Part time Jobs: ಬೆಂಗಳೂರಿನಲ್ಲಿ ಪಾರ್ಟ್ ಟೈಮ್ ಜಾಬ್ಸ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಚೀನಾದ ಆ್ಯಪ್ ಕಂಪನಿ ಮೇಲೆ ಇಡಿ ರೈಡ್
Part time Jobs: ಈ ಆ್ಯಪ್ ಮೂಲಕ ಸಂಗ್ರಹಿಸಿದ ಹಣವನ್ನು ಬೆಂಗಳೂರಿನಲ್ಲಿರುವ ಕಂಪನಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿತ್ತು. ಬಳಿಕ ಆ ಹಣವನ್ನು ಕ್ರಿಪ್ಟೊಕರೆನ್ಸಿಯಾಗಿ ಪರಿವರ್ತಿಸಿ ಚೀನಾ ಮೂಲದ ಕ್ರಿಪ್ಟೊ ಎಕ್ಸ್‌ಚೇಂಜ್‌ಗಳಿಗೆ ಕಳುಹಿಸಲಾಗುತ್ತಿತ್ತು.
ಬೆಂಗಳೂರು: ಪಾರ್ಟ್ ಟೈಮ್ ಉದ್ಯೋಗ ಮಾಡಲು ಬಹುತೇಕರು ಬಯಸುತ್ತಾರೆ. ಈ ರೀತಿ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಲು ಬಯಸುವವರನ್ನು ವಂಚಿಸಲೆಂದೇ ಉದ್ಯೋಗ ವಂಚಕರು ಕಾಯುತ್ತಿದ್ದಾರೆ. ಪ್ರತಿದಿನ ಹಲವು ಎಸ್‌ಎಂಎಸ್‌ಗಳು, ಇಮೇಲ್‌ಗಳು "ಬಿಡುವಿನ ವೇಳೆಯಲ್ಲಿ ಹಲವು ಸಾವಿರ ಗಳಿಸಿʼʼ ಎಂದು ಬರುತ್ತಿವೆ. ಇಂತಹ ಹಲವು ಆ್ಯಪ್ಗಳೂ ಇವೆ. ಆದರೆ, ಪಾರ್ಟ್ ಟೈಮ್ ಜಾಮ್ ಹೆಸರಿನಲ್ಲಿ ಸಾವಿರಾರು ಜನರು ಪ್ರತಿನಿತ್ಯ ವಂಚನೆಗೆ ಒಳಗಾಗುತ್ತ ಇರುತ್ತಾರೆ. ಅಂತಹ ಒಂದು ಪ್ರಮುಖ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದೆ.
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚೀನಾದ ಆ್ಯಪ್ ಕಂಪನಿಯ ಮೇಲೆ ಇಡಿ ರೈಡ್ ಮಾಡಿದ್ದು, ಸುಮಾರು ಆರು ಕೋಟಿ ರೂಪಾಯಿ ವಶಪಡಿಸಿಕೊಂಡಿದೆ. ಬೆಂಗಳೂರಿನ ಸುಮಾರು ಹನ್ನೆರಡು ಕಡೆಗಳಲ್ಲಿ ರೈಡ್ ಮಾಡಲಾಗಿದೆ. ಕೀಪ್ ಶೇರರ್ (keepsharer) ಹೆಸರಿನಲ್ಲಿ ಈ ಆ್ಯಪ್ ಕಾರ್ಯನಿರ್ವಹಿಸುತ್ತಿತ್ತು. ನಿಮ್ಮ ಮೊಬೈಲ್‌ನಲ್ಲಿ ಎಲ್ಲಾದರೂ ಈ ಆ್ಯಪ್ ಅಥವಾ ಇಂತಹ ಪಾರ್ಟ್ ಟೈಮ್ ಜಾಬ್ಸ್ ಆ್ಯಪ್ ಇದ್ದರೆ ಡಿಲೀಟ್ ಮಾಡುವುದು ಒಳ್ಳೆಯದು.
ಕೀಪ್ ಶೇರರ್ ಆ್ಯಪ್ ಬಳಕೆದಾರರಿಗೆ ಪಾರ್ಟ್ ಟೈಮ್ ಜಾಬ್ಸ್ ನೀಡುವುದಾಗಿ ತಿಳಿಸಿ, ಹಣ ಪಡೆದು ವಂಚಿಸುತ್ತಿತ್ತು. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯವು ಈ ದಾಳಿ ನಡೆಸಿದೆ. ಈ ಆ್ಯಪ್ ಮೂಲಕ ಸಂಗ್ರಹಿಸಿದ ಹಣವನ್ನು ಬೆಂಗಳೂರಿನಲ್ಲಿರುವ ಕಂಪನಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿತ್ತು. ಬಳಿಕ ಆ ಹಣವನ್ನು ಕ್ರಿಪ್ಟೊಕರೆನ್ಸಿಯಾಗಿ ಪರಿವರ್ತಿಸಿ ಚೀನಾ ಮೂಲದ ಕ್ರಿಪ್ಟೊ ಎಕ್ಸ್‌ಚೇಂಜ್‌ಗಳಿಗೆ ಕಳುಹಿಸಲಾಗುತ್ತಿತ್ತು.
ಈ ಆ್ಯಪ್ ಮೂಲಕ ನಡೆಯುವ ಪ್ರತಿಯೊಂದು ವ್ಯವಹಾರವನ್ನು ಚೀನಾದ ವ್ಯಕ್ತಿಗಳು ನಿಯಂತ್ರಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಈ ವ್ಯವಹಾರವನ್ನು ಚೀನಾದ ವ್ಯಕ್ತಿಗಳು ಫೋನ್ ಮತ್ತು ವಾಟ್ಸ್‌ಆಪ್ ಗ್ರೂಪ್‌ಗಳ ಮೂಲಕ ನಿಯಂತ್ರಿಸುತ್ತಿದ್ದರು ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿರ್ದೇಶಕರು, ಅನುವಾದಕರು, ಎಚ್‌ಆರ್ ವ್ಯವಸ್ಥಾಪಕರು ಇತ್ಯಾದಿ ಹಲವು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಈ ಚೀನಾ ಮೂಲದ ಆ್ಯಪ್ ಜನರನ್ನು ದಾರಿತಪ್ಪಿಸುತ್ತಿತು. ಬೆಂಗಳೂರು ನಗರದ ದಕ್ಷಿಣ ಸಿಇಎನ್ ಪೊಲೀಸ್ ಸ್ಟೇಷನ್‌ನಲ್ಲಿ ದಾಖಲಾದ ಎಫ್‌ಐಆರ್ ದೂರು ಆಧರಿಸಿ ಇಡಿ ಅಧಿಕಾರಿಗಳು ತನಿಖೆ ನಡೆಸಿ ಚೀನಾ ಮೂಲದ ಈ ಆ್ಯಪ್ ಕಂಪನಿ ಮೇಲೆ ದಾಳಿ ನಡೆಸಿದ್ದಾರೆ.
ಆನ್‌ಲೈನ್ ಜಗತ್ತಿನಲ್ಲಿ ವಿವಿಧ ವಂಚನೆಯ ಜಾಲಗಳು ಸಕ್ರೀಯವಾಗಿರುತ್ತವೆ. ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಗೃಹಿಣಿಯರು, ನಿರುದ್ಯೋಗಿಗಳು, ಅರೆ ಉದ್ಯೋಗಿಗಳು ಮತ್ತು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವವರು ಬಿಡುವಿನ ವೇಳೆಯಲ್ಲಿ ಹಣ ಗಳಿಸಲು ಬಯಸುತ್ತಿರುತ್ತಾರೆ. ಈ ರೀತಿ ಉದ್ಯೋಗ ನಡೆಸಲು ಬಯಸುವವರನ್ನು ವಂಚಿಸಲೆಂದೇ ಇಂತಹ ಖದೀಮರು ವಿವಿಧ ರೂಪದಲ್ಲಿ ಕಾಯುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕು.
ವಿಶೇಷವಾಗಿ ಗಂಟೆಗೆ ಹಲವು ಸಾವಿರ ರೂಪಾಯಿ ಹಣ ಗಳಿಸಬಹುದೆಂಬ ಆಮಿಷಗಳಿಗೆ ಬಲಿಯಾಗಬಾರದು. ಟೈಪಿಂಗ್ ಜಾಬ್, ಡೇಟಾ ಎಂಟ್ರಿ ಜಾಬ್ ಇತ್ಯಾದಿ ಆಮೀಷಗಳಿಗೂ ಬಲಿಯಾಗಬಾರದು ಎಂದು ಉದ್ಯೋಗ ಕ್ಷೇತ್ರದ ತಜ್ಞರು ಎಚ್ಚರಿಸಿದ್ದಾರೆ.