ತಾಳೆ ಎಣ್ಣೆ ತುಟ್ಟಿ, ದುಬಾರಿಯಾಯ್ತು ಸಾಬೂನು ದರ; ಸಂತೂರ್, ಚಂದ್ರಿಕಾ, ಡವ್, ಲಕ್ಸ್, ಲೈಫ್‌ಬಾಯ್, ಪಿಯರ್ಸ್, ಲಿರಿಲ್‌ಗೆ ಈಗ ದರವೆಷ್ಟು?
Soap prices Hike: ತಾಳೆ ಎಣ್ಣೆ ದರ ಹೆಚ್ಚಿದ ಪರಿಣಾಮವಾಗಿ ಸೋಪು ದರದಲ್ಲೂ ಏರಿಕೆ ಕಂಡಿದೆ. ಬಹುತೇಕ ಎಲ್ಲಾ ಎಫ್‌ಎಂಸಿಜಿ ಕಂಪನಿಗಳು ತಮ್ಮ ಪ್ರಮುಖ ಬ್ರಾಂಡ್ ಸಾಬೂನುಗಳ ದರವನ್ನು ಹೆಚ್ಚಿಸಿವೆ. ಸದ್ಯ ಕರ್ನಾಟಕದ ಮೈಸೂರು ಸ್ಯಾಂಡಲ್ ಸೋಪು ದರ ಹೆಚ್ಚಳವಾಗಿಲ್ಲ.
Soap prices Hike: ತಾಳೆ ಎಣ್ಣೆ ದರ ಹೆಚ್ಚಿದ ಪರಿಣಾಮವಾಗಿ ಸೋಪು ದರದಲ್ಲೂ ಏರಿಕೆ ಕಂಡಿದೆ. ಬಹುತೇಕ ಎಲ್ಲಾ ಎಫ್‌ಎಂಸಿಜಿ ಕಂಪನಿಗಳು ತಮ್ಮ ಪ್ರಮುಖ ಬ್ರಾಂಡ್ ಸಾಬೂನುಗಳ ದರವನ್ನು ಹೆಚ್ಚಿಸಿವೆ. ಸದ್ಯ ಕರ್ನಾಟಕದ ಮೈಸೂರು ಸ್ಯಾಂಡಲ್ ಸೋಪು ದರ ಹೆಚ್ಚಳವಾಗಿಲ್ಲ. ಡವ್, ಲಕ್ಸ್, ಲೈಫ್‌ಬಾಯ್, ಪಿಯರ್ಸ್, ಲಿರಿಲ್, ರೆಕ್ಸೊನಾ ಸೇರಿದಂತೆ ಬಹುತೇಕ ಸೋಪುಗಳ ದರ ಶೇಕಡ 7-8ರಷ್ಟು ದುಬಾರಿಯಾಗಿವೆ.
ತಾಳೆ ಎಣ್ಣೆಯ ಬೆಲೆ ಏರಿಕೆಯ ಪರಿಣಾಮವನ್ನು ಸರಿದೂಗಿಸುವ ಸಲುವಾಗಿ ಎಚ್‌ಯುಎಲ್, ವಿಪ್ರೋ ಸೇರಿದಂತೆ ವಿವಿಧ ಎಫ್‌ಎಂಸಿಜಿ ಕಂಪನಿಗಳು ಶೇಕಡ 7-8ರಷ್ಟು ಏರಿಕೆ ಕಂಡಿವೆ. ಇದೇ ಸಮಯದಲ್ಲಿ ಹವಾಮಾನ ಪರಿಸ್ಥಿತಿಯಿಂದ ಉತ್ಪಾದನೆಯಲ್ಲಿ ಆದ ಕುಸಿತವನ್ನು ತಡೆಯಲು ಎಚ್‌ಯುಎಲ್ ಮತ್ತು ಟಾಟಾ ಕನ್ಸ್ಯೂಮರ್‌ನಂತಹ ಕಂಪನಿಗಳು ಚಹಾದ ಬೆಲೆಗಳನ್ನೂ ಹೆಚ್ಚಿಸಿವೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವಿವಿಧ ಕಂಪನಿಗಳು ಮಾರಾಟ ವರದಿ ಪ್ರಕಟಿಸಿದ ವೇಳೆಯಲ್ಲಿಯೇ ಸಾಬೂನುಗಳ ದರ ಹೆಚ್ಚಿಸುವ ಕುರಿತು ಸುಳಿವು ನೀಡಿದ್ದವು. ಪಾಮ್ ಎಣ್ಣೆ, ಕಾಫಿ, ಕೋಕೋದಂತಹ ಸರಕುಗಳ ಒಳಹರಿವು ಕಡಿಮೆಯಾಗಿರುವ ಕಾರಣ ಬೆಲೆ ಹೆಚ್ಚಳ ಅನಿವಾರ್ಯ ಎಂದಿದ್ದವು.
"ಸಾಬೂನು ತಯಾರಿಕೆಯಲ್ಲಿ ಪ್ರಮುಖ ಕಚ್ಚಾ ವಸ್ತುವಾದ ಪಾಮ್ ಆಯಿಲ್ ಉತ್ಪನ್ನಗಳ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದೆ. ಈ ವರ್ಷದ ಆರಂಭದಿಂದ ತಾಳೆ ಎಣ್ಣೆ ದರ ಶೇಕಡ 30ರಷ್ಟು ಏರಿಕೆ ಕಂಡಿದೆ" ಎಂದು ವಿಪ್ರೋ ಕನ್ಸ್ಯೂಮರ್ ಕೇರ್ ಮುಖ್ಯ ಕಾರ್ಯನಿರ್ವಾಹಕ ನೀರಜ್ ಖತ್ರಿ ಪಿಟಿಐಗೆ ತಿಳಿಸಿದ್ದಾರೆ.
"ಇದೇ ಕಾರಣಕ್ಕೆ ಉದ್ಯಮದಲ್ಲಿನ ಪ್ರಮುಖ ಕಂಪನಿಗಳು ಬೆಲೆ ಏರಿಕೆಗೆ ಮುಂದಾಗಿದ್ದಾರೆ. ಮಾರುಕಟ್ಟೆಯ ಸ್ಥಿತಿಗೆ ತಕ್ಕಂತೆ ನಮ್ಮ ದರ ಇರುತ್ತದೆ" ಎಂದು ಅವರು ಹೇಳಿದ್ದರು. ಅಜೀಂ ಪ್ರೇಮ್‌ಜಿ ನೇತೃತ್ವದ ವಿಪ್ರೋ ಎಂಟರ್‌ಪ್ರೈಸಸ್‌ನ ಭಾಗವಾಗಿರುವ ವಿಪ್ರೋ ಕನ್ಸ್ಯೂಮರ್ ಕೇರ್, ಸೋಪ್ ವಿಭಾಗದಲ್ಲಿ ಸಂತೂರ್ ಮತ್ತು ಚಂದ್ರಿಕಾ ಬ್ರಾಂಡ್‌ಗಳನ್ನು ಮಾರಾಟ ಮಾಡುತ್ತಿದೆ.
ಎಚ್‌ಯುಎಲ್ ಕಂಪನಿಯು ಚಹಾ , ಚರ್ಮದ ಶುದ್ಧೀಕರಣ ಉತ್ಪನ್ನಗಳ ದರ ಹೆಚ್ಚಿಸಿದೆ. ಕಂಪನಿಯು ಡವ್, ಲಕ್ಸ್, ಲೈಫ್‌ಬಾಯ್, ಲಿರಿಲ್, ಪಿಯರ್ಸ್, ರೆಕ್ಸೋನಾ ಸೋಪು ಬ್ರಾಂಡ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಸೋಪುಗಳ ದರ ಏರಿಕೆ ಕಂಡಿದೆ.
"ಹಣದುಬ್ಬರದ ಪರಿಣಾಮವಾಗಿ ಚಹಾ ಮತ್ತು ಕಚ್ಚಾ ತಾಳೆ ಎಣ್ಣೆಯನ್ನು ಹೊರತುಪಡಿಸಿ ಒಟ್ಟಾರೆ ಸರಕು ಮಾರುಕಟ್ಟೆ ದರ ಹೆಚ್ಚಿಸಿಕೊಂಡಿಲ್ಲ. ಹೀಗಾಗಿ ಚಹಾ ಮತ್ತು ಸಾಬೂನು ಉತ್ಪನ್ನಗಳಲ್ಲಿ ಆಯ್ದ ಬ್ರಾಂಡ್‌ಗಳ ದರ ಹೆಚ್ಚಿಸಿದ್ದೇವೆ" ಎಂದು ಎಚ್‌ಯುಎಲ್‌ನ ವಕ್ತಾರರು ಹೇಳಿದ್ದಾರೆ.
ದುಬಾರಿಯಾದ ತಾಳೆ ಎಣ್ಣೆ
ಆಮದು ಸುಂಕದ ಹೆಚ್ಚಳ ಮತ್ತು ಜಾಗತಿಕ ಬೆಲೆಗಳ ಏರಿಕೆಯಿಂದಾಗಿ ಸೆಪ್ಟೆಂಬರ್ ತಿಂಗಳ ನಂತರ ತಾಳೆ ಎಣ್ಣೆಯ ಬೆಲೆ ಸುಮಾರು ಶೇಕಡ 35-40ರಷ್ಟು ಹೆಚ್ಚಾಗಿದೆ. ಭಾರತವು ತಾಳೆ ಎಣ್ಣೆಯನ್ನು ಮುಖ್ಯವಾಗಿ ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ. ಈಗ 10 ಕೆಜಿ ತಾಳೆ ಎಣ್ಣೆ ದರ ಸುಮಾರು 1,370 ರೂ. ಆಸುಪಾಸಿನಲ್ಲಿದೆ.
ಲಕ್ಸ್ ಸೋಪ್ (5 ಸಾಬೂನುಗಳ ಪ್ಯಾಕ್) 145 ರೂ.ನಿಂದ 155 ರೂ.ಗೆ ಮತ್ತು ಲೈಫ್‌ಬಾಯ್ (5 ಸಾಬೂನುಗಳ ಪ್ಯಾಕ್) ರೂ. ಹಿಂದಿನ 149 ರೂ.ನಿಂದ 162 ರೂ.ಗೆ ಏರಿಕೆಯಾಗಿದೆ. ಸಂತೂರ್, ಚಂದ್ರಿಕಾ, ಡವ್, ಲಕ್ಷ್, ಲೈಫ್‌ಬಾಯ್, ಪರ್ಲ್ಸ್, ಲಿರಿಲ್, ರೆಕ್ಸೊನಾ ಸೇರಿದಂತೆ ಬಹುತೇಕ ಸೋಪುಗಳ ದರ ಶೇಕಡ 7-8ರಷ್ಟು ಹೆಚ್ಚಾಗಿದೆ.
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಕರ್ನಾಟಕದ ಹೆಮ್ಮೆಯ ಸೋಪು ಬ್ರಾಂಡ್ ಆಗಿರುವ ಮೈಸೂರು ಸ್ಯಾಂಡಲ್ ಸೋಪು ದರಗಳು ಹೆಚ್ಚಾಗಿಲ್ಲ.