ವೃತ್ತಿಯೊಂದಿಗೆ ಪ್ರವೃತ್ತಿಗೂ ಮಣೆ; ವೀಕೆಂಡ್‌ನಲ್ಲಿ ಪಾಸ್ತಾ ಸ್ಟಾಲ್ ನಡೆಸುವ ಫಾರ್ಮಾ ಉದ್ಯೋಗಿ
ಬಿ.ಫಾರ್ಮಾ ಓದಿ ಹೆಲ್ತ್‌ಕೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಯುವತಿ, ತಮ್ಮ ಆಸಕ್ತಿಯ ಭಾಗವಾಗಿ ಆಹಾರ ಮಳಿಗೆಯನ್ನು ತೆರೆದಿದ್ದಾರೆ.
ವೃತ್ತಿ ಮತ್ತು ಪ್ರವೃತ್ತಿಗೆ ವ್ಯತ್ಯಾಸವಿದೆ. ಕೆಲವೊಬ್ಬರು ವೃತ್ತಿಯನ್ನೇ ಪ್ರವೃತ್ತಿಯಾಗಿ ಕಂಡರೆ, ಇನ್ನೂ ಕೆಲವರು ಪ್ರವೃತ್ತಿಯನ್ನೇ ಬದುಕಾಗಿಸುತ್ತಾರೆ. ತೀರಾ ಅಪರೂಪವೆಂಬಂತೆ, ಬೆರಳೆಣಿಕೆಯಷ್ಟು ಜನರು ಮಾತ್ರ ವೃತ್ತಿಯೊಂದಿಗೆ ತಮ್ಮ ಆಸಕ್ತಿ ಮತ್ತು ಅಭಿರುಚಿಯ ಭಾಗವಾದ ಪ್ರವೃತ್ತಿಯನ್ನೂ ಜೊತೆಜೊತೆಗೆ ನಿಭಾಯಿಸುತ್ತಾರೆ. ಇದಕ್ಕೆ ಸೂಕ್ತ ನಿದರ್ಶನ ಈ ಹೆಣ್ಣು ಮಗಳು.
ಹೆಲ್ತ್‌ಕೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಧ್ರುವಿ ಪಾಂಚಾಲ್ (Dhruvi Panchal) ಎಂಬ ಯುವತಿಗೆ ಅಡುಗೆ ಎಂದರೆ ಅಪಾರ ಆಸಕ್ತಿ. ತಮ್ಮ ವಿಶೇಷ ಅಭಿರುಚಿ ಹಾಗೂ ಉತ್ಸಾಹದ ಭಾಗವಾಗಿರುವ ಅಡುಗೆಯನ್ನು ಅವರು ಪ್ರವೃತ್ತಿಯಾಗಿ ಮುಂದುವರೆಸುತ್ತಿದ್ದಾರೆ. ಇದಕ್ಕಾಗಿ ತಮ್ಮದೇ ಆದ ಒಂದು ಆಹಾರ ಮಳಿಗೆಯನ್ನು ತೆರೆದಿದ್ದಾರೆ. ಅದುವೇ ಪಾಸ್ತಾ ಸ್ಟಾಲ್.
ಗುಜರಾತ್‌ನ ಅಹಮದಾಬಾದ್‌ನಲ್ಲಿ ಈಗ ಈ ಯುವತಿ ತುಂಬಾ ಫೇಮಸ್. ಧ್ರುವಿ ಅವರು ಪಾಸ್ತಾ ಸ್ಟಾಲ್‌ನಲ್ಲಿ ಅಡುಗೆ ಮಾಡುವ ವಿಡಿಯೋ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಸ್ಟಾಲ್ ಬಳಿ ನಿಂತು ರುಚಿಕರವಾದ ಬಗೆಬಗೆಯ ಪಾಸ್ತಾ ಭಕ್ಷ್ಯಗಳನ್ನು ಖುದ್ದು ಧ್ರುವಿ ಅವರೇ ಮಾಡುತ್ತಿದ್ದಾರೆ. ಇವರ ಆಸಕ್ತಿಯ ಕತೆ ಕೇಳಿ ಅನೇಕ ಜನರು ಸ್ಫೂರ್ತಿ ಪಡೆದಿದ್ದಾರೆ. ಅಲ್ಲದೆ ಪಾಸ್ತಾ ಸ್ಟಾಲ್‌ಗೆ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುತ್ತಿದ್ದಾರೆ.
ಇನ್‌ಸ್ಟಾಗ್ರಾಮ್ ಬಳಕೆದಾರ ಯೋಗೇಶ್ ಜಿವ್ರಾಣಿ ಎಂಬವರು ಹಂಚಿಕೊಂಡ ವಿಡಿಯೊದಲ್ಲಿ, ಧ್ರುವಿ ಪಾಂಚಾಲ್ ಅವರು ರಸ್ತೆ ಬದಿಯ ತಮ್ಮ ಆಹಾರ ಮಳಿಗೆಯ ಬಳಿ ನಿಂತಿರುವುದನ್ನು ಕಾಣಬಹುದು. ತಮ್ಮ ಸ್ಟಾಲ್‌ಗೆ ಬೇಕಾದ ಎಲ್ಲಾ ಬಗೆಯ ಪಾತ್ರೆಗಳು, ಗ್ಯಾಸ್ ಸ್ಟೌ ಹೀಗೆ ಎಲ್ಲಾ ಅಗತ್ಯ ವಸ್ತುಗಳು ಕೂಡಾ ಅವರ ಬಳಿ ಇವೆ. ನೋಡಲು ಸಾಫ್ಟ್‌ವೇರ್ ಉದ್ಯೋಗಿಯಂತೆ ಸ್ಟೈಲಿಶ್ ಆಗಿ ಕಾಣುವ ಧ್ರುವಿ, ತಮ್ಮ ಆಸಕ್ತಿಯ ಕ್ಷೇತ್ರಕ್ಕೆ ಭಾರಿ ಮಹತ್ವ ಕೊಡುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಯೋಗೇಶ್ ಜಿವ್ರಾಣಿ ಅವರು, ಧ್ರುವಿ ಪರಿಚಯ ಮಾಡಿಕೊಟ್ಟಿದ್ದಾರೆ. ಬಿ.ಫಾರ್ಮಾ (B.Pharma)ಓದಿರುವ ಧ್ರುವಿ ಸದ್ಯ ಮತ್ತು ಝೈಡಸ್ (Zydus) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದಾರೂ, ತಮ್ಮ ಉತ್ಸಾಹದ ಕ್ಷೇತ್ರವಾದ ಅಡುಗೆಯನ್ನು ಮುಂದುವರೆಸಲು ನಿರ್ಧರಿಸಿ, ಈ ಪಾಸ್ತಾ ಸ್ಟಾಲ್ ತೆರೆದಿದ್ದಾರೆ.
"ಯುವಜನರು ಸೇರುವ ಸ್ಥಳದಲ್ಲಿ ಆಹಾರದ ಸಣ್ಣ ಮಟ್ಟಿನ ವ್ಯವಹಾರವನ್ನು ಆರಂಭಿಸಲು ಅವರು ನಿರ್ಧರಿಸಿದರು. ಉದ್ಯೋಗದೊಂದಿಗೆ ಅದನ್ನು ನಿಭಾಯಿಸುವ ನಿರ್ಧಾರ ಮಾಡಿದರು. ತಮ್ಮ ಸ್ಟಾಲ್‌ನ ಆಹಾರದ ಮೆನುವಿನಲ್ಲಿ ಪಾಸ್ತಾ ಮತ್ತು ಮ್ಯಾಕರೋನಿಯನ್ನು ಇಟ್ಟಿದ್ದಾರೆ. ಹೆಚ್ಚಾಗಿ ಯುವಕರು ಈ ಆಹಾರವನ್ನು ಇಷ್ಟಪಡುತ್ತಾರೆ. ಶನಿವಾರ ಕೆಲಸದಿಂದ ಮನೆಗೆ ಬಂದ ನಂತರ, ಧ್ರುವಿ ತಮ್ಮ ಫುಡ್ ಸ್ಟಾಲ್ ವ್ಯವಹಾರದ ತಯಾರಿ ಆರಂಭಿಸುತ್ತಾರೆ. ಸಂಜೆ 6:30ಕ್ಕೆ ಅಹಮದಾಬಾದ್‌ನ ಸೆಪ್ಟ್ ಖಾವ್ ಗಲ್ಲಿಗೆ (Cept Khav Gali) ಬಂದು ರುಚಿರುಚಿಯಾದ ಪಾಸ್ತಾ ಮತ್ತು ಮ್ಯಾಕರೋನಿಯನ್ನು ಸರ್ವ್ ಮಾಡುತ್ತಾರೆ.
ಅಡುಗೆ ಕೆಲಸವು ತಮ್ಮ ಆಸಕ್ತಿ ಮತ್ತು ಉತ್ಸಾಹವನ್ನು ಪೂರೈಸುತ್ತದೆ. ಜನರಿಗೆ ಶುಚಿ ರುಚಿಯಾದ ಆಹಾರವನ್ನು ಬಡಿವುದರಿಂದ ತೃಪ್ತಿಯಾಗುತ್ತದೆ ಎಂದು ಧ್ರುವಿ ಹೇಳುತ್ತಾರೆ. ಸೆಪ್ಟೆಂಬರ್ 18ರಂದು ಇನ್ಸ್‌ಟಾದಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ಹಲವಾರು ಜನರು ವೀಕ್ಷಿಸಿದ್ದಾರೆ. ಅಲ್ಲದೆ ಯುವತಿಯ ಆಸಕ್ತಿಯನ್ನು ಮೆಚ್ಚಿಕೊಂಡಿದ್ದಾರೆ.