Tejasvi Surya: ಅಚಾತುರ್ಯದಿಂದ ವಿಮಾನದ ತುರ್ತು ಬಾಗಿಲು ತೆರೆದುಕೊಂಡಿದೆ: ತೇಜಸ್ವಿ ಸೂರ್ಯ ವಿವಾದಕ್ಕೆ ಸಿಂಧಿಯಾ ಸ್ಪಷ್ಟನೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ಕಳೆದ ತಿಂಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಹಾರಲು ಸಜ್ಜಾಗಿದ್ದ ವಿಮಾನದ ತುರ್ತು ಬಾಗಿಲನ್ನು ತರೆದು ವಿವಾದ ಸೃಷ್ಟಿಸಿದ್ದಾರೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಅಚಾತುರ್ಯದಿಂದಾಗಿ ವಿಮಾನದ ತುರ್ತು ಬಾಗಿಲು ತೆರೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ಕಳೆದ ತಿಂಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಹಾರಲು ಸಜ್ಜಾಗಿದ್ದ ವಿಮಾನದ ತುರ್ತು ಬಾಗಿಲನ್ನು ತರೆದು ವಿವಾದ ಸೃಷ್ಟಿಸಿದ್ದಾರೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಅಚಾತುರ್ಯದಿಂದಾಗಿ ವಿಮಾನದ ತುರ್ತು ಬಾಗಿಲು ತೆರೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಜ್ಯೋತಿರಾದಿತ್ಯ ಸಿಂಧಿಯಾ, ಅಚಾತುರ್ಯದಿಂದಾಗಿ ವಿಮಾನದ ತುರ್ತು ವಿಮಾನದ ಬಾಗಲು ತೆರೆದುಕೊಂಡಿದೆಯೇ ಹೊರತು, ತೇಜಸ್ವಿ ಸೂರ್ಯ ಅವರು ಉದ್ದೇಶಪೂರ್ವಕವಾಗಿ ಹೀಗೆ ಮಾಡಿಲ್ಲ ಎಂದು ಹೇಳಿದ್ದಾರೆ.
ಘಟನೆಯ ಕುರಿತು ನಾವು ಸತ್ಯವನ್ನು ಅವಲೋಕಿಸುವುದು ಮುಖ್ಯವಾಗುತ್ತದೆ. ತೇಜಸ್ವಿ ಸೂರ್ಯ ಅವರು ಅಚಾತುರ್ಯದಿಂದ ವಿಮಾನದ ತುರ್ತು ಬಾಗಿಲು ತೆರೆದಾಗ, ವಿಮಾನವು ಇನ್ನೂ ಹಾರಾಟ ನಡೆಸಿರಲಿಲ್ಲ. ಘಟನೆಯ ಬಳಿಕ ಎಲ್ಲಾ ಸುರಕ್ಷತಾ ತಪಾಸಣೆ ನಡೆಸಿದ ನಂತರವಷ್ಟೇ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ತೇಜಸ್ವಿ ಸೂರ್ಯ ಅವರು ತಮ್ಮ ತಪ್ಪಿಗೆ ಕ್ಷಮೆಯನ್ನೂ ಕೇಳಿದ್ದಾರೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ನುಡಿದರು.
ಕಳೆದ ಡಿಸೆಂಬರ್ 10ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ, ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ವಿಮಾನದ ತುರ್ತು ನಿರ್ಗಮನ ದ್ವಾರವನ್ನ ತರೆದು ಆತಂಕ ಸೃಷ್ಟಿಸಿದ್ದರು ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ನಿನ್ನೆ(ಜ.17-ಮಂಗಳವಾರ) ಮಾಹಿತಿ ನೀಡಿತ್ತು. ಅಲ್ಲದೇ ಘಟನೆಗೆ ಆ ಪ್ರಯಾಣಿಕರು ಕ್ಷಮೆಯನ್ನೂ ಕೋರಿದ್ದಾರೆ ಎಂದು ಇಂಡಿಗೋ ಸ್ಪಷ್ಟಪಡಿಸಿತ್ತು.
ಅಲ್ಲದೇ ಘಟನೆಯ ಬಳಿಕ ಎಲ್ಲಾ ಸುರಕ್ಷತಾ ತಪಾಸಣೆಯ ನಂತರವೇ, ವಿಮಾನವು ತಿರುಚಿರಾಪಳ್ಳಿಗೆ ಹಾರಾಟ ನಡೆಸಿತು. ಈ ಘಟನೆಯಿಂದ ವಿಮಾನವು ನಿಗದಿತ ಸಮಯಕ್ಕಿಂತ ತಡವಾಗಿ ತನ್ನ ಗಮ್ಯಸ್ಥಾನವನ್ನು ತಲುಪಿತು ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿತ್ತು.
ಕಾಂಗ್ರೆಸ್ ಖಂಡನೆ:
ಆದರೆ ಘಟನೆಗೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷ ಕಾಂಗ್ರೆಸ್, ಇಂತಹ ಗಂಭೀರ ಪ್ರಕರಣವನ್ನು ಇಷ್ಟು ದಿನ ಮುಚ್ಚಿಟ್ಟಿದ್ದೇಕೆ ಎಂದು ಪ್ರಶ್ನಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್, ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹರಿಹಾಯ್ದಿದೆ.
''ವಿಮಾನದಲ್ಲಿ ಚೇಷ್ಟೆ ನಡೆಸಿ ಒಂದು ತಿಂಗಳಾದರೂ ಘಟನೆ ಬಗ್ಗೆ ವಿಮಾನಯಾನ ಸಚಿವಾಲಯ ಕ್ರಮ ಕೈಗೊಳ್ಳದಿರುವುದೇಕೆ? ಇದು ಶಿಕ್ಷಾರ್ಹ ಹಾಗೂ ಗಂಭೀರ ಪ್ರಕರಣವಾಗಿದ್ದರೂ ಮುಚ್ಚುಮರೆ ಮಾಡಿದ್ದೇಕೆ? ಈತನ ಚೇಷ್ಟೆಯಿಂದ ಇತರ ಪ್ರಯಾಣಿಕರಿಗಾದ ವಿಳಂಬಕ್ಕೆ, ಅವರಿಗಾದ ನಷ್ಟಕ್ಕೆ ಪರಿಹಾರವೇನು? ರಾಜ್ಯ ಬಿಜೆಪಿ ಘಟಕ ಈ ಪ್ರಶ್ನೆಗಳಿಗೆ ಉತ್ತರಿಸುವುದೇ.. '' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
''ದೆಹಲಿ ಸಿಎಂ ಮನೆ ದಾಳಿಯಿಂದ ಹಿಡಿದು ವಿಮಾನದ ತುರ್ತು ಬಾಗಿಲು ತೆಗೆಯುವವರೆಗೂ ಸಂಸದ ತೇಜಸ್ವಿ ಸೂರ್ಯನ ಹಲವು ಅತಿರೇಕದ ಪ್ರಕರಣಗಳು ಕಂಡುಬಂದಿವೆ. ಮಾನ್ಯ ಲೋಕಸಭಾ ಸ್ಪೀಕರ್ ಅವರು ತೇಜಸ್ವಿ ಸೂರ್ಯ ಅವರ ಮಾನಸಿಕ ಆರೋಗ್ಯದ ತಪಾಸಣೆ ನಡೆಸಲು ಅದೇಶಿಸಬೇಕು. ಮಾನಸಿಕ ಲೋಪವಿದ್ದಲ್ಲಿ ಸಂಸದ ಸ್ಥಾನದಿಂದ ವಜಾಗೊಳಿಸಿ, ಸೂಕ್ತ ಚಿಕಿತ್ಸೆ ನೀಡಬೇಕು..'' ಎಂದು ಕಾಂಗ್ರೆಸ್ ಆಗ್ರಹಿಸಿದೆ.
''ಮಂಗನ ಕೈಗೆ ಮಾಣಿಕ್ಯ ಕೊಡಬಾರದು. ಆಡುವ ಮಕ್ಕಳಿಗೆ ಯಜಮಾನಿಕೆ ಕೊಡಬಾರದು.ಕಳ್ಳನಿಗೆ ಕಾವಲು ಕೊಡಬಾರದು. ಶ್ವಾನವನ್ನು ಪಲ್ಲಕ್ಕಿಗೆ ಏರಿಸಬಾರದು. ಬಿಜೆಪಿಗೆ ಆಡಳಿತ ಕೊಡಬಾರದು ಹಾಗೂ ದೋಸೆಪ್ರೇಮಿ ತೇಜಸ್ವಿ ಸೂರ್ಯ ಅವರಂತವರಿಗೆ ಹುದ್ದೆ, ಅಧಿಕಾರ ಕೊಡಬಾರದು. ಕೊಟ್ಟರೆ ಏನಾಗಲಿದೆ ಎಂಬುದಕ್ಕೆ ಈ ಘಟನೆ ಉದಾಹರಣೆ.. '' ಎಂದು ಕಾಂಗ್ರೆಸ್ ಕಿಡಿಕಾರಿದೆ.
ವಿಭಾಗ