ಕನ್ನಡ ಸುದ್ದಿ  /  Nation And-world  /  Pakistan News Khalistan Commando Chief Paramjit Singh Panjwar Gunned Down In Lahore Mgb

Paramjit Singh Panjwar: ಪಾಕಿಸ್ತಾನದಲ್ಲಿ ಖಲಿಸ್ತಾನಿ ಮುಖಂಡ ಪರಮ್‌ಜಿತ್ ಸಿಂಗ್​ನ ಗುಂಡಿಕ್ಕಿ ಹತ್ಯೆ; ಈತನ ಬಗ್ಗೆ ಇಲ್ಲಿದೆ ಮಾಹಿತಿ

Paramjit Singh Panjwar Murder: ಪರಮ್‌ಜಿತ್ ಸಿಂಗ್ ತನ್ನ ಗನ್‌ಮ್ಯಾನ್‌ನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಪರಮ್‌ಜಿತ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ಗನ್​ಮ್ಯಾನ್​ ಗಂಭೀರವಾಗಿ ಗಾಯಗೊಂಡಿದ್ದಾನೆ.

ಪರಮ್‌ಜಿತ್ ಸಿಂಗ್ ಪಂಜ್ವಾರ್ (twitter/@VivekSi85847001)
ಪರಮ್‌ಜಿತ್ ಸಿಂಗ್ ಪಂಜ್ವಾರ್ (twitter/@VivekSi85847001)

ಲಾಹೋರ್‌ (ಪಾಕಿಸ್ತಾನ): ವಾಂಟೆಡ್ ಭಯೋತ್ಪಾದಕ ಮತ್ತು ಖಲಿಸ್ತಾನ್ ಕಮಾಂಡೋ ಫೋರ್ಸ್ (ಕೆಸಿಎಫ್) ಮುಖ್ಯಸ್ಥ ಪರಮ್‌ಜಿತ್ ಸಿಂಗ್ ಪಂಜ್ವಾರ್ ಅಲಿಯಾಸ್ ಮಲಿಕ್ ಸರ್ದಾರ್ ಸಿಂಗ್​ನನ್ನು ಇಂದು (ಮೇ 6, ಶನಿವಾರ) ಪಾಕಿಸ್ತಾನದ ಲಾಹೋರ್‌ನ ಜೋಹರ್ ಟೌನ್‌ನಲ್ಲಿ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಜೋಹರ್ ಟೌನ್‌ನಲ್ಲಿರುವ ಸನ್​ಫ್ಲವರ್​ ಸೊಸೈಟಿಯಲ್ಲಿರುವ ತನ್ನ ಮನೆಯ ಬಳಿ ಬೆಳಗ್ಗೆ 6 ಗಂಟೆಯ ಸುಮಾರಿಗೆ ಪರಮ್‌ಜಿತ್ ಸಿಂಗ್ ತನ್ನ ಗನ್‌ಮ್ಯಾನ್‌ನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಪರಮ್‌ಜಿತ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ಗನ್​ಮ್ಯಾನ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಭಾರತದ ಪಂಜಾಬ್​ನ ತಾರ್ನ್​ ತರಣ್​ ಬಳಿಯ ಪಂಜ್ವಾರ್ ಗ್ರಾಮದಲ್ಲಿ ಜನಿಸಿದ ಪರಮ್‌ಜಿತ್ ಸಿಂಗ್, ಸೋಹಾಲ್‌ನ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದನು. ಆದರೆ, ತನ್ನ ಸೋದರಸಂಬಂಧಿ ಲಾಭ್ ಸಿಂಗ್ ಅವರಿಂದ ಪ್ರೇರೇಪಿತರಾಗಿ ತೀವ್ರಗಾಮಿಯಾಗಿ ಬದಲಾಗಿದ್ದನು. 1986 ರಲ್ಲಿ ಸಿಖ್ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ 'ಖಲಿಸ್ತಾನ್ ಕಮಾಂಡೋ ಫೋರ್ಸ್'​ಗೆ ಸೇರ್ಪಡೆಯಾದನು.

ಭಾರತೀಯ ಭದ್ರತಾ ಪಡೆಗಳು ಲಾಭ್ ಸಿಂಗ್​ನನ್ನು ಹೊಡೆದುರುಳಿಸಿದ ನಂತರ ಕೆಸಿಎಫ್ ಉಸ್ತುವಾರಿ ವಹಿಸಿಕೊಂಡನು. ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಈತ ಅಲ್ಲಿಂದ ಭಾರತದ ಪಂಜಾಬ್‌ಗೆ ಡ್ರೋನ್‌ಗಳ ಮೂಲಕ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದನು. ಈ ಮೂಲಕ ನಿಧಿ ಸಂಗ್ರಹಿಸಿ ಕೆಸಿಎಫ್ ಸಂಘಟನೆ ನಡೆಸುತ್ತಿದ್ದನು. ಈತನ ಪತ್ನಿ ಮತ್ತು ಮಕ್ಕಳು ಜರ್ಮನಿಗೆ ಸ್ಥಳಾಂತರಗೊಂಡಿದ್ದರು. ಪಾಕಿಸ್ತಾನದ ಭಯೋತ್ಪಾದಕರ ಪಟ್ಟಿಯಲ್ಲಿ ಈತನ ಹೆಸರಿತ್ತು.

ಕೆಲ ದಿನಗಳ ಹಿಂದಷ್ಟೇ ಅಮೃತಪಾಲ್ ಸಿಂಗ್ ಬಂಧನ

ಪರಾರಿಯಾಗಿ ಒಂದು ತಿಂಗಳು ತಲೆಮರೆಸಿಕೊಂಡಿದ್ದ ತೀವ್ರಗಾಮಿ ಸಿಖ್ ಬೋಧಕ ಮತ್ತು ಖಲಿಸ್ತಾನ್ ಪರ ಸಂಘಟನೆಯಾದ 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ ಅಮೃತ್​ಪಾಲ್ ಸಿಂಗ್​ನನ್ನು ಪಂಜಾಬ್​ ಪೊಲೀಸರು ಏಪ್ರಿಲ್​ 23 ರಂದು ಬಂಧಿಸಿದ್ದರು. ಪಂಜಾಬ್​​ನ ಮೊಗಾ ಜಿಲ್ಲೆಯ ರೋಡೆ ಗ್ರಾಮದಲ್ಲಿ ಈತನನ್ನು ಅರೆಸ್ಟ್ ಮಾಡಲಾಗಿತ್ತು.

ಮಾರ್ಚ್​ 18 ರಂದು ಜಲಂಧರ್ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಾರುಗಳಲ್ಲಿ ಅಮೃತ್​​ಪಾಲ್ ಸಿಂಗ್ ಹಾಗೂ ಅವರ ಸಹಚರರನ್ನು ಪೊಲೀಸರು ಬೆನ್ನೆಟ್ಟಿದ್ದರು. ಅಂದು ಅಮೃತಪಾಲ್ ಸಿಂಗ್​ನ 78 ಸಹಚರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಆದರೆ, ಪೊಲೀಸರ ಕೈಗೆ ಇನ್ನೇನು ಸಿಕ್ಕೇಬಿಟ್ಟರು ಎನ್ನುವಷ್ಟರಲ್ಲಿ ಅಮೃತ್​​​ಪಾಲ್ ಮಾತ್ರ ತಪ್ಪಿಸಿಕೊಂಡಿದ್ದನು. ರಾಜ್ಯಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ 300ಕ್ಕೂ ಹೆಚ್ಚು ರೈಫಲ್​ಗಳು, 373 ಸಜೀವ ಗುಂಡುಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈವರೆಗೆ ಆತನ 100ಕ್ಕೂ ಹೆಚ್ಚು ಸಹಚರರನ್ನು ಬಂಧಿಸಿ, ಅಮೃತ್​ಪಾಲ್​ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರೆಸಿದ್ದರು. ಒಂದು ತಿಂಗಳ ಬಳಿಕ ಅಮೃತ್​ಪಾಲ್ ಪೊಲೀಸರ ಬಲೆಗೆ ಬಿದ್ದಿದ್ದನು.

IPL_Entry_Point