Ayushman Bharat: ಅಕ್ಟೋಬರ್ 29ರಂದು ಆಯುಷ್ಮಾನ್ ಭಾರತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayushman Bharat: ಅಕ್ಟೋಬರ್ 29ರಂದು ಆಯುಷ್ಮಾನ್ ಭಾರತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Ayushman Bharat: ಅಕ್ಟೋಬರ್ 29ರಂದು ಆಯುಷ್ಮಾನ್ ಭಾರತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Ayushman Bharat: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 29ರಂದು ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಲಿದ್ದಾರೆ. 70 ವರ್ಷ ಮೇಲ್ಪಟ್ಟ ನಾಗರಿಕರು, ಅವರ ಆರ್ಥಿಕ ಸ್ಥಾನಮಾನದ ಲೆಕ್ಕವಿಲ್ಲದೆ ಈ ಆರೋಗ್ಯ ಯೋಜನೆಯ ಲಾಭ ಪಡೆಯಲಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಗೆ ಅಕ್ಟೋಬರ್ 29ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ
ಆಯುಷ್ಮಾನ್ ಭಾರತ್ ಯೋಜನೆಗೆ ಅಕ್ಟೋಬರ್ 29ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ (PTI)

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 29ರಂದು ಹಿರಿಯ ನಾಗರಿಕರಿಗಾಗಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ (Ayushman Bharat Pradhan Mantri Jan Arogya Yojna) ಚಾಲನೆ ನೀಡುವ ಸಾಧ್ಯತೆಯಿದೆ. ಆಯುಷ್ಮಾನ್ ಭಾರತ್ ಯೋಜನೆ ಆರಂಭಿಸುವ ಕುರಿತು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಸೆಪ್ಟೆಂಬರ್‌ ತಿಂಗಳಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ವಿಶ್ವದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ವಿಮೆಯ ವಿಸ್ತರಣೆಗೆ ಅನುಮೋದನೆ ನೀಡಿತ್ತು. ಅದರ ಪ್ರಕಾರ 70 ವರ್ಷ ವಯಸ್ಸು ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು, ಆಸ್ಪತ್ರೆಗೆ ದಾಖಲಾದರೆ ವರ್ಷಕ್ಕೆ 5 ಲಕ್ಷ ರೂ.ಗಳವರೆಗೆ ನಗದುರಹಿತ ರಕ್ಷಣೆಯನ್ನು ಸಿಗುತ್ತದೆ. ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಈ ಪ್ರಯೋಜನ ಪ್ರತಿಯೊಬ್ಬ ಹಿರಿಯ ನಾಗರಿಕರಿಗೂ ಸಿಗಲಿದೆ.

“ಅಕ್ಟೋಬರ್ 29ರಂದು ಪ್ರಮುಖ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಇದರಲ್ಲಿ ಹಿರಿಯ ನಾಗರಿಕರಿಗಾಗಿ ಪಿಎಂಜೆಎವೈ (AB-Pmjay) ಸೇರಿದಂತೆ ಹಲವಾರು ಪ್ರಮುಖ ಆರೋಗ್ಯ ಯೋಜನೆಗಳನ್ನು ಆರಂಭಿಸಲಾಗುತ್ತದೆ ಅಥವಾ ಘೋಷಿಸಲಾಗುತ್ತದೆ. ಇತ್ತೀಚೆಗೆ ಇದನ್ನು ಕ್ಯಾಬಿನೆಟ್ ಅನುಮೋದಿಸಿದೆ” ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಯೋಜನೆಯ ಶೇ.60ರಷ್ಟನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.‌ ಉಳಿದಂತೆ ಆಯಾ ರಾಜ್ಯಗಳು ಈ ಯೋಜನೆಯನ್ನು ವಿಸ್ತರಿಸಬಹುದು. ಅಲ್ಲದೆ ಇತರ ವಯೋಮಾನದ ನಾಗರಿಕರನ್ನು ಕೂಡಾ ಯೋಜನೆಯೊಳಗೆ ಸೇರಿಸಬಹುದು. ಈಗಾಗಲೇ ಕೆಲವು ರಾಜ್ಯಗಳು ಯೋಜನೆಯಲ್ಲಿ ಅಗತ್ಯ ಮಾರ್ಪಾಡು ಮಾಡಿಕೊಂಡಿದೆ. ಅದರಂತೆ ಹೆಚ್ಚುವರಿ ವೆಚ್ಚವನ್ನು ರಾಜ್ಯಗಳು ಭರಿಸಬೇಕಾಗುತ್ತದೆ.

6 ಕೋಟಿ ಹಿರಿಯ ನಾಗರಿಕರಿಕರಿಗೆ ಪ್ರಯೋಜನ

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಸರ್ಕಾರದ ಈ ನಿರ್ಧಾರದಿಂದ ಸುಮಾರು 4 ಕೋಟಿ 50 ಲಕ್ಷ ಕುಟುಂಬಗಳಿಗೆ (6 ಕೋಟಿ ಹಿರಿಯ ನಾಗರಿಕರು) ಪ್ರಯೋಜನ ಸಿಕ್ಕಂತಾಗುತ್ತದೆ. ಪ್ರಸ್ತುತ ಒಟ್ಟಾರೆ ಫಲಾನುಭವಿಗಳ ಸಂಖ್ಯೆ 12 ಕೋಟಿ 30 ಲಕ್ಷ ಕುಟುಂಬಗಳು. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 58 ಪ್ರತಿಶತ ಮಹಿಳೆಯರು. ಅವರಲ್ಲಿ 54 ಪ್ರತಿಶತ ವಿಧವೆಯರು ಎನ್ನುವುದು ಗಮನಾರ್ಹ.

ಅರ್ಹ ಹಿರಿಯ ನಾಗರಿಕರು ಈ ಯೋಜನೆ ಪ್ರಯೋಜನಗಳನ್ನು ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಆದಾರೆ, ಈಗಾಗಲೇ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಸಿಜಿಎಚ್ಎಸ್ (ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ) ರೀತಿಯ ಆರೋಗ್ಯ ವಿಮಾ ಯೋಜನೆಗಳ ವ್ಯಾಪ್ತಿಗೆ ಬರುವ ಫಲಾನುಭವಿಗಳು, ಅವರಿಗೆ ಬೇಕಾದ ಯೋಜನೆಯನ್ನು ಆಯ್ಕೆ ಮಾಡು ಅವಕಾಶವಿದೆ. ಸರ್ಕಾರದ ಹೇಳಿಕೆಯ ಪ್ರಕಾರ, ಖಾಸಗಿ ವಿಮೆ ಹೊಂದಿರುವರು ಸಹ ಈ ವಿಮೆ ಸೌಲಭ್ಯ ಪಡೆಯಬಹುದು. ಅರ್ಹ ಫಲಾನುಭವಿಗಳಿಗೆ ಈ ಯೋಜನೆಯಡಿ ಹೊಸ ಕಾರ್ಡ್ ನೀಡಲಾಗುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.