Personal finance trends 2023: ಈ ವರ್ಷ ಗಮನಿಸಬಹುದಾದ ಏಳು ಪರ್ಸನಲ್ ಫೈನಾನ್ಸ್ ಟ್ರೆಂಡ್ಸ್ ಇಲ್ಲಿವೆ...
Personal finance trends 2023: ಪರ್ಸನಲ್ ಫೈನಾನ್ಸ್ ಕ್ಷೇತ್ರ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದ್ದು ಗಮನಸೆಳೆಯುತ್ತಿದೆ. ಈ ವರ್ಷದ ಪ್ರಮುಖ ಟ್ರೆಂಡ್‌ಗಳು ಯಾವುವು? ಇಲ್ಲಿದೆ ಅದರ ಕಿರುನೋಟ.
ಭಾರತದ ಆರ್ಥಿಕತೆಯು ಗಮನಾರ್ಹ ರೀತಿಯ ಬೆಳವಣಿಗೆಯ ದಾರಿಯಲ್ಲಿ ಮುಂದುವರಿಯುತ್ತಿದೆ. ಇದಕ್ಕೆ ಪೂರಕವಾಗಿ ಪರ್ಸನಲ್ ಫೈನಾನ್ಸ್ ಕ್ಷೇತ್ರವೂ ಬೆಳವಣಿಗೆಯ ಹಾದಿಯಲ್ಲಿರುವುದು ಅಚ್ಚರಿ ತರುವ ವಿಚಾರವೇನಲ್ಲ. ಯೂನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ಬಳಕೆಗೆ ಬಂದದ್ದರಿಂದ ಹಿಡಿದು, ಇನ್ನೋವೇಟಿವ್ ಹಣಕಾಸು ಉತ್ಪನ್ನಗಳ ಉದಯದ ತನಕ ಹಲವಾರು ವಿದ್ಯಮಾನಗಳನ್ನು ಪರ್ಸನಲ್ ಫೈನಾನ್ಸ್ ಕ್ಷೇತ್ರ ತನ್ನೊಳಗೆ ಸೇರಿಸಿಕೊಂಡಿದೆ. HT ಕನ್ನಡದ ಸೋದರ ತಾಣ ಲೈವ್ ಮಿಂಟ್ ಈ ಕ್ಷೇತ್ರದ 2023ರ ಟ್ರೆಂಡ್ಸ್‌ನ ಒಂದು ಕಿರು ಅವಲೋಕನ ನೀಡಿದ್ದು, ಅದು ಹೀಗಿದೆ.
1) ಬೈ ನೌ ಪೇ ಲೇಟರ್ (BNPL)
ಭಾರತದ ಔಪಚಾರಿಕ ಆರ್ಥಿಕತೆಯಲ್ಲಿ ಬೈ ನೌ ಪೇ ಲೇಟರ್ (ಬಿಎನ್‌ಪಿಎಲ್) ಎಂಬುದು ಹೊಸ ಮತ್ತು ಬೆಳೆಯುತ್ತಿರುವ ಟ್ರೆಂಡ್ ಆಗಿ ಕಂಡುಬಂದಿದೆ. ಎಸ್‌ಎಜಿ ಇನ್ಫೋಟೆಕ್ ಎಂಡಿ ಅಮಿತ್ ಗುಪ್ತಾ ಪ್ರಕಾರ, ಇದು ಅತ್ಯಂತ ಜನಪ್ರಿಯವಾಗುತ್ತಿರುವ ಪಾವತಿ ಆಯ್ಕೆ. ಇದು ಸರಕು ಮತ್ತು ಸೇವೆಗಳನ್ನು ಇಂದು ಖರೀದಿಸಿ, ಅವುಗಳ ಮೌಲ್ಯವನ್ನು ತರುವಾಯ ಪಾವತಿಸುವ ವ್ಯವಸ್ಥೆಯಾಗಿ ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಜನರಿಗೆ ಅವರ ಅಲ್ಪಾವಧಿ ಹಣಕಾಸಿನ ಅಗತ್ಯಗಳನ್ನು ಪೂರೈಸುವುದಕ್ಕೆ ಇದು ನೆರವಾಗಿದೆ.
ಸ್ಪೇಸ್‌ಮಂತ್ರ ನಿರ್ದೇಶಕ ಆಶಿಶ್ ಅಗರವಾಲ್ ಪ್ರಕಾರ, ಬಿಎನ್‌ಪಿಎಲ್ ಬಳಕೆ ಸದ್ಯ/ಮಧ್ಯಂತರದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ. ಇನ್ನೊಂದೆಡೆ ಸಾಲ ನಷ್ಟ ಪ್ರಮಾಣವೂ ಹೆಚ್ಚಾಗಲಿದೆ. ಸಾಮಾಜಿಕವಾಗಿ ವಿವಿಧ ಮಾರುಕಟ್ಟೆಗಳಲ್ಲಿ ಚಾಲ್ತಿಯಲ್ಲಿರುವ ಸಾಲ ವಿಧಾನ ಮರೆಯಾಗಿ ಬಿಎನ್‌ಪಿಎಲ್ ವಿಧಾನ ಹೆಚ್ಚಾಗಲಿದೆ. ಇದು ಅಲ್ಪಾವಧಿ ಪರಿಕಲ್ಪನೆಯಾಗಿದ್ದು, ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ.
2) ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ಸ್ (ETFs)
ಇಟಿಎಫ್‌ಗಳು ಕಡಿಮೆ ವೆಚ್ಚದ, ವೈವಿಧ್ಯಮಯ ಹೂಡಿಕೆಯಾಗಿದೆ. ಇದು ಹೂಡಿಕೆದಾರರಿಗೆ ಇಂಡಿವಿಜುವಲ್ ಷೇರುಗಳನ್ನು ಆಯ್ಕೆ ಮಾಡಿಕೊಡದೆ, ವಿವಿಧ ಅಸೆಟ್‌ಗಳಲ್ಲಿ ಹೂಡಿಕೆಗೆ ಅವಕಾಶ ಮಾಡಿಕೊಡುತ್ತದೆ ಎಂದು ಅಮಿತ್ ಗುಪ್ತಾ ವಿವರಿಸಿದ್ದಾರೆ.
3) ರಿಯಲ್ ಎಸ್ಟೇಟ್ ಹೂಡಿಕೆ
ದೀರ್ಘಾವಧಿ ಹೂಡಿಕೆಯಾಗಿ ಸ್ವಂತ ಮನೆ ಮೇಲೆ ಹೂಡಿಕೆ ಮಾಡುವ ಇರಾದೆ ಈ ವರ್ಷ ಹಿಂದೆಂದಿಗೂ ಹೆಚ್ಚಿದೆ. ಆರ್‌ಪಿಎಸ್ ಗ್ರೂಪ್‌ನ ಪಾಲುದಾರ ಸುರೇನ್ ಗೋಯೆಲ್ ಹೇಳುವ ಪ್ರಕಾರ, ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆಯನ್ನು ಜನರು ಅರ್ಥಮಾಡಿಕೊಳ್ಳಲಾರಂಭಿಸಿದ್ದಾರೆ. 2022ರಲ್ಲಿ ಎರಡನೇ ಮನೆ ಖರೀದಿ ಪ್ರಮಾಣ ಹೆಚ್ಚಾಗಿದೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಏರಳಿತವೂ ಹೆಚ್ಚಾಗಿತ್ತು. ಉಳಿದ ಹೂಡಿಕೆ ಉತ್ಪನ್ನಗಳೂ ಸಂಕಷ್ಟಕ್ಕೆ ಒಳಗಾಗಿದ್ದವು. ಆದರೆ ರಿಯಲ್ ಎಸ್ಟೇಟ್ ಮಾತ್ರ ಬಲಿಷ್ಠವಾಗಿ ಉಳಿದಿತ್ತು. ಹೀಗಾಗಿ ಇದು ಸುರಕ್ಷಿತ ಹೂಡಿಕೆಯಾಗಿ ಜನರ ಕಣ್ಣ ಮುಂದೆ ನಿಂತಿದೆ. ಕಡಿಮೆ ಏರಿಳಿತ ಮತ್ತು ಹೆಚ್ಚಿನ ರಿಟನ್ಸ್ ಈ ಕ್ಷೇತ್ರದ ವಿಶೇಷತೆಯಾಗಿದ್ದು, ಜನರ ಹೂಡಿಕೆಗೆ ಪ್ರಮುಖ ಆಕರ್ಷಣೆಯಾಗಿ ಕಾಣುತ್ತಿದೆ.
4) ನಿಯೋಬ್ಯಾಂಕ್‌ಗಳು (Neobanks)
ನಿಯೋ ಬ್ಯಾಂಕುಗಳು ಡಿಜಿಟಲ್ ಬ್ಯಾಂಕುಗಳಾಗಿದ್ದು, ಕೇವಲ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಷ್ಟೇ ಅಸ್ತಿತ್ವದಲ್ಲಿರುತ್ತವೆ. ಈ ಬ್ಯಾಂಕಿಂಗ್ ಪ್ಲಾಟ್‌ಫಾರಂಗಳು ಬಳಕೆದಾರರಿಗೆ ಆನ್‌ಲೈನ್ ಪಾವತಿ, ಡೆಪಾಸಿಟ್ಸ್, ರೆಮಿಟೆನ್ಸಸ್, ಕ್ರೆಡಿಟ್ ಕಾರ್ಡ್ ಸೇವೆಗಳನ್ನು ಒದಗಿಸುವ ಕೆಲಸ ಮಾಡುತ್ತದೆ.
5) ಕ್ರಿಪ್ಟೋಕರೆನ್ಸಿ (Cryptocurrency)
ಕ್ರಿಪ್ಟೋಕರೆನ್ಸಿ ಎಂಬುದು ಡಿಜಿಟಲ್ ಮಾದರಿಯ ಹಣವಾಗಿದ್ದು, ಕ್ರಿಪ್ಟೋಗ್ರಫಿ ಬಳಸಿಕೊಂಡು ಸುರಕ್ಷಿತವಾಗಿರುವಂಥದ್ದು. ಇದನ್ನು ಪಾವತಿ ಮತ್ತು ಸಂಪತ್ತು ಸಂಗ್ರಹಕ್ಕೆ ಬಳಸಲಾಗುತ್ತದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟು ನ್ಯಾಯಸಮ್ಮತ ವಹಿವಾಟಿನ ವ್ಯಾಪ್ತಿಯಲ್ಲಿ ಇಲ್ಲ.
6) ಪಿ2ಪಿ ಲೆಂಡಿಂಗ್ (P2P lending)
ಇದು ವಿಕೇಂದ್ರೀಕೃತ ಸಾಲ ವ್ಯವಸ್ಥೆ. ಇಲ್ಲಿ ಸಾಲಗಾರರು ಮತ್ತು ಸಾಲದಾತರು ನೇರವಾಗಿ ವಹಿವಾಟು ನಡೆಸುತ್ತಾರೆ ಎಂಬುದರ ಕಡೆಗೆ ಅಮಿತ್ ಗುಪ್ತಾ ಗಮನಸೆಳೆದಿದ್ದಾರೆ.
7) ಷೇರುಪೇಟೆ (Stock markets)
ಹಣವನ್ನು ದುಡಿಸಿ ಗಳಿಸುವುದಕ್ಕೆ ಷೇರುಪೇಟೆ ವಹಿವಾಟು ಉತ್ತಮ ವಿಧಾನ. ಆದರೆ ಇದಕ್ಕೆ ಸ್ವಲ್ಪ ಕೌಶಲ ಮತ್ತು ಜಾಗರೂಕತೆ ಅಗತ್ಯ. ಷೇರುಪೇಟೆ ವಹಿವಾಟು ಏರಿಳಿತಗಳೊಂದಿಗೆ ಕೂಡಿರುವ ಕಾರಣ ವಹಿವಾಟಿನ ಕೌಶಲ ಇಲ್ಲದೇ ಹೂಡಿಕೆ ಮಾಡಿದರೆ ಕೈ ಸುಟ್ಟುಕೊಳ್ಳುವ ಪ್ರಮೇಯ ಎದುರಾದೀತು. ಆದಾಗ್ಯೂ, ಇದು ಉತ್ತಮ ವಿಧಾನ ಎಂದು ಪರಿಣತರು ಹೇಳುತ್ತಾರೆ. ಎಲ್ಲ ಹಣವನ್ನೂ ಒಂದೇ ಷೇರಿನ ಮೇಲೆ ಹೂಡಿಕೆ ಮಾಡಬಾರದು. ಬೇರೆ ಬೇರೆ ಷೇರುಗಳ ಮೇಲೆ, ಬ್ಲೂಚಿಪ್ ಷೇರುಗಳು ಎಂದು ಗುರುತಿಸಿಕೊಂಡಿರುವ ಕಂಪನಿಗಳ ಷೇರುಗಳ ಮೇಲೆ ದೀರ್ಘಾವಧಿಗೆ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ಪರಿಣತರು. ಆದಾಗ್ಯೂ, ಇದಕ್ಕೆ ಪರಿಣತರ ಸಲಹೆ, ಮಾರ್ಗದರ್ಶನ ಪಡೆಯವುದು ಅಗತ್ಯ.