ಉಚಿತ ಪಡಿತರ ಪಡೆದುಕೊಳ್ಳುವವರೇ ಗಮನಿಸಿ, ಅನರ್ಹ ಫಲಾನುಭವಿಗಳನ್ನು ಗುರುತಿಸಲು ಆದಾಯ ತೆರಿಗೆ ದತ್ತಾಂಶ ಪರಿಶೀಲಿಸುತ್ತಿದೆ ಕೇಂದ್ರ ಸರ್ಕಾರ
PMGKAY: ಕೋವಿಡ್ -19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಬಡವರು ಮತ್ತು ನಿರ್ಗತಿಕರು ಎದುರಿಸುತ್ತಿರುವ ಸಮಸ್ಯೆ ಕಡಿಮೆ ಮಾಡಲು ಪಿಎಂ ಗರೀಬ್ ಕಲ್ಯಾಣ್ ಯೋಜನೆಯನ್ನು ಕೇಂದ್ರ ಸರ್ಕಾರ ಶುರುಮಾಡಿತ್ತು. ಈಗ, ಅನರ್ಹ ಫಲಾನುಭವಿಗಳನ್ನು ಗುರುತಿಸಲು ಆದಾಯ ತೆರಿಗೆ ದತ್ತಾಂಶ ಪರಿಶೀಲಿಸುತ್ತಿದೆ. ಹೀಗಾಗಿ, ಉಚಿತ ಪಡಿತರ ಪಡೆದುಕೊಳ್ಳುವವರು ಗಮನಿಸಬೇಕಾದ ವಿಚಾರಗಳಿವು.

PMGKAY: ಆದಾಯ ತೆರಿಗೆ ಪಾವತಿಸುತ್ತಿದ್ದರೂ ಉಚಿತವಾಗಿ ಪಡಿತರ ಪಡೆಯುತ್ತಿದ್ದೀರಾ, ವಿಶೇಷವಾಗಿ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY)ಯ ಫಲಾನುಭವಿಗಳೇ? ಹಾಗಾದರೆ ಈ ಸುದ್ದಿಯನ್ನೊಮ್ಮೆ ಗಮನಿಸಿ. ಭಾರತದಲ್ಲಿ ಕೋವಿಡ್ ಸಂಕಷ್ಟ ಉಂಟಾದ ಸಂದರ್ಭದಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY)ಯನ್ನು ಪರಿಚಯಿಸಿತು. ಈ ಯೋಜನೆಯ ಫಲಾನುಭವಿಗಳ ಪೈಕಿ ಅನರ್ಹರೂ ಇರುವುದನ್ನು ಭಾರತ ಸರ್ಕಾರ ಗಮನಿಸಿದೆ. ಹೀಗಾಗಿ, ಕೇಂದ್ರ ಆಹಾರ ಸಚಿವಾಲಯವು ಆದಾಯ ತೆರಿಗೆ ಇಲಾಖೆಯ ನೆರವು ಪಡೆದುಕೊಂಡಿದ್ದು, ಆದಾಯ ತೆರಿಗೆ ದತ್ತಾಂಶ ಪರಿಶೀಲಿಸಲಾರಂಭಿಸಿದೆ.
ಅನರ್ಹರನ್ನು ಗುರುತಿಸಲು ಆದಾಯ ತೆರಿಗೆ ದತ್ತಾಂಶ ಪರಿಶೀಲನೆ
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಆದಾಯ ತೆರಿಗೆ ಪಾವತಿಸದೇ ಇರುವ ಬಡ ಕುಟುಂಬಗಳಿಗೆ ಮಾತ್ರವೇ ಪಡಿತರ ನೀಡಲಾಗುತ್ತದೆ. ಕೇಂದ್ರ ಸರ್ಕಾರವು 2025-26 ಕೇಂದ್ರ ಬಜೆಟ್‌ನಲ್ಲಿ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ 2.03 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದು ಪ್ರಸಕ್ತ ಹಣಕಾಸು ವರ್ಷ 1.97 ಲಕ್ಷ ಕೋಟಿ ರೂಪಾಯಿ ಪರಿಷ್ಕೃತ ಅಂದಾಜಿಗಿಂತ ಹೆಚ್ಚಿದೆ.
ಭಾರತದ ಕೋವಿಡ್ -19 ಸಾಂಕ್ರಾಮಿಕ ರೋಗ ಸಂಕಷ್ಟದ ಸಂದರ್ಭದಲ್ಲಿ ಬಡವರು ಮತ್ತು ಅಗತ್ಯವಿರುವವರು ಎದುರಿಸುತ್ತಿರುವ ತೊಂದರೆಗಳನ್ನು ಕಡಿಮೆ ಮಾಡಬೇಕು ಎಂಬ ನಿರ್ದಿಷ್ಟ ಗುರಿಯೊಂದಿಗೆ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಕಲ್ಯಾಣ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎ) ಅನ್ನು ಪ್ರಾರಂಭಿಸಲಾಯಿತು. ಈ ಯೋಜನೆಯನ್ನು 2024 ಜನವರಿ 1ಕ್ಕೆ ಮತ್ತೆ 5 ವರ್ಷಕ್ಕೆ ವಿಸ್ತರಣೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿತು.
ಆಹಾರ ಸಚಿವಾಲಯ - ಆದಾಯ ತೆರಿಗೆ ಇಲಾಖೆ ದತ್ತಾಂಶ ಹಂಚಿಕೆ
ಆಹಾರ ಸಚಿವಾಲಯ ಮತ್ತು ಆದಾಯ ತೆರಿಗೆ ಇಲಾಖೆ ನಡುವೆ ದತ್ತಾಂಶ ಹಂಚಿಕೆ ವ್ಯವಸ್ಥೆ ಇದ್ದು, ಅದರಂತೆ, ಆದಾಯ ತೆರಿಗೆ ದತ್ತಾಂಶವನ್ನು ಆಹಾರ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ. ಇದರಂತೆ, ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳ ಪಾನ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ಗಮನಿಸಿಕೊಂಡು ಪರಿಶೀಲಿಸಲಾಗುತ್ತದೆ. ಇದರಲ್ಲಿ ಯಾವ ಫಲಾನುಭವಿಗಳು ಆದಾಯ ತೆರಿಗೆ ಪಾವತಿಸಿರುವುದು ಕಂಡುಬರುತ್ತದೋ ಅಂಥ ಫಲಾನುಭವಿಗಳನ್ನು ಗುರುತಿಸಿ ಅರ್ಹರ ಪಟ್ಟಿಯಿಂದ ತೆಗೆದುಹಾಕುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ಆಹಾರ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಆದಾಯ ತೆರಿಗೆ ದತ್ತಾಂಶದಲ್ಲಿರುವ ಪ್ಯಾನ್ ನಂಬರ್‌ಗೆ ಜೋಡಣೆಯಾಗಿದ್ದು, ಆದಾಯ ತೆರಿಗೆ ಪಾವತಿ ಮಾಡುವವರ ವ್ಯಾಪ್ತಿಯಲ್ಲಿ ಇಲ್ಲದೇ ಇದ್ದರೆ ಅಂಥವರ ಹೆಸರು ಪಟ್ಟಿಯಲ್ಲಿ ಉಳಿಯಲಿದೆ. ಫಲಾನುಭವಿಗಳ ಆಧಾರ್ ಸಂಖ್ಯೆ ಪ್ಯಾನ್ ಜೊತೆಗೆ ಜೋಡಣೆಯಾಗಿದ್ದು, ಆದಾಯ ತೆರಿಗೆ ಪಾವತಿಸುತ್ತಿರುವುದು ಖಾತ್ರಿಯಾದರೆ ಅಂಥವರ ಹೆಸರನ್ನು ಡಿಲೀಟ್ ಮಾಡಲು ಸಚಿವಾಲಯ ಮುಂದಾಗಿದೆ.
ಆಹಾರ ಸಚಿವಾಲಯದ ಡಿಎಫ್‌ಪಿಡಿ ಮತ್ತು ವಿತ್ತ ಸಚಿವಾಲಯದ ಡಿಜಿಐಟಿ (ಸಿಸ್ಟಮ್ಸ್) ನಡುವೆ ಒಪ್ಪಂದ ಏರ್ಪಟ್ಟಿದ್ದು, ಇದರಂತೆ ಆದಾಯ ತೆರಿಗೆ ಪಾವತಿದಾರರ ವಿವರ ಆಹಾರ ಇಲಾಖೆಗೆ ಸಿಗುತ್ತದೆ. ಈ ಒಡಂಬಡಿಕೆ ಪ್ರಕಾರ, ಈ ಎರಡು ಸಚಿವಾಲಯದ ನಡುವೆ ಮಾಹಿತಿ ಹಂಚಿಕೆ ಕೇವಲ ಪರಿಶೀಲನೆಗೆ ಸೀಮಿತವಾಗಿದ್ದು, ಗೌಪ್ಯತೆ ಕಾಪಾಡುವುದು, ದತ್ತಾಂಶಗಳ ಸುರಕ್ಷಿತ ರಕ್ಷಣೆ ಮುಂತಾದ ಷರತ್ತುಗಳನ್ನು ಒಳಗೊಂಡಿರುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
