು. ಆದರೆ ಐಎಂಎಫ್ ಒಪ್ಪಲಿಲ್ಲ. ಮೀಟಿಂಗ್‌ಗೂ ಬರಬೇಡಿ ಅಂತ ಹೇಳಿದರು. ಇನ್ನೂ ಒಂದು ತಿಂಗಳು ಹೀಗೆಯೇ ಇರಲಿ ನಂತರ ಸಾಲ ಮನ್ನಾ ಯೋಚಿಸೋಣ ಎಂದು ಐಎಂಎಫ್ ಹೇಳಿದೆ. ಹೀಗಾಗಿ ಪಾಕಿಸ್ತಾನಕ್ಕೆ ಬೇರೆ ಆಪ್ಷನ್‌ಗಳೇ ಇಲ್ಲ. ತನ್ನ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲೇಬೇಕು.

ಸೇನೆ ಅಧಿಕಾರಕ್ಕೆ ಬಂದರೆ ಆರ್ಥಿಕತೆಗೆ ಮತ್ತಷ್ಟು ಕಷ್ಟ. ಐಎಂಎಫ್‌ನವರು ಚುನಾವಣೆ ಮಾಡಿ, ನಾವು ಚುನಾಯಿತ ಸರ್ಕಾರದ ಜೊತೆಗೆ ಮಾತಾಡ್ತೀವಿ ಅಂತ ಐಎಂಎಫ್ ಕೂರಬಹುದು. ಹೀಗಾಗಿ ಪಾಕಿಸ್ತಾನದಲ್ಲಿ ಈಗ ಸೇನೆ ಅಧಿಕಾರಕ್ಕೆ ಬರುವ ಸಾಧ್ಯತೆ ಕಡಿಮೆ. ಈಗ ಸೇನೆ ಅಲ್ಲಿ ಅಧಿಕಾರಕ್ಕೆ ಬರುವುದು ಅನಿವಾರ್ಯ. ಅವರದು ಏನೇನೋ ಬ್ಯುಸಿನೆಸ್‌ಗಳಿವೆ. ಜವಾಬ್ದಾರಿಯಿಲ್ಲದ ಅಧಿಕಾರ, ಅಧಿಕಾರದ ಹಿಂದಿನ ಅಧಿಕಾರ ಸೇನೆಯದು. ಪಾಕಿಸ್ತಾನ ಈಗ ಬೇಕ್‌ ಫೇಲ್ ಆಗಿರುವ ಟ್ರಕ್ ಥರ ಆಗಿದೆ. ಒಂದು ಕಡೆ ಬೆಟ್ಟ ಮತ್ತೊಂದು ಪ್ರಪಾತ ಇದೆ. ಗಾಡಿಗೆ ಅಡ್ಡ ಹಾಕಲು ಬ್ಯಾರಿಕೇಡ್‌ ಸಹ ಇಲ್ಲ. ಅಲ್ಲಿ ಯಾವುದೇ ಪಾಸಿಟಿವ್ ಥಿಂಗ್ಸ್‌ ನಡೆಯುತ್ತಿರುವುದು ಕಾಣಿಸುತ್ತಿಲ್ಲ. ಇವೆಲ್ಲಾ ಒಂದೊಂದೇ ಸೇರಿ ದೇಶಕ್ಕೆ ಉಳಿಗಾಲವೇ ಇಲ್ಲದಂತೆ ಆಗಬಹುದು. ಕ್ರಮೇಣ ದೇಶಕ್ಕೆ ಉಳಿಗಾಲವೇ ಇಲ್ಲದ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ.

ಇದರ ಮಧ್ಯೆ ಕಳೆದ ಮೂರು ತಿಂಗಳಿನಿಂದ ಯಾವುದೇ ರಾಜ್ಯ ಬೇರೆ ಹೋಗಬೇಕು ಅಂತ ಹೇಳ್ತಿಲ್ಲ. ಆದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸ್ವಲ್ಪ ಪ್ರತಿಭಟನೆ ಇದೆ. ಕಿಶನ್‌ಗಂಗಾ, ಝೀಲಂ ನದಿಗಳಲ್ಲಿ ಉತ್ಪತ್ತಿಯಾಗಿ ವಿದ್ಯುತ್ ಇಲ್ಲಿಗೆ ಸರಬರಾಜು ಆಗುತ್ತಿಲ್ಲ. ವಾರಕ್ಕೆ ಒಮ್ಮೆ ಕರೆಂಟ್ ಕೊಡ್ತಿದ್ದೀರಿ. ನಮಗೆ ಕಷ್ಟವಾಗ್ತಿದೆ. ನಮ್ಮನ್ನು ಕಾರ್ಗಿಲ್ ಕಡೆಯಿಂದ ಶ್ರೀನಗರ ಕಡೆಯಿಂದ ಬರುವ ರಸ್ತೆ ತೆರೆದುಕೊಡಿ. ಪರ್ವತದ ದಾರಿ ತೆಗೆದುಕೊಟ್ಟರೆ ನಾವು ವ್ಯಾಪಾರ ಮಾಡಿಕೊಳ್ತೀವಿ. ಕಾಶ್ಮೀರಿ-ಕಾಶ್ಮೀರಿ ವ್ಯಾಪಾರ ಮಾಡಿಕೊಳ್ತೀವಿ ಅಂತ ಕೇಳ್ತಿದ್ದಾರೆ. ಇವೆಲ್ಲವೂ ಬಿಗಿನಿಂಗ್ ಅಫ್ ದಿ ಎಂಡ್. ಎಲ್ಲ ರಾಜ್ಯಗಳಲ್ಲಿಯೂ ಪಿಟಿಐ ಸಪೋರ್ಟ್ ಸ್ಟ್ರಾಂಗ್ ಇದೆ. ಸದ್ಯಕ್ಕೆ ಪಾಕಿಸ್ತಾನದಿಂದ ಹೊರಗೆ ಹೋಗಬೇಕು ಅಂತ ಹೆಳ್ತಿಲ್ಲ.

ಉಳಿದೆಲ್ಲ ರಾಜ್ಯಗಳಲ್ಲಿ ಪಿಟಿಐ ಸಪೋರ್ಟ್ ಸ್ಟ್ರಾಂಗ್ ಇದೆ. ಮುಂದೆ ಆಂಥದ್ದೂ ಪ್ರಾರಂಭವಾಗಬಹುದು. ಮುಂದೆ ಆರ್ಥಿಕವಾಗಿ ತುಂಬಾ ಟೈಟ್ ಆಗುತ್ತೆ. ಮುಂದೆ ಎಕನಾಮಿಕಲಿ ತುಂಬಾ ಟೈಟ್ ಆಗುತ್ತೆ. ಸೂಡಾನ್, ಕಾಂಗೋ, ಸಿರಿಯಾ, ಯೆಮೆನ್ ಥರದ ಪರಿಸ್ಥಿತಿ ಬರುತ್ತೆ. ಪಾಕಿಸ್ತಾನವೂ ಅಂಥದ್ದೇ ಒಂದು ಸ್ಥಿತಿಗೆ ಬರುತ್ತೆ. ಅಲ್ಲಿ ಏನಾದ್ರೂ ಆದ್ರೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಪಾಕಿಸ್ತಾನಕ್ಕೂ ಅಂಥದ್ದೇ ಪರಿಸ್ಥಿತಿ ಬರುತ್ತೆ. ಆದರೆ ಪಾಕಿಸ್ತಾನದಲ್ಲಿ ಅಣ್ವಸ್ತ್ರ ಇದೆ ಅನ್ನುವುದೊಂದೇ ಜಾಗತಿಕ ಶಕ್ತಿ ದೇಶಗಳಿಗೆ ತಲೆನೋವು ಆಗುತ್ತೆ. ಅಲ್ಲಿರುವ ಅಣ್ವಸ್ತ್ರ ಏನು ಮಾಡಬೇಕು ಎನ್ನುವ ಮಾತು ಬಿಟ್ಟರೆ ಆ ದೇಶ ಸುಧಾರಿಸಬೇಕು ಎನ್ನುವ ಹಂಬಲ ಯಾರಿಗೂ ಇಲ್ಲ. ಪ್ಲಾನ್ ಬಿ ಬಗ್ಗೆ ಯೋಚನೆ ಮಾಡ್ತಾ ಇರ್ತಾರೆ.

ಇಂಡಿಯಾ ದೇಶ, ಪಾಕಿಸ್ತಾನವನ್ನು ಕ್ಯಾರೆ ಅನ್ತಿಲ್ಲ. ಕದನವಿರಾಮ ಉಲ್ಲಂಘನೆ ಆಗದಂತೆ ಕರಾರು ಮುಂದುವರಿಸುವುದಷ್ಟೇ ನಮ್ಮ ಆಸಕ್ತಿ.

ಬರಹ: ಕಿಶೋರ್ ನಾರಾಯಣ್, ನಿರೂಪಣೆ: ಉಮೇಶ್‌ ಕುಮಾರ್ ಶಿಮ್ಲಡ್ಕ

(ಲೇಖಕರು ಬೆಂಗಳೂರು ನಿವಾಸಿ. ಅಂತರರಾಷ್ಟ್ರೀಯ ವಿದ್ಯಮಾನಗಳಲ್ಲಿ ಆಸಕ್ತರು. ಇಂಟರ್‌ನ್ಯಾಷನಲ್ ರಿಲೇಶನ್ಸ್ ವಿಷಯವಾಗಿ ಅಮೆರಿಕದ ವಾಷಿಂಗ್‌ಟನ್ ಡಿಸಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ)

IPL_Entry_Point