ದೆಹಲಿ ವಿಧಾನಸಭಾ ಚುನಾವಣೆ: ಇಂದು ಮತದಾನ; ಫಲಿತಾಂಶ ದಿನಾಂಕ, ಪ್ರಮುಖ ಅಭ್ಯರ್ಥಿಗಳು ಹಾಗೂ ಇತರ ವಿವರ
Delhi Elections 2025: ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರುವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆ. 8ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 1.56 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆ (Delhi assembly election) ಮೇಲೆ ದೇಶದ ಚಿತ್ತ ಹರಿದಿದೆ. ಫೆಬ್ರವರಿ 5ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಅಖಾಡದಲ್ಲಿರುವ ಪಕ್ಷಗಳು ಸೋಮವಾರ ಸಂಜೆ (ಫೆ.3) ಬಿರುಸಿನ ಪ್ರಚಾರ ಮುಗಿಸಿವೆ. ಪ್ರಮುಖ ಪಕ್ಷಗಳ ನಾಯಕರು ಮತದಾರರನ್ನು ಸೆಳೆಯಲು ಬೃಹತ್ ರೋಡ್ ಶೋ, ಸಾರ್ವಜನಿಕ ಸಭೆ, ಪಾದಯಾತ್ರೆ ಮತ್ತು ಬೈಕ್ ರ‍್ಯಾಲಿ ನಡೆಸಿವೆ. ಪ್ರಧಾನಿ ನರೇಂದ್ರ ಮೋದಿ, ಎಎಪಿಯ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಂಥ ಘಟಾನುಘಟಿ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಪ್ರಚಾರದ ನೇತೃತ್ವ ವಹಿಸಿದ್ದರು. ಇದಕ್ಕೆ ಜನಸಾಮಾನ್ಯರ ಸ್ಪಂದನೆ ಹೇಗಿರಲಿದೆ ಎಂಬುದು ನಾಳೆ ತಿಳಿಯಲಿದೆ.
ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆಯು 2025ರ ಫೆಬ್ರುವರಿ 5ರ ಬುಧವಾರ ಒಂದೇ ಹಂತದಲ್ಲಿ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಫೆಬ್ರವರಿ 8ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಒಟ್ಟು 70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ 699 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಈ ಚುನಾವಣೆಯ ಮೂಲಕ ದೆಹಲಿಯಲ್ಲಿ ಎಎಪಿಯ ಆಡಳಿತಕ್ಕೆ ಜನಸಾಮಾನ್ಯರು ತಮ್ಮ ಅಂಕಗಳನ್ನು ಕೊಡಲಿದ್ದಾರೆ. ಇದೇ ವೇಳೆ ಮುಂದಿನ ಐದು ವರ್ಷಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಭವಿಷ್ಯದ ಬಗ್ಗೆ ಜನಾಭಿಪ್ರಾಯ ಹೊರಬೀಳಲಿದೆ. ದೆಹಲಿಯಲ್ಲಿ ಸರಳ ಬಹುಮತಕ್ಕೆ ಗೆಲ್ಲಬೇಕಾದ ಸ್ಥಾನಗಳ ಸಂಖ್ಯೆ 36.
1993ರ ನಂತರ ಗೆದ್ದೇ ಇಲ್ಲ ಬಿಜೆಪಿ
70 ಸದಸ್ಯರಿರುವ ದೆಹಲಿ ವಿಧಾನಸಭೆಯ ಅವಧಿ ಫೆಬ್ರುವರಿ 23ರಂದು ಕೊನೆಗೊಳ್ಳಲಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಸತತ ಮೂರನೇ ಅವಧಿಗೆ ಅಧಿಕಾರ ವಿಸ್ತರಿಸುವ ಗುರಿ ಹಾಕಿಕೊಂಡಿದೆ. 2013ರ ನಂತರ ದೆಹಲಿಯಲ್ಲಿ ಎಎಪಿ ಸೋತಿಲ್ಲ. ಅತ್ತ ಬಿಜೆಪಿ 1993ರ ನಂತರ ಗೆದ್ದೇ ಇಲ್ಲ. ಇದೀಗ ಬರೋಬ್ಬರಿ 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರವನ್ನು ಮರಳಿ ಪಡೆಯುವ ಪ್ರಯತ್ನಕ್ಕಿಳಿದಿದೆ. ಇದೇ ವೇಳೆ ಕಳೆದ ಎರಡೂ ಚುನಾವಣೆಗಳಲ್ಲಿ ಕನಿಷ್ಠ ಒಂದೂ ಕ್ಷೇತ್ರಗಳಲ್ಲಿ ಗೆಲ್ಲಲು ವಿಫಲವಾಗಿರುವ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ.
ಒಟ್ಟು 1.56 ಕೋಟಿ ಮತದಾರರು
ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ಪ್ರಕಾರ, ದೆಹಲಿಯಲ್ಲಿ ಒಟ್ಟು 1.56 ಕೋಟಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ಇದರಲ್ಲಿ 83.76 ಲಕ್ಷ ಪುರುಷ ಮತದಾರರು, 72.36 ಲಕ್ಷ ಮಹಿಳೆಯರು ಹಾಗೂ 1,267 ತೃತೀಯ ಲಿಂಗಿ ಮತದಾರರು ಸೇರಿದ್ದಾರೆ. ಒಟ್ಟು 13,766 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ವಿಕಲಚೇತನರಿಗಾಗಿ 733 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಪ್ರಮುಖ ಅಭ್ಯರ್ಥಿಗಳು
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಬಿಜೆಪಿಯ ಪರ್ವೇಶ್ ವರ್ಮಾ ಮತ್ತು ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ ಇವರ ಎದುರಾಳಿ. ಇದೇ ವೇಳೆ ಎಎಪಿ ಅಭ್ಯರ್ಥಿಯಾಗಿರುವ ದೆಹಲಿ ಮುಖ್ಯಮಂತ್ರಿ ಅತಿಶಿ, ಕಲ್ಕಾಜಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಮತ್ತು ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಎಎಪಿಯ ಮನೀಶ್ ಸಿಸೋಡಿಯಾ ಅವರು ಬಿಜೆಪಿಯ ತರ್ವಿಂದರ್ ಸಿಂಗ್ ಮಾರ್ವಾ ಮತ್ತು ಕಾಂಗ್ರೆಸ್‌ನ ಫರ್ಹಾದ್ ಸೂರಿ ವಿರುದ್ಧ ಜನಗ್‌ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಎಎಪಿಯ ಹಿರಿಯ ಮುಖಂಡ ಸತ್ಯೇಂದರ್ ಜೈನ್ ಅವರು ಶಕುರ್ ಬಸ್ತಿ ಕ್ಷೇತ್ರದಿಂದ ಬಿಜೆಪಿಯ ಕರ್ನೈಲ್ ಸಿಂಗ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ವಿಭಾಗ