ರಾಜಕೀಯ ವಿಶ್ಲೇಷಣೆ: ದೆಹಲಿಯಲ್ಲಿ ಬಿಜೆಪಿಗೆ ವಿಜಯ; ಕರ್ನಾಟಕದ ಮೇಲೇನು ಪರಿಣಾಮ? ಬಿಜೆಪಿ, ಆಪ್, ಕಾಂಗ್ರೆಸ್‌ಗೆ ಇರುವ ಪಾಠಗಳೇನು?
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಮತ್ತು ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಮೇಲೆ ಹೇಗಿರುತ್ತದೆ ಎನ್ನುವ ಪಕ್ಷಿನೋಟ ಇಲ್ಲಿದೆ.

ದೆಹಲಿಯಲ್ಲಿ ತಗ್ಗೋದೇ ಇಲ್ಲ ಎನ್ನುತ್ತಿದ್ದ ಆಮ್ ಆದ್ಮಿ ಪಕ್ಷವು ಇದೀಗ ಬಿಜೆಪಿಗೆ ದಾರಿ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಗಳಿಸಿದ ಸ್ಥಾನಗಳು ಕಡಿಮೆ ಇರಬಹುದು. ಆದರೆ ಆಪ್ ಸೋಲಿನಲ್ಲಿ ಕಾಂಗ್ರೆಸ್ ವಹಿಸಿದ ಪಾತ್ರವನ್ನು ಯಾರೂ ಅಲ್ಲಗಳೆಯಲಾರರು. ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಯ ಫಲಿತಾಂಶದ ಬಗ್ಗೆ ಸಹಜವಾಗಿ ಇಡೀ ದೇಶದ ಗಮನ ಇತ್ತು. ಈ ಫಲಿತಾಂಶದ ಪ್ರಭಾವ ಮತ್ತು ಪರಿಣಾಮ ಸಹಜವಾಗಿಯೇ ಹಲವು ರಾಜ್ಯಗಳ ಮೇಲೆಯೂ ಇರುತ್ತದೆ. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಮತ್ತು ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಮೇಲೆ ಹೇಗಿರುತ್ತದೆ ಎನ್ನುವ ಪಕ್ಷಿನೋಟ ಇಲ್ಲಿದೆ.
1) ಕರ್ನಾಟಕ: ಮತ್ತಷ್ಟು ಪ್ರಬಲ ಹೈಕಮಾಂಡ್
ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಪ್ರಬಲ ಸ್ಥಳೀಯ ಪ್ರಭಾವಿ ಮುಖವಿಲ್ಲದೆ ದೆಹಲಿ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಎದುರಿಸಿತು ಎನ್ನುವುದನ್ನು ನಾವು ಗಮನಿಸಬೇಕು. ರಾಷ್ಟ್ರಮಟ್ಟದ ವಿಚಾರ, ರಾಷ್ಟ್ರಮಟ್ಟದ ನಾಯಕರನ್ನು ಮುಂದಿಟ್ಟು ಚುನಾವಣೆಗಳನ್ನು ಎದುರಿಸುವ ತಂತ್ರಗಾರಿಕೆ ಬಿಜೆಪಿ ಪಾಲಿಗೆ ಲಾಭ ತಂದುಕೊಟ್ಟಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಬಲವಾಗಿರುವ ಏಕೈಕ ರಾಜ್ಯವಾಗಿರುವ ಕರ್ನಾಟಕದಲ್ಲಿ ಒಂದು ಕಾಲದ ಪ್ರಭಾವಿ ಜನನಾಯಕ ಬಿ.ಎಸ್.ಯಡಿಯೂರಪ್ಪ ಬದಿಗೆ ಸರಿದಿದ್ದಾರೆ. ಪಕ್ಷದ ಚುಕ್ಕಾಣಿ ಹಿಡಿಯುವ ಹಾವು-ಏಣಿ ಆಟದಲ್ಲಿ ತೊಡಗಿರುವ ಬಿ.ವೈ.ವಿಜಯೇಂದ್ರ, ಬಸನಗೌಡ ಯತ್ನಾಳ ಸೇರಿದಂತೆ ಹಲವರು ಪಕ್ಷದ ಆಂತರಿಕ ವಿಚಾರಗಳಿಂದ ಆಚೆಗೆ ಸರಿಯಾದ ಯೋಚನೆ, ಕಾರ್ಯತಂತ್ರವನ್ನೇ ರೂಪಿಸುತ್ತಿಲ್ಲ. ಅಧಿಕೃತವಾಗಿ ಪ್ರತಿಪಕ್ಷ ನಾಯಕರಾಗಿರುವ ಆರ್. ಅಶೋಕ್ ಅವರ ವಿಚಾರದಲ್ಲಿ ಹೊಂದಾಣಿಕೆ ರಾಜಕಾರಣದ ಆರೋಪಗಳು ಮೊದಲಿನಿಂದ ಇದ್ದವು, ಈಗಲೂ ಅದು ಮುಂದುವರಿದಿದೆ.
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ನಿಚ್ಚಳವಾಗುವ ಮೊದಲೇ, ಅಂದರೆ ಶನಿವಾರ (ಫೆ 8) ಬೆಳಿಗ್ಗೆ ಫಲಿತಾಂಶದ ದಿಕ್ಸೂಚಿ ತಿಳಿಯುತ್ತಲೇ ಹಲವು ಬಿಜೆಪಿ ಅಭಿಮಾನಿಗಳು ಕರ್ನಾಟಕದ ಸ್ಥಳೀಯ ನಾಯಕರ ಕಾಲೆಳೆಯುವ, ಹೈಕಮಾಂಡ್ ಅಸಮರ್ಥತೆತೆಯನ್ನು ಆಕ್ಷೇಪಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಶುರು ಮಾಡಿದ್ದರು. ಈಗಾಗಲೇ ಒಡೆದ ಮನೆಯಾಗಿರುವ ಬಿಜೆಪಿ ಕರ್ನಾಟಕ ಘಟಕದ ರಿಪೇರಿ ಕೆಲಸಕ್ಕೆ ಹೈಕಮಾಂಡ್ ಮುಂದಾಗುತ್ತದೆ ಎನ್ನುವ ನಿರೀಕ್ಷೆ ಮೊದಲಿನಿಂದ ಇತ್ತಾದರೂ, ಅದು ಶೀಘ್ರ ಮತ್ತು ಕಟ್ಟುನಿಟ್ಟಿನ ರಿಪೇರಿ ಆಗಬಹುದು ಎನ್ನುವ ಮುನ್ಸೂಚನೆಯನ್ನು ಈ ಫಲಿತಾಂಶ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ಅಭಿಪ್ರಾಯಗಳಿಂದ ಅಂದಾಜಿಸಬಹುದಾಗಿದೆ.
ವಿಜಯೇಂದ್ರ ಮತ್ತು ಯತ್ನಾಳ ಪರ-ವಿರುದ್ಧ ಮಾತನಾಡುತ್ತಿರುವವರಿಗೆ ಶೀಘ್ರ ಬಿಜೆಪಿ ಫಲಿತಾಂಶದ ಪರಿಣಾಮ ಅನುಭವಕ್ಕೆ ಬರಬಹುದು.
2) ಕಾಂಗ್ರೆಸ್‌ಗೆ ಹಲವು ಪಾಠ
ಬದುಕಾದರೂ ಅಷ್ಟೇ, ಚುನಾವಣೆ ಆದರೂ ಅಷ್ಟೇ. ಗೆದ್ದವರು ಸಂಭ್ರಮದಲ್ಲಿ ಮುಳುಗಿದರೆ, ಸೋತವರು ಆತ್ಮಾವಲೋಕನಕ್ಕೆ ಜಾರುತ್ತಾರೆ. ಸಾಲುಸಾಲು ಸೋಲು ಅನುಭವಿಸಿರುವ ಕಾಂಗ್ರೆಸ್ ಪಕ್ಷದ ಆತ್ಮಾವಲೋಕನಕ್ಕೆ ದೆಹಲಿ ಚುನಾವಣೆ ಫಲಿತಾಂಶ ಮತ್ತೊಂದು ಕಾರಣವನ್ನು ಒದಗಿಸಿದೆ. ಲೋಕಸಭೆ ಚುನಾವಣೆಗೆ ಮೊದಲು ಬಿಜೆಪಿ ವಿರುದ್ಧ ಇಡೀ ದೇಶದಲ್ಲಿ ಮತ್ತೊಂದು ಪ್ರಬಲ ಶಕ್ತಿ ರೂಪಿಸುವ 'ಇಂಡಿಯಾ' ಒಕ್ಕೂಟದ ಕನಸು ಬಿತ್ತಿದ್ದ ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ಮತ್ತು ಪ್ರಭಾವದ ಬಗ್ಗೆ ಈ ಫಲಿತಾಂಶ ಪ್ರಶ್ನೆಗಳನ್ನು ಹಾಕಿದೆ.
ಬಿಜೆಪಿಗೆ ಎದುರಾಗಿ ಆಪ್ ಮತ್ತು ಕಾಂಗ್ರೆಸ್ ಒಂದೇ ನೆಲೆಯಲ್ಲಿ ಚುನಾವಣಾ ಕಥನ ಕಟ್ಟಲು ಸಾಧ್ಯವಾಗಲೇ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ರಾಹುಲ್ ಗಾಂಧಿಯನ್ನು ಭ್ರಷ್ಟ ರಾಜಕಾರಿಣಿಗಳ ಪಟ್ಟಿಯಲ್ಲಿ ಆಪ್ ಹೆಸರಿಸಿತು. ಯಮುನಾ ನದಿಯಲ್ಲಿರುವ ವಿಷದ ಅಂಶ ಮತ್ತು ಕೇಜ್ರಿವಾಲ್ ಐಷಾರಾಮಿ ಜೀವನಶೈಲಿಯನ್ನು ಕಾಂಗ್ರೆಸ್ ಪ್ರಸ್ತಾಪಿಸಿತು. ಕಾಂಗ್ರೆಸ್‌ಗೆ ಪರ್ಯಾಯ ಬೇಕು ಎನ್ನುವ ಮನೋಭಾವದಲ್ಲಿ ದೆಹಲಿಯಲ್ಲಿ ಆಪ್‌ಗೆ ಮತದಾರರು ಮಣೆ ಹಾಕಿದ್ದರು. ದಿನದಿಂದ ದಿನಕ್ಕೆ ಕಾಂಗ್ರೆಸ್‌ನ ಜನಪ್ರಿಯತೆ ಕುಸಿಯುತ್ತಲೇ ಹೋಯಿತು. ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಇದರ ಪ್ರಭಾವ ಗೋಚರಿಸಿತು.
ಮೋದಿ ಜನಪ್ರಿಯತೆ ಮತ್ತು ಪ್ರಬಲ ಕೇಂದ್ರ ಸರ್ಕಾರದ ಅಗತ್ಯವನ್ನು ಸದಾ ಪ್ರತಿಪಾದಿಸುವ ಬಿಜೆಪಿಯ ಎದುರು ಸೆಣೆಸುವಾಗ ಹೆಣೆಯಬೇಕಿದ್ದ ಕಾರ್ಯತಂತ್ರವನ್ನು ಸಕಾಲದಲ್ಲಿ ಕಂಡುಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಆದರೆ ಈ ಎಲ್ಲದರ ಮಧ್ಯೆಯೂ ಆಪ್ ಸೋಲಿಗೆ ಕಾಂಗ್ರೆಸ್ ತನ್ನದೇ ಆದ ಕೊಡುಗೆ ಕೊಟ್ಟಿರುವುದು ಸುಳ್ಳಲ್ಲ. ಕಾಂಗ್ರೆಸ್ ಮಾಡಿದ್ದ ಆರೋಪಗಳು ಮತ್ತು ಹೋರಾಟಗಳ ಲಾಭ ಬಿಜೆಪಿಗೆ ಸಿಕ್ಕಿರುವುದು ಈ ಫಲಿತಾಂಶದಿಂದ ತಿಳಿದುಬರುತ್ತದೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಮುಂಚೂಣಿ ಕಾಂಗ್ರೆಸ್ ನಾಯಕರು ದೆಹಲಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಪ್ರಚಾರ ಸಭೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರೆ ಇಡೀ ದೇಶಕ್ಕೆ ಬೇರೆಯದೇ ಸಂದೇಶ ರವಾನಿಸಬಹುದಾಗಿತ್ತು. ಕನಿಷ್ಠ ಪಕ್ಷ ಬಿಜೆಪಿಗೆ ಎದುರಾಗಿ ಒಂದು ಪ್ರಬಲ ಪರ್ಯಾಯ ಶಕ್ತಿ ಇದೆ ಎನ್ನುವ ಭರವಸೆಯನ್ನಾದರೂ ಕೊಡಬಹುದಿತ್ತು. ತನ್ನದೇ ಆದ ತಪ್ಪುಗಳಿಂದ ಈಗ ಆ ಅವಕಾಶವನ್ನೂ ಕಾಂಗ್ರೆಸ್ ಕಳೆದುಕೊಂಡಿದೆ.
3) ಆಪ್: ಗುಜರಾತ್ ಕನಸು ಭಗ್ನ
ಪಂಜಾಬ್‌ನಲ್ಲಿ ಖಾತೆ ತೆರೆದು ಅಧಿಕಾರ ಹಿಡಿದಿದ್ದ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರ ರಾಜಕಾರಣಕ್ಕೆ ಮಿನುಗುವ ಆಸೆಯಿದ್ದಿದ್ದು ಸುಳ್ಳಲ್ಲ. ಗುಜರಾತ್ ಮತ್ತು ಹರಿಯಾಣದಲ್ಲಿ ಆಪ್ ಭರ್ಜರಿಯಾಗಿ ಕಣಕ್ಕೆ ಇಳಿದಿತ್ತಾದರೂ ಸ್ಥಾನಗಳು ಹೆಚ್ಚು ದಕ್ಕಲಿಲ್ಲ. ದೆಹಲಿಯನ್ನು ನೆಲೆಯಾಗಿಸಿಕೊಂಡು, ಅಲ್ಲಿ ಆಳವಾಗಿ ಬೇರೂರಿದರೆ ದೇಶದ ಇತರ ರಾಜ್ಯಗಳಿಗೆ ಪ್ರಭಾವ ವಿಸ್ತರಿಸುವುದು ಸುಲಭ ಎನ್ನುವ ಲೆಕ್ಕಾಚಾರದಲ್ಲಿ ಆಪ್ ನಾಯಕರಿದ್ದರು. ಆದರೆ ಇಂದಿನ ಚುನಾವಣಾ ಫಲಿತಾಂಶವು ಈ ಎಲ್ಲವನ್ನೂ ತಲೆಕೆಳಗಾಗಿಸಿದೆ.
ಆಪ್‌ನ ಮುಂಚೂಣಿ ನಾಯಕ ಅರವಿಂದ್ ಕೇಜ್ರಿವಾಲ್ ಅಧಿಕಾರ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಸ್ಥಳೀಯವಾಗಿ ಪ್ರಬಲವಾಗಿದ್ದ ಆಪ್‌ನಂಥ ಪಕ್ಷವನ್ನು ಮಣಿಸಿದ ಬಿಜೆಪಿಯ ಆತ್ಮವಿಶ್ವಾಸ ಹೆಚ್ಚಾಗಿದೆ. ಸ್ವತಃ ತಾನು ಗೆಲ್ಲದಿದ್ದರೆ ಸೋಲಿಸುವ ಸಾಮರ್ಥ್ಯವಂತೂ ಇದೆ ಎಂದು ಕಾಂಗ್ರೆಸ್ ಸಾಬೀತುಪಡಿಸಿದೆ. ಬಹುತೇಕ ಕಡೆ ಆಪ್ ಮತ್ತು ಕಾಂಗ್ರೆಸ್ ಗಳಿಸಿರುವ ಮತಗಳನ್ನು ಒಗ್ಗೂಡಿಸಿದರೆ ಅದು ಬಿಜೆಪಿ ಅಭ್ಯರ್ಥಿಗಳು ಗಳಿಸಿರುವ ಮತಕ್ಕೆ ಸರಿದೂಗುವಂತಿರುವುದು ಈ ಅಂಶವನ್ನು ಸಾರಿಹೇಳುತ್ತದೆ. 'ಇಂಡಿಯಾ' ಒಕ್ಕೂಟಕ್ಕೆ ಬಲ ತುಂಬುವ ವಿಚಾರದಲ್ಲಿಯೂ ಆಪ್ ತನ್ನ ನಿಲುವನ್ನು ಮರುಪರಿಶೀಲಿಸಬೇಕಾದ ಒತ್ತಡವನ್ನು ಈ ಫಲಿತಾಂಶ ಹೇರಲಿದೆ.
