ಕನ್ನಡ ಸುದ್ದಿ  /  Nation And-world  /  Patna Pfi Terror Module: Ed To Probe Patna Pfi Terror Module, Money Laundering Case Registered

Patna PFI Terror module: ಜಾರಿ ನಿರ್ದೇಶನಾಲಯದಿಂದ ತನಿಖೆ, ಮನಿ ಲಾಂಡರಿಂಗ್‌ ಕೇಸ್‌ ದಾಖಲು

ಪಟನಾದ ಪಿಎಫ್‌ಐ ಉಗ್ರ ಘಟಕ (Patna PFI terror module)ದ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಶುರುಮಾಡಲಿದೆ. ಬಿಹಾರ ಪೊಲೀಸರ ಎಫ್‌ಐಆರ್‌ ಆಧಾರದ ಮೇಲೆ ಮನಿ ಲಾಂಡರಿಂಗ್‌ ಕೇಸ್‌ ದಾಖಲಾಗಿದೆ.

ಪಟನಾ ಎಸ್‌ಎಸ್‌ಪಿ ಮಾನವಜಿತ್ ಸಿಂಗ್ ಧಿಲ್ಲೋನ್ (Santosh Kumar/HT Photo)
ಪಟನಾ ಎಸ್‌ಎಸ್‌ಪಿ ಮಾನವಜಿತ್ ಸಿಂಗ್ ಧಿಲ್ಲೋನ್ (Santosh Kumar/HT Photo) (HT_PRINT)

ಪಟನಾ: ಬಿಹಾರದ ರಾಜಧಾನಿ ಪಟನಾದಲ್ಲಿದ್ದ ಪಿಎಫ್‌ಐ ಭಯೋತ್ಪಾದನಾ ಘಟಕದ ವಿರುದ್ಧ ತನಿಖೆಗೆ ಜಾರಿ ನಿರ್ದೇಶನಾಲಯ (ED) ತನಿಖೆ ನಡೆಯಲಿದೆ. ಪಿಎಫ್‌ಐ ವಿರುದ್ಧ ಅಕ್ರಮ ಹಣ ವರ್ಗಾವಣೆ (Money Laundering) ಕೇಸ್‌ ಕೂಡ ದಾಖಲಾಗಿದೆ.

ದೇಶಾದ್ಯಂತ ಪಿಎಫ್‌ಐ ಮಿಷನ್‌ 2047ರ ಕಾರಣ ಸಂಚಲನ ಮೂಡಿಸಿದ ಪಟನಾ ಫುಲ್ವಾರಿ ಷರೀಫ್‌ನಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಶಂಕಿತ ಭಯೋತ್ಪಾದನಾ ಘಟಕದ ವಿರುದ್ಧದ ತನಿಖೆ ಬಿಗಿಯಾಗತೊಡಗಿದೆ. ಬಿಹಾರ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ ಆಧರಿಸಿ, ಜಾರಿ ನಿರ್ದೇಶನಾಲಯ ಕೂಡ ತನಿಖೆ ಶುರು ಮಾಡಲಿದೆ. ಇದಕ್ಕಾಗಿ ಕ್ರಮ ಹಣ ವರ್ಗಾವಣೆ - ಮನಿಲಾಂಡರಿಂಗ್‌ ಕೇಸ್‌ ಕೂಡ ದಾಖಲಿಸಿಕೊಂಡಿದೆ.

ಬಂಧಿತ ಶಂಕಿತ ಭಯೋತ್ಪಾದಕರನ್ನು ಇಡಿ ವಿಚಾರಣೆ ನಡೆಸಲಿದೆ ಮತ್ತು ಅವರು ಮಾಡಿರುವ ಹಣಕಾಸು ವಹಿವಾಟಿನ ಬಗ್ಗೆ ತನಿಖೆ ನಡೆಸಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯಲ್ಲಿ ಪಿಎಫ್‌ಐ ಪಾತ್ರದ ಬಗ್ಗೆಯೂ ಇಡಿ ತನಿಖೆ ನಡೆಸುತ್ತಿದೆ.

ಪಿಎಫ್‌ಐ ವಿರುದ್ಧ ಅನೇಕ ಪ್ರಕರಣ

ಆರೋಪಿಗಳನ್ನು ಶೀಘ್ರವೇ ವಿಚಾರಣೆ ನಡೆಸಲಾಗುವುದು. ಪಿಎಫ್‌ಐಗೆ ಸಂಬಂಧಿಸಿದ ಇತರ ಪ್ರಕರಣಗಳನ್ನು ಇಡಿ ತನಿಖೆ ನಡೆಸುತ್ತಿದೆ. ಒಂದು ಪ್ರಕರಣದಲ್ಲಿ ಲಕ್ನೋದ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ. ಕೇರಳದಲ್ಲಿಯೂ ಇಡಿ ಪಿಎಫ್‌ಐಗೆ ಸಂಬಂಧಿಸಿದ ಹಣದ ವಹಿವಾಟಿನ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಪಟನಾ ಪಿಎಫ್‌ಐ ಪ್ರಕರಣದಲ್ಲಿ ಮನಿ ಲಾಂಡರಿಂಗ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಇಡಿ ಅಧಿಕಾರಿ ತಿಳಿಸಿದ್ದಾರೆ.

ಪಟನಾ ಪಿಎಫ್‌ಐ ಪ್ರಕರಣದಲ್ಲಿ ಮೂವರ ಸೆರೆ

ಇತ್ತೀಚೆಗೆ ಪಟನಾದ ಫುಲ್ವಾರಿ ಷರೀಫ್‌ನಲ್ಲಿರುವ ಪಿಎಫ್‌ಐ ಕಚೇರಿಯಲ್ಲಿ ಭಯೋತ್ಪಾದಕ ತರಬೇತಿ ಶಿಬಿರಕ್ಕೆ ಬಿಹಾರ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿ ಆರೋಪಿಗಳನ್ನು ಬಂಧಿಸಿದ್ದರು. ಜಾರ್ಖಂಡ್ ನಿವೃತ್ತ ಪೊಲೀಸ್‌ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಮತ್ತು ಅಥರ್ ಪರ್ವೇಜ್‌ರನ್ನು ಪೊಲೀಸರು ಸ್ಥಳದಿಂದ ಬಂಧಿಸಿದ್ದಾರೆ. ಆ ನಂತರ ಯುಪಿ ಎಟಿಎಸ್ ಲಖನೌನಲ್ಲಿ ನೂರುದ್ದೀನ್ ಜಂಗಿಯನ್ನು ಸಹ ಹಿಡಿದಿತ್ತು.

ಕೇಂದ್ರ ತನಿಖಾ ಸಂಸ್ಥೆ ಎನ್‌ಐಎ ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದೆ. ಮಂಗಳವಾರ, ಪೂರ್ವ ಚಂಪಾರಣ್ ಜಿಲ್ಲೆಯ ಢಾಕಾ ಮತ್ತು ಪಲನ್ವಾದಲ್ಲಿ ದಾಳಿ ನಡೆಸಲಾಯಿತು ಮತ್ತು ಮದ್ರಸಾದ ಶಿಕ್ಷಕ ಮುಫ್ತಿ ಅಸ್ಗರ್ ಅಲಿಯನ್ನು ಬಂಧಿಸಲಾಯಿತು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ಬಳಿಕ ಎನ್‌ಐಎ ತಂಡ ಆತನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿತ್ತು.

ದೆಹಲಿಯಲ್ಲಿ ಮಾನವಜಿತ್‌ ಸಿಂಗ್‌ ವಿರುದ್ಧ ದೂರು

ಪಿಎಫ್‌ಐ ಘಟಕದ ಮೇಲಿನ ದಾಳಿಯ ನಂತರ ಸುದ್ದಿಗೋಷ್ಠಿಯಲ್ಲಿ ಪಟನಾ ಎಸ್‌ಎಸ್‌ಪಿ ಮಾನವಜಿತ್ ಸಿಂಗ್ ಧಿಲ್ಲೋನ್ ಅವರ ತುಲನಾತ್ಮಕ ಹೇಳಿಕೆ ವಿರುದ್ಧ ದೆಹಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಪೊಲೀಸರು ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ. ಅಶ್ವಿನಿ ಗುಪ್ತಾ ಅವರ ದೂರಿನ ಮೇರೆಗೆ ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಾನವಜಿತ್‌ ಸಿಂಗ್‌ ಅವರು ಸುದ್ದಿಗೋಷ್ಠಿಯಲ್ಲಿ ಶಂಕಿತ ಉಗ್ರ ಸಂಘಟನೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI)ದ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಜತೆಗೆ ತುಲನೆ ಮಾಡಿ ಹೇಳಿದ್ದರು. ಈ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ, ಪೊಲೀಸ್‌ ಇಲಾಖೆ ಅವರಿಗೆ ವಿವರಣೆ ಕೋರಿ ನೋಟಿಸ್‌ ಕೂಡ ಜಾರಿಗೊಳಿಸಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

IPL_Entry_Point