ತಮಿಳುನಾಡಿನಲ್ಲಿ ಪಡಿತರ ಚೀಟಿದಾರರಿಗೆ ಪೊಂಗಲ್ ಗಿಫ್ಟ್ ಘೋಷಣೆ; ಈ ಬಾರಿ 1 ಸಾವಿರ ಹಣ ಇಲ್ಲ
ತಮಿಳುನಾಡು ಸರ್ಕಾರ ಪಡಿತರ ಚೀಟಿದಾರರಿಗೆ ಪೊಂಗಲ್ ಗಿಫ್ಟ್ ಘೋಷಣೆ ಮಾಡಿದೆ. ಆದರೆ ಕಳೆದ ವರ್ಷದಂತೆ 1 ಸಾವಿರ ರೂಪಾಯಿ ಹಣ ನೀಡುತ್ತಿಲ್ಲ. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಚೆನ್ನೈ (ತಮಿಳುನಾಡು): ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ (Sankranthi 2024) ಇನ್ನ 10 ದಿನಗಳು ಮಾತ್ರ ಬಾಕಿ ಇದ್ದು, ಇಡೀ ದೇಶ ಸುಗ್ಗಿ ಹಬ್ಬವನ್ನು ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇತ್ತ ನೆರೆ ರಾಜ್ಯ ತಮಿಳುನಾಡಿನಲ್ಲಿ ಪಡಿತರ ಚೀಟಿದಾರರಿಗೆ ಪೊಂಗಲ್ ಗಿಫ್ಟ್ ಘೋಷಣೆ ಮಾಡಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ತಮಿಳುನಾಡು ಸರ್ಕಾರ ಪೊಂಗಲ್ ಉಡುಗೊರೆಯಾಗಿ 1 ಕೆಜಿ ಅಕ್ಕಿ, 1 ಕೆಜಿ ಸಕ್ಕರೆ ಹಾಗೂ 1 ಸಂಪೂರ್ಣ ಕಬ್ಬಿನ ಜಲ್ಲೆಯನ್ನು ನೀಡುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಂಗಳವಾರ (ಜನವರಿ 2) ಘೋಷಣೆ ಮಾಡಿದ್ದಾರೆ. ಆದರೆ ಹಿಂದಿನ ವರ್ಷದಂತೆ ಈ ಬಾರಿ ಹಣದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇದು ಅಲ್ಲಿನ ವಿಪಕ್ಷಗಳನ್ನು ಕೇರಳಿಸುವಂತೆ ಮಾಡಿದೆ.
2023ರ ಅಕ್ಟೋಬರ್ 31ರ ವರೆಗಿನ ಮಾಹಿತಿ ಪ್ರಕಾರ ತಮಿಳುನಾಡಿನಲ್ಲಿ ಒಟ್ಟು 2.19 ಕೋಟಿ ಪಡಿತರ ಚೀಟಿದಾರರು ಇದ್ದಾರೆ. ಇವರ ಜೊತೆಗೆ ಶ್ರೀಲಂಕಾ ತಮಿಳರ ಪುನರ್ವಸತಿ ಶಿಬಿರಗಳಲ್ಲಿ ನೆಲೆಸಿರುವವರಿಗೂ ಈ ಪೊಂಗಲ್ ಉಡುಗೊರೆ ಸಿಗಲಿದೆ. ಸರ್ಕಾರದ ಈ ಉಪಕ್ರಮಕ್ಕಾಗಿ 238.92 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಅಲ್ಲಿನ ಸಹಕಾರ, ಆಹಾರ ಮತ್ತು ಗ್ರಾಹಕ ಸಂರಕ್ಷಣಾ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ಕಳೆದ ವರ್ಷದಂತೆ ಈ ಬಾರಿ ಪೊಂಗಲ್ ಗಿಫ್ಟ್‌ನಲ್ಲಿ ಹಣ ನೀಡದಿರುವುದಕ್ಕೆ ವಿಪಕ್ಷಗಳ ನಾಯಕರು ಕಿಡಿಕಾರಿದ್ದಾರೆ. ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದ ನಾಯಕ ಹಾಗೂ ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆಗೊಂಡಿರುವ ಮಾಜಿ ಸಿಎಂ ಓ ಪನ್ನೀರ್‌ಸೆಲ್ವಂ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಈ ಘೋಷಣೆ ಬಡವರಿಗೆ ತೀವ್ರ ನಿರಾಸೆಯುಂಟು ಮಾಡಿದೆ. ಪೊಂಗಲ್ ಗಿಫ್ಟ್ ಜೊತೆಗೆ ಎಲ್ಲಾ ರೇಷನ್ ಕಾರ್ಡ್‌ದಾರರಿಗೆ 1 ಸಾವಿರ ರೂಪಾಯಿ ಹಣ ನೀಡಬೇಕೆಂದು ಪಿಎಂಕೆ ಪಕ್ಷದ ಸಂಸ್ಥಾಪಕ ಡಾ ರಾಮದಾಸ್ ಅವರು ಸಿಎಂ ಸ್ಟಾಲಿನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. 2022 ಅನ್ನು ಹೊರತುಪಡಿಸಿದರೆ ತಮಿಳುನಾಡಿನಲ್ಲಿ ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಪೊಂಗಲ್ ಹಬ್ಬದ ವೇಳೆ ನೀಡುವ ನಗದು ನೆರವು ಪದ್ದತಿಯನ್ನು ನಿಲ್ಲಿಸಿರುವುದು ಖಂಡನೀಯ ಎಂದಿದ್ದಾರೆ.
ರಾಜ್ಯ ರಾಜಧಾನಿ ಚೆನ್ನೈ ಮತ್ತು ದಕ್ಷಿಣ ಜಿಲ್ಲೆಗಳ ಪ್ರವಾಹ ಪೀಡಿತ ಜನರಿಗೆ 6,000 ರೂಪಾಯಿ ಆರ್ಥಿಕ ನೆರವು ನೀಡುವ ವಿಚಾರದಲ್ಲಿ ಅಕ್ರಮಗಳು ನಡೆದಿವೆ. ಇನ್ನೂ ಕೂಡ ಹಲವು ಅರ್ಹ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ. ಅರ್ಹ ಕುಟುಂಬಗಳ ಮನೆಯೊಡತಿಗೆ ಘೋಷಣೆ ಮಾಡಿರುವ ಮಾಸಿಕ 1 ಸಾವಿರ ರೂಪಾಯಿ ಬಂದಿಲ್ಲ. ಹೀಗಿರುವಾಗ ಪೊಂಗಲ್ ಉಡುಗೊರೆ ಜೊತೆಗೆ 1 ಸಾವಿರ ರೂಪಾಯಿ ಹಣ ನೀಡದ ಕಾರಣ ಸರ್ಕಾರ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ರಾಮದಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಭಾಗ