ಪಾಕಿಸ್ತಾನದಲ್ಲಿ ಗೆಳೆಯರಿದ್ದರೆ ಅವರಿಗೆ ಕರೆ ಮಾಡಬಾರದೇ? ಗೂಢಚಾರಿಕೆ ಆರೋಪದಲ್ಲಿ ಬಂಧಿತ ಯೂಟ್ಯೂಬರ್ ತಂದೆಯ ಪ್ರಶ್ನೆ
ಪಾಕಿಸ್ತಾನದ ಗುಪ್ತಚರ ಏಜೆನ್ಸಿಗಳಿಗಾಗಿ ಭಾರತದ ಮೇಲೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ಹರಿಯಾಣ ಪೊಲೀಸರು ಹಿಸಾರ್‌ನಲ್ಲಿ ಬಂಧಿಸಿದ್ದಾರೆ.

ನವದೆಹಲಿ: ಪಾಕಿಸ್ತಾನದ ಗುಪ್ತಚರ ಏಜೆನ್ಸಿಗಳಿಗಾಗಿ ಭಾರತದ ವಿರುದ್ಧ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪರ ಆಕೆಯ ತಂದೆ ಹೇಳಿಕೆ ನೀಡಿದ್ದು, ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಹರಿಯಾಣದ ಯೂಟ್ಯೂಬರ್ ಮತ್ತು ಪಾಕಿಸ್ತಾನದ ಗೂಢಚಾರಿ ಜ್ಯೋತಿ ಮಲ್ಹೋತ್ರಾ ಅವರ ತಂದೆ ಹ್ಯಾರಿಸ್ ಮಲ್ಹೋತ್ರಾ, ತಮ್ಮ ಮಗಳು ವೀಡಿಯೊಗಳನ್ನು ಚಿತ್ರೀಕರಿಸಲು ನೆರೆಯ ದೇಶಕ್ಕೆ ಭೇಟಿ ನೀಡಿದ್ದಳು. ಆ ಸಂದರ್ಭದಲ್ಲಿ ಆಕೆಗೆ ಅಲ್ಲಿ ಕೆಲವು ಸ್ನೇಹಿತರ ಪರಿಚಯವಾಗಿತ್ತು ಎಂದಿದ್ದಾರೆ.
ಅವಳು ಯೂಟ್ಯೂಬ್ ವಿಡಿಯೊಗಳನ್ನು ಮಾಡುತ್ತಿದ್ದಳು. ಅದಕ್ಕಾಗಿ ಪಾಕಿಸ್ತಾನ ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಅವಳು ಅಲ್ಲಿ ಕೆಲವು ಸ್ನೇಹಿತರನ್ನು ಹೊಂದಿದ್ದಾಳೆ. ಅಲ್ಲಿ ಗೆಳೆಯರು ಇದ್ದರೆ, ಅವರಿಗೆ ಕರೆ ಮಾಡಬಾರದೇ ಎಂದು ಜ್ಯೋತಿಯ ತಂದೆ ಹ್ಯಾರಿಸ್ ಮಲ್ಹೋತ್ರಾ ಪೊಲೀಸರನ್ನು ಪ್ರಶ್ನಿಸಿದ್ದಾರೆ. ನನಗೆ ಯಾವುದೇ ಬೇಡಿಕೆಗಳಿಲ್ಲ, ಆದರೆ ನಮ್ಮ ಫೋನ್‌ಗಳನ್ನು ನಮಗೆ ವಾಪಸ್ ನೀಡಬೇಕು. ನಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಲ್ಹೋತ್ರಾ ಅವರನ್ನು ಉಲ್ಲೇಖಿಸಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನಕ್ಕೆ ಪ್ರಯಾಣಿಸುವ ಮೊದಲು ತಮ್ಮ ಮಗಳು ಎಲ್ಲಾ ಅಗತ್ಯ ಅನುಮತಿಗಳನ್ನು ತೆಗೆದುಕೊಂಡಿದ್ದಾಳೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನಿ ಏಜೆನ್ಸಿಗಳಿಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಜ್ಯೋತಿ ರಾಣಿ ಮಲ್ಹೋತ್ರಾ ಅವರನ್ನು ಹಿಸಾರ್‌ನಲ್ಲಿ ಬಂಧಿಸಿದ್ದಾರೆ. ಪೊಲೀಸರು ಗುರುವಾರ ತಮ್ಮ ಮನೆಗೆ ಬಂದು ಅವರ ಬ್ಯಾಂಕ್ ದಾಖಲೆಗಳು, ಫೋನ್, ಲ್ಯಾಪ್‌ಟಾಪ್ ಮತ್ತು ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಹ್ಯಾರಿಸ್ ಮಲ್ಹೋತ್ರಾ ಹೇಳಿದ್ದಾರೆ.
ಬಂಧಿತ ಜ್ಯೋತಿಯ ಮೊಬೈಲ್ ಮತ್ತು ಲ್ಯಾಪ್‌ಟ್ಯಾಪ್‌ನಿಂದ ಪೊಲೀಸರು ಕೆಲವು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ ಎಂದು ಹಿಸಾರ್ ಡಿಎಸ್ಪಿ ಕಮಲ್ಜೀತ್ ಹೇಳಿದ್ದಾರೆ. ಅವರ ಪ್ರಕಾರ, ಜ್ಯೋತಿ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಆಕೆ ದೆಹಲಿಯಲ್ಲಿ ಪಾಕಿಸ್ತಾನಿ ಅಧಿಕಾರಿ ಅಹ್ಸಾನ್-ಉರ್-ರಹೀಮ್ ಅವರನ್ನು ಭೇಟಿಯಾಗಿದ್ದಳು ಮತ್ತು ನಂತರ ಎರಡು ಬಾರಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಳು ಎಂದು ಆರೋಪಿಸಲಾಗಿದೆ. ಪೊಲೀಸರು ಯೂಟ್ಯೂಬರ್ ಅನ್ನು ಐದು ದಿನಗಳ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಹಿಸಾರ್ ಡಿಎಸ್ಪಿ ಕಮಲ್ಜೀತ್ ತಿಳಿಸಿದ್ದಾರೆ. ಅಧಿಕೃತ ರಹಸ್ಯ ಕಾಯ್ದೆ ಮತ್ತು ಬಿಎನ್ಎಸ್‌ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.