ಕನ್ನಡ ಸುದ್ದಿ  /  Nation And-world  /  Pocso Act: Marriage Of Muslims Is Not Excluded From Pocso Act, Rules Kerala Hc

POCSO Act: ಮುಸ್ಲಿಮರ ವಿವಾಹ ಪೋಕ್ಸೋ ಕಾಯ್ದೆ ವ್ಯಾಪ್ತಿ ಮೀರಿದ್ದಲ್ಲ- ಇದು ಕೇರಳ ಹೈಕೋರ್ಟ್‌ ತೀರ್ಪು

POCSO Act: ಮೂವತ್ತೊಂದು ವರ್ಷ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಕೇರಳ ಹೈಕೋರ್ಟ್‌ ನೀಡಿದ ತೀರ್ಪು ಇದು. ಆತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದೆ. ಪ್ರಕರಣದ ವಿವರ ಇಲ್ಲಿದೆ.

ಕೇರಳ ಹೈಕೋರ್ಟ್‌
ಕೇರಳ ಹೈಕೋರ್ಟ್‌

ತಿರುವನಂತಪುರ: ವೈಯಕ್ತಿಕ ಕಾನೂನು ಮುಂದಿಟ್ಟುಕೊಂಡು ಮುಸ್ಲಿಮರ ವಿವಾಹವನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO Act)ಯಿಂದ ಹೊರಗಿಡುವುದು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವಿವಾಹದ ಕಕ್ಷಿದಾರರಲ್ಲಿ ಒಬ್ಬರು ಅಪ್ರಾಪ್ತ ವಯಸ್ಸಿನವರಾಗಿದ್ದರೆ, ಅಂತಹ ಸಂದರ್ಭದಲ್ಲಿ ಮದುವೆಯ ಸಿಂಧುತ್ವ ಅಥವಾ ಇತರ ವಿಚಾರಗಳನ್ನು ಲೆಕ್ಕಿಸದೆ, POCSO ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲ್ಪಡುತ್ತವೆ ಮತ್ತು ಈ ಕಾನೂನು ಅನ್ವಯವಾಗುವುದೇ ಈ ರೀತಿ ಎಂದು ನ್ಯಾಯಾಲಯವು ತೀರ್ಪು ನೀಡಿದೆ.

ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ. "ಪೋಕ್ಸೊ ಕಾಯಿದೆಯು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಗಾಗಿ ವಿಶೇಷವಾಗಿ ಜಾರಿಗೊಳಿಸಲಾದ ವಿಶೇಷ ಕಾಯಿದೆ. ಮಗುವಿನ ವಿರುದ್ಧ ಯಾವುದೇ ರೀತಿಯ ಲೈಂಗಿಕ ಶೋಷಣೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಅದರಿಂದ ಮದುವೆಯನ್ನು ಹೊರಗಿಡಲಾಗುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ನ್ಯಾಯಪೀಠ ತೀರ್ಪನ್ನು ವಿವರಿಸಿದೆ.

"POCSO ಕಾಯಿದೆಯು ಒಂದು ವಿಶೇಷವಾದ ಶಾಸನ. ಸಾಮಾಜಿಕ ಚಿಂತನೆಯಲ್ಲಿ ಸಾಧಿಸಿದ ಪ್ರಗತಿಗಳು ಮತ್ತು ಪ್ರಗತಿಯನ್ನು ಜಾರಿಗೊಳಿಸುವಲ್ಲಿ ಇದು ಅನುಷ್ಠಾನಗೊಂಡಿದೆ. ಈ ವಿಶೇಷ ಶಾಸನವು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ನ್ಯಾಯಶಾಸ್ತ್ರದಿಂದ ಉದ್ಭವಿಸುವ ತತ್ತ್ವಗಳ ಆಧಾರದ ಮೇಲೆ ಜಾರಿ ಆಗಿದೆ. ಮಕ್ಕಳ ಮೇಲಿನ ದೌರ್ಜನ್ಯ ನ್ಯಾಯಶಾಸ್ತ್ರವು ಅಗತ್ಯವಾಗಿ ವಿಕಸನಗೊಂಡಿದೆ. ಮದುವೆ ಸೇರಿ ವಿವಿಧ ನೆಪಗಳನ್ನು ಮುಂದಿಟ್ಟು ಲೈಂಗಿಕವಾಗಿ ಶೋಷಿಸುವ, ಬಳಸುವವರಿಂದ ಮುಗ್ಧ ಮಗುವನ್ನು ರಕ್ಷಿಸುವುದು ಈ ಶಾಸನದ ಉದ್ದೇಶ. ಇದನ್ನು ಶಾಸಕಾಂಗವು ಶಾಸನಬದ್ಧ ನಿಬಂಧನೆಗಳ ಮೂಲಕ ಸ್ಪಷ್ಟಪಡಿಸಿದೆ ಎಂಬುದನ್ನು ನ್ಯಾಯಪೀಠ ವಿವರಿಸಿ ಹೇಳಿದೆ.

ಬಾಲ್ಯ ವಿವಾಹ = ಮಾನವ ಹಕ್ಕು ಉಲ್ಲಂಘನೆ

"ಬಾಲ್ಯವಿವಾಹವು ಮಗುವಿನ ಬೆಳವಣಿಗೆಯನ್ನು ತಡೆಯುವುದಲ್ಲದೆ, ಆಕೆಯ ಪೂರ್ಣ ಸಾಮರ್ಥ್ಯವನ್ನು ಪಡೆಯಲಾಗದಂತೆ ಮಾಡುತ್ತದೆ. ಇದು ಸಮಾಜಕ್ಕೆ ಅಂಟಿದ ಶಾಪ. POCSO ಕಾಯಿದೆಯ ಮೂಲಕ ಪ್ರತಿಬಿಂಬಿಸುವ ಶಾಸಕಾಂಗ ಉದ್ದೇಶವು ಮದುವೆಯ ನೆಪದಲ್ಲಿ ಮಗುವಿನೊಂದಿಗೆ ದೈಹಿಕ ಸಂಬಂಧಗಳನ್ನು ನಿಷೇಧಿಸುವುದಾಗಿದೆ. ಇದು ಈ ಕಾಯ್ದೆಯ ಮತ್ತು ಸಮಾಜದ ಉದ್ದೇಶವೂ ಆಗಿದೆ. ಒಂದು ಶಾಸನವು ಸಾಮಾನ್ಯವಾಗಿ ಹೇಳುವಂತೆ, ಜನರ ಇಚ್ಛೆಯ ಅಭಿವ್ಯಕ್ತಿ ಅಥವಾ ಪ್ರತಿಬಿಂಬವಾಗಿದೆ. ಪೋಕ್ಸೋ ಕಾಯ್ದೆಯು ʻಮಗುʼ ಎಂಬ ಪದವನ್ನು ಸೆಕ್ಷನ್‌ 2 (ಡಿ)ಯಲ್ಲಿ ವ್ಯಾಖ್ಯಾನಿಸಿದ್ದು - 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿ ಎಂದು ಹೇಳಿದೆ ಎಂಬುದನ್ನು ನ್ಯಾಯಪೀಠ ಬೆಟ್ಟು ಮಾಡಿ ತೋರಿಸಿದೆ.

"ವೈಯಕ್ತಿಕ ಕಾನೂನು ಮತ್ತು ಸಾಂಪ್ರದಾಯಿಕ ಕಾನೂನು ಎರಡೂ ಕೂಡ ಕಾನೂನುಗಳೇ ಆಗಿವೆ. ಸೆಕ್ಷನ್ 42A ಅಂತಹ ಕಾನೂನುಗಳನ್ನು ಸಹ ಮೀರುವುದು ಸಾಧ್ಯವಿದೆ. ಆದ್ದರಿಂದ POCSO ಕಾಯಿದೆ ಜಾರಿಗೆ ಬಂದ ನಂತರ, ಮಗುವಿನೊಂದಿಗೆ ಲೈಂಗಿಕ ಸಂಭೋಗದ ನೆಪದಲ್ಲಿ ಇದ್ದರೂ ಸಹ, ಅದು ವಿವಾಹ ಬಂಧದ ಚೌಕಟ್ಟಿನೊಳಗೆ ಇದ್ದರೂ ಅದನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ”ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪ ಹೊತ್ತಿರುವ 31 ವರ್ಷದ ಮುಸ್ಲಿಂ ಯುವಕನ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯವು ಈ ವಿವರಣೆ ನೀಡಿ, ಪೋಕ್ಸೋ ಕಾಯ್ದೆಯ ವ್ಯಾಪ್ತಿಯನ್ನು ಅರ್ಥೈಸಿದೆ.

ಮುಸ್ಲಿಮರಿಗೆ ಅನ್ವಯವಾಗುವ ವೈಯಕ್ತಿಕ ಕಾನೂನು ಪ್ರಕಾರ, ಯುವಕನು 2021ರ ಮಾರ್ಚ್‌ನಲ್ಲಿ ಹುಡುಗಿಯನ್ನು ಮಾನ್ಯವಾಗಿ ವಿವಾಹವಾಗಿರುವುದಾಗಿ ಅವರ ಪರ ವಕೀಲರು ವಾದ ಮಂಡಿಸಿದ್ದರು.

IPL_Entry_Point