ಫಲಿತಾಂಶ ಬಂದು 9 ದಿನ ಕಳೆದರೂ ರಾಜಸ್ಥಾನ ಸಿಎಂ ಹೆಸರು ಇನ್ನೂ ಸಸ್ಪೆನ್ಸ್; ವಸುಂಧರಾ ರಾಜೆ ನಿವಾಸಕ್ಕೆ ಬಿಜೆಪಿ ಶಾಸಕರು ದೌಡು
ಬಿಜೆಪಿಯಿಂದ ರಾಜಸ್ಥಾನದ ಸಿಎಂ ಯಾರಾಗಲಿದ್ದಾರೆ ಅನ್ನೋದು ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ. ಬಿಜೆಪಿ ನೂತನ ಶಾಸಕರು ವಸುಂಧರಾ ರಾಜೆ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ.
ಜೈಪುರ್: ರಾಜಸ್ಥಾನ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿ ಇಂದಿಗೆ (ಡಿಸೆಂಬರ್ 11, ಸೋಮವಾರ) 9 ದಿನಗಳು ಕಳೆದಿವೆ. ಆದರೂ ಬಿಜೆಪಿಯಿಂದ ಸಿಎಂ ಹೆಸರನ್ನು ಘೋಷಣೆ ಮಾಡಲು ಸಾಧ್ಯವಾಗಿಲ್ಲ.
ಮತ್ತೊಂದು ಕಡೆ 2 ಬಾರಿ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೆ ಅವರು ಸಿಎಂ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿದ್ದು, ಕೇಸರಿ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ. ಡಿಸೆಂಬರ್ 3ರ ಭಾನುವಾರ ಪ್ರಕಟವಾಗಿದ್ದ ರಾಜಸ್ಥಾನ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 115 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಮುಖ್ಯಮಂತ್ರಿಯನ್ನು ಘೋಷಣೆ ಮಾಡಲು ಈವರೆಗೆ ನೂತನ ಶಾಸಕರ ಶಾಸಕಾಂಗ ಪಕ್ಷದ ಸಭೆಯಲ್ಲೇ ಕರೆದಿಲ್ಲ.
ಸದ್ಯದ ಮಟ್ಟಿಗಂತೂ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಯಾರನ್ನು ಆಯ್ಕೆ ಮಾಡುತ್ತೆ ಎಂಬುದರ ಸಖತ್ ಸಸ್ಪೆನ್ಸ್ ಆಗಿಯೇ ಉಳಿದಿದೆ. ಅಜಯ್ ಸಿಂಗ್ ಮತ್ತು ಬಾಬು ಸಿಂಗ್ ಸೇರಿದಂತೆ 10 ಶಾಸಕರು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ನಿನ್ನೆ (ಡಿಸೆಂಬರ್ 10, ಭಾನುವಾರ) ಜೈಪುರದ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಯೋಗಿ ಬಾಲಕನಾಥ್ ಬಿಟ್ಟರೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೆ ಅವರೇ ಸಿಎಂ ಹುದ್ದೆಗೆ ಮುಂಚೂಣಿಯಲ್ಲಿರುವ ಪ್ರಮುಖ ನಾಯಕಿ. ಹೀಗಾಗಿ ಈ ಬೆಳವಣಿಗೆ ಭಾರಿ ಕುತೂಹಲ ಮೂಡಿಸಿದೆ.
‘ನಾನು ಇನ್ನೂ ಸಾಕಷ್ಟು ಅನುಭವವನ್ನು ಪಡೆಯಬೇಕಾಗಿದೆ’
ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಬಾಬಾ ಬಾಲಕನಾಥ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದಂತೆ ಎಲ್ಲ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕನಾಥ್ ಅವರು, ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಸಾಮಾಜಿಕ ಮಾಧ್ಯಮಗಳು ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಅಲ್ಲಗೆಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನಾನು ಇನ್ನೂ ಸಾಕಷ್ಟು ಅನುಭವವನ್ನು ಪಡೆಯಬೇಕಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಅಲ್ವಾರ್ ಲೋಕಸಭಾ ಕ್ಷೇತ್ರದ ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಾಲಕನಾಥ್ ಅವರು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ತಿಜಾರಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇವರನ್ನು ರಾಜಸ್ಥಾನ ಕಾ ಯೋಗಿ ಎಂತಲೇ ಕರೆಯಲಾಗುತ್ತಿದೆ. ಇವರು ಬಾಬಾ ಮಸ್ತ್‌ನಾಥ್ ಮಠದ 8ನೇ ಮಹಂತ್ ಆಗಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಮಾಹಿತಿ ಪ್ರಕಾರ, ರಾಜ್ಯವರ್ಧನ್ ಸಿಂಗ್ ರಾಥೋಡ್ ಹಾಗೂ ದಿಯಾ ಕುಮಾರಿ ಅಸ್ಕರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಲಾಗುತ್ತದೆ ಎಂದು ಊಹಾಪೋಹಗಳಿವೆ. ಇದರ ನಡುವೆ ಕೆಲವು ಬಿಜೆಪಿ ಶಾಸಕರು ಮಾಜಿ ಸಿಎಂ ವಸುಂಧರಾ ರಾಜೆ ಅವರನ್ನು ಭೇಟಿಯಾಗುತ್ತಿದ್ದಾರೆ. ರಾಜೆ ಅವರು ಬೆಂಬಲಿತ ಶಾಸಕರೊಂದಿಗೆ ಶಕ್ತಿ ಪ್ರದರ್ಶನವನ್ನು ತೋರಿಸಿರುವುದು ಕಂಡು ಬಂದಿದೆ.
ಒಂದೆರಡು ದಿನಗಳಲ್ಲಿ ರಾಜಸ್ಥಾನ ಸಿಎಂ ಹೆಸರು ಘೋಷಣೆ
ಬಿಜೆಪಿ ಹೈಕಮಾಂಡ್ ಈಗಾಗಲೇ ರಾಜಸ್ಥಾನಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಮೂವರನ್ನು ವೀಕ್ಷಕರನ್ನಾಗಿ ಘೋಷಣೆ ಮಾಡಿದೆ. ಈ ತಂಡ ಶೀಘ್ರದಲ್ಲೇ ರಾಜಸ್ಥಾನದ ನೂತನ ಬಿಜೆಪಿ ಶಾಸಕರ ಶಾಸಕಾಂಗ ಸಭೆಯನ್ನು ನಡೆಸಲಿದ್ದು, ಮುಖ್ಯಮಂತ್ರಿ ಅವರನ್ನು ಘೋಷಣೆ ಮಾಡಲಾಗಿದ್ದಾರೆ. ಮಂಗಳವಾರ ಸಂಜೆಯೊಳಗೆ (ಡಿಸೆಂಬರ್ 12) ಸಿಎಂ ಹೆಸರು ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 119 ಕ್ಷೇತ್ರಗಳಿಗೆ ನವೆಂಬರ್ 25 ರಂದು ಚುನಾವಣೆ ನಡೆದಿತ್ತು. ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಿತ್ತು. ಬಿಜೆಪಿ 115 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆದಿದೆ.