ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆಗೆ ಪರ್ಯಾಯ ಪಕ್ಷ ಕಟ್ಟಿದ ನಟ ವಿಜಯಕಾಂತ್ ರಾಜಕೀಯ ಹಾದಿ ಹೀಗಿತ್ತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆಗೆ ಪರ್ಯಾಯ ಪಕ್ಷ ಕಟ್ಟಿದ ನಟ ವಿಜಯಕಾಂತ್ ರಾಜಕೀಯ ಹಾದಿ ಹೀಗಿತ್ತು

ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆಗೆ ಪರ್ಯಾಯ ಪಕ್ಷ ಕಟ್ಟಿದ ನಟ ವಿಜಯಕಾಂತ್ ರಾಜಕೀಯ ಹಾದಿ ಹೀಗಿತ್ತು

ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆಗೆ ಪರ್ಯಾಯವಾಗಿ ಡಿಎಂಡಿಕೆ ಪಕ್ಷವನ್ನು ಕಟ್ಟಿ ಬೆಳೆಸಿದವರು ನಟ ವಿಜಯಕಾಂತ್. ಆದರೆ ಇವರ ರಾಜಕೀಯ ಹಾದಿ ಹೇಗಿತ್ತು ಅನ್ನೋದರ ವಿವರ ಇಲ್ಲಿದೆ.

ತಮಿಳು ನಟ, ಡಿಎಂಡಿಕೆ ಸಂಸ್ಥಾಪಕ 'ಕ್ಯಾಪ್ಟನ್' ವಿಜಯಕಾಂತ್
ತಮಿಳು ನಟ, ಡಿಎಂಡಿಕೆ ಸಂಸ್ಥಾಪಕ 'ಕ್ಯಾಪ್ಟನ್' ವಿಜಯಕಾಂತ್

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಡಿಎಂಕೆ (DMK) ಮತ್ತು ಎಐಎಡಿಎಕೆಗೆ (AIADMK) ಪರ್ಯಾಯ ರಾಜಕೀಯ ಶಕ್ತಿಯ ಸಾಧ್ಯತೆಯ ಬಗ್ಗೆ ಬರವಸೆಯ ಬೀಜಗಳನ್ನು ಬಿತ್ತಿದ್ದ ಡಿಎಂಡಿಕೆ (DMDK) ಸಂಸ್ಥಾಪಕ ಹಾಗೂ ಜನಪ್ರಿಯ ನಟ ವಿಜಯಕಾಂತ್ (Vijayakanth) ನಿಧನರಾಗಿದ್ದಾರೆ.

ಚೆನ್ನೈನ ಎಂಐಒಟಿ ಇಂಟರ್‌ನ್ಯಾಷನಲ್ ಆಸ್ಪತ್ರೆಯಲ್ಲಿಂದು (ಡಿಸೆಂಬರ್ 28, ಗುರುವಾರ) 71 ವರ್ಷದ ವಿಜಯಕಾಂತ್ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಇವರಿಗೆ ಕೋವಿಡ್ ಸೋಂಕು ತಗುಲಿತ್ತು. ಹೀಗಾಗಿ ವೆಂಟಿಲೇಟರ್ ಸಹಾಯದಲ್ಲಿದ್ದರು ಎಂದು ವರದಿಯಾಗಿದೆ.

ವಿಜಯಕಾಂತ್ ಅವರನ್ನು ಅವರ ಅಭಿಮಾನಿಗಳು ಕರುಪ್ಪು ಎಂಜಿಆರ್ (ಕಪ್ಪು ಎಂಜಿಆರ್) ಅಂತ ಪ್ರೀತಿಯಿಂದ ಕರೆಯುತ್ತಿದ್ದರು. ಕಳೆದ 4-5 ವರ್ಷಗಳಿಂದ ಡಿಎಂಡಿಕೆ ಕ್ಯಾಪ್ಟನ್‌ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರ ಪತ್ನಿ ಪ್ರೇಮಲತಾ ಅವರನ್ನು ಡಿಸೆಂಬರ್ 14 ರಂದು ಪಕ್ಷದ ಪ್ರಧಾನಿ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ಔಪಚಾರಿಕವಾಗಿ ಅಧಿಕಾರವನ್ನು ವಹಿಸಿಕೊಂಡಿದ್ದರು.

ಖ್ಯಾತ ನಟ, ‘ಕ್ಯಾಪ್ಟನ್’ ವಿಜಯಕಾಂತ್ ರಾಜಕೀಯ ಹಾದಿ

ತಮಿಳುನಾಡಿನ ಸಿನಿಮಾ ಕ್ಷೇತ್ರದಲ್ಲಿ ಅಪಾರವಾದ ಜನಪ್ರಿಯತೆ ಗಳಿಸಿದ್ದ ಖ್ಯಾತ ನಟ 'ಕ್ಯಾಪ್ಟನ್' ವಿಜಯಕಾಂತ್ ಅವರು ರಾಜಕೀಯಕ್ಕೆ ಪ್ರವೇಶ ಮಾಡಲು ಮನಸ್ಸು ಮಾಡಿದ್ದೇಕೆ, ಅವರ ರಾಜಕೀಯ ಹಾದಿ ಹೇಗಿತ್ತು ಅನ್ನೋದನ್ನ ನೋಡೋಣ.

ಸಿನಿಮಾ ಕ್ಷೇತ್ರದಲ್ಲಿ ತಮಗಿದ್ದ ಜನಮನ್ನಣೆಯನ್ನು ತಿಳಿದ ವಿಜಯಕಾಂತ್ ಅವರು 2005ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡುವ ನಿರ್ಧಾರ ಕೈಗೊಳ್ಳುತ್ತಾರೆ. 2005ರ ಸೆಪ್ಟೆಂಬರ್ 14 ರಂದು ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ-ನ್ಯಾಷನಲ್ ಪ್ರೊಗ್ರೆಸಿವ್ ದ್ರಾವಿಡಿಯನ್ ಫೆಡರೇಷನ್) ಎಂಬ ಪಕ್ಷವನ್ನು ಹುಟ್ಟುಹಾಕುತ್ತಾರೆ. ಇದರ ಮುಂದಿನ ವರ್ಷವೇ ಅಂದರೆ 2006ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ.

ಡಿಎಂಡಿಕೆ ಸ್ವತಂತ್ರವಾಗಿ ಸ್ಪರ್ಧಿಸಿ ಗಮನಾರ್ಹವಾದ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ. ಆ ಮೂಲಕ ತಮಿಳುನಾಡಿನ ರಾಜಕೀಯದಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆಗೆ ಪರ್ಯಾಯವಾಗಿ ಪಕ್ಷವೊಂದನ್ನು ಬೆಳೆಸಬಹುದು ಎಂಬ ಸಂದೇಶವನ್ನು ರವಾನಿಸುತ್ತಾರೆ.

2011ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು

ಇನ್ನ 2011 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯಕಾಂತ್ ಅವರ ಪಕ್ಷ ಇತಿಹಾಸ ಬರೆಯುತ್ತದೆ. ಜಯಲಲಿತಾ ಅವರ ಎಐಎಡಿಎಂಕೆ ಪಕ್ಷದ ಅಲೆಯಲ್ಲಿ ಡಿಎಂಕೆ ಕೊಚ್ಚಿ ಹೋಗಿರುತ್ತದೆ. ಆದರೆ ಡಿಎಂಡಿಕೆ ಪಕ್ಷವು ಡಿಎಂಕೆಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಅಲೆಯನ್ನು ಎಬ್ಬಿಸುತ್ತದೆ. ಇದೇ ಅವಧಿಯಲ್ಲಿ ಡಿಎಂಡಿಕೆಗೆ ವಿರೋಧ ಪಕ್ಷದ ಸ್ಥಾನವೂ ಒಲಿಯುತ್ತದೆ. ಕ್ಯಾಪ್ಟನ್ ವಿಜಯಕಾಂತ್ ಅವರು 2011 ರಿಂದ 2016ರ ವರೆಗೆ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸುತ್ತಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಡಿಎನ್‌ಎ ಜೊತೆಗೆ ಮೈತ್ರಿ ಮಾಡಿಕೊಂಡು ತಮಿಳುನಾಡಿನಲ್ಲಿ ಸ್ಪರ್ಧೆ ಮಾಡುತ್ತಾರೆ. ಆದರೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗುವುದಿಲ್ಲ. ಆ ಬಳಿಕ ಡಿಎಂಡಿಕೆ ಪಕ್ಷದಲ್ಲಿನ ನಾಯಕರ ನಿರ್ಧಾರಗಳು, ಆಂತರಿಕ ಸವಾಲುಗಳು ವಿಜಯಕಾಂತ್ ಅವರ ರಾಜಕೀಯ ಭವಿಷ್ಯವನ್ನು ಕುಗ್ಗಿಸುತ್ತದೆ. ಪ್ರಮುಖ ನಾಯಕರು ಪಕ್ಷಾಂತರ ಮಾಡಿ ಬೇರೆ ಬೇರೆ ಪಕ್ಷಗಳನ್ನು ಸೇರಿಕೊಳ್ಳುತ್ತಾರೆ. ಇದು ಆನಂತರ ಚುನಾವಣೆಗಳಲ್ಲಿ ಕಾರ್ಯಕರ್ತರ ಮೇಲೆ ಭಾರಿ ಪರಿಣಾಮ ಬೀರಿತು. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ವಿಜಯಕಾಂತ್ ಅವರ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಹೇಳಿಕೊಳ್ಳುವಂತ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಲೇ ಇಲ್ಲ.

ಇವತ್ತು (ಡಿಸೆಂಬರ್ 28, ಗುರುವಾರ) ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತೆಗೆ ಚಿಕಿತ್ಸೆ ಪಡೆಯುತ್ತಿದ್ದ ವಿಜಯಕಾಂತ್ ಅವರು ಕೊನೆಯುಸಿರೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾದಿಯಾಗಿ ಸಿನಿಮಾ ಕ್ಷೇತ್ರದ ಗಣ್ಯರು ಕ್ಯಾಪ್ಟನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.