ಜಲಂಧರ್ ಬಳಿಯ ಆದಂಪುರ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಸೈನಿಕರೊಂದಿಗೆ ಸಂವಾದ
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಪಾಕಿಸ್ತಾನದೊಂದಿಗಿನ ತೀವ್ರ ಸಂಘರ್ಷದ ಸಮಯದಲ್ಲಿ ವಾಯು ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ ಆದಂಪುರ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪಂಜಾಬ್‌ನ ಜಲಂಧರ್‌ನಿಂದ 25 ಕಿ.ಮೀ ದೂರದಲ್ಲಿರುವ ಆದಂಪುರ ವಾಯುನೆಲೆಗೆ ಅನಿರೀಕ್ಷಿತ ಭೇಟಿ ನೀಡಿ ಆಪರೇಷನ್ ಸಿಂಧೂರ್ ಸಮಯದಲ್ಲಿ ವಾಯು ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ ವಾಯುಪಡೆಯ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಂದು ಬೆಳಿಗ್ಗೆ ನಾನು ಆದಂಪುರದ ವಾಯುಪಡೆ ನಿಲ್ದಾಣಕ್ಕೆ ಹೋಗಿ ನಮ್ಮ ಧೈರ್ಯಶಾಲಿ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭೀತತೆಯನ್ನು ಪ್ರತಿಬಿಂಬಿಸುವವರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿದೆ. ನಮ್ಮ ಸಶಸ್ತ್ರ ಪಡೆಗಳು ನಮ್ಮ ರಾಷ್ಟ್ರಕ್ಕಾಗಿ ಮಾಡುವ ಎಲ್ಲದಕ್ಕೂ ಭಾರತವು ಶಾಶ್ವತವಾಗಿ ಕೃತಜ್ಞವಾಗಿರುತ್ತದೆ ಎಂದು ಹೇಳಿದ್ದಾರೆ.
ಬೆಳಿಗ್ಗೆ 6.15 ಕ್ಕೆ ಆದಂಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಸುಮಾರು 50 ನಿಮಿಷಗಳ ಕಾಲ ವಾಯುನೆಲೆಯಲ್ಲಿ ಇದ್ದರು, ಈ ಸಮಯದಲ್ಲಿ ಅವರು ವಾಯುಪಡೆಯ ಸಿಬ್ಬಂದಿ ಮತ್ತು ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಂವಹನ ನಡೆಸಿ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ಮತ್ತು ಪ್ರತಿಕ್ರಿಯೆಯನ್ನು ಸಂಗ್ರಹಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ರಾತ್ರಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಕೆಲವೇ ಗಂಟೆಗಳ ನಂತರ ಆದಂಪುರ ವಾಯುನೆಲೆಗೆ ಭೇಟಿ ನೀಡಿದ್ದಾರೆ.