ಪಾಕಿಸ್ತಾನ: ಇಮ್ರಾನ್ ಖಾನ್ ಮಾತು ಮೀರಿ ಪ್ರತಿಭಟನೆ ದಿಕ್ಕು ತಪ್ಪಿಸಿದ್ರಾ ಬುಷ್ರಾ ಬೀಬಿ; ಪಿಟಿಐ ಪ್ರತಿಭಟನೆ ಏನಾಯಿತು, 5 ಮುಖ್ಯ ಅಂಶಗಳು
ಪಾಕಿಸ್ತಾನ: ಇಸ್ಲಾಮಾಬಾದ್‌ಗೆ ಪ್ರತಿಭಟನಾ ಮೆರವಣಿಗೆ ಬಂದ ಪಿಟಿಐ ನಾಯಕರು, ಕಾರ್ಯಕರ್ತರು ಏನಾದರು? ಇಮ್ರಾನ್ ಖಾನ್ ಮಾತು ಮೀರಿ ಪ್ರತಿಭಟನೆ ದಿಕ್ಕು ತಪ್ಪಿಸಿದ್ರಾ ಬುಷ್ರಾ ಬೀಬಿ, ಪಿಟಿಐ ಪ್ರತಿಭಟನೆ ಏನಾಯಿತು, ಗಮನಸೆಳೆದ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಯಾಗುವ ತನಕ ಡಿ ಚೌಕ್ ಬಿಟ್ಟು ಕದಲಬಾರದು. ಪ್ರತಿಭಟನೆ ಮುಂದುವರಿಸೋಣ ಎಂದ ಇಮ್ರಾನ್ ಖಾನ್ ಪತ್ನಿ ಬುಷ್ರಾ ಬೀಬಿ ಕರೆ ಕೊಟ್ಟಿದ್ದರು. ಆಕ್ರಮಣಕಾರಿ ನಿಲುವಿನೊಂದಿಗೆ ಬುಷ್ರಾ ಬೀಬಿ ರಾಜಕೀಯ ವಲಯದ ಗಮನಸೆಳೆದರು. ಪ್ರಧಾನಿಯಾಗಿದ್ದಾಗ ಭ್ರಷ್ಟಾಚಾರದಿಂದ ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಅಧಿಕಾರದ ದುರುಪಯೋಗದವರೆಗೆ 150 ಕ್ಕೂ ಹೆಚ್ಚು ಪ್ರಕರಣಗಳನ್ನು ಇಮ್ರಾನ್ ಖಾನ್ ಈಗ ಎದುರಿಸುತ್ತಿದ್ದಾರೆ. ನ್ಯಾಯಾಲಯದಿಂದ ಜಾಮೀನು ಸಿಕ್ಕರೂ ಜೈಲಿನಲ್ಲಿದ್ದಾರೆ. ಅವರ ಬಿಡುಗಡೆಗೆ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕರು ಒತ್ತಾಯಿಸುತ್ತಿದ್ದಾರೆ. ಇಮ್ರಾನ್ ಖಾನ್ ಜೈಲಿನಲ್ಲಿದ್ದುಕೊಂಡೇ ತಮ್ಮ ಪಕ್ಷ ಪಿಟಿಐಗೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವಂತೆ ಕರೆ ಕೊಟ್ಟಿದ್ದರು. ಅದರಂತೆ ಪಿಟಿಐ ನಾಯಕರು ಮತ್ತು ಕಾರ್ಯಕರ್ತರು ಇಸ್ಲಾಮಾಬಾದ್‌ನ ಡಿಚೌಕದ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದರು. ನವೆಂಬರ್ 25 ರಂದು ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ಕಾರಣ ಕನಿಷ್ಠ 5 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇದೇ ವೇಳೆ, ಇಮ್ರಾನ್ ಖಾನ್ ಅವರ ಬಿಡುಗಡೆಯಾಗುವ ತನಕ ಡಿ ಚೌಕ್ ಬಿಟ್ಟು ಕದಲಬಾರದು. ಪ್ರತಿಭಟನೆ ಮುಂದುವರಿಸೋಣ ಎಂದು ಇಮ್ರಾನ್ ಖಾನ್ ಪತ್ನಿ ಬುಷ್ರಾ ಬೀಬಿ ಕರೆ ಕೊಟ್ಟಿದ್ದರು. ಅದಾದ ಬಳಿಕ ಸರ್ಕಾರ ಇಂಟರ್‌ನೆಟ್ ಸೇವೆಗಳನ್ನು ರದ್ದುಗೊಳಿಸಿತು. ಹೀಗಾಗಿ ಅಲ್ಲಿನ ಸುದ್ದಿಗಳು ಬಹಿರಂಗವಾಗಿಲ್ಲ. ಆದರೆ, ಡಾನ್ ಪತ್ರಿಕೆಯಲ್ಲಿ ಪಿಟಿಐ ಒಳಗಿನ ರಾಜಕೀಯ ಬೆಳವಣಿಗೆಗಳು ಗಮನಸೆಳೆದವು.
ಪಿಟಿಐ ಪ್ರತಿಭಟನೆ ಏನಾಯಿತು, 5 ಮುಖ್ಯ ಅಂಶಗಳು
1) ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಇಸ್ಲಾಮಾಬಾದ್‌ನಲ್ಲಿ ಜೈಲಿನಲ್ಲಿದ್ದಾರೆ. ಅವರ ವಿರುದ್ಧ 150ಕ್ಕೂ ಹೆಚ್ಚು ಪ್ರಕರಣಗಳಿದ್ದು, ಅವೆಲ್ಲವೂ ಅವರು ಪ್ರಧಾನ ಮಂತ್ರಿ ಆಗಿದ್ದ ಸಂದರ್ಭದ ಭ್ರಷ್ಟಾಚಾರ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದು ಮುಂತಾದವಕ್ಕೆ ಸಂಬಂಧಿಸಿವೆ. ಇಮ್ರಾನ್ ಖಾನ್ ಅವರು ನವೆಂಬರ್ 24 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಬೇಕು ಎಂದು ನವೆಂಬರ್ 13 ರಂದು, "ಅಂತಿಮ ಕರೆ" ನೀಡಿದರು, ಪಿಟಿಐಗೆ ಸಿಕ್ಕ ಚುನಾವಣಾ ಜನಾದೇಶವನ್ನು ಮರುಸ್ಥಾಪಿಸಲು, ಪಕ್ಷದ ಬಂಧಿತ ಸದಸ್ಯರನ್ನು ಬಿಡುಗಡೆ ಮಾಡಲು ಮತ್ತು 26 ನೇ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.
2) ಇಸ್ಲಾಮಾಬಾದ್‌ನ ಡಿ-ಚೌಕ್‌ನಿಂದ ಪಿಟಿಐ ಪ್ರತಿಭಟನಾಕಾರರನ್ನು ಚದುರಿಸಲು ಕಾನೂನು ಜಾರಿ ಸಂಸ್ಥೆಗಳು ಕ್ರಮ ಕೈಗೊಂಡಿದ್ದರಿಂದ ಬುಧವಾರ (ನವೆಂಬರ್ 27) ಮುಂಜಾನೆ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂದಪುರ್ ಮತ್ತು ಮಾಜಿ ಪ್ರಥಮ ಮಹಿಳೆ ಬುಶ್ರಾ ಬೀಬಿ ಅವರನ್ನು ಪಲಾಯನ ಮಾಡಿದರು ಎಂದು ಸರ್ಕಾರದ ಮಂತ್ರಿಗಳು ಲೇವಡಿ ಮಾಡಿರುವುದಾಗಿ ದ ಡಾನ್ ವರದಿ ಮಾಡಿದೆ.
3) ಏತನ್ಮಧ್ಯೆ, ಅನೇಕ ಮುಖಂಡರು ಮತ್ತು ವ್ಯಕ್ತಿಗಳು ಡಿ-ಚೌಕ್‌ನಲ್ಲಿರುವ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂದಪುರ್ ಮತ್ತು ಬುಶ್ರಾ ಬೀಬಿ ಹಾಗೂ ಪ್ರತಿಭಟನಾಕಾರರ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ ಎಂದು ಪಿಟಿಐ ಹೇಳಿಕೊಂಡಿದೆ. ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂದಪುರ್ ಮತ್ತು ಬುಶ್ರಾ ಬೀಬಿಗೆ ಸಂಬಂಧಿಸಿ ಸರ್ಕಾರ ಬಿತ್ತರಿಸುತ್ತಿರುವ ಸುದ್ದಿಗಳು ಫೇಕ್ ನ್ಯೂಸ್ ಎಂದು ವಿಡಿಯೋಗಳನ್ನು ಪಿಟಿಐ ಹಂಚಿಕೊಂಡಿದೆ.
4) ಪ್ರತಿಭಟನಾಕಾರರನ್ನು ಚದುರಿಸುವ ಪ್ರಯತ್ನದಲ್ಲಿ ಗುಂಡಿನ ದಾಳಿ ನಡೆಸಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದರೂ ಪಾಕಿಸ್ತಾನ ಸರ್ಕಾರ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ಪಿಟಿಐ ಆರೋಪಿಸಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಶೇರ್ ಮಾಡಿದೆ.
5) ಪಕ್ಷದ ಪ್ರತಿಭಟನೆಯ ಸ್ಥಳವನ್ನು ಡಿ-ಚೌಕ್‌ನಿಂದ ಉಪನಗರ ಪ್ರದೇಶಗಳಿಗೆ ಸ್ಥಳಾಂತರಿಸಲು ಸರ್ಕಾರ ಸೂಚಿಸಿದ ಪ್ರಸ್ತಾವನೆಗೆ ಇಮ್ರಾನ್ ಒಪ್ಪಿಗೆ ನೀಡಿದ್ದರು ಆದರೆ, ಬುಶ್ರಾ ಬೀಬಿ ಮತ್ತು ಪಕ್ಷದ ಕೆಲವು ನಾಯಕರು ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿ ಡಿ ಚೌಕ್‌ಗೆ ಪ್ರತಿಭಟನಾ ಮೆರವಣಿಗೆ ಕೊಂಡೊಯ್ದರು. ಪರಿಣಾಮ, ಪಕ್ಷದೊಳಗೆ ಈಗ ಭಿನ್ನಮತ ಏರ್ಪಟ್ಟಿದೆ ಎಂದು ದ ಡಾನ್ ವರದಿ ಮಾಡಿದೆ.
ಪಿಟಿಐನಲ್ಲಿ ಬುಶ್ರಾ ಬೀಬಿ ಪವರ್‌ಫುಲ್
ಇಸ್ಲಾಮಾಬಾದ್‌ನ ಡಿ ಚೌಕ್ ಪ್ರತಿಭಟನಾ ಜಾಥಾದಲ್ಲಿ ಪಿಟಿಐನ ಶಕ್ತಿಶಾಲಿ ನಾಯಕರು ಯಾರು ಎಂಬುದು ಬಹಿರಂಗವಾಗಿದೆ. “ಡಿ ಚೌಕ್ ಪ್ರತಿಭಟನೆಗೆ ಸಂಬಂಧಿಸಿ ಖಾನ್ ಅವರು ಕೊಟ್ಟ ಸಲಹೆಯನ್ನು ನಾವು ಸ್ವೀಕರಿಸಿದ್ದೆವು. ಆದರೆ ಈ ವಿಷಯವಾಗಿ ಬುಶ್ರಾ ಬೀಬಿಗೆ ಒಪ್ಪಿಗೆ ಇರಲಿಲ್ಲ. ಡಿ ಚೌಕ್‌ಗೆ ಪ್ರತಿಭಟನಾ ಜಾಥಾ ಹೋಗುವುದಿದ್ದರೆ ಮಾತ್ರ ಬರುವುದಾಗಿ ಹಟ ಹಿಡಿದರು. ಹೀಗಾಗಿ ಹೆಚ್ಚಿನ ನಾಯಕರು ಅವರ ಮಾತಿಗೆ ತಲೆದೂಗಿದರು. ಸದ್ಯದ ಮಟ್ಟಿಗೆ ಪಕ್ಷವನ್ನು ಸಾರ್ವಜನಿಕವಾಗಿ ಮುನ್ನಡೆಸುತ್ತಿರುವವರು ಬುಶ್ರಾ ಬೀಬಿ ಎಂಬ ವಿವರಣೆಯನ್ನು ಆ ಪಕ್ಷ ನಾಯಕರು ನೀಡಿದ್ದಾಗಿ ವರದಿ ಹೇಳಿದೆ.
ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೂಚನೆಯನ್ನು ಪಾಲಿಸದ ಕಾರಣ ಅವರ ಬೆಂಬಲಿಗರಾಗಿರುವ ಕೆಲವು ಪಿಟಿಐ ನಾಯಕರು ಮೌನದ ಮೊರೆ ಹೋಗಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ವಕೀಲ ಸಲ್ಮಾನ್ ಅಕ್ರಮ್ ರಾಜಾ ಅವರು ತಮ್ಮ ರಾಜೀನಾಮೆಯನ್ನು ಪಕ್ಷದ ಹಾಲಿ ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಅಲಿ ಖಾನ್ ಅವರಿಗೆ ಸಲ್ಲಿಸಿದರು, ಅವರು ಗುರುವಾರ ಅದರ ಸ್ವೀಕೃತಿಯನ್ನು ಖಚಿತಪಡಿಸಿದ್ದಾರೆ. ಆದರೆ, ರಾಜೀನಾಮೆಯನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ನಿರ್ಧಾರವನ್ನು ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುತ್ತಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.