ಕನ್ನಡ ಸುದ್ದಿ  /  Nation And-world  /  Pakistan Govt Mulling Legal Options To Ban Imran Khan's Pti

Imran Khan: ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಪಕ್ಷವನ್ನು ನಿಷೇಧಿಸಲು ಪಾಕ್‌ ಸರಕಾರದಿಂದ ತಂತ್ರಗಾರಿಕೆ

ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತೆಹ್ರಿಕ್‌ ಇ ಇನ್ಸಾಫ್‌ (ಪಿಟಿಐ) ಪಕ್ಷವನ್ನು ನಿಷೇಧಿಸುವ ಕುರಿತು ಕಾನೂನು ಪ್ರಕ್ರಿಯೆ ಆರಂಭಿಸುವ ಸೂಚನೆಯನ್ನು ಪಾಕಿಸ್ತಾನದ ಆಂತರಿಕ ಸಚಿವರಾದ ರಾಣಾ ಸನಾವುಲ್ಲಾ ನೀಡಿದ್ದಾರೆ.

Imran Khan: ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಪಕ್ಷವನ್ನು ನಿಷೇಧಿಸಲು ಪಾಕ್‌ ಸರಕಾರದಿಂದ ತಂತ್ರಗಾರಿಕೆ REUTERS/Akhtar Soomro
Imran Khan: ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಪಕ್ಷವನ್ನು ನಿಷೇಧಿಸಲು ಪಾಕ್‌ ಸರಕಾರದಿಂದ ತಂತ್ರಗಾರಿಕೆ REUTERS/Akhtar Soomro (REUTERS)

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಪಕ್ಷ ಮತ್ತು ಆಡಳಿತ ಪಕ್ಷದ ನಡುವಿನ ಹಗ್ಗಜಗ್ಗಾಟ ಮುಂದುವರೆದಿದೆ. ಇದೇ ಸಮಯದಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತೆಹ್ರಿಕ್‌ ಇ ಇನ್ಸಾಫ್‌ (ಪಿಟಿಐ) ಪಕ್ಷವನ್ನು ನಿಷೇಧಿಸುವ ಕುರಿತು ಕಾನೂನು ಪ್ರಕ್ರಿಯೆ ಆರಂಭಿಸುವ ಸೂಚನೆಯನ್ನು ಪಾಕಿಸ್ತಾನದ ಆಂತರಿಕ ಸಚಿವರಾದ ರಾಣಾ ಸನಾವುಲ್ಲಾ ನೀಡಿದ್ದಾರೆ.

ಪಿಟಿಯ ಸಂಘಟನೆಯನ್ನು ನಿಷೇಧಿತ ಸಂಘಟನೆಯ ವ್ಯಾಪ್ತಿಗೆ ಸೇರಿಸುವ ಕುರಿತು ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ಮತ್ತು ನವಾಜ್‌ (ಪಿಎಂಎಲ್‌-ಎನ್‌) ಪಕ್ಷದ ಲೀಗಲ್‌ ಟೀಮ್‌ ಪರಿಶೀಲನೆ ನಡೆಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ನಡೆದ ಹಿಂಸಾಚಾರಗಳು, ವಿವಿಧ ಆರೋಪಗಳನ್ನು ಆಧಾರವಾಗಿಟ್ಟುಕೊಂಡು ಪಿಟಿಐ ಪಕ್ಷದ ವಿರುದ್ಧ ಕ್ರಮಕೈಗೊಳ್ಳಲು ಸರಕಾರ ಯೋಜಿಸುತ್ತಿದೆ.

ಸರಕಾರ ಈ ಕುರಿತು ಚಿಂತನೆ ಮಾಡಬಹುದು. ಆದರೆ, ಒಂದು ರಾಜಕೀಯ ಪಕ್ಷವನ್ನು ನಿಷೇಧಿಸುವ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಕೋರ್ಟ್‌ಗೆ ಮಾತ್ರ ಇದೆ ಎಂದು ಅವರು ಹೇಳಿದ್ದಾರೆ. ಇಮ್ರಾನ್‌ ಖಾನ್‌ ಮತ್ತು ಅವರ ಬೆಂಬಲಿಗರು ದೇಶದಲ್ಲಿ ಭಯದ ವಾತಾವರಣ ಉಂಟು ಮಾಡಿದ್ದಾರೆ. ಇದರಿಂದ ಉಂಟಾಗುವ ತೊಂದರೆಗಳನ್ನು, ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಪೊಲೀಸ್‌, ಭದ್ರತಾ ಪಡೆಗಳು ಮಾಡುತ್ತಿವೆ ಎಂದು ರಾಣಾ ಸನಾವುಲ್ಲಾ ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಅವರ ಬೆಂಗಾವಲು ಪಡೆಯ ವಾಹನವು ನಿನ್ನೆ ಅಪಘಾತಗೊಂಡಿತ್ತು. ಎರಡು ದಿನದ ಹಿಂದೆ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲು ಸಾಧ್ಯವಾಗದೆ ಪೊಲೀಸರು ವಾಪಸ್‌ ತೆರಳಿದ್ದರು. ಇಮ್ರಾನ್‌ ಖಾನ್‌ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸಿದ ಕಾರಣ ಪೊಲೀಸರು ಕಾರ್ಯಾಚರಣೆ ನಡೆಸಿ ವಾಪಸ್‌ ಆಗಿದ್ದರು. ಇದೇ ಸಮಯದಲ್ಲಿ ಇಮ್ರಾನ್‌ ಖಾನ್‌ ಅವರನ್ನು ಗುರುವಾರದವರೆಗೆ ಬಂಧಿಸದಂತೆ ಲಾಹೋರ್‌ ಹೈಕೋರ್ಟ್‌ ಕೂಡ ಆದೇಶ ನೀಡಿತ್ತು.

ಪೊಲೀಸರು ಮತ್ತು ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಹಲವು ಜನರು ಗಾಯಗೊಂಡಿದ್ದರು. ಪ್ರತಿಭಟನೆಯ ಕಿಡಿ ಪಾಕಿಸ್ತಾನದಾದ್ಯಂತ ಹಬ್ಬಿತ್ತು. ತನ್ನನ್ನು ಬಂಧಿಸುವುದು ಕೇವಲ ನಾಟಕವಾಗಿದೆ. ಅಪಹರಿಸಿ ಹತ್ಯೆ ಮಾಡುವ ಉದ್ದೇಶವನ್ನು ಇವರು ಹೊಂದಿದ್ದಾರೆ ಎಂದು ಸರಕಾರದ ವಿರುದ್ಧದ ಇಮ್ರಾನ್‌ ಖಾನ್‌ ದೂರಿದ್ದರು.

ಇಮ್ರಾನ್‌ ಖಾನ್‌ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸ್ವೀಕರಿಸಿದ ದುಬಾರಿ ಗ್ರಾಫ್ ಕೈಗಡಿಯಾರ ಒಳಗೊಂಡಂತೆ ಪಡೆದ ಗಿಫ್ಟ್‌ಗಳ ಕುರಿತಾದ ಪ್ರಕರಣ ಇದಾಗಿದೆ. ಈ ಉಡುಗೊರೆಗಳನ್ನು ರಾಜ್ಯ ಠೇವಣಿ (ತೋಷಖಾನಾ) ದಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪಿಟಿಐ ಮುಖ್ಯಸ್ಥರಾದ ಇಮ್ರಾನ್‌ ಖಾನ್‌ ಮೂರನೇ ಬಾರಿಗೆ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ನಂತರ ಈ ತಿಂಗಳ ಆರಂಭದಲ್ಲಿ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು.

ತೋಷಖಾನಾ ಪ್ರಕರಣ ಎಂದು ಕರೆಯಲ್ಪಡುವ ಈ ಪ್ರಕರಣದಲ್ಲಿ, ವಿದೇಶಿ ಗಣ್ಯರು ಮತ್ತು ನಾಯಕರಿಂದ ಸರ್ಕಾರದ ಪರವಾಗಿ ಸ್ವೀಕರಿಸಿದ ಕಾಣಿಕೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಇಮ್ರಾನ್‌ ಖಾನ್‌ ವಿರುದ್ಧ ಕೇಳಿಬಂದಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ಅವರ ನೇತೃತ್ವದ ಪಾಕಿಸ್ತಾನ ಚುನಾವಣಾ ಆಯೋಗ (ಇಸಿಪಿ)ದ ನಾಲ್ವರು ಸದಸ್ಯರ ಪೀಠ, ಇಮ್ರಾನ್ ಖಾನ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು. ಅಲ್ಲದೇ ಇಮ್ರಾನ್‌ ಖಾನ್‌ ಅವರ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯತ್ವವನ್ನೂ ಕಸಿದುಕೊಂಡಿತ್ತು.

ಮುಂದಿನ ಐದು ವರ್ಷಗಳ ಕಾಲ ಇಮ್ರಾನ್‌ ಖಾನ್‌ ರಾಷ್ಟ್ರೀಯ ಅಸೆಂಬ್ಲಿಗೆ ಸ್ಪರ್ಧೆ ಮಾಡುವಂತಿಲ್ಲ ಎಂದು ಹೇಳಿದ್ದ ಚುನಾವಣಾ ಆಯೋಗ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿತ್ತು.

IPL_Entry_Point