ಕನ್ನಡ ಸುದ್ದಿ  /  Nation And-world  /  Pm Modi And Amit Shah To Vote In Gujarat Election

Gujarat elections 2022 phase 2: ಮೋದಿ, ಶಾ, ಪಾಂಡ್ಯ ಸಹೋದರರು; ಅಭ್ಯರ್ಥಿಗಳಿಗಿಂತ ಸೆಲೆಬ್ರಿಟಿ ಮತದಾರರೇ ಇಂದಿನ ಆಕರ್ಷಣೆ

ಅಖಾಡದಲ್ಲಿರುವ ಸ್ಪರ್ಧಿಗಳ ಹೊರತಾಗಿ, ಕೆಲ ಗಣ್ಯ ಮತದಾರರು ಕೂಡಾ ಇಂದು ಹಕ್ಕು ಚಲಾಯಿಸಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯ ಮತದಾರರ ಮತದಾನಕ್ಕೆ ಇಂದಿನ ಚುನಾವಣಾ ಕಣ ಸಾಕ್ಷಿಯಾಗಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಪ್ರಧಾನಿ ನರೇಂದ್ರ ಮೋದಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಪ್ರಧಾನಿ ನರೇಂದ್ರ ಮೋದಿ (ANI)

ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದೆ. ಇಂದು ಎರಡನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದ್ದು, 14 ಜಿಲ್ಲೆಗಳ ಒಟ್ಟು 93 ಕ್ಷೇತ್ರಗಳಲ್ಲಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಇಂದು 61 ಪಕ್ಷಗಳ ಒಟ್ಟು 833 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.

ರಾಜ್ಯದ ಅಹಮದಾಬಾದ್, ಗಾಂಧಿನಗರ, ಮೆಹ್ಸಾನಾ, ಪಟಾನ್, ಬನಸ್ಕಾಂತ, ಸಬರ್ಕಾಂತ, ಅರಾವಳಿ, ಮಹಿಸಾಗರ್, ಪಂಚಮಹಲ್, ದಾಹೋದ್, ವಡೋದರಾ, ಆನಂದ್, ಖೇಡಾ ಮತ್ತು ಛೋಟಾ ಉದಯಪುರ ಜಿಲ್ಲೆಗಳಲ್ಲಿ ಈ ಎಲ್ಲಾ ಕ್ಷೇತ್ರಗಳಿವೆ.

ಪ್ರಮುಖ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘಟ್ಲೋಡಿಯಾ ಕ್ಷೇತ್ರದ ಅಭ್ಯರ್ಥಿ. ಇದೇ ಕ್ಷೇತ್ರದಿಂದ ಅಮೀ ಯಾಗ್ನಿಕ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಮತ್ತೊಂದೆಡೆ ಈ ಬಾರಿಯ ಪ್ರಬಲ ಸ್ಪರ್ಧಿ ಎಎಪಿ, ವಿಜಯ್ ಪಟೇಲ್ ಅವರನ್ನು ಕಣಕ್ಕಿಳಿಸಿದೆ.

ಬಿಜೆಪಿಯ ಹಾರ್ದಿಕ್ ಪಟೇಲ್ ವಿರಾಂಗಾಮ್‌ನಿಂದ ಸ್ಪರ್ಧಿಸಲಿದ್ದಾರೆ. ಅಲ್ಪೇಶ್ ಠಾಕೂರ್ ಗಾಂಧಿನಗರ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಿಂದ ಆಮ್‌ ಆದ್ಮಿ ಪಕ್ಷವು ದೋಲತ್ ಪಟೇಲ್ ಅವರನ್ನು ಕಣಕ್ಕಿಳಿಸಿದೆ. ಅತ್ತ ಕಾಂಗ್ರೆಸ್‌ನ ಸುಖರಾಮ್ ರಥಾವ ಅವರು ಛೋಟಾ ಉದಯ್‌ಪುರದಿಂದ ಸ್ಪರ್ಧಿಸಲಿದ್ದಾರೆ. ಲಖಾಭಾಯ್ ಭಾರವಾಡ್, ಜಿಗ್ನೇಶ್ ಮೇವಾನಿ ಕ್ರಮವಾಗಿ ವಿರಂಗಾಮ್ ಮತ್ತು ವಡ್ಗಾಮ್‌ನಿಂದ ಕಣಕ್ಕಿಳಿಯುತ್ತಿದ್ದಾರೆ.

ಗಣ್ಯ ಮತದಾರರು

ಮೊದಲ ಹಂತಕ್ಕಿಂತ ಎರಡನೇ ಹಂತದ ಮತದಾನ ಹೆಚ್ಚು ಬಿರುಸು ಪಡೆದುಕೊಂಡಿದೆ. ಅಖಾಡದಲ್ಲಿರುವ ಸ್ಪರ್ಧಿಗಳ ಹೊರತಾಗಿ, ಕೆಲ ಗಣ್ಯ ಮತದಾರರು ಕೂಡಾ ಇಂದು ಹಕ್ಕು ಚಲಾಯಿಸಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯ ಮತದಾರರ ಮತದಾನಕ್ಕೆ ಇಂದಿನ ಚುನಾವಣಾ ಕಣ ಸಾಕ್ಷಿಯಾಗಲಿದೆ. ಇವರೊಂದಿಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಇಸುದನ್ ಗಧ್ವಿ, ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್, ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಇಂದು ಮತದಾನ ಮಾಡಲಿದ್ದಾರೆ.

ವಡೋದರಾದ ರಾಜಮನೆತನದ ಸದಸ್ಯರು, ಕಾಂಗ್ರೆಸ್ ನಾಯಕ ಮತ್ತು ಸಂಸದ ಶಕ್ತಿಸಿಂಗ್ ಗೋಹಿಲ್ ಮತ್ತು ಮಾಜಿ ಮುಖ್ಯಮಂತ್ರಿ ಶಂಕರಸಿನ್ಹ ವಘೇಲಾ ಕೂಡ ಸೋಮವಾರ ಮತ ಚಲಾಯಿಸಲಿದ್ದಾರೆ.

ಗುಜರಾತ್‌ನಲ್ಲಿ ನಡೆದ ಮೊದಲ ಹಂತದ ಮತದಾನ ನೀರಸವಾಗಿತ್ತು. ನಗರ ಪ್ರದೇಶಗಳಲ್ಲಿ ಮತದಾರರ ನಿರಾಸಕ್ತಿಯ ಬಗ್ಗೆ ಚುನಾವಣಾ ಆಯೋಗ ಕಳವಳ ವ್ಯಕ್ತಪಡಿಸಿತ್ತು. ರಾಜ್ಯದಲ್ಲಿ ಮೊದಲ ಹಂತದಲ್ಲಿ ಸರಾಸರಿ 63.3% ಮತದಾನವಾಗಿದೆ. ಸೂರತ್, ರಾಜ್‌ಕೋಟ್ ಮತ್ತು ಜಾಮ್‌ನಗರದಲ್ಲಿ ರಾಜ್ಯದ ಸರಾಸರಿಗಿಂತ ಕಡಿಮೆ ಮತದಾನವಾಗಿತ್ತು.

ಮತದಾರರು ತಮ್ಮ ಗೊತ್ತುಪಡಿಸಿದ ಮತಗಟ್ಟೆಗಳಿಗೆ ಬೇಗನೆ ತಲುಪಬೇಕು. ಸೋಮವಾರ ಸಂಜೆ 5 ಗಂಟೆಯ ಮೊದಲು ಮತ ಚಲಾಯಿಸಬೇಕು ಎಂದು ಚುನಾವಣಾ ಆಯೋಗ ಒತ್ತಾಯಿಸಿದೆ. ಡಿಸೆಂಬರ್ 1ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಹಂತದ ಮತದಾನದಲ್ಲಿ ನಗರ ಪ್ರದೇಶಗಳಲ್ಲಿ 'ಕಡಿಮೆ' ಮತದಾನದ ಬಗ್ಗೆ ಗುಜರಾತ್ ಮುಖ್ಯ ಚುನಾವಣಾಧಿಕಾರಿ ಪಿ ಭಾರತಿ ಭಾನುವಾರ ಕಳವಳ ವ್ಯಕ್ತಪಡಿಸಿದ್ದಾರೆ.

“ಪ್ರತಿಯೊಬ್ಬ ಮತದಾರರು, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಉತ್ಸಾಹದಿಂದ ಮತದಾನ ಮಾಡಬೇಕು. ನಗರ ಪ್ರದೇಶದ ಯುವಕರು ನಿರಾಸಕ್ತಿ ತೊರೆದು ಮತ ಚಲಾಯಿಸುವಂತೆ ಮಾಡಲು ಚುನಾವಣಾ ಆಯುಕ್ತರು ಅವಿರತವಾಗಿ ಶ್ರಮಿಸುತ್ತಿದ್ದಾರೆ" ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

12.9 ಮಿಲಿಯನ್ ಪುರುಷರು ಮತ್ತು 12.2 ಮಿಲಿಯನ್ ಮಹಿಳೆಯರು ಸೇರಿದಂತೆ ಇಪ್ಪತ್ತೈದು ಮಿಲಿಯನ್ ಮತದಾರರು ಈ ಹಂತದ ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

ಪ್ರಧಾನಿಯವರ ತವರು ರಾಜ್ಯ ಗುಜರಾತ್‌ ಬಿಜೆಪಿಯ ಭದ್ರಕೋಟೆಯಾಗಿದ್ದು, ಪಕ್ಷವು ದಾಖಲೆಯ ಏಳನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಣ್ಣಿಟ್ಟಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಮತ್ತು ಕಾಂಗ್ರೆಸ್ ಕಣದಲ್ಲಿರುವ ಇತರ ಪ್ರಮುಖ ಪಕ್ಷಗಳಾಗಿವೆ.