America Plane Crash: ಅಮೆರಿಕ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ 64 ಜನರಿದ್ದ ವಿಮಾನ, ಹಲವರ ಸಾವಿನ ಶಂಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  America Plane Crash: ಅಮೆರಿಕ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ 64 ಜನರಿದ್ದ ವಿಮಾನ, ಹಲವರ ಸಾವಿನ ಶಂಕೆ

America Plane Crash: ಅಮೆರಿಕ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ 64 ಜನರಿದ್ದ ವಿಮಾನ, ಹಲವರ ಸಾವಿನ ಶಂಕೆ

ಅಮೆರಿಕಾದ ವಾಷಿಂಗ್ಟನ್‌ನಲ್ಲಿ ಪ್ರಯಾಣಿಕರ ವಿಮಾನವೊಂದು ಸೇನಾ ಹೆಲಿಕಾಪ್ಟರ್‌ಗೆ ಹೊಡೆದು ನದಿಗೆ ಉರುಳಿ ಬಿದ್ದ ಕಾರಣ ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಅಮೆರಿಕದಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್‌ ಡಿಕ್ಕಿಯಾದ ಸ್ಥಳ.
ಅಮೆರಿಕದಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್‌ ಡಿಕ್ಕಿಯಾದ ಸ್ಥಳ.

ವಾಷಿಂಗ್ಟನ್: ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿದಂತೆ 64 ಜನರಿದ್ದ ಅಮೆರಿಕನ್ ಏರ್‌ಲೈನ್ಸ್‌ನ ಪ್ರಾದೇಶಿಕ ಜೆಟ್ ವಿಮಾನವು ವಾಷಿಂಗ್ಟನ್‌ನ ಶ್ವೇತಭವನದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದ ಪರಿಣಾಮ ಹಲವಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವಿಮಾನ ಮತ್ತು ಹೆಲಿಕಾಪ್ಟರ್ ವಾಷಿಂಗ್ಟನ್‌ನ ಪೊಟೋಮ್ಯಾಕ್ ನದಿಗೆ ಅಪ್ಪಳಿಸುತ್ತಿದ್ದಂತೆ ರಾತ್ರಿ ವೇಳೆ ಆಕಾಶದಲ್ಲಿ ಬೃಹತ್ ಪಟಾಕಿ ಸಿಡಿಸಿದಂತೆ ಕಾಣುತ್ತಿತ್ತು. ರಕ್ಷಣಾ ಕಾರ್ಯಗಳು ಬುಧವಾರ ರಾತ್ರಿಯಿಂದಲೇ ಮುಂದುವರಿದಿದೆ. ಅಗ್ನಿಶಾಮಕ ದೋಣಿಗಳು, ಟ್ರಕ್‌ಗಳನ್ನು ನಿಯೋಜಿಸಲಾಗಿದ್ದು, ನದಿಗೆ ಬಿದ್ದವರ ಹುಡುಕಾಟ ನಡೆದಿದೆ. ರಾತ್ರಿಯೇ ಹದಿನೆಂಟು ಮೃತದೇಹ ಹೊರ ತೆಗೆದಿದ್ದರೂ ಸಾವಿನ ಸಂಖ್ಯೆ, ಗಾಯಾಳುಗಳ ಪ್ರಮಾಣ ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಅಮೆರಿಕಾದ ಉನ್ನತ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.

ಅಮೆರಿಕನ್ ಈಗಲ್ ಫ್ಲೈಟ್ 5342 ಕಾನ್ಸಾಸ್‌ನಿಂದ ವಾಷಿಂಗ್ಟನ್ ಡಿಸಿಗೆ 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಗಳೊಂದಿಗೆ ಪ್ರಯಾಣಿಸುತ್ತಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಬ್ಲ್ಯಾಕ್ಹಾಕ್ ಹೆಲಿಕಾಪ್ಟರ್ ಮೂವರು ಸೈನಿಕರನ್ನು ಹೊತ್ತೊಯ್ಯುತ್ತಿತ್ತು, ಆದರೆ ಅದರಲ್ಲಿ ಯಾವುದೇ ಹಿರಿಯ ಅಧಿಕಾರಿಯಿರಲಿಲ್ಲ. ಈ ವೇಳೆ ವಿಮಾನ ಏಕಾಏಕಿ ಹೆಲಿಕಾಪ್ಟರ್‌ ಮೇಲೆ ಅಪ್ಪಳಿಸಿದೆ. ಅಲ್ಲದೇ ಸಮುದ್ರಕ್ಕೆ ಉರುಳಿ ಬಿದ್ದಿದೆ ಎಂದು ಪ್ರತ್ಯೇಕ ದರ್ಶಿಗಳು ಮಾಹಿತಿ ನೀಡಿದ್ದಾರೆ.

ವಿಮಾನ ಹಾಗೂ ಹೆಲಿಕಾಪ್ಟರ್‌ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು. ವಿಮಾನ ಪತನಗೊಂಡು ವಾಷಿಂಗ್ಟನ್‌ ನಗರದಲ್ಲಿ ಹರಿಯುವ ಪೊಟೋಮ್ಯಾಕ್ ನದಿಗೆ ಬಿದ್ದಿದೆ. ಈ ವೇಳೆ ಭಾರೀ ಬೆಂಕಿ ಹಾಗೂ ಸಿಡಿಯುವ ಸದ್ದು ಕೇಳಿದೆ. ಅಲ್ಲದೇ ದೀಪಾವಳಿ ನೆನಪಿಸುವ ಹಾಗೆ ಸಿಡಿತ ಹಾಗೂ ಬೆಳಕು ಅಲ್ಲಿ ಕಂಡಿದೆ.

ಫೆಡರಲ್ ಏವಿಯೇಷನ್ ಅಥಾರಿಟಿಯು ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದವು .ಅಪಘಾತದ ಸ್ಥಳಕ್ಕೆ ಅನೇಕ ಏಜೆನ್ಸಿಗಳು ಸ್ಪಂದಿಸುತ್ತಿದ್ದು, ತುರ್ತು ಸಿಬ್ಬಂದಿ ಪೊಲೀಸರೊಂದಿಗೆ ಕಾರ್ಯಪ್ರವೃತ್ತರಾದರು. ಅಗ್ನಿಶಾಮಕ ದೋಣಿಗಳು ಪೊಟೋಮ್ಯಾಕ್‌ ನದಿಯಲ್ಲಿ ತುರ್ತು ಕಾರ್ಯಾಚರಣೆಗೆ ಆಗಮಿಸಿದರೆ ಡಜನ್‌ಗಟ್ಟಲೆ ಅಗ್ನಿಶಾಮಕ ಟ್ರಕ್‌ಗಳು ವಿಮಾನ ನಿಲ್ದಾಣದ ಕಡೆಗೆ ಹೋಗುತ್ತಿರುವುದು ಕಂಡುಬಂದಿತು, ಕತ್ತಲೆ ಮತ್ತು ಘನೀಕರಿಸುವ ತಾಪಮಾನದಿಂದಾಗಿ ರಕ್ಷಣಾ ಸಿಬ್ಬಂದಿ ಸವಾಲುಗಳನ್ನು ಎದುರಿಸಿದರು. ಯಾವುದೇ ತಕ್ಷಣದ ಸಾವುನೋವುಗಳ ಸಂಖ್ಯೆ ಇಲ್ಲ, ಆದರೆ ಸ್ಥಳೀಯ ಮಾಧ್ಯಮ ವರದಿಗಳು ಪೊಲೀಸರು ಪೊಟೋಮ್ಯಾಕ್ ನದಿಯಿಂದ ಶವಗಳನ್ನು ಹೊರತೆಗೆಯಲು ಪ್ರಾರಂಭಿಸಿದ್ದಾರೆ ಎಂದು ಹೇಳುತ್ತವೆ.

ಮಾಹಿತಿಗಳ ಪ್ರಕಾರ ಡಿಕ್ಕಿ ಹೊಡೆದ ರಭಸ ಹಾಗೂ ನದಿಗೆ ಬಿದ್ದ ಕಾರಣದಿಂದ ಬಹುತೇಕ ಪ್ರಯಾಣಿಕರು ಮೃತಪಟ್ಟಿರುವ ಶಂಕೆಯಿದೆ. ಪ್ರಯಾಣಿಕರ ವಿವರಗಳನ್ನೂ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಈ ಕುರಿತು ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ವಾಷಿಂಗ್ಟನ್ ವಿಮಾನ ನಿಲ್ದಾಣದ ಸಮೀಪವೇ ಸಂಭವಿಸಿದ ಭೀಕರ ಅಪಘಾತದ ಬಗ್ಗೆ ತನಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ದೇವರು ಅಪಘಾತದಲ್ಲಿ ಮೃತರ ಆತ್ಮಕ್ಕೆ ಶಾಂತಿ ನೀಡಲಿ. ನಮ್ಮ ವಿವಿಧ ರಕ್ಷಣಾ ತಂಡದವರು ಮಾಡುತ್ತಿರುವ ಚಟುವಟಿಕೆಗಳಿಗೆ ಧನ್ಯವಾದಗಳು. ನಾನು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ. ನಂತರ ಹೆಚ್ಚಿನ ವಿವರಗಳನ್ನು ನೀಡುತ್ತೇನೆ ಎಂದು ತಿಳಿಸಿದ್ದಾರೆ.

ತಮ್ಮ ಪ್ರೀತಿಪಾತ್ರರು ವಿಮಾನದಲ್ಲಿ ಇರಬಹುದೆಂಬ ಕಾರಣದಿಂದ ಅಮೆರಿಕನ್ ಏರ್‌ಲೈನ್ಸ್ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 800-679-8215 ಅನ್ನು ನೀಡಿದೆ. ಸಂಪರ್ಕ ವಿವರಗಳಿಗಾಗಿ news.aa.com ಗೆ ಭೇಟಿ ನೀಡಲು ಯುಎಸ್ ಹೊರಗಿನವರಿಗೆ ಸಹಕಾಋಇಯಾಗಲಿದೆ. ಕೆನಡಾ, ಪೋರ್ಟೊ ರಿಕೊ ಅಥವಾ ಯು. ಎಸ್. ವರ್ಜಿನ್ ದ್ವೀಪಗಳಲ್ಲಿರುವವರು ಮೇಲಿನ ಸಹಾಯವಾಣಿ ಸಂಖ್ಯೆಗೆ ಡಯಲ್ ಮಾಡುವಂತೆಯೂ ಸೂಚಿಸಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.