ಜನರು ತುಂಬಿರುವ ವಿಮಾನಗಳನ್ನೇ ಗುರಾಣಿಯಾಗಿ ಬಳಸುತ್ತಿದೆ ಪಾಕಿಸ್ತಾನ; ತನ್ನದೇ ದೇಶದ ಜನರ ಪ್ರಾಣದ ಜೊತೆಗೆ ಚೆಲ್ಲಾಟ
ಭಾರತದ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸುವಾಗಲೂ ಪಾಕಿಸ್ತಾನ ತನ್ನ ದೇಶದ ನಾಗರಿಕ ವಿಮಾನಗಳ ಹಾರಾಟವನ್ನು ಮುಂದುವರೆಸಿತ್ತು. ವಾಯುಪ್ರದೇಶವನ್ನು ಮುಚ್ಚದೆ ತನ್ನದೇ ದೇಶದ ಮುಗ್ದ ನಾಗರಿಕರ ಜೀವದೊಂದಿಗೆ ಚೆಲ್ಲಾಟವಾಡಿದೆ ಎಂದು ಭಾರತ ಆರೋಪಿಸಿದೆ.
ಭಾರತದ ಸೇನಾಬಲವನ್ನು ಕಂಡು ಪಾಕಿಸ್ತಾನ ರೆಕ್ಕೆಯಿಲ್ಲದ ಹಕ್ಕಿಯಂತಾಗಿದ್ದು ಪಕ್ಕಾ. ಉಗ್ರರ ನೆಲೆಯನ್ನು ಗುರಿಯಾಗಿಸಿ ಭಾರತ ನಡೆಸಿದ ನಿಖರ ದಾಳಿಗೆ ಪ್ರತಿಯಾಗಿ, ಭಾರತದ ಸೇನೆ ಹಾಗೂ ನಾಗರಕರ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಪ್ರಯತ್ನ ನಡೆಸುತ್ತಿದೆ. ಆದರೆ, ಭಾರತದ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಪಾಕಿಸ್ತಾನದಿಂದ ಸಾಧ್ಯವಾಗಿಲ್ಲ. ಹೀಗಾಗಿ ಪಾಕಿಸ್ತಾನವು ಕಳ್ಳದಾರಿ ಹಿಡಿಯುತ್ತದೆ. ತನ್ನದೇ ದೇಶದ ಜನರ ಜೀವದ ವಿಷಯವಾಗಿ ಚೆಲ್ಲಾಟವಾಡುತ್ತಿದೆ. ಗುರುವಾರ (ಮೇ 8) ರಾತ್ರಿ ಭಾರತದ ಅನೇಕ ನಗರಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಸಮಯದಲ್ಲಿಯೂ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ತೆರೆದಿಡುವ ಮೂಲಕ ಜನರ ಜೀವದ ವಿಷಯದಲ್ಲಿ ಚೆಲ್ಲಾಟವಾಡಿದೆ ಎಂದು ಭಾರತ ಆರೋಪಿಸಿದೆ.
ಇಂದು (ಮೇ 9) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಪಾಕಿಸ್ತಾನವು ಮೇ 7ರಂದು ರಾತ್ರಿ 8.30ಕ್ಕೆ ಅಪ್ರಚೋದಿತ ವೈಮಾನಿಕ ದಾಳಿಯನ್ನು ನಡೆಸಿತು. ಹಲವಾರು ಡ್ರೋನ್‌ಗಳು ಮತ್ತು ಕ್ಷಿಪಣಿಗಳಿಂದ ಭಾರತೀಯ ಭೂಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು ಎಂದು ಹೇಳಿದರು. ಭಾರತದ ಮೇಲೆ ಆಕ್ರಮಣ ಮಾಡುವಾಗ ಪಾಕಿಸ್ತಾನವು ತನ್ನ ನಾಗರಿಕ ವಾಯುಪ್ರದೇಶವನ್ನು ಮುಚ್ಚಿಲ್ಲ. ಈ ಕ್ರಮದ ಹಿಂದೆ ಸ್ಪಷ್ಟ ದುರುದ್ದೇಶವಿದೆ. ಭಾರತದಿಂದ ಸಂಭಾವ್ಯ ಪ್ರತಿದಾಳಿಯ ವಿರುದ್ಧ ರಕ್ಷಾಕವಚಗಳಾಗಿ ವಾಣಿಜ್ಯ ವಿಮಾನಗಳನ್ನು ಬಳಸುವ ಉದ್ದೇಶಪೂರ್ವಕ ತಂತ್ರ ಪಾಕಿಸ್ತಾನದ್ದು ಎಂದು ಭಾರತ ಹೇಳಿದೆ.
“ಭಾರತದ ನಗರಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ವಿಫಲ ದಾಳಿ ಆರಂಭಿಸಿದರೂ ಪಾಕಿಸ್ತಾನ ತನ್ನ ನಾಗರಿಕ ವಾಯುಪ್ರದೇಶವನ್ನು ಮುಚ್ಚಲಿಲ್ಲ” ಎಂದು ವಿಂಗ್ ಕಮಾಂಡರ್ ಸಿಂಗ್ ಹೇಳಿದರು. “ನೆರೆಯ ದೇಶವು ನಾಗರಿಕರು ಓಡಾಡುವ ವಿಮಾನಗಳನ್ನೇ ಗುರಾಣಿಯಾಗಿ ಬಳಸುತ್ತಿದೆ. ಅವರ ದಾಳಿಯ ನಿರ್ಧಾರಕ್ಕೆ ಪ್ರತಿಯಾಗಿ ಭಾರತದಿಂದ ತ್ವರಿತ ವಾಯು ರಕ್ಷಣಾ ಪ್ರತಿಕ್ರಿಯೆ ಬಂದೇ ಬರುತ್ತದೆ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ,” ಎಂದು ಹೇಳಿದರು
ವಿಶೇಷವಾಗಿ ಪಂಜಾಬ್ ವಲಯದಲ್ಲಿ ಅಂತಾರಾಷ್ಟ್ರೀಯ ಗಡಿ ಸುತ್ತಮುತ್ತ ಕಾರ್ಯನಿರ್ವಹಿಸುವ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಎದುರಾಗುವ ಅಪಾಯಗಳನ್ನು ಸಿಂಗ್ ಎತ್ತಿ ತೋರಿಸಿದ್ದಾರೆ. ಇದಕ್ಕೆ ಸಾಕ್ಷಿಯಗಿ ಸುದ್ದಿಗೋಷ್ಠಿ ಸಮಯದಲ್ಲಿ, ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ನಾಗರಿಕ ವಿಮಾನಯಾನ ದಟ್ಟಣೆಯನ್ನು ತೋರಿಸುವ ರಾಡಾರ್ ಡೇಟಾವನ್ನು ಪ್ರದರ್ಶಿಸಿದರು.
ಡಾಟಾ ಸಹಿತ ಆರೋಪ
“ಸುರಕ್ಷತೆಯ ದೃಷ್ಟಿಯಿಂದ ಭಾರತವು ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಆದರೆ ನಾಗರಿಕ ವಿಮಾನಗಳು ಕರಾಚಿ ಮತ್ತು ಲಾಹೋರ್ ನಡುವೆ ಹಾರಾಟ ಮುಂದುವರಿಸಿವೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ” ಎಂದು ಫ್ಲೈಟ್ ರಾಡಾರ್ 24 ಅಪ್ಲಿಕೇಶನ್‌ನಿಂದ ಪಡೆದ ಸ್ಕ್ರೀನ್‌ಶಾಟ್ ಅನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಮುಗ್ದ ಜೀವ ಬಲಿಯಾಗಬಾರದು
ಪಾಕಿಸ್ತಾನದ ಈ ಕ್ರಮವು ಅಜಾಗರೂಕ ಮತ್ತು ಬೇಜವಾಬ್ದಾರಿಯುತ ಎಂದು ಭಾರತ ಖಂಡಿಸಿದೆ. ಮುಗ್ಧ ಪ್ರಯಾಣಿಕರ ಜೀವವನ್ನು ಅನಗತ್ಯವಾಗಿ ಅಪಾಯಕ್ಕೆ ಸಿಲುಕಿಸಲಾಗಿದೆ ಎಂದು ಒತ್ತಿಹೇಳಿದೆ. ಇದರೊಂದಿಗೆ ಪಾಕಿಸ್ತಾನವು ತನ್ನದೇ ದೇಶದ ಜನರ ಸುರಕ್ಷತೆಗೆ ಒತ್ತು ನೀಡುತ್ತಿಲ್ಲ ಎಂಬುದು ಸಾಬೀತಾಗಿದೆ. ಭಾರತದ ಆರೋಪದೊಂದಿಗೆ ಪಾಕ್ ಮತ್ತೆ ಮತ್ತೆ ಬೆತ್ತಲಾಗುತ್ತಿದೆ. ಭಾರತೀಯ ವಾಯುಸೇನೆಯು ಸಾಕಷ್ಟು ಸಂಯಮ ಪ್ರದರ್ಶಿಸಿದೆ ಎಂದು ಸಿಂಗ್ ಹೇಳಿದರು. ಇಷ್ಟೇ ಅಲ್ಲ. ಪಾಕಿಸ್ತಾನದ ವಾಯುಪ್ರದೇಶದಲ್ಲಿ ನಾಗರಿಕ ವಿಮಾನಗಳಿಗೆ ಯಾವುದೇ ತೊಂದರೆ ಆಗಬಾರದೆಂದು, ತಕ್ಷಣವೇ ಪಾಕ್ ವಿರುದ್ಧ ಪ್ರತೀಕಾರ ತೆಗೆದುಕೊಳ್ಳದಿರಲು ನಿರ್ಧರಿಸಿತು. ಆ ಮೂಲಕ ಭಾರತ ಮತ್ತೊಮ್ಮೆ ಉದಾರತೆ ಪ್ರದರ್ಶಿಸಿದೆ.


