ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸೈಫರ್ ವಿವಾದದ ನಡುವೆ ಇಮ್ರಾನ್‌ ಖಾನ್ ಮೂರನೇ ಪತ್ನಿ ಬುಶ್ರಾ ಬಿಬಿ ಋತುಚಕ್ರ ಪರೀಕ್ಷೆ; ಪಾಕ್‌ ಮಾಜಿ ಪ್ರಧಾನಿ ಮುಂದೆ ಕಾನೂನಿನ ಅಗ್ನಿಪರೀಕ್ಷೆ

ಸೈಫರ್ ವಿವಾದದ ನಡುವೆ ಇಮ್ರಾನ್‌ ಖಾನ್ ಮೂರನೇ ಪತ್ನಿ ಬುಶ್ರಾ ಬಿಬಿ ಋತುಚಕ್ರ ಪರೀಕ್ಷೆ; ಪಾಕ್‌ ಮಾಜಿ ಪ್ರಧಾನಿ ಮುಂದೆ ಕಾನೂನಿನ ಅಗ್ನಿಪರೀಕ್ಷೆ

ಪಾಕಿಸ್ತಾನದ ನ್ಯಾಯಾಲಯವೊಂದು ಜೂನ್ 3ರಂದು ಸೈಫರ್ ಎಂದು ಕರೆಯಲಾದ ಪಾಕಿಸ್ತಾನಿ ಸರ್ಕಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಯನ್ನು ಸೋರಿಕೆ ಮಾಡಿದ್ದಾರೆ ಎಂಬ ಆರೋಪದಿಂದ ಇಮ್ರಾನ್ ಖಾನ್ ಅವರನ್ನು ದೋಷಮುಕ್ತ ಎಂದು ಘೋಷಿಸಿದೆ. (ಬರಹ: ಗಿರೀಶ್‌ ಲಿಂಗಣ್ಣ)

ಸೈಫರ್ ವಿವಾದದ ನಡುವೆ ಇಮ್ರಾನ್‌ ಖಾನ್ ಮೂರನೇ ಪತ್ನಿ ಬುಶ್ರಾ ಬಿಬಿ ಋತುಚಕ್ರ ಪರೀಕ್ಷೆ; ಪಾಕ್‌ ಮಾಜಿ ಪ್ರಧಾನಿ ಮುಂದೆ ಕಾನೂನಿನ ಅಗ್ನಿಪರೀಕ್ಷೆ
ಸೈಫರ್ ವಿವಾದದ ನಡುವೆ ಇಮ್ರಾನ್‌ ಖಾನ್ ಮೂರನೇ ಪತ್ನಿ ಬುಶ್ರಾ ಬಿಬಿ ಋತುಚಕ್ರ ಪರೀಕ್ಷೆ; ಪಾಕ್‌ ಮಾಜಿ ಪ್ರಧಾನಿ ಮುಂದೆ ಕಾನೂನಿನ ಅಗ್ನಿಪರೀಕ್ಷೆ

Cypher Case: ಬಹಳಷ್ಟು ಸುದೀರ್ಘವಾದ, ತ್ರಾಸದಾಯಕವಾದ ಕಾನೂನು ಹೋರಾಟದ ಬಳಿಕ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಒಂದು ಮಹತ್ವದ ಕಾನೂನಿನ ಗೆಲುವು ಲಭಿಸಿದೆ. ಪಾಕಿಸ್ತಾನದ ನ್ಯಾಯಾಲಯವೊಂದು ಜೂನ್ 3ರಂದು ಸೈಫರ್ ಎಂದು ಕರೆಯಲಾದ ಪಾಕಿಸ್ತಾನಿ ಸರ್ಕಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಯನ್ನು ಸೋರಿಕೆ ಮಾಡಿದ್ದಾರೆ ಎಂಬ ಆರೋಪದಿಂದ ಇಮ್ರಾನ್ ಖಾನ್ ಅವರನ್ನು ದೋಷಮುಕ್ತ ಎಂದು ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

ಸೈಫರ್ ಪ್ರಕರಣ ಎಂದರೆ, 2022ರಲ್ಲಿ ವಾಷಿಂಗ್ಟನ್‌ನಲ್ಲಿ ಪಾಕಿಸ್ತಾನದ ರಾಯಭಾರಿ ಇಸ್ಲಾಮಾಬಾದ್‌ಗೆ ಕಳುಹಿಸಿದ ಒಂದು ರಹಸ್ಯ ದಾಖಲೆಯ ಕೇಬಲ್ (ಸೈಫರ್) ಅನ್ನು ಇಮ್ರಾನ್ ಖಾನ್ ಬಹಿರಂಗಗೊಳಿಸಿದ್ದಾರೆ ಎಂಬ ಆರೋಪವಾಗಿದೆ. ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಲು ಪ್ರಯತ್ನ ನಡೆಸುತ್ತಿದ್ದ ಪಾಕಿಸ್ತಾನಿ ನಿಯೋಗ ಮತ್ತು ಅಮೆರಿಕನ್ ಅಧಿಕಾರಿಗಳ ನಡುವೆ ನಡೆದ ಸಭೆಯ ವಿವರಗಳನ್ನು ಈ ಗೌಪ್ಯ ದಾಖಲೆ ಒಳಗೊಂಡಿತ್ತು ಎನ್ನಲಾಗಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಮಾಜಿ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಅವರು ಈ ದಾಖಲೆಯ ಪ್ರತಿಯನ್ನು ರಾಜಕೀಯ ರ್ಯಾಲಿಯೊಂದರಲ್ಲಿ ಬಹಿರಂಗವಾಗಿ ಪ್ರದರ್ಶಿಸಿದ ಆರೋಪದಲ್ಲಿ ವಿಶೇಷ ನ್ಯಾಯಾಲಯ ಅವರಿಬ್ಬರಿಗೂ ಹತ್ತು ವರ್ಷಗಳ ಕಾರಾಗೃಹ ಶಿಕ್ಷೆ ಘೋಷಿಸಿತ್ತು. ಅವರಿಬ್ಬರೂ ರಹಸ್ಯ ದಾಖಲೆಯನ್ನು ಬಹಿರಂಗಗೊಳಿಸಿದ ಆರೋಪದಲ್ಲಿ ದೋಷಿಗಳೆಂದು ಘೋಷಿಸಲ್ಪಟ್ಟಿದ್ದರು.

ಆದರೆ ಈಗ ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯ ಇಮ್ರಾನ್ ಖಾನ್ ಅವರನ್ನು ದೋಷಮುಕ್ತಗೊಳಿಸಿರುವುದು ಮಾಜಿ ಪ್ರಧಾನಿ ಮತ್ತು ಅವರ ಬೆಂಬಲಿಗರಿಗೆ ಬಹುದೊಡ್ಡ ಮತ್ತು ಮುಖ್ಯವಾದ ಗೆಲುವಾಗಿದೆ. ಪ್ರತ್ಯೇಕವಾದ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ನಿರ್ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಸೈಫರ್ ಪ್ರಕರಣದಲ್ಲೂ ಖಾನ್ ನಿರ್ದೋಷಿ ಎಂದು ಘೋಷಿಸಲಾಗಿದೆ.

ಈ ತೀರ್ಪಿನ ಬಳಿಕ, ಇಮ್ರಾನ್ ಖಾನ್ ಅವರು ಒಂದು ಮುಖ್ಯ ಅರೋಪದಡಿ ಸೆರೆವಾಸ ಅನುಭವಿಸುತ್ತಿದ್ದಾರೆ. ಅದೇನೆಂದರೆ, ಇಮ್ರಾನ್ ಖಾನ್ ಮತ್ತು ಅವರ ಮೂರನೇ ಪತ್ನಿ, ಬುಶ್ರಾ ಬೀಬಿ ಇಸ್ಲಾಮಿಕ್ ರೀತಿಯಲ್ಲಿ ಮದುವೆಯಾಗಿಲ್ಲ ಎನ್ನುವುದಾಗಿದೆ. ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿ ಇಬ್ಬರೂ ಇದಕ್ಕಾಗಿ ತಲಾ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಈ ಪ್ರಕರಣದ ವಿಚಾರಣೆ ಮತ್ತು ತೀರ್ಪಿನ ಸಂದರ್ಭದಲ್ಲಿ, ನ್ಯಾಯಾಲಯ ಬುಶ್ರಾ ಬೀಬಿಯ ಋತುಚಕ್ರವನ್ನೂ ಪರೀಕ್ಷೆಗೆ ಒಳಪಡಿಸಿತ್ತು. ಬುಶ್ರಾ ಬೀಬಿ ತನ್ನ ಹಿಂದಿನ ವಿವಾಹ ವಿಚ್ಛೇದನ ಮತ್ತು ಇಮ್ರಾನ್ ಖಾನ್ ಜೊತೆಗಿನ ಮದುವೆಯ ನಡುವೆ ಮೂರು ಋತುಚಕ್ರಗಳು ಕಳೆದಿದ್ದವು ಎಂದು ಹೇಳಿದ್ದರು. ಆದರೆ ನ್ಯಾಯಾಲಯ ಆಕೆಯ ಹೇಳಿಕೆಯನ್ನು ಅಲ್ಲಗಳೆದಿತ್ತು. ಕೇವಲ ಆಕೆಯ ವಿಚ್ಛೇದಿತ ಪತಿಯ ಸಾಕ್ಷಿ ಮಾತ್ರವಲ್ಲದೆ, ನ್ಯಾಯಾಲಯ ವೈದ್ಯಕೀಯ ಪರೀಕ್ಷಾ ವಿಧಾನವನ್ನೂ ಅನುಸರಿಸಿತ್ತು.

ಬುಶ್ರಾ ಬೀಬಿಯ ಮೊದಲ ಪತಿ, ಖವಾರ್ ಮನೇಕಾ ಪ್ರಕರಣವನ್ನು ದಾಖಲಿಸಿದ್ದು, ಬುಶ್ರಾ ಬೀಬಿ ಎರಡು ಮದುವೆಗಳ ನಡುವೆ ಕಡ್ಡಾಯವಾದ ಕಾಯುವಿಕೆಯ ಅವಧಿ ಅಥವಾ ಇದ್ದತ್ ಅನ್ನು ಅನುಸರಿಸದೆ, ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು.

'ಇದ್ದತ್' ಎಂದು ಕರೆಯಲಾಗುವ ಇಸ್ಲಾಮಿಕ್ ಕಾನೂನಿನ ಪ್ರಕಾರ, ಓರ್ವ ವಿಧವೆ ಅಥವಾ ವಿಚ್ಛೇದಿತ ಮಹಿಳೆ ತನ್ನ ಮರು ಮದುವೆಗೆ ಮುನ್ನ ಕಡ್ಡಾಯವಾಗಿ ಮೂರು ತಿಂಗಳು ಕಾಯಬೇಕಾಗುತ್ತದೆ. ಮಹಿಳೆ ಏನಾದರೂ ಹಿಂದಿನ ಮದುವೆಯಲ್ಲಿ ಗರ್ಭಿಣಿಯಾಗಿದ್ದರೆ, ಆ ಮಗುವಿನ ತಂದೆ ಯಾರೆಂದು ಖಾತ್ರಿಪಡಿಸಲು ಈ ಕಾನೂನು ಬಳಕೆಯಲ್ಲಿದೆ.

ಬುಶ್ರಾ ಬೀಬಿಯ ಋತುಚಕ್ರದ ವಿಚಾರವೂ ನ್ಯಾಯಾಲಯ ಪರಿಗಣಿಸಬೇಕಾದ ವಿಷಯವೇ ಎಂದು ಅಮೆರಿಕನ್ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರರಾದ ಮಿಲ್ಲರ್ ಅವರು ಸೈಫರ್ ಪ್ರಕರಣದ ರೀತಿಯಲ್ಲಿ, ಈ ಪ್ರಕರಣದ ತೀರ್ಪನ್ನೂ ಪಾಕಿಸ್ತಾನಿ ನ್ಯಾಯಾಲಯ ಬದಲಾಯಿಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರಹಸ್ಯ ಮಾಹಿತಿ ಸೋರಿಕೆ ಪ್ರಕರಣದಲ್ಲಿ (ಸೈಫರ್ ಪ್ರಕರಣ) ಇಮ್ರಾನ್ ಖಾನ್ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿರುವುದು ಇಮ್ರಾನ್ ಖಾನ್ ಅವರನ್ನು ದೇಶದ್ರೋಹಿ ಎಂದಿರುವ ಪಾಕಿಸ್ತಾನಿ ಸರ್ಕಾರದ ವಾದವನ್ನು ತಳ್ಳಿಹಾಕಿದಂತಾಗಿದೆ. ಇದು ಜೈಲುವಾಸದಲ್ಲಿರುವ ಇಮ್ರಾನ್ ಖಾನ್ ಬೆಂಬಲಿಗರು ಹೊಂದಿರುವ ತಮ್ಮ ನಾಯಕನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ, ರಾಜಕೀಯ ದುರುದ್ದೇಶಗಳಿಂದ ಜೈಲು ಪಾಲು ಮಾಡಲಾಗಿದೆ ಎಂಬ ನಂಬಿಕೆಗೆ ಇನ್ನಷ್ಟು ಪುಷ್ಟಿ ನೀಡಿದೆ.

ಸೈಫರ್ ಪ್ರಕರಣ ಪಾಕಿಸ್ತಾನದ ರಾಜಕೀಯ ವಿವಾದಗಳಲ್ಲಿ ಒಂದು ಪ್ರಮುಖ ಅಂಶವಾಗಿತ್ತು. ಇಮ್ರಾನ್ ಖಾನ್ ಇನ್ನೂ ಪ್ರಧಾನಿಯಾಗಿದ್ದಾಗಲೇ, ಪದೇ ಪದೇ ತನ್ನನ್ನು ಪದಚ್ಯುತಗೊಳಿಸಲು ಅಮೆರಿಕಾ ಸಹ ಪ್ರಯತ್ನ ನಡೆಸುತ್ತಿದೆ ಎನ್ನುವುದನ್ನು ಸೈಫರ್ ಸಾಬೀತುಪಡಿಸಿದೆ ಎಂದು ಆರೋಪಿಸಿದ್ದರು. ಅದರಂತೆ 2022ರಲ್ಲಿ ಇಮ್ರಾನ್ ಖಾನ್ ಅವರನ್ನು ಅವಿಶ್ವಾಸ ಗೊತ್ತುವಳಿ ಮಂಡಿಸಿ, ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಲಾಯಿತು.

2023ರಲ್ಲಿ, 'ದ ಇಂಟರ್‌ಸೆಪ್ಟ್' ಎಂಬ ಮಾಧ್ಯಮ ಸಂಸ್ಥೆ ತನಗೆ ಪಾಕಿಸ್ತಾನಿ ಸೇನೆಯಲ್ಲಿರುವ ಮೂಲದಿಂದ ಈ ಸೈಫರ್ ಲಭಿಸಿದೆ ಎಂದು ಹೇಳಿಕೊಂಡಿತ್ತು. ಈ ರಹಸ್ಯ ದಾಖಲೆಯ ಪ್ರಕಾರ, ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ, ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ಪಾಕಿಸ್ತಾನಿ ರಾಯಭಾರಿಗೆ ಒಂದು ವೇಳೆ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಲ್ಲಿ ಮುಂದುವರಿದರೆ, ಪಾಕಿಸ್ತಾನ ಮತ್ತು ಅಮೆರಿಕಾದ ಸಂಬಂಧ ಹದಗೆಡಲಿದೆ ಎಂದು ಎಚ್ಚರಿಸಿತ್ತು. ಈ ಮಾತುಕತೆ ನಡೆದ ಕೆಲ ಸಮಯದಲ್ಲೇ, ಪಾಕಿಸ್ತಾನದ ಸಂಸತ್ತಿನಲ್ಲಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನಿ ಸೇನೆಯ ಬೆಂಬಲದೊಡನೆ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲಾಯಿತು. ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಈ ಗೊತ್ತುವಳಿ ಯಶಸ್ವಿಯೂ ಆಯಿತು.

ಅದಾದ ನಂತರ, ಇಮ್ರಾನ್ ಖಾನ್ ಮತ್ತು ಅವರ ಬೆಂಬಲಿಗರು ಪಾಕಿಸ್ತಾನಿ ಮಿಲಿಟರಿಯೊಡನೆ ನಿರಂತರ ಸಂಘರ್ಷದಲ್ಲಿ ತೊಡಗಿಕೊಂಡಿದ್ದಾರೆ. ಇದರ ಪರಿಣಾಮವಾಗಿ, ವ್ಯಾಪಕ ದಾಳಿ, ಹತ್ಯೆ ಮತ್ತು ಹಿಂಸಾಚಾರಗಳು ಜರುಗಿದವು. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷಕ್ಕೆ ನಿಷೇಧ ಹೇರಲಾಯಿತು. ಇಮ್ರಾನ್ ಖಾನ್ ವಿರುದ್ಧ ಹಲವು ಆರೋಪಗಳನ್ನು ಹೊರಿಸಿ, ಅವರನ್ನು ಜೈಲಿಗೆ ಕಳುಹಿಸಲಾಯಿತು.

ಇಮ್ರಾನ್ ಖಾನ್ ಅವರು ಬಂಧನಕ್ಕೊಳಗಾಗಿ, ಅವರ ಪಕ್ಷ ಪಿಟಿಐ ಮೇಲೆ ನಿಷೇಧ ಹೇರಿದ ನಂತರವೂ, ಪಿಟಿಐ ಬೆಂಬಲಿತ ಅಭ್ಯರ್ಥಿಗಳು ಪಾಕಿಸ್ತಾನದ ಚುನಾವಣೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಎಕ್ಸಿಟ್ ಪೋಲ್‌ಗಳು ಪಿಟಿಐ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದಿದ್ದರೂ, ಅಧಿಕೃತ ಫಲಿತಾಂಶ ಬಂದಾಗ ಬಹಳಷ್ಟು ಪಿಟಿಐ ಬೆಂಬಲಿತ ಅಭ್ಯರ್ಥಿಗಳು ಸೋಲು ಕಂಡಿದ್ದರು. ಪ್ರಾದೇಶಿಕ ಹಂತದಲ್ಲಿ, ಪಾಕಿಸ್ತಾನಿ ಮಿಲಿಟರಿ ಚುನಾವಣಾ ಫಲಿತಾಂಶದಲ್ಲಿ ಅಕ್ರಮ ನಡೆಸಿದೆ ಎಂಬ ಆರೋಪಗಳ ನಡುವೆ, ವಿಪಕ್ಷಗಳ ಮೈತ್ರಿಕೂಟ ಪಾಕಿಸ್ತಾನದ ನೂತನ ಸರ್ಕಾರವನ್ನು ಸ್ಥಾಪಿಸಿತು. ಈ ಸರ್ಕಾರಕ್ಕೆ ಅಮೆರಿಕಾ ತಕ್ಷಣವೇ ಮಾನ್ಯತೆ ನೀಡಿತು.

ಬುಶ್ರಾ ಬೀಬಿ ಜೊತೆಗಿನ ಇಮ್ರಾನ್ ಖಾನ್ ಮದುವೆ ಇಸ್ಲಾಮಿಕ್ ಕಾನೂನಿಗೆ ಬದ್ಧವಾಗಿಲ್ಲ ಎಂಬ ಆರೋಪವನ್ನು ಹೊರತುಪಡಿಸಿ, ಖಾನ್ ವಿರುದ್ಧದ ಬಹುತೇಕ ಪ್ರಕರಣಗಳು ಖುಲಾಸೆಗೊಂಡಿವೆ.

ಬುಶ್ರಾ ಬೀಬಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲು ತೆರಳುವುದನ್ನು ಆಕೆಯ ಮೊದಲನೆಯ ಪತಿ ತಡೆಯಲು ಪ್ರಯತ್ನ ನಡೆಸಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. "ಬುಶ್ರಾ ಬೀಬಿಯನ್ನು ಆಕೆಯ ಮೊದಲನೇ ಪತಿ ಬಲವಂತವಾಗಿ ತಡೆಯಲು ಪ್ರಯತ್ನ ನಡೆಸಿದ್ದು, ಇದರ ಪರಿಣಾಮವಾಗಿ ಅವರ ನಡುವೆ ಭಾರೀ ಮಾತಿನ ಚಕಮಕಿ, ಪರಸ್ಪರ ಅವಮಾನಗಳು ಸಂಭವಿಸಿವೆ. ಆದರೆ ಅಂತಿಮವಾಗಿ ಆತನಿಗೆ ಬೀಬಿಯನ್ನು ತಡೆಯಲು ಸಾಧ್ಯವಾಗಿಲ್ಲ" ಎಂದು ನ್ಯಾಯಾಲಯ ತನ್ನ ಹೇಳಿಕೆಯಲ್ಲಿ ವಿವರಿಸಿದೆ.

ತನ್ನ ತೀರ್ಪಿನಲ್ಲಿ ನ್ಯಾಯಾಲಯ ಬುಶ್ರಾ ಬೀಬಿಯ ಮಾಜಿ ಪತಿಯ ಯಹೂದ್ಯ ವಿರೋಧಿ ಪಿತೂರಿ ಸಿದ್ಧಾಂತಗಳನ್ನು ಒಳಗೊಂಡಿದ್ದು, ಆತ "ಯುಎಇಯಲ್ಲಿ ವಾಸಿಸುತ್ತಿರುವ ಇಮ್ರಾನ್ ಖಾನ್ ಪತ್ನಿಯ ಸಹೋದರಿ ಯಹೂದ್ಯ ಲಾಬಿದಾರರೊಡನೆ ನಿಕಟ ಸಂಪರ್ಕ ಹೊಂದಿದ್ದಾರೆ" ಎಂದು ಆರೋಪಿಸಿದ್ದಾರೆ.

ನ್ಯಾಯಾಲಯದ ತೀರ್ಪಿನ ಪ್ರಕಾರ, ಬುಶ್ರಾ ಬೀಬಿಯ ಮೊದಲನೇ ಪತಿ ತನ್ನನ್ನು 'ರುಜುಹ್' ಎಂಬ ಇಸ್ಲಾಮಿಕ್ ಹಕ್ಕಿನಿಂದಲೂ ವಂಚಿಸಲಾಗಿದೆ ಎಂದು ಆರೋಪಿಸಿದ್ದಾರೆ. ರುಜುಹ್ ಎಂದರೆ, ವಿವಾಹ ವಿಚ್ಛೇದನದ ಬಳಿಕದ ಆರಂಭಿಕ ಅವಧಿಯಲ್ಲಿ ಪತಿಗೆ ಪತ್ನಿಯನ್ನು ಮರಳಿ ಹೊಂದುವ ಅವಕಾಶವಾಗಿದೆ. "ಕಾನೂನು ಮತ್ತು ಶರಿಯಾದ ಅಡಿಯಲ್ಲಿ, ಬುಶ್ರಾ ಬೀಬಿಯ ಪತಿಗೆ ತನ್ನ ಪತ್ನಿಯ ಜೊತೆ 'ರುಜುಹ್' ಹಕ್ಕು ಇತ್ತು. ಆದರೆ ಈ ಹಕ್ಕನ್ನು ಆರೋಪಿಗಳು ತಿರಸ್ಕರಿಸಿದ್ದಾರೆ" ಎಂದು ನ್ಯಾಯಾಲಯ ಹೇಳಿಕೆ ನೀಡಿದೆ.

ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಟಿ20 ವರ್ಲ್ಡ್‌ಕಪ್ 2024