ಕನ್ನಡ ಸುದ್ದಿ  /  Nation And-world  /  Political News Brs Congress And Bjp In Telangana Assembly Election Race Voters Preference For Which Party Rmy

Telangana Assembly Election: ಬಿಆರ್‌ಎಸ್‌ ವಿರುದ್ಧ ಕಾಂಗ್ರೆಸ್, ಬಿಜೆಪಿಯಲ್ಲಿ ಯಾರು ಹಿತವರು; ತೆಲಂಗಾಣ ಮತದಾರನ ಒಲವು ಯಾವ ಪಕ್ಷಕ್ಕೆ

ತೆಲಂಗಾಣ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್, ಬಿಜೆಪಿ ಗಂಭೀರವಾಗಿ ಪರಿಗಣಿಸಿವೆ. ಆಡಳಿತ ಪಕ್ಷ ಬಿಆರ್‌ಎಸ್‌ಗೆ ಇದು ತಲೆನೋವಾಗಿ ಪರಿಣಮಿಸಿದೆ.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಆರ್‌ಎಸ್‌ಗೆ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಬಲ ಪೈಪೋಟಿ ನೀಡಿವೆ.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಆರ್‌ಎಸ್‌ಗೆ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಬಲ ಪೈಪೋಟಿ ನೀಡಿವೆ.

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ (Telangana Assembly Election) ಇನ್ನೊಂದು ವಾರ ಬಾಕಿದ್ದು, ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಆಡಳಿತಾರೂಢ ಬಿಆರ್‌ಎಸ್‌ (BRS), ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಅಬ್ಬರದ ಪ್ರಚಾರ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಮತಯಾಚನೆಯ ನಡುವೆಯೇ ಮೂರೂ ಪಕ್ಷದ ನಾಯಕರು ಆರೋಪ, ಪ್ರತ್ಯಾರೋಪಗಳು, ವಾಕ್ಸಮರ ತಾರಕಕ್ಕೇರಿದೆ.

ಭಾರತ ರಾಷ್ಟ್ರ ಸಮಿತಿ-ಬಿಆರ್‌ಎಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದೆಯಾದರೂ ಬಿಜೆಪಿ ಕೂಡ ಪೈಪೋಟಿ ನೀಡುತ್ತಿದೆ. ರಾಜ್ಯದ ಸ್ಥಳೀಯ ನಾಯಕರು ಕೇಂದ್ರದ ಬಿಜೆಪಿ ಸುಪ್ರೀಂ ನಾಯಕರನ್ನೇ ಕರೆಸಿ ಕೇಸರಿ ಕ್ಯಾಂಪೇನ್ ಮಾಡಿಸುತ್ತಿದ್ದಾರೆ.

10 ವರ್ಷಗಳ ಅವಧಿಯಲ್ಲಿ ತೆಲಂಗಾಣದ ಪ್ರಜೆಗಳಿಗಾಗಿ ಕೆಸಿಆರ್ ಏನೂ ಮಾಡಿಲ್ಲ. ಆದರೆ ತನ್ನ ಪುತ್ರ ಕೆಟಿ ರಾಮರಾವ್‌ ಅವರಿಗಾಗಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಇತ್ತೀಚೆಗಷ್ಟೇ ಚುನಾವಣಾ ಪ್ರಚಾರದ ಭಾಷಣದಲ್ಲಿ ಸಿಎಂ ಕೆ ಚಂದ್ರಶೇಖರ್ ರಾವ್ (K ChandraShekar Rao) ಅವರ ವಾಗ್ದಾಳಿ ನಡೆಸಿದ್ದರು.

ಸಿಎಂ ಕೆಸಿಆರ್‌ ಕೂಡ ತಮ್ಮದೇ ಶೈಲಿಯಲ್ಲಿ ಕೇಸರಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ ಹಸ್ತವನ್ನು ತಿವಿಯುತ್ತಿದ್ದಾರೆ. ಕಾಂಗ್ರೆಸ್‌ಗೆ ವೋಟ್ ಹಾಕಿದರೆ ಕರ್ನಾಟಕದ ಪರಿಸ್ಥಿಯೇ ತೆಲಂಗಾಣಕ್ಕೂ ಬರುತ್ತೆ. ಹೀಗಾಗಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮತ್ತು ಬಿಜೆಪಿಗೆ ಮತ ಹಾಕಬೇಡಿ ಎಂದು ಸಿಎಂ ಕೆ ಚಂದ್ರಶೇಖರ್ ರಾವ್ ಮತ್ತವರ ಪಕ್ಷದ ನಾಯಕರು ಅಬ್ಬರಿಸುತ್ತಿದ್ದಾರೆ.

ಬಿಜೆಪಿ ಸೈಲೆಂಟ್ ಪ್ರಚಾರ, ಬಿಆರ್‌ಎಸ್ ಸ್ಥಾನಗಳ ಮೇಲೆ ಕಾಂಗ್ರೆಸ್ ಕಣ್ಣು

ಬಿಜೆಪಿಗೆ ತೆಲಂಗಾಣದಲ್ಲಿ ಹೇಳಿಕೊಳ್ಳುವಂತ ಬೆಂಬಲ ಸಿಗುತ್ತಿಲ್ಲ. ಆದರೂ ತನ್ನ ಪ್ರಯತ್ನವನ್ನು ಮುಂದುವರಿಸಿದ್ದು ಸದ್ದಿಲ್ಲದೆ ಮತದಾರರ ಮನವೊಲಿಸುವ ಕಸರತ್ತನ್ನು ಮುಂದುವರಿಸಿದೆ. ಕಾಂಗ್ರೆಸ್ ಭರ್ಜರಿ ಪ್ರಚಾರದ ಮೂಲಕ ಬಿಆರ್‌ಎಸ್‌ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಬೆಂಬಲವೂ ದೊರೆಯುತ್ತಿದೆ.

ದಶಕಗಳಿಂದ ಭಾರತ ರಾಷ್ಟ್ರ ಸಮಿತಿ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದು ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಸ್ಥಳೀಯ ಸಮಸ್ಯೆಗಳು ಮತದಾರ ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ನಿರ್ಧರಿಸವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

ಇದರ ಜೊತೆಗೆ ಹೈದರಾಬಾದ್ ಪ್ರದೇಶದ ಮತದಾರರು ಬಿಆರ್‌ಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಚುನಾವಣಾ ಭವಿಷ್ಯವನ್ನು ನಿರ್ಧಿಸುತ್ತಾರೆ. ಈ ಭಾಗದಲ್ಲಿ ಹೆಚ್ಚಿನ ಸ್ಥಾನಗಲನ್ನು ಗೆಲ್ಲುವವರೇ ಮುತ್ತಿನ ನಗರಿಯಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದ್ದಾರೆ.

ಚುನಾವಣೆಗೆ ಕೆಲ ದಿನಗಳ ಮುನ್ನ ಈ ಭಾಗದಲ್ಲಿ ಎರಡೂ ಪಕ್ಷಗಳು ಮತದಾರರನ್ನು ಓಲೈಕೆಗೆ ಕೊನೆಯ ಕಸರತ್ತು ನಡೆಸುತ್ತಿವೆ. ಸಾಧ್ಯವಿರುವ ಪ್ರತಿಯೊಂದು ಮತವನ್ನು ಇಲ್ಲಿ ಭದ್ರಪಡಿಸಿಕೊಳ್ಳುವ ಪ್ರಯತ್ನದಲ್ಲಿ ಬ್ಯುಸಿಯಾಗಿವೆ. ಇಲ್ಲಿನ ಮತದಾರರು ನಿರ್ಣಾಯಕ ಅನ್ನೋದನ್ನು ಬಿಆರ್‌ಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಪ್ಪಿಕೊಳ್ಳುತ್ತಿವೆ.

ನಾವಂತೂ ತುಂಬಾ ಉತ್ಸುಕರಾಗಿದ್ದಾರೆ. ಅಂತಿಮ ವಾರದಲ್ಲೇ ಎಲ್ಲಾ ನಿರ್ಧಾರವಾಗುತ್ತೆ. ತುಂಬಾ ಆತ್ಮವಿಶಾಸದಿಂದ ಇದ್ದೇವೆ. ಆದರೆ ಯಾವುದೇ ಅವಕಾಶಕ್ಕೆ ಬಿಡಲು ಸಾಧ್ಯವೇ ಇಲ್ಲ. ಚೆನ್ನೂರು ಸೇರಿ ಹಲವು ಕ್ಷೇತ್ರಗಳಲ್ಲಿ ತಳಮಟ್ಟದಿಂದ ಕೆಲಸ ಮಾಡುತ್ತಿದ್ದೇವೆ. ವಿಶೇಷವಾಗಿ ಮಹಿಳೆಯನ್ನು ಗಮನದಲ್ಲಿ ಇಟ್ಟುಕೊಂಡು ಮತಯಾಚನೆ ಮಾಡುತ್ತಿದ್ದೇವೆ ಎಂದು ಬಿಆರ್‌ಎಸ್‌ ಸ್ಥಳೀಯ ಕಾರ್ಯಕರ್ತರೊಬ್ಬರು ವಿವರಿಸಿದ್ದಾರೆ.

119 ಕ್ಷೇತ್ರಗಳ ತೆಲಂಗಾಣ ವಿಧಾನಸಭೆಗೆ 2023ರ ನವೆಂಬರ್ 30 ರಂದು ಚುನಾವಣೆ ನಡೆಯಲಿದ್ದು, 2023ರ ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು 60 ಮ್ಯಾಜಿಕ್ ಸಂಖ್ಯೆಯಾಗಿದೆ. ಮತದಾರ ಯಾರಿಗೆ ಒಲವು ತೋರಿದ್ದಾರೆ ಅನ್ನೋದು ಡಿಸೆಂಬರ್ 3 ರಂದು ಗೊತ್ತಾಗಲಿದೆ.