BJP Meeting: ಲೋಕಸಭೆ ಚುನಾವಣೆ ಹಿನ್ನೆಲೆ ಜು.6,7,8ಕ್ಕೆ ಬಿಜೆಪಿ ವಲಯವಾರು ಸಭೆ; ನಾಳೆ ಮಹತ್ವದ ಕಾರ್ಯಸೂಚಿ ಸಿದ್ಧತಾ ಸಭೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bjp Meeting: ಲೋಕಸಭೆ ಚುನಾವಣೆ ಹಿನ್ನೆಲೆ ಜು.6,7,8ಕ್ಕೆ ಬಿಜೆಪಿ ವಲಯವಾರು ಸಭೆ; ನಾಳೆ ಮಹತ್ವದ ಕಾರ್ಯಸೂಚಿ ಸಿದ್ಧತಾ ಸಭೆ

BJP Meeting: ಲೋಕಸಭೆ ಚುನಾವಣೆ ಹಿನ್ನೆಲೆ ಜು.6,7,8ಕ್ಕೆ ಬಿಜೆಪಿ ವಲಯವಾರು ಸಭೆ; ನಾಳೆ ಮಹತ್ವದ ಕಾರ್ಯಸೂಚಿ ಸಿದ್ಧತಾ ಸಭೆ

BJP Meeting: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಎಲ್ಲಾ ಮೋರ್ಚಾಗಳ ಅಧ್ಯಕ್ಷರ ಸಭೆ ನಾಳೆ ನಡೆಯಲಿದೆ. ಇದರಲ್ಲಿ ಜುಲೈ 6,7 ಮತ್ತು 8ರಂದು ನಡೆಯಲಿರುವ ವಲಯವಾರು ಸಭೆಯ ಕಾರ್ಯಸೂಚಿ ನಿರ್ಧಾರವಾಗಲಿದೆ. ಎಲ್ಲವೂ ಲೋಕಸಭಾ ಚುನಾವಣೆ ಸಿದ್ದತೆಗೆ ಸಂಬಂಧಿಸಿದ್ದು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ (ಕಡತ ಚಿತ್ರ)
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ (ಕಡತ ಚಿತ್ರ) (ANI)

ನವದೆಹಲಿ: ಭಾರತೀಯ ಜನತಾ ಪಕ್ಷ (BJP)ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಎಲ್ಲಾ ಮೋರ್ಚಾಗಳ ಅಧ್ಯಕ್ಷರು ಶನಿವಾರ ಸಭೆ ನಡೆಸಲಿದ್ದು, ಜುಲೈ 6, 7 ಮತ್ತು 8 ರಂದು ಪಕ್ಷದ ಪ್ರಾದೇಶಿಕ ನಾಯಕರೊಂದಿಗಿನ ನಿರ್ಣಾಯಕ ಸಭೆಗಳಿಗೆ ಚಿಂತನ-ಮಂಥನ ಮತ್ತು ಮಾರ್ಗಸೂಚಿಯನ್ನು ಸಿದ್ಧಪಡಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ನೇತೃತ್ವದಲ್ಲಿ ಶನಿವಾರ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಲಿದೆ. ಬೆಳಗ್ಗೆ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆದರೆ, ಸಂಜೆ ಮೋರ್ಚಾ ಸಭೆ ನಿಗದಿಯಾಗಿದೆ ಎಂದು ಎಎನ್‌ಐನ ಸುಚಿತ್ರಾ ಮುಖರ್ಜಿ ವರದಿಮಾಡಿದ್ದಾರೆ.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹಾಗೂ 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ.

ನಾಳೆ ನಡೆಯಲಿರುವ ಸಭೆಯ ಅಜೆಂಡಾ

ಸಭೆಯಲ್ಲಿ, ಯಾವೆಲ್ಲ ವಿಷಯಗಳ ಬಗ್ಗೆ ಮಾತನಾಡಬೇಕು ಮತ್ತು ಮುಂದಿನ ಸಾಲಿನ ಸಭೆಗಳನ್ನು ಹೇಗೆ ಯಶಸ್ವಿಗೊಳಿಸಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ. ಮೇ 30 ರಿಂದ ಜೂನ್ 30 ರವರೆಗೆ ಒಂದು ತಿಂಗಳ ಕಾಲ ನಡೆಯುವ ಸಾಮೂಹಿಕ ಜನಸಂಪರ್ಕ ಅಭಿಯಾನವನ್ನು ಬಿಜೆಪಿ ಪರಿಶೀಲಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಹಾ ಜನಸಂಪರ್ಕ ಅಭಿಯಾನದ ಪ್ರತಿಕ್ರಿಯೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಸಂಜೆ ಬಿಜೆಪಿಯ ಎಲ್ಲ ಮೋರ್ಚಾಗಳು ತಮ್ಮ ವಾದ ಮಂಡಿಸಿ ಜನಸಂಪರ್ಕ ಅಭಿಯಾನ ಮತ್ತಿತರ ಕಾರ್ಯಕ್ರಮಗಳ ಪ್ರತಿಕ್ರಿಯೆಗಳ ಕುರಿತು ಚರ್ಚೆ ನಡೆಸಲಿವೆ. ಶನಿವಾರ ಬೆಳಗ್ಗೆ ನಡೆಯಲಿರುವ ಸಭೆಯಲ್ಲಿ ಪಕ್ಷದ ಎಲ್ಲ ಪ್ರಧಾನ ಕಾರ್ಯದರ್ಶಿಗಳು ತಮ್ಮ ತಮ್ಮ ಕ್ಷೇತ್ರಗಳ ಪ್ರಗತಿ ವರದಿಯನ್ನು ಅಥವಾ ತಾವು ಉಸ್ತುವಾರಿ ವಹಿಸಿರುವ ಪ್ರದೇಶಗಳ ಪ್ರಗತಿ ವರದಿಯನ್ನು ಮಂಡಿಸಲಿದ್ದಾರೆ.

ಮೂರು ವಲಯಗಳ ಪ್ರತ್ಯೇಕ ಸಭೆ

ಬಿಜೆಪಿಯು ಮೊದಲ ಬಾರಿಗೆ ಜುಲೈ 6, 7 ಮತ್ತು 8 ರಂದು ಮೂರು ವಲಯಗಳ ಪೂರ್ವ, ಉತ್ತರ ಮತ್ತು ದಕ್ಷಿಣದ ಎಲ್ಲ ಪ್ರಧಾನ ಕಾರ್ಯದರ್ಶಿಗಳು ಮತ್ತು ಮೋರ್ಚಾದ ಅಧ್ಯಕ್ಷರ ಪ್ರದೇಶವಾರು ಸಭೆಗಳನ್ನು ನಡೆಸಲಿದೆ. ಜುಲೈ 6ರಂದು ಪೂರ್ವ ವಲಯದ ಮುಖಂಡರ ಜತೆ ಸಭೆ ನಡೆಯಲಿದ್ದರೆ, ಉತ್ತರ ಕ್ಷೇತ್ರಕ್ಕೆ ಜುಲೈ 7ರಂದು ಹಾಗೂ ದಕ್ಷಿಣ ವಲಯಕ್ಕೆ ಜುಲೈ 8ರಂದು ಸಭೆ ನಿಗದಿಯಾಗಿದೆ. ಈ ಎಲ್ಲ ಸಭೆಗಳು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿವೆ.

ಪೂರ್ವ ಪ್ರದೇಶವು ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಮೇಘಾಲಯ, ತ್ರಿಪುರಾ ಮತ್ತು ಅಸ್ಸಾಂ, ಬಿಹಾರ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳನ್ನು ಒಳಗೊಂಡಿದೆ. ಜುಲೈ 6 ರಂದು ಗುವಾಹಟಿಯಲ್ಲಿ ಪೂರ್ವ ವಲಯ ಸಭೆ ನಡೆಯಲಿದೆ.

ಉತ್ತರದ ಪ್ರದೇಶಗಳಲ್ಲಿ ಹಿಮಾಚಲ ಪ್ರದೇಶ, ಪಂಜಾಬ್, ಚಂಡೀಗಢ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗುಜರಾತ್, ದಮನ್ ದಿಯು-ದಾದರ್ ನಗರ ಹವೇಲಿ, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರಾಖಂಡ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶಗಳು ಸೇರಿವೆ. ಇದು ಜುಲೈ 7 ರಂದು ದೆಹಲಿಯಲ್ಲಿ ನಿಗದಿಯಾಗಿದೆ.

ಕೊನೆಯದಾಗಿ, ಜುಲೈ 8 ರಂದು ಹೈದರಾಬಾದ್‌ನಲ್ಲಿ ದಕ್ಷಿಣ ವಲಯದ ನಾಯಕರೊಂದಿಗಿನ ಸಭೆಯನ್ನು ನಿಗದಿಪಡಿಸಲಾಗಿದೆ. ಈ ಪ್ರದೇಶವು ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮುಂಬೈ, ಗೋವಾ, ಅಂಡಮಾನ್ ಮತ್ತು ನಿಕೋಬಾರ್, ಪುದುಚೇರಿ ಮತ್ತು ಲಕ್ಷದ್ವೀಪಗಳನ್ನು ಒಳಗೊಂಡಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.