Russia-Ukraine War: ಮೋದಿ ಉಕ್ರೇನ್ ಯುದ್ಧ ನಿಲ್ಲಿಸಬಹುದು: ಯುಎನ್ ಸಭೆಯಲ್ಲಿ ಮೆಕ್ಸಿಕೋ ಅಭಿಮತ!
ಕಳೆದ ಏಳು ತಿಂಗಳಿನಿಂದ ಕದನದಲ್ಲಿ ನಿರತವಾಗಿರುವ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಶ್ವತ ಶಾಂತಿ ಸ್ಥಾಪನೆಗೆ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರನ್ನು ಒಳಗೊಂಡ ಸಮಿತಿ ರಚಿಸುವಂತೆ ವಿಶ್ವಸಂಸ್ಥೆಗೆ ಮೆಕ್ಸಿಕೋ ಪ್ರಸ್ತಾವನೆ ಸಲ್ಲಿಸಿದೆ. ಯುದ್ಧ ಕೊನೆಗಾಣಿಸಿ, ಶಾಂತಿ ಸ್ಥಾಪಿಸುವಲ್ಲಿ ಮೋದಿ ಮಹತ್ತರವಾದ ಪಾತ್ರ ನಿರ್ವಹಿಸಬಹುದು ಎಂದು ಮೆಕ್ಸಿಕೋ ಅಭಿಪ್ರಾಯಪಟ್ಟಿದೆ.
ವಿಶ್ವಸಂಸ್ಥೆ: ರಷ್ಯಾ-ಉಕ್ರೇನ್ ನಡುವಣ ಸುದೀರ್ಘ ಯುದ್ಧ ಕೊನೆಗಾಣಿಸಿ, ಶಾಂತಿ ಸ್ಥಾಪಿಸುವಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹತ್ತರವಾದ ಪಾತ್ರ ನಿರ್ವಹಿಸಬಹುದು ಎಂದು ಮೆಕ್ಸಿಕೋ ಅಭಿಪ್ರಾಯಪಟ್ಟಿದೆ. ವಿಶ್ವಸಂಸ್ಥೆ ಸಾಮಾನು ಸಭೆ ಉದ್ದೇಶಿಸಿ ಮಾತನಾಡಿದ ಮೆಕ್ಸಿಕೋ ವಿದೇಶಾಂಗ ಸಚಿವ ಮಾರ್ಕೆಲೋ ಲೂಯಿಸ್ ಎಬ್ರಾರ್ಡ್ ಕಾಸೌಬೊನ್, ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಲ್ಲಿ ಭಾರತದ ಪ್ರಧಾನಿ ಮೋದಿ ಸಹಾಯ ಮಾಡಬಹುದು ಎಂದು ಹೇಳಿದ್ದಾರೆ.
ಕಳೆದ ಏಳು ತಿಂಗಳಿನಿಂದ ಕದನದಲ್ಲಿ ನಿರತವಾಗಿರುವ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಶ್ವತ ಶಾಂತಿ ಸ್ಥಾಪನೆಗೆ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರನ್ನು ಒಳಗೊಂಡ ಸಮಿತಿ ರಚಿಸುವಂತೆ ವಿಶ್ವಸಂಸ್ಥೆಗೆ ಮೆಕ್ಸಿಕೋ ಪ್ರಸ್ತಾವನೆ ಸಲ್ಲಿಸಿದೆ.
ಶಾಂತಿ ಸ್ಥಾಪನೆಗೆ ಗರಿಷ್ಠ ಪ್ರಯತ್ನ ನಡೆಸಲು ಅಂತಾರಾಷ್ಟ್ರೀಯ ಸಮುದಾಯ ಮುಂದಾಗಬೇಕು. ಇದಕ್ಕಾಗಿ ಜಗತ್ತಿನ ಪ್ರಮುಖ ನಾಯಕರು ನೇತೃತ್ವವಹಿಸಿಕೊಳ್ಳಬೇಕು. ಸದ್ಯ ರಷ್ಯಾ-ಉಕ್ರೇನ್ ನಡುವೆ ಶಾಂತಿಗಾಗಿ ಮಧ್ಯಸ್ಥಿಕೆವಹಿಸಲು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಕ್ತ ವ್ಯಕ್ತಿ ಎಂಬುದು ತಮ್ಮ ಅಭಿಪ್ರಾಯ ಎಂದು ಕಾಸೌಬೊನ್ ಹೇಳಿದ್ದಾರೆ.
ಶಾಂತಿಗಾಗಿ ಸಂಧಾನ ಪ್ರಯತ್ನಗಳನ್ನು ಬಲಪಡಿಸಲು, ಭಾರತದ ಪ್ರಧಾನಿ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರನ್ನು ಒಳಗೊಂಡ ಸಮಿತಿ ರಚನೆಯಾಗಬೇಕು. ಈ ಸಮಿತಿಯಲ್ಲಿ ಇತರೆ ದೇಶಗಳ ಸರ್ಕಾರಗಳ ಮುಖ್ಯಸ್ಥರೂ ಇರಬೇಕು. ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮಾನ್ಯುಯೆಲ್ ಲೋಪೆಜ್ ಒಬ್ರಾಡರ್ ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಈ ಕುರಿತು ವಿಶ್ವಸಂಸ್ಥೆ ಗಂಭೀರ ಆಲೋಚನೆ ಮಾಡಬೇಕು ಎಂದು ಕಾಸೌಬೊನ್ ಮನವಿ ಮಾಡಿದ್ದಾರೆ.
ಉಜ್ಬೇಕಿಸ್ತಾನದ ಸಮರಖಂಡ್‌ನಲ್ಲಿ ಇತ್ತೀಚೆಗೆ ನಡೆದ 22ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ವೇಳೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ 'ಇದು ಯುದ್ಧದ ಸಮಯವಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದರು. ಪ್ರಧಾನಿ ಹೇಳಿಕೆಯನ್ನು ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಸೇರಿದಂತೆ ಪಶ್ಚಿಮದ ದೇಶಗಳು ಸ್ವಾಗತಿಸಿದ್ದವು.
ಭಾರತ ಹೇಳಿದ್ದೇನು?:
ಇನ್ನು ರಷ್ಯಾ- ಉಕ್ರೇನ್ ಯುದ್ಧದ ಕುರಿತಂತೆ ವಿಶ್ವಸಂಸ್ಥೆಯಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತ, ಕೂಡಲೇ ಯುದ್ಧ ವಿರಾಮ ಘೋಷಿಸಿ ಶಾಂತಿ ಸ್ಥಾಪನೆ ಎರಡೂ ದೇಶಗಳ ಪ್ರಥಮ ಆದ್ಯತೆಯಾಗಬೇಕು ಎಂಬ ತನ್ನ ನಿರ್ಧಾರವನ್ನು ಪುನರುಚ್ಛಿಸಿದೆ. ಈ ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಜಾಗತಿಕ ಪರಿಣಾಮಗಳನ್ನು ಬೀರುತ್ತಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಉಕ್ರೇನ್‌ನಲ್ಲಿನ ಸಂಘರ್ಷ ಸಾಗುತ್ತಿರುವ ಪಥವು ಅಂತಾರಾಷ್ಟ್ರೀಯ ಸಮುದಾಯಕ್ಕೆ ತೀವ್ರ ಆತಂಕ ಉಂಟುಮಾಡಿರುವ ವಿಷಯವಾಗಿದೆ. ಇದರ ಫಲಿತಾಂಶ ನಿಜಕ್ಕೂ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.
ಈ ಕೂಡಲೇ ಯುದ್ಧ ನಿಲ್ಲಿಸಿ ರಷ್ಯಾ ಮತ್ತು ಉಕ್ರೇನ್ ಶಾಂತಿ ಮಾತುಕತೆಗೆ ಮುಂದಾಗಬೇಕು. ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಿ ಹೇಳಿರುವಂತೆ, ಇದು ಯುದ್ಧದ ಯುಗವಾಗಲು ಸಾಧ್ಯವಿಲ್ಲ ಎಂದು ಜೈಶಂಕರ್ ಮಾರ್ಮಿಕವಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ರಷ್ಯಾ-ಉಕ್ರೇನ್ ಯುದ್ಧ ಕೊನೆಗಾಣಿಸುವಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹತ್ವದ ಪಾತ್ರ ನಿರ್ವಹಿಸಬಲ್ಲರು ಎಂದು ಜಗತ್ತು ನಂಬಿದೆ. ಇದಕ್ಕೆ ಫ್ರಾನ್ಸ್, ಮೆಕ್ಸಿಕೋ ದೇಶಗಳು ವಿಶ್ವಸಂಸ್ಥೆಯಲ್ಲಿ ಮಂಡಿಸಿರುವ ಅಭಿಪ್ರಾಯಗಳೇ ಸಾಕ್ಷಿ. ಈ ದೇಶಗಳ ಅಭಿಪ್ರಾಯದ ಆಧಾರದ ಮೇಲೆ ವಿಶ್ವಸಂಸ್ಥೆ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.