ಕನ್ನಡ ಸುದ್ದಿ  /  Nation And-world  /  Pfi Mission 2047: Conspiracy To Make India An Islamic Nation And Target Pm Modi Busted

PFI Mission 2047: ಭಾರತ ಇಸ್ಲಾಮಿಕ್‌ ರಾಷ್ಟ್ರ, ಟಾರ್ಗೆಟ್‌ ಮೋದಿ, ಪಿಎಫ್‌ಐ ಪಿತೂರಿ ಬಹಿರಂಗ

ಮುಂದಿನ 25 ವರ್ಷದಲ್ಲಿ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)ನ ಕುತಂತ್ರ ಬಹಿರಂಗವಾಗಿದೆ. ಬಿಹಾರ ಪೊಲೀಸರ ಕಾರ್ಯಾಚರಣೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಟನಾ: ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿಸಬೇಕು ಎಂಬ ಪ್ರಯತ್ನ ಇಂದು ನಿನ್ನೆಯದಲ್ಲ. ಆದಾಗ್ಯೂ ಹೊಸ ಪ್ರಯತ್ನದ ಕುತಂತ್ರವನ್ನು ಬಿಹಾರ ಪೊಲೀಸರು ಬೆಳಕಿಗೆ ತಂದಿದ್ದಾರೆ. ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದು, ಅವರು ನೀಡಿದ ಮಾಹಿತಿಯಲ್ಲಿ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಮಾಡುವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ಬಹಿರಂಗವಾಗಿದೆ.

ಬಿಹಾರದ ಪಟನಾದ ಪಿಎಫ್‌ಐ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ಹಲವು ಅನುಮಾನಾಸ್ಪದ ದಾಖಲೆಗಳು ಪತ್ತೆಯಾಗಿವೆ. ಇದರಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI)ದ ʻಮಿಷನ್ 2047ʼ ಕೂಡ ಬಹಿರಂಗವಾಗಿದೆ. ಇದರ ಪ್ರಕಾರ, ಮುಂದಿನ 25 ವರ್ಷಗಳ ಅವಧಿಯಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಷಡ್ಯಂತ್ರ ನಡೆಯುತ್ತಿದೆ.

ಬಿಹಾರದ ರಾಜಧಾನಿ ಪಟನಾದಲ್ಲಿ ಪಿಎಫ್‌ಐ ಹೆಸರಿನಲ್ಲಿ ದೊಡ್ಡ ಭಯೋತ್ಪಾದಕ ತರಬೇತಿ ಕೇಂದ್ರ ಒಂದು ಕಾರ್ಯಾಚರಿಸುತ್ತಿರುವುದು ಬಯಲಾಗಿದೆ. ದಾಳಿಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಶದಿಂದ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇವುಗಳಲ್ಲಿ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಪಿಎಫ್‌ಐ ಷಡ್ಯಂತ್ರವೂ ಬಯಲಾಗಿದೆ. ಇದಕ್ಕಾಗಿ ಮುಸ್ಲಿಂ ಯುವಕರಿಗೆ ಶಸ್ತ್ರಾಸ್ತ್ರಗಳನ್ನು ಬಳಸಲು, ಧಾರ್ಮಿಕ ಉನ್ಮಾದವನ್ನು ಹರಡಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ತರಬೇತಿ ನೀಡುತ್ತಿರುವುದು ಕೂಡ ದೃಢಪಟ್ಟಿದೆ.

ಗುಪ್ತಚರ ಸಂಸ್ಥೆಗಳ ಖಚಿತ ಮಾಹಿತಿಯ ಆಧಾರದ ಮೇಲೆ ಜುಲೈ 11 ರಂದು ಫುಲ್ವಾರಿ ಶರೀಫ್ ಪ್ರದೇಶದ ನಯಾ ತೋಲಾದಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಚೇರಿಗೆ ದಾಳಿ ನಡೆಸಿ, ಶೋಧ ನಡೆಸಲಾಗಿತ್ತು ಎಂದು ಪಟನಾ ಪೊಲೀಸರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ, ಹಲವು ಅನುಮಾನಾಸ್ಪದ ದಾಖಲೆಗಳು ಮತ್ತು ಪ್ರಚೋದನಾತ್ಮಕ ಸಾಹಿತ್ಯ ಮತ್ತು ಇತರೆ ವಸ್ತುಗಳನ್ನು ಅಲ್ಲಿಂದ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಪಿಎಫ್‌ಐನ ಮಿಷನ್-2047 ಗೆ ಸಂಬಂಧಿಸಿದ ಗೌಪ್ಯ ದಾಖಲೆಯೂ ಇರುವುದು ಪತ್ತೆಯಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಷಡ್ಯಂತ್ರದ ಪ್ರಸ್ತಾಪ ಈ ಮಿಷನ್‌ 2047 ದಾಖಲೆಯಲ್ಲಿದೆ.

ಬಂಧಿತರಲ್ಲಿ ಒಬ್ಬ ನಿವೃತ್ತ ಪೊಲೀಸ್‌

ಸ್ಥಳದಿಂದ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಒಬ್ಬನ ಹೆಸರು ಮೊಹಮ್ಮದ್ ಜಲಾಲುದ್ದೀನ್ ಮತ್ತು ಇನ್ನೊಬ್ಬ ಅಥರ್ ಪರ್ವೇಜ್. ಈ ಪೈಕಿ ಜಲಾಲುದ್ದೀನ್ ಜಾರ್ಖಂಡ್ ಪೊಲೀಸ್‌ ಇಲಾಖೆನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದು, ಇತ್ತೀಚೆಗೆ ನಿವೃತ್ತರಾದವರು.

ಅಥರ್ ಪರ್ವೇಜ್ ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಮಿಯ ಸಕ್ರಿಯ ಸದಸ್ಯನಾಗಿದ್ದ. ಆತನ ಸಹೋದರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದಾನೆ. ಅಥರ್ ಕೂಡ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಹೊರಗಿದ್ದಾನೆ.

ಹಿಂಸಾಕೃತ್ಯಗಳಲ್ಲಿ ಪಿಎಫ್‌ಐ

ಭಯೋತ್ಪಾದಕ ಸಂಘಟನೆ ಸಿಮಿಯನ್ನು ನಿಷೇಧಿಸಿದ ನಂತರ ಇಂಡಿಯನ್ ಮುಜಾಹಿದ್ದೀನ್ ರಚನೆಯಾಯಿತು. 2013ರಲ್ಲಿ ಭಯೋತ್ಪಾದಕ ಯಾಸಿನ್ ಭಟ್ಕಳ್ ಬಂಧನದ ಬಳಿಕ ಇಂಡಿಯನ್ ಮುಜಾಹಿದ್ದೀನ್ ನಿಸ್ತೇಜವಾಗಿತ್ತು. ಮೂಲಗಳ ಪ್ರಕಾರ, ಇಂಡಿಯನ್ ಮುಜಾಹಿದ್ದೀನ್ ಪತನದ ನಂತರ, ದೇಶದ ವಿವಿಧ ರಾಜ್ಯಗಳಲ್ಲಿ PFI ಮತ್ತು ಅದರ ಸಹೋದರ ಸಂಘಟನೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ಬಲಪಡಿಸುವ ಕೆಲಸ ಚುರುಕಾಗಿ ನಡೆದಿದೆ.

ಕೇರಳದ ಎರಡು ಮತ್ತು ಕರ್ನಾಟಕದ ಒಂದು ಸಂಘಟನೆಯನ್ನು ವಿಲೀನಗೊಳಿಸಿ ಪಿಎಫ್‌ಐ ರಚಿಸಲಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ಹಲವಾರು ಕೋಮುಗಲಭೆಗಳಲ್ಲಿ ಪಿಎಫ್‌ಐ ಹೆಸರು ಕಾಣಿಸಿಕೊಂಡಿದೆ. ಅದರ ತನಿಖೆ ನಡೆಯುತ್ತಿದೆ. ದೇಶದಲ್ಲಿ ಪಿಎಫ್‌ಐ ಅನ್ನು ಇನ್ನೂ ನಿಷೇಧಿಸಿಲ್ಲ.

IPL_Entry_Point

ವಿಭಾಗ