Fact Check: ಸರ್ಕಾರದ ಉಚಿತ ರೀಚಾರ್ಜ್ ಯೋಜನೆ ಕುರಿತ ವಾಟ್ಸಾಪ್ ಸಂದೇಶ ನಿಮಗೂ ಬಂತಾ; ಇದು ಅಸಲಿ ಅಲ್ಲ
ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ, ಫೇಕ್ ಸಂದೇಶ ವಾಟ್ಸಾಪ್‌ನಲ್ಲಿ ಓಡಾಡುತ್ತಿದೆ. ಮೂರು ತಿಂಗಳ ಉಚಿತ ರೀಚಾರ್ಜ್ ಎಂಬ ಸಂದೇಶ ಫಾರ್ವರ್ಡ್ ಆಗುತ್ತಿದೆ. ಇದರ ಸತ್ಯಾಸತ್ಯತೆಯನ್ನು ಪಿಐಬಿ ಫ್ಯಾಕ್ಟ್ ಚೆಕ್ ಬಹಿರಂಗಪಡಿಸಿದೆ.

ವಾಟ್ಸಾಪ್ ಮೂಲಕ ನಿತ್ಯ ಹಲವಾರು ಫಾರ್ವರ್ಡ್ ಸಂದೇಶಗಳು ನಿಮಗೂ ಬರಬಹುದು. ಇವುಗಳಲ್ಲಿ ಹೆಚ್ಚಿನ ಎಲ್ಲಾ ಸಂದೇಶಗಳು ಸುಳ್ಳಾಗಿರುತ್ತವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಉಚಿತ ರೀಚಾರ್ಜ್ ಆಫರ್ ನೀಡುತ್ತಿದೆ ಎಂಬ ಸಂದೇಶವೊಂದು ಇತ್ತೀಚೆಗೆ ಎಲ್ಲೆಡೆ ಹರಿದಾಡುತ್ತಿದೆ. ಇದನ್ನು ನಂಬಿದ ಹಲವಾರು ಬಳಕೆದಾರರು, ಅದನ್ನು ವಾಟ್ಸಾಪ್ ಮೂಲಕ ಹಲವರಿಗೆ ಫಾರ್ವರ್ಡ್ ಮಾಡಿದ್ದಾರೆ. ಆದರೆ, ಇದು ಅಸಲ್ಲಿಯಲ್ಲ ನಕಲಿ ಎಂಬುದಾಗಿ ಪಿಐಬಿ ಫ್ಯಾಕ್ಟ್ ಚೆಕ್ ಬಹಿರಂಗಪಡಿಸಿದೆ. ಅಲ್ಲದೆ ಕೇಂದ್ರ ಸರ್ಕಾರವು ಇಂಥಾ ಯಾವುದೇ ಉಚಿತ ರೀಚಾರ್ಜ್ ಯೋಜನೆ ಘೋಷಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ 3 ತಿಂಗಳ ಉಚಿತ ಮೊಬೈಲ್ ರೀಚಾರ್ಜ್ ಅನ್ನು ಒದಗಿಸುವುದಾಗಿ ಈ ಫಾರ್ವರ್ಡ್ ಸಂದೇಶದಲ್ಲಿ ಹೇಳಲಾಗಿದೆ. ಇದೇ ವೇಳೆ ಇಲ್ಲೊಂದು ಲಿಂಕ್ ಹಾಕಿ, ಬಳಕೆದಾರರು ಅದನ್ನು ಕ್ಲಿಕ್ ಮಾಡುವಂತೆ ಪ್ರೇರೇಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ 3 ತಿಂಗಳ ಉಚಿತ ರೀಚಾರ್ಜ್ ನೀಡುವುದಾಗಿ ಹೇಳುವ ಸಂದೇಶ ವಾಟ್ಸಾಪ್ ಮೂಲಕ ಹೆಚ್ಚಿನ ಬಳಕೆದಾರರ ಮೊಬೈಲ್‌ಗೆ ಬಂದಿದೆ. ಈ ಸಂದೇಶ ನಕಲಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹೇಳಿಕೊಂಡಿದೆ.
ಈ ಕುರಿತು ತನ್ನ X ಪೋಸ್ಟ್‌ನಲ್ಲಿ ಮಾಹಿತಿ ನೀಡಿರುವ PIB ಫ್ಯಾಕ್ಟ್ ಚೆಕ್, ‘ಭಾರತ ಸರ್ಕಾರವು ಇಂತಹ ಯಾವುದೇ ಯೋಜನೆಯನ್ನು ಘೋಷಿಸಿಲ್ಲ’ ಎಂದು ಖಚಿತಪಡಿಸಿದೆ. “ಇದು ವಂಚನೆಯ ಪ್ರಯತ್ನ” ಎಂದು ಸತ್ಯಾಸತ್ಯತೆ ಬಯಲು ಮಾಡುವ ಸಂಸ್ಥೆ ತಿಳಿಸಿದೆ.
ಸಂದೇಶದಲ್ಲಿ ಬಳಕೆದಾರರ ಡೇಟಾಗೆ ಪ್ರವೇಶಿಸಬಹುದಾದ ಕೆಲವು ಮೋಸದ ವೆಬ್‌ಸೈಟ್‌ಗೆ ಮರುನಿರ್ದೇಶಿಸುವ ಲಿಂಕ್ ಕೂಡಾ ಒಳಗೊಂಡಿದೆ. ಇದೇ ವಾಟ್ಸಾಪ್ ಸಂದೇಶದಲ್ಲಿ ಬಳಕೆದಾರರು ತರಾತುರಿಯಲ್ಲಿ ಕ್ಲಿಕ ಮಾಡುವಂತೆ ಪ್ರೇರೇಪಿಸುವ "ಕೊನೆಯ ದಿನ" ಎಂಬ ವಾಕ್ಯವನ್ನೂ ಸೇರಿಸಲಾಗಿದೆ.
ಎಚ್ಚರವಾಗಿರಿ
ಆಧುನಿಕ ಯುಗದಲ್ಲಿ ತಂತ್ರಜ್ಞಾನವು ಬೆಳೆದಂತೆ ಇಂಥಾ ಹಗರಣ ಹಾಗೂ ವಂಚನೆಗಳು ಹೆಚ್ಚುತ್ತಿದೆ. ಹೀಗಾಗಿ ಬಳಕೆದಾರರು ಜಾಗರೂಕವಾಗಿ ಇದನ್ನು ಗಮನಿಸಬೇಕಾಗುತ್ತದೆ. ಯಾವುದೇ ಲಿಂಕ್‌ಗಳನ್ನು ಅಥವಾ ಸಂದೇಶಗಳನ್ನು ಫಾರ್ವರ್ಡ್ ಮಾಡುವ ಮುನ್ನ ಅದರ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ಮಾಡಬೇಕು. ಮುಖ್ಯವಾಗಿ ಯಾರೋ ಕಳುಹಿಸಿದ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಪ್ರಯತ್ನ ಮಾಡದಿರುವುದು ಒಳ್ಳೆಯದು.
ಸ್ಕ್ಯಾಮರ್‌ಗಳು ಎಲ್ಲಾ ರೀತಿಯಲ್ಲೂ ಹ್ಯಾಕ್ ಮಾಡಿ ಇಂಥಾ ಲಿಂಕ್ ಕಳುಹಿಸುವ ಸಾಧ್ಯತೆ ಇದೆ. ಕ್ರಮೇಣ ಇದು ಬ್ಯಾಂಕಿಂಗ್ ವಂಚನೆಗೆ ಕಾರಣವಾಗಬಹುದು. ಆಗ ನಿಮ್ಮ ಖಾತೆಯಲ್ಲಿರುವ ದುಡ್ಡು ಕಳೆದುಕೊಳ್ಳುವ ಸಂಭಾವ್ಯತೆಯೂ ಇದೆ.
ಬಳಕೆದಾರರು ಏನು ಮಾಡಬೇಕು?
ನೀವು ಸ್ವೀಕರಿಸುವ ಸಂದೇಶಗಳ ಮೇಲೆ ಗಮನವಿರಲಿ. ಇಂಥಾ ಸಂದೇಶಗಳನ್ನು ಯಾರಿಗೂ ಫಾರ್ವರ್ಡ್ ಮಾಡಬೇಡಿ. ಮೋಸದ ಸಂದೇಶ ಎಂಬುದು ನಿಮಗೆ ಖಚಿತವಾದರೆ, ಆ ಸಂಖ್ಯೆಯನ್ನು ಬ್ಲಾಕ್ ಮಾಡಿ ಜೊತೆಗೆ ರಿಪೋರ್ಟ್ ಮಾಡಿ.
ಮೊಬೈಲ್ ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ವಂಚನೆಗಳನ್ನು ತಡೆಯಲು ಭಾರತ ಸರ್ಕಾರವು ಸಂಚಾರ ಸತಿ (Sanchar Sathi) ಪೋರ್ಟಲ್ ಅಡಿಯಲ್ಲಿ ಚಕ್ಷು ಉಪಕ್ರಮವನ್ನು ಪರಿಚಯಿಸಿದೆ. ಬಳಕೆದಾರರಿಗೆ ಬರುವ ವಂಚನೆ ಕರೆಗಳು, ವಿವಿಧ ಆಫರ್‌ಗಳು, ಉದ್ಯೋಗ ವಂಚನೆಗಳು, ಫೋನ್ ನಂಬರ್ ವಂಚನೆಗಳು ಮುಂತಾದ ಸಂದೇಶಗಳನ್ನು ಇಲ್ಲಿ ರಿಪೋರ್ಟ್ ಮಾಡಬಹುದು. ಇದರಿಂದ ಸರ್ಕಾರವು ಇಂಥಾ ಹಗರಣಗಳನ್ನು ನಿಗ್ರಹಿಸಲು ಸುಲಭವಾಗುತ್ತದೆ.
ಫ್ಯಾಕ್ಟ್ ಚೆಕ್ಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಹೊಸ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ ಏರ್ಟೆಲ್; 395 ರೀಚಾರ್ಜ್ಗೆ 56 ದಿನಗಳ ಮಾನ್ಯತೆ, ಪ್ರಯೋಜನ ಹೀಗಿವೆ
