PM Modi on INDIA: ಇಂಡಿಯಾ ಅಲ್ಲ ಘಮಾಂಡಿಯಾ; ವಿಪಕ್ಷಗಳ ಮೈತ್ರಿಕೂಟಕ್ಕೆ ಹೊಸ ಹೆಸರಿಟ್ಟ ಪ್ರಧಾನಿ ಮೋದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi On India: ಇಂಡಿಯಾ ಅಲ್ಲ ಘಮಾಂಡಿಯಾ; ವಿಪಕ್ಷಗಳ ಮೈತ್ರಿಕೂಟಕ್ಕೆ ಹೊಸ ಹೆಸರಿಟ್ಟ ಪ್ರಧಾನಿ ಮೋದಿ

PM Modi on INDIA: ಇಂಡಿಯಾ ಅಲ್ಲ ಘಮಾಂಡಿಯಾ; ವಿಪಕ್ಷಗಳ ಮೈತ್ರಿಕೂಟಕ್ಕೆ ಹೊಸ ಹೆಸರಿಟ್ಟ ಪ್ರಧಾನಿ ಮೋದಿ

Opposition Alliance INDIA: “ಪ್ರತಿಪಕ್ಷಗಳು ಬಡವರ ವಿರುದ್ಧ ಸಂಚು ರೂಪಿಸಿದ್ದನ್ನು ಮರೆಮಾಚಲು ತಮ್ಮ ಹೆಸರನ್ನು ಯುಪಿಎ ಇಂದ ಇಂಡಿಯಾ ಎಂದು ಬದಲಾಯಿಸಿದ್ದಾರೆ. ಅದು ಇಂಡಿಯಾ ಅಲ್ಲ ಘಮಾಂಡಿಯಾ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಘಮಾಂಡಿಯಾ ಹಿಂದಿ ಪದವಾಗಿದ್ದು, ಸೊಕ್ಕು, ಅಹಂಕಾರ ಇದರ ಅರ್ಥವಾಗಿದೆ.

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ವಿಪಕ್ಷಗಳು ಕಟ್ಟಿರುವ ಮೈತ್ರಿಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ಹೆಸರಿಟ್ಟಿದ್ದಾರೆ. ಅದು 'ಇಂಡಿಯಾ' ಅಲ್ಲ 'ಘಮಾಂಡಿಯಾ' ಎಂದು ಕರೆದು ವ್ಯಂಗ್ಯವಾಡಿದ್ದಾರೆ.

ಗುರುವಾರ ( ಆಗಸ್ಟ್ 3) ಬಿಹಾರದ ಮಿತ್ರಪಕ್ಷಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಪಿಎಂ ಮೋದಿ, “ವಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್, ಹಿಂದಿನ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ ) ಅನ್ನು ಮರುನಾಮಕರಣ ಮಾಡಲು ಪ್ರಯತ್ನಿಸುತ್ತಿದೆ. ಇಂಡಿಯಾ ಎಂಬ ಹೆಸರು ತಮ್ಮ ದೇಶಪ್ರೇಮವನ್ನು ತೋರಿಸಲು ಅಲ್ಲ, ದೇಶವನ್ನು ದೋಚುವ ಉದ್ದೇಶದಿಂದ ಇಟ್ಟಿದ್ದು” ಎಂದು ಆರೋಪಿಸಿದ್ದಾರೆ.

“ಪ್ರತಿಪಕ್ಷಗಳು ಬಡವರ ವಿರುದ್ಧ ಸಂಚು ರೂಪಿಸಿದ್ದನ್ನು ಮರೆಮಾಚಲು ತಮ್ಮ ಹೆಸರನ್ನು ಯುಪಿಎ ಇಂದ ಇಂಡಿಯಾ ಎಂದು ಬದಲಾಯಿಸಿದ್ದಾರೆ. ಅದು ಇಂಡಿಯಾ ಅಲ್ಲ ಘಮಾಂಡಿಯಾ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಘಮಾಂಡಿಯಾ ಹಿಂದಿ ಪದವಾಗಿದ್ದು, ಸೊಕ್ಕು, ಅಹಂಕಾರ ಇದರ ಅರ್ಥವಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು ಸೋಲಿಸಲು 26 ವಿರೋಧ ಪಕ್ಷಗಳು ಒಂದಾಗಿದ್ದು, ತಮ್ಮ ಮೈತ್ರಿಕೂಟಕ್ಕೆ 'ಇಂಡಿಯಾ' (INDIA) ಎಂದು ಹೆಸರಿಟ್ಟಿವೆ. I.N.D.I. A ಎಂದರೆ Indian National Development Inclusive Alliance.ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಮಹಾಘಟಬಂಧನ್ ಸಭೆಯಲ್ಲಿ ಮೈತ್ರಿಕೂಟಕ್ಕೆ ನಾಮಕರಣ ಮಾಡಲಾಗಿತ್ತು.

ಬೆಂಗಳೂರಿನಲ್ಲಿ ಅಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, "ಎನ್‌ಡಿಎ ಮತ್ತು ಇಂಡಿಯಾ ನಡುವೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಇಡಿಯಾ ನಡುವೆ, ಬಿಜೆಪಿ ಸಿದ್ಧಾಂತ ಮತ್ತು ಇಂಡಿಯಾ ನಡುವೆ ಹೋರಾಟವಿದೆ. ಯಾರಾದರೂ ಇಂಡಿಯಾ ವಿರುದ್ಧ ನಿಂತಾಗ, ಯಾರು ಗೆಲ್ಲುತ್ತಾರೆ ಎಂಬುದು ನಿಮಗೆ ತಿಳಿಯುತ್ತದೆ" ಎಂದು ಹೇಳಿದ್ದರು.

ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಪಕ್ಷಗಳ ಮಹತ್ವದ ಸಭೆಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸೇರಿಂದರೆ ಕರ್ನಾಟಕ ಕಾಂಗ್ರೆಸ್​ ನಾಯಕರು,​ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಮಲ್ಲಿಕಾರ್ಜುನ್​ ಖರ್ಗೆ ಸೇರಿದಂತೆ ರಾಷ್ಟ್ರೀಯ ಕಾಂಗ್ರೆಸ್​ ನಾಯಕರ ಜೊತೆ ವಿವಿಧ ರಾಜ್ಯಗಳ ವಿವಿಧ 26 ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್‌ ಕುಮಾರ್‌, ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌, ಜೆಎಂಎಂ ನಾಯಕ ಮತ್ತು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೋರೆನ್‌, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್​ ನಾಯಕ ಓಮರ್ ಅಬ್ದುಲ್ಲಾ, ಪಂಜಾಬ್ ಸಿಎಂ ಭಗವಂತ್ ಮಾನ್, ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಶಿವಸೇನೆ ನಾಯಕ ಉದ್ದವ್ ಠಾಕ್ರೆ, ಆದಿತ್ಯ ಠಾಕ್ರೆ, ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.