Monsoon Brides; ಪಾಕಿಸ್ಥಾನದ ಬಾಲಕಿಯರಿಗೆ ಮದುವೆ ಸಂಕಟ, ಏನಿದು ಮಾನ್ಸೂನ್ ವಧು, ಹಣಕೊಟ್ಟು ಮದುವೆಯಾಗುವ ಪದ್ಧತಿ- Explainer-pakistan news monsoon brides pakistan how extreme weather is leading to rise in child marriages uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Monsoon Brides; ಪಾಕಿಸ್ಥಾನದ ಬಾಲಕಿಯರಿಗೆ ಮದುವೆ ಸಂಕಟ, ಏನಿದು ಮಾನ್ಸೂನ್ ವಧು, ಹಣಕೊಟ್ಟು ಮದುವೆಯಾಗುವ ಪದ್ಧತಿ- Explainer

Monsoon Brides; ಪಾಕಿಸ್ಥಾನದ ಬಾಲಕಿಯರಿಗೆ ಮದುವೆ ಸಂಕಟ, ಏನಿದು ಮಾನ್ಸೂನ್ ವಧು, ಹಣಕೊಟ್ಟು ಮದುವೆಯಾಗುವ ಪದ್ಧತಿ- Explainer

Child Marriage in Pakistan; ಪಾಕಿಸ್ತಾನದ ಪುಟ್ಟ ಬಾಲಕಿಯರಿಗೆ ಇತ್ತೀಚಿನ ವರ್ಷಗಳಲ್ಲಿ ಮದುವೆಯ ಸಂಕಟ. ಬದುಕು ಎಂದರೇನು ಎಂಬುದು ಅರಿಯುವ ಮೊದಲೇ ಸಂಕಷ್ಟಕ್ಕೆ ಸಿಲುಕಿ ಕಣ್ಣೀರಾಗುತ್ತಿದ್ದಾರೆ ಬಾಲೆಯರು. ಪಾಕ್‌ನಲ್ಲಿ ಈಗ ಹಣಕೊಟ್ಟು ಮದುವೆಯಾಗುವ ಟ್ರೆಂಡ್‌. ಹೀಗಾಗಿ ಮಾನ್ಸೂನ್ ವಧುಗಳು ಹೆಚ್ಚಾಗಿದ್ದಾರೆ.

Monsoon Brides; ಪಾಕಿಸ್ತಾನದ 14 ವರ್ಷದ ಪುತ್ರಿ ಶಮಿಲಾ ಮತ್ತು ಆಕೆಯ ಸಹೋದರಿ 13 ವರ್ಷದ ಅಮಿನಾ.
Monsoon Brides; ಪಾಕಿಸ್ತಾನದ 14 ವರ್ಷದ ಪುತ್ರಿ ಶಮಿಲಾ ಮತ್ತು ಆಕೆಯ ಸಹೋದರಿ 13 ವರ್ಷದ ಅಮಿನಾ. (AFP)

ನವದೆಹಲಿ: ಭಾರತದ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಮಾನ್ಸೂನ್‌ ವಧು (Monsoon Bride) ಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬ ಕಳವಳಕಾರಿ ವಿಚಾರ ಈಗ ಜಗತ್ತಿನ ಗಮನಸೆಳೆದಿದೆ. ಇದು ಯಾವ ರೀತಿ ಮದುವೆ ಮತ್ತು ಏನಿದು ಮಾನ್ಸೂನ್‌ ವಧು ಎಂಬ ಕುತೂಹಲವೆ? ಇದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಹವಾಮಾನ ವೈಪರೀತ್ಯದ ಕಾರಣ ಪಾಕಿಸ್ತಾನದಲ್ಲಿ ಬರ ಪರಿಸ್ಥಿತಿ ಮತ್ತು ವಿಪರೀತ ಮಳೆಯೂ ಕಾಡಿದೆ. ಈ ನಡುವೆ ಅರಾಜಕತೆಯ ಕಾರಣ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದೆ. ಇವೆಲ್ಲದರ ಒಟ್ಟಾರೆ ಪರಿಣಾಮ ಮನುಷ್ಯ ಜೀವನದ ಮೇಲಾಗುತ್ತಿದೆ. ಬಡತನದ ಕಾರಣ ಮನುಷ್ಯರು ಅಸಹಾಯಕರಾಗಿದ್ದಾರೆ.

ಏನಿದು ಮಾನ್ಸೂನ್ ವಧು

ಪಾಕಿಸ್ತಾನದಲ್ಲಿ ವಿಪರೀತಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ನಂತರದಲ್ಲಿ ಬಡ ಕುಟುಂಬಗಳು ಇನ್ನಷ್ಟು ಬಡತನಕ್ಕೆ ಒಳಗಾಗಿವೆ. ಕೆಳ ಮಧ್ಯಮ ಕುಟುಂಬಗಳು ಬಡತನಕ್ಕೆ ಜಾರಿವೆ. ಹೀಗಾಗಿ ಇಂತಹ ಕುಟುಂಬಗಳು ತಮ್ಮ ಬದುಕಿನ ನಿರ್ವಹಣೆಗಾಗಿ ಪುಟ್ಟ ಹೆಣ್ಣು ಮಕ್ಕಳ ಮಾರಾಟ ಮಾಡಲಾರಂಭಿಸಿವೆ. ಇಂತಹ ಮಾರಾಟಕ್ಕೆ “ಮದುವೆ” ಎಂಬ ಹಣೆಪಟ್ಟಿಯೂ ಇದೆ.

ಪ್ರವಾಹ ಪರಿಸ್ಥಿತಿ ಬಳಿಕ ತಮ್ಮ ಕುಟುಂಬದ ನಿರ್ವಹಣೆಗಾಗಿ ಪೋಷಕರು ತಮ್ಮ 14 ವರ್ಷದ ಪುತ್ರಿ ಶಮಿಲಾ ಮತ್ತು ಆಕೆಯ ಸಹೋದರಿ 13 ವರ್ಷದ ಅಮಿನಾ ಅವರನ್ನು 2 ಲಕ್ಷ ರೂಪಾಯಿ ಪಾಕಿಸ್ತಾನಿ ರೂಪಾಯಿಗೆ ಮಾರಾಟ ಮಾಡಿದರು. ಅರ್ಥಾತ್ ಅವರ ವಯಸ್ಸಿಗಿಂತ ಎರಡು, ಮೂರು ಪಟ್ಟು ಹೆಚ್ಚು ವಯಸ್ಸಿ ಪುರುಷರಿಗೆ ಕೊಟ್ಟು “ಮದುವೆ” ಮಾಡಿದರು. ಇಂತಹ ವಧುಗಳನ್ನು “ಮಾನ್ಸೂನ್ ವಧು (Monsoon Bride)” ಎಂದು ಗುರುತಿಸುತ್ತಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ಈ ಬಾಲ್ಯ ವಿವಾಹದ ಬಗ್ಗೆ ಮಾತನಾಡಿರುವ ಶಮಿಲಾ, “ಮದುವೆ ಖುಷಿ ತಂದಿತ್ತು. ನನ್ನ ಜೀವನ ಉತ್ತಮವಾಗಿರಲಿದೆ ಎಂಬ ನಂಬಿಕೆಯಲ್ಲಿದ್ದೆ. ನೆಮ್ಮದಿಯ ಜೀವನಕ್ಕಾಗಿ ಎದುರು ನೋಡುತ್ತಿದ್ದೆ. ಆದರೆ, ಅದು ಹಾಗಲ್ಲ ಎಂದು ಈಗ ಅರ್ಥಮಾಡಿಕೊಂಡಿದ್ದೇನೆ” ಎಂದು ಕರಾಳ ನೆನಪುಗಳನ್ನು ಹಂಚಿಕೊಂಡಿರುವುದಾಗಿ ವರದಿ ವಿವರಿಸಿದೆ.

ಲಿಪ್‌ಸ್ಟಿಕ್‌ ಸಿಗುವುದೆಂದು ಮದುವೆಯಾದೆ: ಮದುವೆಯಾದರೆ ಲಿಪ್‌ಸ್ಟಿಕ್‌, ಮೇಕಪ್‌, ಬಟ್ಟೆ ಮತ್ತು ಪಾತ್ರೆ ಸಾಮಗ್ರಿಗಳೆಲ್ಲ ಸಿಗುತ್ತದೆ ಎಂದು ಭಾವಿಸಿ ಮದುವೆಯಾಗಿದ್ದೆ. 2022ರಲ್ಲಿ ನನ್ನ ಮದುವೆಯಾಯಿತು. ಆಗ ನನಗೆ 14 ವರ್ಷ ವಯಸ್ಸು. ನಮ್ಮ ಮದುವೆಗಾಗಿ ಪತಿಯು ನನ್ನ ಹೆತ್ತವರಿಗೆ 2.5 ಲಕ್ಷ ರೂಪಾಯಿ ಕೊಟ್ಟಿದ್ದರು. ಆದರೆ ಅದು ಈಗ ಸಾಲವಾಗಿದೆ. ಮರುಪಾವತಿಸಲು ಅನ್ಯ ಮಾರ್ಗವಿಲ್ಲ. ಪತಿ ಮತ್ತು ಮಗುವಿನೊಂದಿಗೆ ಮನೆಗೆ ಮರಳಿದ್ದೇನೆ ಎಂದು ನಜ್ಮಾ ತನ್ನ ಕಥೆಯನ್ನು ವಿವರಿಸಿದ್ದಾಗಿ ವರದಿ ಹೇಳಿದೆ.

ಮಳೆಯಿಂದಾಗಿ ಪುಟ್ಟ ಹೆಣ್ಣು ಮಕ್ಕಳ ಜೀವನ ನಾಶ

ಪಾಕಿಸ್ತಾನದ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ, ಪ್ರವಾಹ ಎಲ್ಲವನ್ನೂ ಹಾಳು ಮಾಡಿದೆ. ಜುಲೈನಿಂದ ಸೆಪ್ಟೆಂಬರ್ ವರೆಗೆ ನಡೆಯುವ ಮುಂಗಾರು ಹಂಗಾಮು ಲಕ್ಷಾಂತರ ರೈತರ ಜೀವನೋಪಾಯದ ಪ್ರಮುಖ ಭಾಗವಾಗಿದೆ. ಆದರೆ, ಹವಾಮಾನ ವೈಪರೀತ್ಯ ಅನಾವೃಷ್ಟಿಯಂತೆಯೇ ಅತಿವೃಷ್ಟಿಗೂ ಕಾರಣವಾಗುತ್ತದೆ. ಇದಲ್ಲದೆ ಭೂಕುಸಿತ, ಪ್ರವಾಹ ಮತ್ತು ಬೆಳೆ ನಾಶಕ್ಕೆ ಕಾರಣವಾಗುತ್ತದೆ. 2022 ರ ಪ್ರವಾಹದಿಂದ ಸಿಂಧ್ ಸೇರಿ ವಿವಿಧೆಡೆ ಹಲವು ಗ್ರಾಮಗಳು ನಾಶವಾಗಿವೆ.

ಎರಡು ವರ್ಷ ಮೊದಲು ಈ ಪರಿಸ್ಥಿತಿ ಇರಲಿಲ್ಲ: 2022ರ ಮಳೆಗಾಲದ ಮೊದಲು ನಮ್ಮ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವ ಅವಶ್ಯಕತೆ ಇರಲಿಲ್ಲ’ ಎನ್ನುತ್ತಾರೆ ಗ್ರಾಮದ ಹಿರಿಯರಾದ 65ರ ಹರೆಯದ ಮೈ ಹಜಾನಿ.

"ಹೆಣ್ಣುಮಕ್ಕಳು ಜಮೀನು ಕೆಲಸ, ಮರದ ಮಂಚಕ್ಕೆ ಹಗ್ಗಗಳನ್ನು ಮಾಡುತ್ತಿದ್ದರು. ಪುರುಷರು ಮೀನುಗಾರಿಕೆ ಮತ್ತು ಕೃಷಿಯಲ್ಲಿ ನಿರತರಾಗಿದ್ದರು. ಯಾವಾಗಲೂ ಮಾಡಲು ಕೆಲಸವಿತ್ತು. ಆದರೆ, ಈಗ ಹಣದ ಆಸೆಗಾಗಿ ಕುಟುಂಬದವರು ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ ಮಾಡುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಬಾಲ್ಯ ವಿವಾಹದ ಸಮಸ್ಯೆ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಸಾಮಾನ್ಯವಾಗಿದೆ. ಅಲ್ಲಿ ಹುಡುಗಿಯರು 18 ವರ್ಷಕ್ಕಿಂತ ಮೊದಲು ಮದುವೆಯಾಗುತ್ತಾರೆ. ಬಾಲ್ಯ ವಿವಾಹ ಸಂಖ್ಯೆ ಪ್ರಕಾರ ಪಾಕಿಸ್ತಾನ ಆರನೇ ಸ್ಥಾನದಲ್ಲಿದೆ ಎಂದು ಡಿಸೆಂಬರ್‌ನಲ್ಲಿ ಪ್ರಕಟವಾದ ಸರ್ಕಾರಿ ಅಂಕಿಅಂಶಗಳು ತಿಳಿಸಿವೆ. ಮದುವೆಯ ಕಾನೂನು ವಯಸ್ಸು ವಿವಿಧ ಪ್ರದೇಶಗಳಲ್ಲಿ 16 ರಿಂದ 18 ರವರೆಗೆ ಇರುತ್ತದೆ. ಆದರೆ, ಕಾನೂನು ಕಾಗದದಲ್ಲಷ್ಟೇ ಉಳಿದುಕೊಂಡಿದೆ.

45 ಅಪ್ರಾಪ್ತ ಬಾಲಕಿಯರ ವಿವಾಹ: ಪ್ರವಾಹವು ದೇಶದ ಮೂರನೇ ಒಂದು ಭಾಗವನ್ನು ಮುಳುಗಿಸಿದೆ. ಇದರಿಂದ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದರು ಮತ್ತು ಬೆಳೆಗಳು ನಾಶವಾಗಿವೆ. ಇದರಿಂದಾಗಿ ಮುಂಗಾರು ಮಳೆಯ ವಧುವಿನ ಟ್ರೆಂಡ್ ಶುರುವಾಗಿದೆ. 2022 ರ ಪ್ರವಾಹದ ನಂತರ, ದಾದು ಜಿಲ್ಲೆಯ ಹಳ್ಳಿಗಳಲ್ಲಿ ಬಾಲ್ಯ ವಿವಾಹವು ಉಲ್ಬಣಗೊಂಡಿದೆ ಎಂದು ಎಂದು ಎನ್‌ಜಿಒ ಸುಜಾಗ್ ಸಂಸಾರ್ ಸಂಸ್ಥಾಪಕ ಮಶುಕ್ ಬಿಹಾರಿ ಹೇಳಿದ್ದಾರೆ.

ಕಳೆದ ಮಳೆಗಾಲದಿಂದ ಈಚೆಗೆ 45ಕ್ಕೂ ಹೆಚ್ಚು ಬಾಲಕಿಯರಿಗೆ ಮದುವೆ ಮಾಡಲಾಗಿದೆ. ಈ ಪ್ರದೇಶವು ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ ಜನರು ತಮ್ಮ ಕುಟುಂಬವನ್ನು ಪೋಷಿಸಲು ಹಣಕ್ಕಾಗಿ ತಮ್ಮ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಾರೆ ಎಂದು ಅವರು ವಿವರಿಸಿದ್ದಾಗಿ ವರದಿ ಹೇಳಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.