ಕನ್ನಡ ಸುದ್ದಿ  /  Nation And-world  /  Pakistan Media Body Bans Tv Broadcasts Of Speeches Of Imran Khan

Imran Khan: ಸೇನೆ ಮೇಲೆ ಆರೋಪ: ಇಮ್ರಾನ್‌ ಖಾನ್‌ ಭಾಷಣ ಪ್ರಸಾರಕ್ಕೆ ನಿಷೇಧ ಹೇರಿದ ಪಾಕ್‌ ಮಾಧ್ಯಮಗಳು!

ಯಾವುದೇ ಆಧಾರವಿಲ್ಲದೇ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌, ಪಾಕ್‌ ಸೇನೆ ಮತ್ತು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಇಮ್ರಾನ್‌ ಖಾನ್‌ ಭಾಷಣಗಳ ಪ್ರಸಾರದ ಮೇಲೆ ನಿಷೇಧ ಹೇರಿದೆ. ಇಮ್ರಾನ್‌ ಖಾನ್‌ಪತ್ರಿಕಾಗೋಷ್ಠಿಗಳನ್ನೂ ಪ್ರಸಾರ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.

ಇಮ್ರಾನ್‌ ಖಾನ್‌ (ಸಂಗ್ರಹ ಚಿತ್ರ)
ಇಮ್ರಾನ್‌ ಖಾನ್‌ (ಸಂಗ್ರಹ ಚಿತ್ರ) (ANI)

ಇಸ್ಲಾಮಾಬಾದ್:‌ ಪಾಕ್‌ ಸೇನೆ ಮತ್ತು ಸರ್ಕಾರದ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಿರುವ ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಮತ್ತು ಪಾಕಿಸ್ತಾನ ತೆಹ್ರಿಕ್-ಎ-ಇನ್ಸಾಫ್‌(ಪಿಟಿಐ) ಪಕ್ಷ ಮುಖ್ಯಸ್ಥ ಇಮ್ರಾನ್‌ ಖಾನ್‌, ತಮ್ಮ ಮೇಲೆ ವಜೀರಾಬಾದ್‌ನಲ್ಲಿ ನಡೆದ ಮಾರಣಾಂತಿಕ ದಾಳಿಯ ಯೋಜನೆಯಲ್ಲಿ ಪಾಕ್‌ ಸೇನೆಯ ಉನ್ನತ ಅಧಿಕಾರಿಯೋರ್ವ ಶಾಮೀಲಾಗಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸೇನೆ ಮತ್ತು ಸರ್ಕಾರದ ಕುಮ್ಮಕ್ಕಿನಿಂದಲೇ ತಮ್ಮ ಮೇಲೆ ಹತ್ಯಾಯತ್ನ ನಡೆಸಲಾಗಿತ್ತು ಎಂಬ ಇಮ್ರಾನ್‌ ಖಾನ್‌ ಆರೋಪ, ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದೆ. ಹತ್ಯಾಯತ್ನವನ್ನು ಖಂಡಿಸಿ ಪಿಟಿಐ ಕಾರ್ಯಕರ್ತು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಹಲವೆಡೆ ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ.

ಈ ಮಧ್ಯೆ ಯಾವುದೇ ಆಧಾರವಿಲ್ಲದೇ ಇಮ್ರಾನ್‌ ಖಾನ್‌ ಸೇನೆ ಮತ್ತು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಇಮ್ರಾನ್‌ ಖಾನ್‌ ಭಾಷಣಗಳ ಪ್ರಸಾರದ ಮೇಲೆ ನಿಷೇಧ ಹೇರಿದೆ.

ಹಖೀಕಿ ಆಜಾದಿ ಮಾರ್ಚ್(ಹಕ್ಕಿನ ಸ್ವಾತಂತ್ರ್ಯದ ನಡಿಗೆ) ಯಾತ್ರೆಯಲ್ಲಿ ಇಮ್ರಾನ್‌ ಖಾನ್‌ ಮಾಡುವ ಭಾಷಣಗಳು ಹಾಗೂ ನಡೆಸುವ ಪತ್ರಿಕಾಗೋಷ್ಠಿಗಳನ್ನು ಯಾವುದೇ ದೃಶ್ಯ ಮಾಧ್ಯಮಗಳು ಪ್ರಸಾರ ಮಾಡುವಂತಿಲ್ಲ ಎಂದು ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಆದೇಶ ಹೊರಡಿಸಿದೆ.

ಇಮ್ರಾನ್‌ ಖಾನ್‌ ಅವರು ತಮ್ಮ ಆರೋಪಗಳಿಗೆ ಯಾವುದೇ ಸೂಕ್ತ ಸಾಕ್ಷ್ಯಾಧಾರ ಒದಗಿಸಿಲ್ಲ. ಅಲ್ಲದೇ ಸೇನೆ ಮತ್ತು ಸರ್ಕಾರದ ವಿರುದ್ಧ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಇದು ಆಂತರಿಕ ಯುದ್ಧಕ್ಕೆ ಪ್ರೆರಣೆ ನೀಡುತ್ತಿದ್ದು, ಅವರ ದ್ವೇಷ ಭಾಷಣಗಳು ಅಪಾಯಕಾರಿಯಾಗಿವೆ ಎಂದು ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಆತಂಕ ವ್ಯಕ್ತಪಡಿಸಿದೆ.

ಜನರು ಹಿಂಸಾಚಾರಕ್ಕೆ ಇಳಿಯುವಂತೆ ಪ್ರಚೋದನೆ ನೀಡುತ್ತಿರುವ ಇಮ್ರಾನ್‌ ಖಾನ್‌, ತಮ್ಮ ದ್ವೇಷ ಭಾಷಣಗಳಿಂದ ದೇಶದ ಆಂತರಿಕ ಭದ್ರತೆಯನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಹೀಗಾಗಿ ಅವರ ಭಾಷಣ ಮತ್ತು ಪತ್ರಿಕಾಗೋಷ್ಠಿಗಳ ಪ್ರಸಾರವನ್ನು ನಿಲ್ಲಿಸುವಂತೆ ಎಲ್ಲಾ ದೃಶ್ಯ ಮಾಧ್ಯಮಗಳಿಗೆ ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಸೂಚನೆ ನೀಡಿದೆ.

ಅಷ್ಟೇ ಅಲ್ಲದೇ ಇಮ್ರಾನ್‌ ಖಾನ್‌ ಅವರ ಭಾಷಣಗಳ ಮರುಪ್ರಸಾರ ಕೂಡ ನಡೆಸದಂತೆ ದೃಶ್ಯ ಮಾಧ್ಯಮಗಳಿಗೆ ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಹೇಳಿದ್ದು, 2015ರಲ್ಲಿ ಜಾರಿ ಮಾಡಲಾದ ಪಿಇಎಂಆರ್‌ಎ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಒಂದು ವೇಳೆ ಯಾವುದೇ ದೃಶ್ಯ ಮಾಧ್ಯಮ ಈ ಆದೇಶವನ್ನು ಪಾಲಿಸದೇ ಹೋದರೆ, ಯಾವುದೇ ಪೂರ್ವ ಮುನ್ಸೂಚನೆ ನೀಡದೇ ಪರವಾನಿಗಿಯನ್ನು ರದ್ದುಪಡಿಸಲಾಗುವುದು ಎಂದು ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಹಖೀಕಿ ಆಜಾದಿ ಮಾರ್ಚ್‌ ವೇಳೆ ವಜೀರಾಬಾದ್‌ನಲ್ಲಿ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಇಮ್ರಾನ್‌ ಖಾನ್‌ ಅವರ ಕಾಲಿನ ಭಾಗಕ್ಕೆ ನಾಲ್ಕು ಗುಂಡುಗಳು ತಗುಲಿದ್ದು, ಅವರು ಲಾಹೋರ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಮೇಲೆ ದಾಲೀ ನಡೆದ ಮರುದಿನ ವಿಡಿಯೋ ಭಾಷಣ ಮಾಡಿದ್ದ ಇಮ್ರಾನ್‌ ಖಾನ್‌, ಈ ಹತ್ಯಾಯತ್ನಕ್ಕೆ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌, ಐಎಸ್‌ಐನ ಉನ್ನತ ಜನರಲ್‌ ಹಾಗೂ ಪಾಕ್‌ನ ಆಂತರಿಕ ಸಚಿವರ ಕುಮ್ಮಕ್ಕು ಇದೆ ಎಂದು ಗಂಭೀರ ಆರೋಪ ಮಾಡಿದ್ದರು.

ಅಲ್ಲದೇ ಪಾಕಿಸ್ತಾನ ಜನತೆ ತಮ್ನ ಸ್ವಾತಂತ್ರ್ಯಕ್ಕಾಗಿ ಬೀದಿಗಿಳಿಯುವಂತೆ ಕರೆ ನೀಡಿದ್ದ ಇಮ್ರಾನ್‌ ಖಾನ್‌, ವ್ಯವಸ್ಥೆಯ ವಿರುದ್ಧ ಬಂಡೇಳುವಂತೆ ಪ್ರಚೋದಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಅವರ ಭಾಷಣದ ಮೇಲೆ ನಿಯಂತ್ರಣ ಹೇರಿದೆ.

ವಿಭಾಗ